ಸಿಬಿಐ ದೋಷಾರೋಪ ಹೊರಿಸಿದ ಯಾವುದೇ ವ್ಯಕ್ತಿ ಈ ಕೃತ್ಯಕ್ಕೆ ಹೊಣೆಗಾರ ಅಲ್ಲ ಎಂದಾದರೆ, ಅದನ್ನು ಮಾಡಿದ್ದು ಯಾರು, ಅವರಿಗೆ ಹಾಗೆ ಮಾಡಲು ಪ್ರೇರಣೆ ಏನಿತ್ತು ಎಂಬುದನ್ನು ಪತ್ತೆ ಮಾಡಬೇಕಾದ ಜವಾಬ್ದಾರಿ ಸಿಬಿಐ ಮೇಲೆಯೇ ಇರುತ್ತದೆ.

‘ಅಭಯ’ ಎನ್ನುವುದು ಭಾರತೀಯ ಪರಂಪರೆ ಪ್ರತಿಪಾದಿಸಿರುವ, ಪಾಲಿಸಿಕೊಂಡು ಬಂದಿರುವ ವಿಶಿಷ್ಟ ಮೌಲ್ಯಗಳಲ್ಲಿ ಒಂದು. ಈ ಮೌಲ್ಯವು ಸಂವಿಧಾನದಲ್ಲಿ ಕೂಡ ಅಡಕವಾಗಿದೆ ಎಂಬುದನ್ನು ತಜ್ಞರು ಗುರುತಿಸಿದ್ದಾರೆ. ಆದರೆ, ಪ್ರಜೆಯ ಜಾತಿ–ಧರ್ಮವನ್ನು ಲೆಕ್ಕಿಸದೆ ಸರ್ವರಿಗೂ ಅಭಯ ನೀಡುವ ವಚನಕ್ಕೆ ಒಂದು ಕಪ್ಪು ಚುಕ್ಕೆಯಂತೆ ಕಾಣುವುದು 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣ. ಭಾರತದ ಪ್ರಜಾತಾಂತ್ರಿಕ ಮೌಲ್ಯಗಳಿಗೆ ಹಾಗೂ ಭಾರತವು ಪ್ರಜಾತಂತ್ರ ಒಪ್ಪಿಕೊಳ್ಳುವುದಕ್ಕೂ ಮೊದಲಿನಿಂದ ಪಾಲಿಸಿಕೊಂಡು ಬಂದ ಉನ್ನತ ಆದರ್ಶಗಳ ಅಣಕದಂತೆ ಇತ್ತು ಆ ಕೃತ್ಯ.

ಮರ್ಯಾದಾ ಪುರುಷೋತ್ತಮ ಎಂಬ ಪ್ರೀತಿ, ಗೌರವಕ್ಕೆ ಪಾತ್ರನಾಗಿರುವ ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟ ಸುಪ್ರೀಂ ಕೋರ್ಟ್ ತೀರ್ಪು ಮಸೀದಿ ಧ್ವಂಸಗೊಳಿಸಿದ್ದನ್ನು, ‘ಲೆಕ್ಕಾಚಾರ ನಡೆಸಿ, ಸಾರ್ವಜನಿಕ ಪೂಜಾ ಸ್ಥಳವನ್ನು ನಾಶಮಾಡಿದ ಕೃತ್ಯ’ ಎಂದು ಹೇಳಿದೆ. ಮಸೀದಿ ಧ್ವಂಸಗೊಳಿಸಿದ ಕೃತ್ಯದ ಬಗ್ಗೆ ಅದೇ ತೀರ್ಪಿನಲ್ಲಿ ಇನ್ನೊಂದು ಕಡೆ ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ‘ಕಾನೂನಿಗೆ ಅನುಗುಣವಾಗಿ ಆಡಳಿತ ನಡೆಸುವುದಕ್ಕೆ ಬದ್ಧತೆ ತೋರಿರುವ ಧರ್ಮನಿರಪೇಕ್ಷ ರಾಷ್ಟ್ರವೊಂದರಲ್ಲಿ ಈ ರೀತಿ ಆಗಬಾರದಾಗಿತ್ತು’ ಎಂದೂ ಹೇಳಿದೆ.

ಈಗ, ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದ್ದ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಸೇರಿ ಒಟ್ಟು 32 ಜನರನ್ನು ಸಿಬಿಐ ವಿಶೇಷ ನ್ಯಾಯಾಲಯವು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಕೃತ್ಯ ನಡೆದ ಸರಿಸುಮಾರು 28 ವರ್ಷಗಳ ನಂತರ, ಅಷ್ಟೂ ಜನ ಆರೋಪಿಗಳನ್ನು ವಿಶೇಷ ನ್ಯಾಯಾಲಯವು ನಿರ್ದೋಷಿಗಳು ಎಂದು ಸಾರಿದೆ. ಮಸೀದಿ ಧ್ವಂಸಗೊಳಿಸಿದ್ದು ಪೂರ್ವಯೋಜಿತ ಕೃತ್ಯವಲ್ಲ ಎಂದು ವಿಶೇಷ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ ಎಂಬುದಾಗಿ ವರದಿಯಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಆಡಿದ್ದ ಮಾತುಗಳ ಜೊತೆ ಇಟ್ಟು ನೋಡಿದಾಗ, ವಿರೋಧಾಭಾಸಗಳು ಮೇಲ್ನೋಟಕ್ಕೆ ಕಾಣುತ್ತವೆ.

ಈ ಪ್ರಕರಣದ ಆರೋಪಿಗಳೆಲ್ಲರೂ ದೋಷಮುಕ್ತರು ಎಂದು ನ್ಯಾಯಾಲಯ ಹೇಳಿದ್ದನ್ನು ಗಮನಿಸಿದರೆ, ಪ್ರಕರಣದ ತನಿಖೆ ನಡೆಸಿದ ಸಿಬಿಐ ಹಾಗೂ ಪ್ರಾಸಿಕ್ಯೂಷನ್ ಹೊಣೆ ಹೊತ್ತವರ ಬಹುದೊಡ್ಡ ವೈಫಲ್ಯ ಇದು ಎಂಬ ಮಾತನ್ನು ಹೇಳಬೇಕಾಗುತ್ತದೆ. ಉದ್ರಿಕ್ತರ ಗುಂಪು ಮಸೀದಿಯನ್ನು ಧ್ವಂಸಗೊಳಿಸಿದ್ದನ್ನು ಇಡೀ ದೇಶ ಗಮನಿಸಿದೆ. ಇದರ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ಈ ಒಂದು ಕೃತ್ಯ ದೇಶದ ಸಾಮಾಜಿಕ ಹಾಗೂ ರಾಜಕೀಯ ಭೂಪಟವನ್ನು ಮಾರ್ಪಡಿಸುವಲ್ಲಿ ದೊಡ್ಡ ಪಾತ್ರ ಹೊಂದಿದೆ. ಹೀಗಿದ್ದರೂ, ಈ ಕೃತ್ಯಕ್ಕೆ ಕಾರಣರಾದವರು ಯಾರು ಎಂಬುದನ್ನು ಪತ್ತೆ ಮಾಡಲು ಸಿಬಿಐನಂತಹ ತನಿಖಾ ಸಂಸ್ಥೆಗೆ ಸಾಧ್ಯವಾಗಲಿಲ್ಲ ಎಂದಾದರೆ, ಈ ವೈಫಲ್ಯವನ್ನು ವಿವರಿಸಲು ಪದಗಳು ಸಾಕಾಗಲಿಕ್ಕಿಲ್ಲ.

ಸಹಸ್ರಾರು ‘ಕರಸೇವಕರ’ ನಡುವೆ ಇದ್ದ ‘ಸಮಾಜಘಾತುಕ ಶಕ್ತಿಗಳು’ ಧ್ವಂಸಕ್ಕೆ ಕಾರಣರು ಎಂದು ವಿಶೇಷ ನ್ಯಾಯಾಲಯವು 2,300 ಪುಟಗಳ ತನ್ನ ಆದೇಶದಲ್ಲಿ ಹೇಳಿದೆ ಎಂದು ಕೂಡ ವರದಿಯಾಗಿದೆ. ಕ್ರಿಮಿನಲ್ ಅಪರಾಧಗಳ ತನಿಖೆ ನಡೆಸುವ ಯಾವುದೇ ಸಂಸ್ಥೆಗೆ ‘ಪಿತೂರಿ’ಯ ಆರೋಪವನ್ನು ಸಾಬೀತು ಮಾಡುವುದು ಬಹುಕಷ್ಟದ ಕೆಲಸ ಆಗಿರಬಹುದು. ಆದರೆ, ಆ ಸಮಾಜಘಾತುಕ ಶಕ್ತಿಗಳು ಯಾರು ಎಂಬುದನ್ನು ಪತ್ತೆ ಮಾಡುವ ಗುರುತರ ಹೊಣೆಯಿಂದ ಆ ಸಂಸ್ಥೆ ಜಾರಿಕೊಳ್ಳಲು ಅವಕಾಶವಿಲ್ಲ. ಅವರನ್ನು ಪತ್ತೆ ಮಾಡಿ, ಅವರ ವಿರುದ್ಧ ಬಲವಾದ ಸಾಕ್ಷ್ಯ–ಪುರಾವೆಗಳನ್ನು ಸಂಗ್ರಹಿಸಿ, ಅವರಿಗೆ ಕಾನೂನಿಗೆ ಅನುಗುಣವಾಗಿ ಶಿಕ್ಷೆ ಆಗುವಂತೆ ಮಾಡುವುದು ಕೂಡ ತನಿಖಾ ಸಂಸ್ಥೆಗಳ ಜವಾಬ್ದಾರಿ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ತನಿಖೆಯ ಬಗ್ಗೆ ಆರಂಭದಿಂದಲೂ ಆಕ್ಷೇಪಗಳು ಇದ್ದವು ಎಂಬುದನ್ನು ಗಮನಿಸಬೇಕು. ಸಿಬಿಐ ದೋಷಾರೋಪ ಹೊರಿಸಿದ ಯಾವುದೇ ವ್ಯಕ್ತಿ ಈ ಕೃತ್ಯಕ್ಕೆ ಹೊಣೆಗಾರ ಅಲ್ಲ ಎಂದಾದರೆ, ಅದನ್ನು ಮಾಡಿದ್ದು ಯಾರು, ಅವರಿಗೆ ಹಾಗೆ ಮಾಡಲು ಪ್ರೇರಣೆ ಏನಿತ್ತು ಎಂಬುದನ್ನು ಪತ್ತೆ ಮಾಡಬೇಕಾದ ಜವಾಬ್ದಾರಿ ಸಿಬಿಐ ಮೇಲೆಯೇ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ಸಾಮಾಜಿಕ, ರಾಜಕೀಯ ಆಯಾಮಗಳನ್ನು ಹೊಂದಿರುವ ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರು ಯಾರು ಎಂಬುದನ್ನು ಪತ್ತೆ ಮಾಡಿ, ಅವರನ್ನು ಶಿಕ್ಷೆಗೆ ಗುರಿಪಡಿಸಲು ಆಗದಿರುವುದು ಸಿಬಿಐ ಪಾಲಿನ ಚಾರಿತ್ರಿಕ ಸೋಲುಗಳಲ್ಲಿ ಒಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.