ಸಾಹಿತ್ಯ, ಕಲೆ ಎಂದರೇನು? ಅವು ಪೋಷಾಕುಗಳೇ? ಪೀಠಗಳೇ? ಕಿರೀಟಗಳೇ? ಆಯುಧಗಳೇ? ಅಥವಾ ಅನುಭವದ ವಿಸ್ತಾರವೇ? ಇದನ್ನೂ ದಾಟಿ ಇವು ಮನುಷ್ಯರ ಅವಶ್ಯಕತೆಗಳೇ? ಪಾರಂಪರಿಕ ಕಟ್ಟಡವೊಂದರಲ್ಲಿ ಇತ್ತೀಚೆಗೆ ಎಲ್ಲ ಜನರಿಗೂ ಮುಕ್ತವಾಗಿಟ್ಟು ನಡೆದ ಕಲಾಪ್ರದರ್ಶನವೊಂದನ್ನು ನೋಡಿದಾಗ ಇಂತಹ ಪ್ರಶ್ನೆಗಳು ಹುಟ್ಟಿಕೊಂಡವು. ಅಲ್ಲಿ ನಾನು ಗಮನಿಸುತ್ತಲೇ ಇದ್ದೆ. ಸುಮಾರು ಮೂರು ಗಂಟೆಗಳ ಕಾಲ ಬೇರೆ ಬೇರೆ ವಯಸ್ಸಿನ ವ್ಯಕ್ತಿಗಳನ್ನೂ ನನ್ನೊಳಗನ್ನೂ ಗಮನಿಸಿಕೊಳ್ಳುತ್ತಲೇ ಇದ್ದೆ. ಅದೊಂದು ಅಚ್ಚರಿಯ ಅನುಭವವಾಗಿತ್ತು.

ಮೊದಲು ಅನುಮಾನದಿಂದಲೇ ಕಲಾಂಗಣದೊಳಗೆ ಪ್ರವೇಶಿಸಿದ ಜನ ಕ್ರಮೇಣ ತಮ್ಮನ್ನು ಕಳೆದುಕೊಂಡು ಕಲಾರೂಪಗಳ ಜೊತೆಗೆ ಬೆಸೆದುಕೊಳ್ಳುತ್ತಿದ್ದರು. ಚಿಕ್ಕ ಮಕ್ಕಳು ಖುಷಿಯಿಂದ ಅರಳುತ್ತಿದ್ದರು. ವಯಸ್ಸಾದವರೂ ಮಕ್ಕಳಂತೆ ಬೆರೆಯುತ್ತಿದ್ದರು. ಅಲ್ಲಿರುವ ಚಿತ್ರಗಳಲ್ಲಿನ ಅನುಭವಗಳನ್ನು ಮಥಿಸಿಕೊಳ್ಳುತ್ತಿದ್ದರು. ಅಳು, ಆಘಾತ, ಮೌನ, ಹರ್ಷದಲ್ಲಿ ಲೀನರಾಗುತ್ತಿದ್ದರು. ಹಲವು ಒತ್ತಡಗಳ ಕಳೆ ತುಂಬಿದ ಹೊಲವಾಗಿರುವ ಮನಸ್ಸುಗಳಿಗೆ ‘ಅವಸರವೂ ಇಲ್ಲಿ ಸಾವಧಾನದ ಬೆನ್ನೇರಿದೆ’ ಎಂಬ ಕುವೆಂಪು ನುಡಿಯ ಮಹತ್ವ ಅರಿವಾಗುವಂತಿತ್ತು.

ಅರೆ! ಅಲ್ಲಿ ಯಾವ ವಿವರಣೆಯೂ ಇರಲಿಲ್ಲ. ಆದರದು ಮಾತಾಡುತ್ತಿತ್ತು. ಏನೋ ಹಗುರಾದಂತೆ, ಜೊತೆಗೇ ಯೋಚನೆಗೆ ಹಚ್ಚಿದಂತಹ ಭಾವವೊಂದು ಅವರಲ್ಲಿ ಹರಿದಾಡುತ್ತಿದ್ದಂತೆ ಇತ್ತು. ನನಗೂ ಅದು ಮೊದಲ ಅನುಭವ. ಚಿತ್ರಕಲೆಯನ್ನೂ ಸೇರಿಸಿಕೊಂಡು ಯಾವುದೇ ಕಲಾಕೃತಿಗಳನ್ನು ಸೂಕ್ತ ಹಿನ್ನೆಲೆಯಿಲ್ಲದೆ ನೋಡಿದರೆ ಅವು ಗಾಢವಾದ ಅನುಭವವನ್ನು ಕೊಡುವುದಿಲ್ಲ. ಹೀಗಾಗಿ, ಕಲಾವಿದರು ಅದಕ್ಕಾಗಿ ಇರುವ, ಕೆಲವರದೇ ಸೊತ್ತಾಗಿರುವ ಗ್ಯಾಲರಿಗಳ ಲಭ್ಯತೆಗಾಗಿ ಕಾಯಬೇಕು. ಆದರೆ ಈ ಗ್ಯಾಲರಿಗಳಿಗೂ ಸಾಮಾನ್ಯ ಜನರಿಗೂ ಸಂಬಂಧವೇ ಇಲ್ಲದ ಸ್ಥಿತಿಯೊಂದು ನಮ್ಮ ನಡುವೆ ಇದೆ. ಹೀಗಾಗಿ, ನಮ್ಮ ಮಕ್ಕಳೂ ಸೇರಿದಂತೆ ಸಾಮಾನ್ಯ ಜನರು ಕಲಾನುಭವದಿಂದ ವಂಚಿತರಾಗುವ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ.

ಕಲೆ, ಸಾಹಿತ್ಯವು ಪ್ರಭುತ್ವ ಮತ್ತು ಶ್ರೀಮಂತವರ್ಗಗಳ ಕೈವಶವಾದಾಗ ಏನಾಗುತ್ತದೆ? ಬದುಕಿನ ಏಕತಾನತೆಯ ನಡುವೆ ಜನರ ಅವಶ್ಯಕತೆಯೂ ಆಗಿರುವ ಒಳಗನ್ನು ಅರಳಿಸಿಕೊಳ್ಳುವ, ಚೈತನ್ಯವನ್ನು ಕಾಪಿಟ್ಟುಕೊಳ್ಳುವ, ತನ್ನ ಸುತ್ತಲನ್ನು ಒಳಗೊಳ್ಳುವ ತಮ್ಮದೇ ಅವಕಾಶವನ್ನು ಸಾಮಾನ್ಯ ಜನ ಕಳೆದುಕೊಳ್ಳಬೇಕಾಗುತ್ತದೆ. ವ್ಯಾವಹಾರಿಕತೆಯೇ ಕೇಂದ್ರವಾದ ಬದುಕಿನ ಕ್ರಮವನ್ನು ನಾವು ಅಳವಡಿಸಿಕೊಂಡಷ್ಟೂ ಕಲೆ ನಮ್ಮಿಂದ ದೂರವಾಗುತ್ತದೆ. ಮಾನವೀಯ ಸಂಬಂಧಗಳೇ ಮೂಲವಾದ ಬದುಕಿನಲ್ಲಿ ಕಲೆ ಜನರ ಹತ್ತಿರದಲ್ಲಿರುತ್ತದೆ. ಜಾನಪದ ಕಲೆಗಳು ಹುಟ್ಟುವುದು ಹಾಗೂ ಜನ ಅದರೊಳಗೆ ತಲ್ಲೀನತೆ ಅನುಭವಿಸುವುದು ಈ ಕಾರಣದಿಂದಲೇ. ಆದರೆ ಆಧುನಿಕ ಬದುಕಿನಲ್ಲಿ ನಮ್ಮ ಬದುಕುಗಳು ನಮ್ಮವೇ ಆಗಿರುವುದಿಲ್ಲ. ಮಾತ್ರವಲ್ಲ, ಕಲೆ ಸಾಹಿತ್ಯವನ್ನೂ ಹೀಗೇ, ಇಂತೇ ಎಂದು ಚೌಕಟ್ಟುಗಳಲ್ಲಿ ನಿರ್ಬಂಧಿಸಲಾಗುತ್ತದೆ.

ಸಾಹಿತ್ಯವೇನೋ ಹಲವು ಸ್ತರಗಳಲ್ಲಿ ತನ್ನನ್ನು ತಾನು ಚಟುವಟಿಕೆಯಲ್ಲಿ ಇಟ್ಟುಕೊಂಡಿದೆ. ಇಂದು ಪುಸ್ತಕ ಪ್ರಕಟಣೆಯು ಮೊದಲಿನಂತೆ ಯಾರದೋ ಮರ್ಜಿ ಕಾಯಬೇಕಾದ ಅಗತ್ಯ ಇಲ್ಲ. ಸಾಮಾಜಿಕ ಮಾಧ್ಯಮಗಳು ಹೊಸ ಸಾಧ್ಯತೆ ತೆರೆದಿಟ್ಟಿವೆ. ಹಾಗಾದರೆ ಬೇರೆ ಕ್ಷೇತ್ರಗಳಲ್ಲೂ ಇದೇ ಬದಲಾವಣೆ ಆಗಿದೆಯಲ್ಲವೇ ಎಂದು ಅನ್ನಿಸಬಹುದು. ಇದೇ ಬೆಳವಣಿಗೆ ಆಗಿದ್ದರೂ ಕೆಲವು ಕಲೆಗಳ ಪ್ರದರ್ಶನದ ಸ್ವರೂಪವೇ ಬೇರೆ ರೀತಿಯದು. ಇಂದು ಚಿತ್ರಕಲೆಯು ಬಹುಬಗೆಯ ಅಭಿವ್ಯಕ್ತಿಯನ್ನು ಹುಡುಕಿಕೊಂಡಿದೆ. ಆದರೆ ಇವುಗಳ ಪ್ರದರ್ಶನಕ್ಕಿರುವ ಗ್ಯಾಲರಿಗಳು ಸಿರಿಗರಕ್ಕೆ ಒಳಗಾಗಿವೆ. ಕಲಾಕೃತಿಗಳ ಮಾರಾಟವೊಂದೇ ಮಾನದಂಡವಾಗಿರುವ ಇವುಗಳ ಸ್ವರೂಪದಿಂದಾಗಿ ಹೇಗೆ ಅನೇಕ ಕಲಾವಿದರು ಅವಕಾಶವಿಲ್ಲದೆ ಬಳಲುತ್ತಿದ್ದಾರೆ ಎಂಬುದು ಒಂದು ಮಗ್ಗುಲಾದರೆ, ಜನರನ್ನೂ ಹೇಗೆ ದೂರ ಇಟ್ಟಿವೆ ಎಂಬುದು ಇನ್ನೊಂದು ಮಗ್ಗುಲಾಗಿದೆ.

ಯಾವ ಕಲಾವಿದರ ಕಲಾಕೃತಿಗಳು ಮಾರಾಟವಾಗುತ್ತವೋ ಅವರಿಗೆ ಮಾತ್ರ ಮಣೆ ಹಾಕುವ ಪರಿ ಕಲೆಯನ್ನು ಕೆಲವರ ಸೊತ್ತಾಗಿಸಿದೆ. ಕಲಾ ಗ್ಯಾಲರಿಗಳ ಪರಿಚಯ ಆ ಕ್ಷೇತ್ರದವರನ್ನು ಬಿಟ್ಟು ಉಳಿದವರಿಗೆ ಇಲ್ಲವೇ ಇಲ್ಲ ಎಂಬಂತಾಗಿದೆ. ಒಂದು ಎಲೈಟ್ ವರ್ಗವನ್ನು ಸೃಷ್ಟಿಸಿ, ಅವರವರೇ ಅದರ ಚರ್ಚೆ, ವಿಮರ್ಶೆ ಮಾಡಿ, ಅವರದೇ ಪ್ರತ್ಯೇಕ ಲೋಕವೊಂದನ್ನು ನಿರ್ಮಿಸಿಕೊಳ್ಳುವುದರ ಮೂಲಕ ಏನನ್ನು ಸಾಧಿಸಿದಂತಾಗುತ್ತದೆ ಎಂಬ ಪ್ರಶ್ನೆ ಈ ಲೋಕದಾಚೆ ಇರುವವರನ್ನು ಕಾಡುತ್ತದೆ. ಸ್ವಾಯತ್ತತೆ ಎಂದರೇನು ಎಂಬ ಚರ್ಚೆಗೆ ಇದು ಅನುವು ಮಾಡಿಕೊಡುತ್ತದೆ.

ಸಾಹಿತ್ಯಕ್ಕೂ ಈ ಅಪಾಯ ಇಲ್ಲವೆಂದಲ್ಲ. ಈ ಕಾರಣಕ್ಕೇ ಸಾಹಿತ್ಯವೂ ಪ್ರಭುತ್ವದ ಅಡಿಯಾಳಾಗಬಾರದು ಎಂಬ ಎಚ್ಚರಿಕೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ. ಸಾಹಿತಿಗಳು ಬರೆಯುವುದನ್ನಷ್ಟೇ ತಮ್ಮ ಕಸುಬು ಅಥವಾ ಜೀವನೋಪಾಯ ಮಾಡಿಕೊಳ್ಳದೇ ಇರುವುದರಿಂದ ಈ ಅಪಾಯದಿಂದ ಪಾರಾಗಿದ್ದಾರೆ. ಆದರೆ ಮನ್ನಣೆ, ಪ್ರಶಸ್ತಿ, ಸ್ಥಾನಗಳು ಆಮಿಷವಾಗಿ ಬದಲಾದರೆ ಮತ್ತು ಆಮಿಷದಿಂದ ಇವುಗಳನ್ನು ಪಡೆಯುವ ವಾತಾವರಣ ಸೃಷ್ಟಿಯಾದರೆ ಆಗ ‘ರಾಜಕಾರಣ’ವು ಬೆರೆಯತೊಡಗುತ್ತದೆ. ಇದೊಂದು ನಿರ್ಲಜ್ಜ ಸ್ಥಿತಿ.

ಪಕ್ಷ ರಾಜಕಾರಣ ಮಾಡುವ ರಾಜಕಾರಣಿಗಳಿಗೂ ರಾಜಕೀಯ ಹಕ್ಕೊತ್ತಾಯ ಮಾಡಬೇಕಾದ ಸಾಹಿತಿ, ಕಲಾವಿದರಿಗೂ ಆಗ ವ್ಯತ್ಯಾಸ ಉಳಿಯುವುದಿಲ್ಲ. ಆಗಲೇ, ಕಲೆಯ ಬಗೆಗೆ ಯಾವ ಅರಿವೂ ಇಲ್ಲದ ರಾಜಕಾರಣಿಗಳೂ ಸಾಹಿತಿ ಕಲಾವಿದರ ಕುರಿತು ಕೇವಲವಾಗಿ ಮಾತನಾಡುವ ಹಂತಕ್ಕೆ ಮುಟ್ಟುತ್ತಾರೆ.

ಯಾವ ಕ್ಷೇತ್ರವೂ ‘ರಾಜಕೀಯ’ವನ್ನು ಬಿಟ್ಟಿರಲು ಸಾಧ್ಯವಿಲ್ಲ. ಆದರೆ ಇಲ್ಲಿ ನಾನು ಹೇಳುತ್ತಿರುವ ರಾಜಕೀಯ ಎಂಬುದು ನ್ಯಾಯದ ಹಕ್ಕೊತ್ತಾಯ ಎಂಬ ಅರ್ಥದಲ್ಲಿದೆ. ಅಂದರೆ, ಪ್ರಭುತ್ವವಾಗಲಿ, ಸಾಮಾಜಿಕ ವ್ಯವಸ್ಥೆಯಾಗಲಿ ತಪ್ಪು ಮಾಡಿದಾಗ, ತಾರತಮ್ಯ ಮಾಡಿದಾಗ ಅದನ್ನು ಖಂಡಿಸುವ, ತರತಮರಹಿತ ಸಾಮಾಜಿಕ ವ್ಯವಸ್ಥೆಯನ್ನು ಮಂಡಿಸುವ, ಪ್ರತಿಭಟಿಸುವ, ಸುಸ್ಥಿರ ಬದುಕಿನ ಅನುಕೂಲಗಳನ್ನು ಒದಗಿಸಿಕೊಡಲು ಒತ್ತಾಯಿಸುವ ಕೆಲಸವನ್ನು ಸಾಹಿತ್ಯ ಮತ್ತು ಸಾಹಿತಿಗಳು ಮಾಡಬೇಕಾಗುವುದು ಅವರ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗುತ್ತದೆ. ಆ ಹೊಣೆಗಾರಿಕೆ ಇಲ್ಲದೇ ಹೋದಲ್ಲಿ ಅದು ಬಸವಲಿಂಗಪ್ಪನವರು ಹೇಳಿದಂತೆ ಬೂಸಾ ಸಾಹಿತ್ಯವಾಗುತ್ತದೆ.

1984ರಲ್ಲಿ ಗೋವಿಂದ ನಿಹಲಾನಿಯವರು ನಿರ್ದೇಶಿಸಿದ ‘ಪಾರ್ಟಿ’ ಎಂಬ ಸಿನಿಮಾವು ಈ ಕುರಿತು ಅತ್ಯಂತ ಸಶಕ್ತವಾಗಿ ಮಾತನಾಡುತ್ತದೆ. ರಾಷ್ಟ್ರಪ್ರಶಸ್ತಿ ಪಡೆದ ಲೇಖಕರಿಗಾಗಿ ಶ್ರೀಮಂತ ಮಹಿಳೆಯೊಬ್ಬರು ಏರ್ಪಡಿಸಿದ ಪಾರ್ಟಿಯಲ್ಲಿ ತತ್ವ, ಸಿದ್ಧಾಂತ, ಕಲಾತ್ಮಕತೆ ಎಲ್ಲದರ ಮಾತು ಬರುತ್ತದೆ. ಆದರೆ ಇವೆಲ್ಲವೂ ಬರೀ ಮಾತಾಗಿ ಬಡಬಡಿಸುತ್ತಿರುತ್ತವೆ. ಕುಡಿತದ ಅಮಲಿನಲ್ಲಿ ಒಂದೊಂದೇ ಮುಖವಾಡಗಳು ತೆರೆದುಕೊಳ್ಳತೊಡಗುತ್ತವೆ. ಅಲ್ಲಿ ಇಲ್ಲದ, ಈಗ ಹೋರಾಟಗಾರನಾಗಿರುವ ಕವಿ ಅಮೃತ್ನ ಉಲ್ಲೇಖ ಪದೇ ಪದೇ ಬರುತ್ತದೆ. ಬರೆಯುವುದು ಬಿಟ್ಟು ಆದಿವಾಸಿಗಳ ಪರವಾಗಿ ಹೋರಾಟಕ್ಕೆ ಹೋಗಿರುವ ಇವನ ಪರಿ ಇವರಿಗೆ ರೊಮ್ಯಾಂಟಿಕ್ ಭ್ರಮೆಯಾಗಿ ಕಾಣಿಸುತ್ತದೆ. ಆದಿವಾಸಿಗಳ ಹೋರಾಟವು ಹಿಂಸೆಯಂತೆ ಕಾಣುತ್ತದೆ. ಸರ್ಕಾರ ಮತ್ತು ಪೊಲೀಸರ ಕುತಂತ್ರ, ದಮನವನ್ನು ಪರಿಗಣಿಸದೆ ಅದನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಅನಿವಾರ್ಯ ಎನ್ನುವುದು, ಈ ಸಾಹಿತಿ ಕಲಾವಿದರ ಟೊಳ್ಳುತನವನ್ನು ತೋರುತ್ತದೆ.

ವ್ಯವಸ್ಥೆಗೆ ಬಲಿಯಾಗುವ ಅಮೃತ್ ಆ ಕಾರಣಕ್ಕೇ ಇವರನ್ನು ಕಾಡತೊಡಗುತ್ತಾನೆ. ಅಮೃತ್ನ ಗೆಳೆಯ ಅವಿನಾಶ್, ‘ಕಲೆಯನ್ನು ರಾಜಕೀಯದಿಂದ ದೂರ ಮಾಡಲಾಗುವುದಿಲ್ಲ. ಜಗತ್ತಿನ ಹಲವು ಸರ್ಕಾರಗಳು ತಮ್ಮ ಸತ್ತೆಗಳನ್ನು ಭದ್ರಪಡಿಸಿಕೊಳ್ಳಲು ಕಲೆಯನ್ನು ಬಳಸುತ್ತವೆ. ಆದರೆ ಸಾಮಾಜಿಕ ಪರಿವರ್ತನೆ ತರಬೇಕೆಂದರೆ ಕಲೆಯನ್ನು ಒಂದು ಹತ್ಯಾರವಾಗಿಯೇ ಬಳಸಬೇಕು’ ಎನ್ನುತ್ತಾನೆ. ಹಾಗಾದರೆ ಕಲೆ, ಸಾಹಿತ್ಯ ಬರೀ ಹತ್ಯಾರಗಳಷ್ಟೇ ಆಗಿರುತ್ತವೆಯೆ? ಅವಕ್ಕೊಂದು ಸ್ವತಂತ್ರ ಅಸ್ತಿತ್ವವಿಲ್ಲವೇ? ಖಂಡಿತಾ ಇದೆ. ಅವುಗಳ ಸ್ವಾತಂತ್ರ್ಯ ಅವು ಹೊಂದಿರುವ ಸಂವೇದನೆಯಲ್ಲಿ ಇರುತ್ತದೆ. ಆ ಸಂವೇದನೆಯು ಕಲಾತ್ಮಕತೆಯ ಮೂಲಕ ಹೊಮ್ಮಿಸುವ ಹೊಸ ದೃಷ್ಟಿಯಲ್ಲಿರುತ್ತದೆ.

‘ನಿನ್ನ ಕಿವಿಯಿಂದ ಈ ನಿನ್ನ ಕಾಯಿಲೆ ಶುರುವಾಗಿದೆ!’ ಎಂದು ಲಂಕೇಶರ ‘ಗುಣಮುಖ’ ನಾಟಕದ ಬಡ ಹಕೀಮ ಅಲಾವಿಖಾನ್ ಜನರ ಕಷ್ಟಕ್ಕೆ ಕಿವಿಗೊಡದ ಕ್ರೂರಿ ರಾಜ ನಾದಿರ್ಗೆ ಹೇಳಬಲ್ಲ. ಹೀಗೆ ಕಾಣಿಸುವ ಕಣ್ನೋಟವಿರುವ ಕಲೆ, ಸಾಹಿತ್ಯವನ್ನು ಯಾರೂ ಸೆರೆಯಲ್ಲಿಡಲಾರರು. ಅವು ಜನರ ನಲಿವಿನಲ್ಲೂ ನೋವಿನಲ್ಲೂ ಸಮಾನವಾಗಿ ಭಾಗಿಯಾಗುತ್ತವೆ. ಹಾಗೆ ಭಾಗಿಯಾಗಲು ಅವು ಜನರಿಗೆ ಮುಕ್ತವಾಗಿ ಲಭ್ಯವಿರಬೇಕು ಮತ್ತು ಪ್ರಭುತ್ವದಿಂದ, ಸಿರಿಗರದಿಂದ ಅಂತರವನ್ನು ಕಾಯ್ದುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.