ಐಷಾರಾಮಿ ವಸ್ತುಗಳನ್ನು ಬಿಟ್ಟರೆ ಉಳಿದವುಗಳ ಶೇ 28ರ ಜಿಎಸ್ಟಿ ದರವು ಶೀಘ್ರ ಕೊನೆಯಾಗಲಿದೆ ಎಂದು 2018ರ ಡಿಸೆಂಬರ್ನಲ್ಲಿ ಆಗ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಘೋಷಿಸಿದ್ದರು. ದೇಶವು ಮುಂದಿನ ದಿನಗಳಲ್ಲಿ ಶೇ 5ರ ಒಂದು ದರ ಮತ್ತು ಶೇ 12 ಮತ್ತು ಶೇ 18ರ ನಡುವಣ ಒಂದು ದರವನ್ನು (ಕೆಲವು ವಸ್ತುಗಳನ್ನು ಹೊರತುಪಡಿಸಿ) ಎದುರು ನೋಡಬಹುದು. ಅಗತ್ಯ ಚಿಂತನೆ ನಡೆಸಿ, ನಿಧಾನಕ್ಕೆ ಇದನ್ನು ಜಾರಿಗೆ ತರಬೇಕು ಎಂದು ಜೇಟ್ಲಿ ಭಾವಿಸಿದ್ದರು. ಆದರೆ, ವರ್ಷ ತುಂಬುವುದರೊಳಗೆ, ಭರವಸೆ ಈಡೇರಿಸುವ ಮೊದಲೇ ಅಕಾಲಿಕವಾಗಿ ಅವರು ಸಾವಿಗೀಡಾದರು. ಸರಳತೆಯನ್ನು ಸಾಧಿಸುವುದು ಸುಲಭವಲ್ಲ. ಶ್ರೇಷ್ಠ ಸಂತರು, ಕಲಾವಿದರು ಮತ್ತು ವಿನ್ಯಾಸಕಾರರು ಕಾಲ ಕಾಲದಿಂದಲೂ ಇದನ್ನು ಬೋಧಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯಗಳ ತೆರಿಗೆಗಳು ಮತ್ತು ಮೇಲ್ತೆರಿಗೆಗಳ ಚಕ್ರವ್ಯೂಹದ ಕೋಟೆಯಂತಹ ತೆರಿಗೆ ವ್ಯವಸ್ಥೆಯ ಇತಿಹಾಸದಲ್ಲಿ ಏಕರೂಪದ ಜಿಎಸ್ಟಿ ಜಾರಿ ಒಂದು ಮೈಲಿಗಲ್ಲು. ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಈಗಲೂ ಜಿಎಸ್ಟಿ ವ್ಯಾಪ್ತಿಗೆ ಬಂದಿಲ್ಲ. ಕೇಂದ್ರ ಎಕ್ಸೈಸ್ ಸುಂಕಗಳು ಮತ್ತು ರಾಜ್ಯಗಳು ವಿಧಿಸುವ ವಿವಿಧ ತೆರಿಗೆಗಳು– ಶೇ 46ರಿಂದ ಶೇ 55ರಷ್ಟು ಬೃಹತ್ ದರದಲ್ಲಿ ಇವೆ.

ಹಲವು ದರಗಳನ್ನು ಹೊಂದಿರುವ ಜಿಎಸ್ಟಿ ಈಗಲೂ ಸಂಕೀರ್ಣ ವ್ಯವಸ್ಥೆಯೇ ಆಗಿದೆ. ಅರ್ಥ ಮಾಡಿಕೊಳ್ಳಲು ಅಥವಾ ಅನುಸರಿಸಲು ಸುಲಭವಲ್ಲ ಮತ್ತು ವಿವಿಧ ವ್ಯಾಖ್ಯಾನದ ಅವಕಾಶಗಳು ಇವೆ. ಕಿರುಕುಳಕ್ಕೂ ಅವಕಾಶ ಇದೆ. ತಪ್ಪಿಸಬಹುದಾದ ವ್ಯಾಜ್ಯಗಳ ಸಾಧ್ಯತೆಗಳು ಇವೆ. ಹಣಕಾಸು ಸಚಿವಾಲಯದ ಅಧಿಕಾರಿಗಳಿಗೆ ‘ಕಿಸ್’ (KISS) ತತ್ವವನ್ನು ಮತ್ತೊಮ್ಮೆ ನೆನಪಿಸಬೇಕಿದೆ.

ಕಿಸ್– ಅಂದರೆ ಕೀಪ್ ಇಟ್ ಸಿಂಪಲ್, ಸ್ಟುಪಿಡ್ (ಮೂರ್ಖ, ಸರಳವಾಗಿರಿಸು). ಇದು ವ್ಯಾಪಾರದಲ್ಲಿ ಸ್ವೀಕೃತವಾಗಿರುವ ತತ್ವ. ಲಾಕ್ಹೀಡ್ ವಿಮಾನ ಕಂಪನಿಯ ಎಂಜಿನಿಯರ್ ಕೆಲ್ಲಿ ಜಾನ್ಸನ್ ಅವರು ಮೊದಲು ಇದನ್ನು ಬಳಸಿದರು. ಯುದ್ಧರಂಗದಲ್ಲಿ ಒಬ್ಬ ಮೂರ್ಖ ಕೂಡ ಸಾಮಾನ್ಯ ಸಲಕರಣೆ ಬಳಸಿ ದುರಸ್ತಿ ಮಾಡಲು ಸಾಧ್ಯವಾಗುವಂತೆ ವಿಮಾನದ ವಿನ್ಯಾಸ ಇರಬೇಕು ಎಂಬುದು ಇದರ ಅರ್ಥ. ಜಗತ್ತಿನ ಎಲ್ಲೆಡೆಯೂ ಅಧಿಕಾರಶಾಹಿಗೆ ‘ಕಿಸ್’ ತತ್ವದ ವಿಚಾರದಲ್ಲಿ ವಿಸ್ಮೃತಿಯೇ ಇದೆ.

ಏಕೀಕೃತ ತೆರಿಗೆ ವ್ಯವಸ್ಥೆಯಿಂದ ಅನುಕೂಲಗಳಿವೆ ಎಂಬುದರ ಬಗ್ಗೆ ವಿವಾದವೇ ಇಲ್ಲ ಎಂಬುದನ್ನು ಜಗತ್ತಿನಾದ್ಯಂತ ಈ ತೆರಿಗೆ ವ್ಯವಸ್ಥೆ ಇರುವ ದೇಶಗಳ ದತ್ತಾಂಶ ದೃಢಪಡಿಸಿದೆ. ಎರಡೇ ದರಗಳನ್ನು ರೂಪಿಸಿ ಎಂದು ಸರ್ಕಾರವು ಅಧಿಕಾರಶಾಹಿಗೆ ದ್ವಂದ್ವವೇ ಇಲ್ಲದ ನಿರ್ದೇಶನ ನೀಡಬೇಕು.ಇದು ಸಾಧ್ಯವಾಗಬೇಕಿದ್ದರೆ ರಾಜಕೀಯ ಮಟ್ಟದಲ್ಲಿ ಸ್ಪಷ್ಟವಾದ ಸುಧಾರಣಾವಾದಿ ಚಿಂತನೆಯು ಅಗತ್ಯ.

ಐಷಾರಾಮಿ ವಸ್ತುಗಳು ಮತ್ತು ಸೇವೆಗಳ ಮೇಲಿನ
ತೆರಿಗೆಯನ್ನೇ ನೋಡೋಣ.

300 ಕೊಠಡಿಗಳಿರುವ ಪಂಚತಾರಾ ಹೋಟೆಲ್ ನೇರವಾಗಿಯೇ 500 ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುತ್ತದೆ. ಅವರಲ್ಲಿ
ಶೇ 90ರಷ್ಟು ಮಂದಿ ವೈಟರ್ಗಳು, ಸ್ವಚ್ಛತೆಯ ಕೆಲಸಗಾರರು, ಭದ್ರತಾ ಸಿಬ್ಬಂದಿ, ಸ್ವಾಗತ ಸಿಬ್ಬಂದಿ, ದ್ವಾರಪಾಲಕರು, ಬಾಣಸಿಗರು, ಹಣಕಾಸು ವ್ಯವಹಾರದ ಸಿಬ್ಬಂದಿ ಮತ್ತು ಕ್ಲರ್ಕ್ಗಳು ಇರುತ್ತಾರೆ. ಸ್ಪಾ, ಉಡುಗೊರೆ ಅಂಗಡಿ, ಈಜುಕೊಳದಲ್ಲಿಯೂ ಹಲವು ಮಂದಿ ಕೆಲಸ ಪಡೆದುಕೊಳ್ಳುತ್ತಾರೆ.

ಪರೋಕ್ಷವಾಗಿಯೂ ಹಲವು ಉದ್ಯೋಗಗಳು ಈ ಹೋಟೆಲ್ನಿಂದಾಗಿ ಸೃಷ್ಟಿಯಾಗುತ್ತವೆ.

ಪಂಚತಾರಾ ಹೋಟೆಲ್ಗಳು ವಿದೇಶದ ಶ್ರೀಮಂತ ಪ್ರವಾಸಿಗರನ್ನು ಆಕರ್ಷಿಸುತ್ತವೆ ಮತ್ತು ಆ ಮೂಲಕ ವಿದೇಶಿ ವಿನಿಮಯ ಗಳಿಸಿಕೊಡುತ್ತವೆ. ಹಾಗಾಗಿಯೇ ಇಂತಹ ಹೋಟೆಲ್ಗಳ ಮೇಲೆ ವಿಪರೀತ ತೆರಿಗೆ ವಿಧಿಸುವುದು ವಿವೇಕವಲ್ಲ. ಹವಾನಿಯಂತ್ರಕ, ಹವಾನಿಯಂತ್ರಿತ ಹೋಟೆಲ್, ಚಾಕೊಲೇಟ್ ಅಥವಾ ಐಷಾರಾಮಿ ಕಾರುಗಳ ಮೇಲೆ ಅತಿಯಾದ ತೆರಿಗೆ ವಿಧಿಸಬೇಕು ಎಂಬುದು ಕೂಡ ಸಂಕುಚಿತ ಮನೋಭಾವವೇ.

ಶ್ರೀಮಂತ ಮತ್ತು ಮೇಲ್ಮಧ್ಯಮ ವರ್ಗವು ಹಣ ಖರ್ಚು ಮಾಡುವುದರ ಮೂಲಕ ಅರ್ಥವ್ಯವಸ್ಥೆಯು ಪುನಶ್ಚೇತನಗೊಳ್ಳುವಂತೆ ಮಾಡುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕು. ಚಾಕೊಲೇಟ್, ಹವಾನಿಯಂತ್ರಕದಂತಹ ವಸ್ತುಗಳ ಮೇಲೆ ತೆರಿಗೆ ಹೇರಿ ಇವು ಗ್ರಾಹಕರ ಕೈಗೆಟುಕದಂತೆ ಮಾಡುವುದರ ಬದಲು, ಹೆಚ್ಚು ಹೆಚ್ಚು ಜನರು ಇವುಗಳನ್ನು ಖರೀದಿಸಲು ಸಾಧ್ಯವಾಗುವಂತೆ ಮಾಡಬೇಕು.

ನನ್ನ ಹೆಂಡತಿ ನಡೆಸುವ ಅಯ್ಯಂಗಾರ್ ಬೇಕರಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಗೊಂದಲ ಮೂಡಿಸುವಲ್ಲಿ ಅಧಿಕಾರಿಗಳು ನಿಸ್ಸೀಮರು– ಬ್ರೆಡ್ಗೆ ತೆರಿಗೆ ಇಲ್ಲ, ಆದರೆ, ತರಕಾರಿಯ ಸ್ಯಾಂಡ್ವಿಚ್ಗೆ ಶೇ 5ರಷ್ಟು ತೆರಿಗೆ ಇದೆ. ಇದು ತರಕಾರಿ ಬೆಳೆಯುವವರ ಮೇಲೆ ನೇರ ಪ್ರಹಾರ. ಬನ್ಗೆ ತೆರಿಗೆ ಇಲ್ಲ, ಅದರ ಮೇಲೆ ಒಂದಿಷ್ಟು ಒಣದ್ರಾಕ್ಷಿ ಹಾಕಿದರೆ ಶೇ 5ರಷ್ಟು ತೆರಿಗೆ ಇದೆ. ಮಸಾಲೆ ಸೇರಿಸಿದ ಶೇಂಗಾ, ಮುರುಕ್ಕುಗಳಿಗೆಲ್ಲ ಶೇ 12ರಷ್ಟು ತೆರಿಗೆ. ಕೇಕ್ ಮತ್ತು ಚಾಕೊಲೇಟ್ಗೆ ಶೇ 18ರಷ್ಟು ತೆರಿಗೆ.

ವಾಹನಗಳು, ಟ್ರ್ಯಾಕ್ಟರ್ಗಳು, ಸೈಕಲ್ಗಳು, ಬೈಕ್ಗಳು, ಕಡಿಮೆ ದರದ ಕಾರುಗಳು ಮತ್ತು ಐಷಾರಾಮಿ ಕಾರುಗಳು– ಇವುಗಳಿಗೆ ಶೇ 5, ಶೇ 12, ಶೇ 18, ಶೇ 28 ಮತ್ತು ಶೇ 50ರವರೆಗಿನ ತೆರಿಗೆ ಇದೆ. ವಾಹನಗಳ ಮಾರಾಟವು ಅರ್ಥವ್ಯವಸ್ಥೆಯೊಂದರ ಹೃದಯ ಮಿಡಿತ ಮತ್ತು ಆರೋಗ್ಯದ ಸೂಚಕ. ಹಳೆಯ ನುಡಿಯೊಂದು ಈಗಲೂ ಪ್ರಸ್ತುತ– ಕಾರುಗಳು ಮತ್ತು ಹೆದ್ದಾರಿಗಳನ್ನು ಅಮೆರಿಕ ನಿರ್ಮಿಸಲಿಲ್ಲ, ಬದಲಿಗೆ, ವಾಹನಗಳು ಮತ್ತು ರಸ್ತೆಗಳೇ ಅಮೆರಿಕವನ್ನು ಕಟ್ಟಿದವು.

ಪರೋಟ, ಚಪಾತಿ, ದೋಸೆ ಹಿಟ್ಟು ಮುಂತಾದವುಗಳನ್ನು ಮಾರುವ ನವೋದ್ಯಮ ‘ಐಡಿ ಫ್ರೆಶ್ ಫೂಡ್’ನ ಜಿಎಸ್ಟಿ ವಿವಾದದ ಕುತೂಹಲಕರ ಪ್ರಕರಣವನ್ನೇ ನೋಡಿ. ಈ ಸಂಸ್ಥೆಯ ಉತ್ಪನ್ನಗಳಿಗೆ ಶೇ 5ರಷ್ಟು ಜಿಎಸ್ಟಿ ಸೇರಿಸಿ ಮಾರಾಟ ಮಾಡಲಾಗುತ್ತಿತ್ತು. ಅತಿಬುದ್ಧಿವಂತ ತೆರಿಗೆ ಅಧಿಕಾರಿಯೊಬ್ಬರು ಹೊಸ ಚಿಂತನೆಯನ್ನೇ ಮುಂದಿಟ್ಟರು. ಚಪಾತಿ ಮತ್ತು ರೋಟಿಗಳೆಲ್ಲ ಸಪಾಟು ಆಹಾರಗಳು. ಆದರೆ, ಪರೋಟ ಹಾಗಲ್ಲ, ಅದು ಪದರಗಳುಲ್ಲ ಆಹಾರ ಎಂದ ಅವರು ಪರೋಟಕ್ಕೆ ಶೇ 18ರಷ್ಟು ತೆರಿಗೆ ಹಾಕಿದರು.

ತೆರಿಗೆ ಅಧಿಕಾರಿಗಳು ಹಿಟ್ಟು ಮಾಡುವುದರ ವ್ಯತ್ಯಾಸದ ಬಗ್ಗೆ ಸಂಶೋಧನೆಯಲ್ಲಿ ತೊಡಗಿಕೊಂಡರೆ ಅರ್ಥವ್ಯವಸ್ಥೆಯನ್ನು ಐದು ಟ್ರಿಲಿಯನ್ ಡಾಲರ್ಗೆ (ಸುಮಾರು ₹390 ಲಕ್ಷ ಕೋಟಿ) ತಲುಪಿಸುವುದು ಸಾಧ್ಯವೇ? ಕಡಿಮೆ ವೆಚ್ಚದ ವಿಮಾನಯಾನವು ಯಶಸ್ವಿ ಆದದ್ದು ‘ಕಿಸ್’ ತತ್ವದ ಕಾರಣದಿಂದ: ಎಲ್ಲ ಹೆಚ್ಚುವರಿಗಳನ್ನು ಕಳಚಲಾಯಿತು– ನೀರು, ಆಹಾರ, ಉಚಿತ ಕೊಡುಗೆಗಳು, ವಿಶೇಷ ಆಸನ ಇತ್ಯಾದಿ– ಏಕ ವರ್ಗದ ಆಸನ ವ್ಯವಸ್ಥೆ, ಕೋಡ್ ಹಂಚಿಕೆ ಇಲ್ಲದೆ ಒಂದೆಡೆಯಿಂದ ಇನ್ನೊಂದೆಡೆಗೆ ನೇರ ಪ್ರಯಾಣ, ಇಂಟರ್ನೆಟ್ ಬುಕಿಂಗ್, ಮಧ್ಯವರ್ತಿ ಇಲ್ಲ... ಇದು ಆಕಾಶದಲ್ಲಿನ ಉಡುಪಿ ಸೆಲ್ಫ್ ಸರ್ವಿಸ್ ಹೋಟೆಲ್.

ಹಣಕಾಸು ಸಚಿವರು ಅತ್ಯಂತ ಎಚ್ಚರದ ಹೆಜ್ಜೆ ಇರಿಸುತ್ತಿದ್ದಾರೆ. ಆದರೆ, ಅದರ ಬದಲಿಗೆ ಅವರು ಪ್ರಧಾನಿಯವರ ಹೇಳಿಕೆಯಂತೆ ನಡೆದುಕೊಳ್ಳಬೇಕು. ಕೋವಿಡ್ ಬಳಿಕ ಮಹತ್ವದ ಸುಧಾರಣೆಗಳನ್ನು ನಡೆಸಲಾಗುವುದು ಎಂಬರ್ಥದ ಮಾತನ್ನು ಪ್ರಧಾನಿ ಆಡಿದ್ದರು. ಅದರಂತೆ ಹಣಕಾಸು ಸಚಿವರು, ಗೊಂದಲಕಾರಿಯಾದ ಹಲವು ದರಗಳನ್ನು ಶೀಘ್ರವೇ ಕೈಬಿಡಬೇಕು. ವಿನಾಯಿತಿಯ ಪಟ್ಟಿಯೊಂದಿಗೆ ಕಡಿಮೆಯಾದ ಒಂದೇ ತೆರಿಗೆ ದರವನ್ನು ಹಣಕಾಸು ಸಚಿವೆ ಮುಂದಿರಿಸಬಹುದು. ಇದು ತೆರಿಗೆ ಅನುಸರಣೆ ಹೆಚ್ಚಿಸಬಹುದು, ತೆರಿಗೆ ವ್ಯಾಪ್ತಿ ಹಿಗ್ಗಿಸಬಹುದು, ಸುಲಲಿತ ವ್ಯಾಪಾರವನ್ನು ಸುಧಾರಿಸಬಹುದು, ಅರ್ಥವ್ಯವಸ್ಥೆಗೆ ಉತ್ತೇಜನ ನೀಡಬಹುದು, ಉದ್ಯೋಗ ಸೃಷ್ಟಿಸಬಹುದು, ತೆರಿಗೆ ಸಂಗ್ರಹ ಹೆಚ್ಚಿಸಬಹುದು ಮತ್ತು ಭ್ರಷ್ಟಾಚಾರವನ್ನು ತಗ್ಗಿಸಬಹುದು. ಹಲವು ದೇಶಗಳಲ್ಲಿ ಇದು ಸಾಧ್ಯವಾಗಿದೆ.

ವಿನ್ಸ್ಟನ್ ಚರ್ಚಿಲ್ ಅವರ ಚತುರ ನುಡಿಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು: ‘ಸಮೃದ್ಧಿ ಹೊಂದುವುದಕ್ಕಾಗಿ ತೆರಿಗೆ ಹೇರುವ ದೇಶವು ಬಕೆಟ್ನೊಳಗೆ ನಿಂತು ಅದರ ಹಿಡಿಯ ಮೂಲಕ ತನ್ನನ್ನು ಮೇಲೆತ್ತಿಕೊಳ್ಳಲು ಶ್ರಮಿಸುತ್ತಿರುವ ವ್ಯಕ್ತಿಗೆ ಸಮಾನ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.