ರಕ್ತಹೀನತೆ ಮತ್ತು ಅಪೌಷ್ಟಿಕತೆ ಭಾರತವನ್ನು ದೀರ್ಘಕಾಲದಿಂದ ಕಾಡುತ್ತಿರುವ ಪ್ರಮುಖ ನ್ಯೂನತೆಗಳು. ಹಸಿವಿನ ಸೂಚ್ಯಂಕದಲ್ಲಿ ಭಾರತವು ವಿಶ್ವದ 125 ರಾಷ್ಟ್ರಗಳಲ್ಲಿ 111ನೇ ಸ್ಥಾನದಲ್ಲಿದೆ ಎಂದು ಇತ್ತೀಚೆಗೆ ಪ್ರಕಟವಾದ ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‌ಐ) ವರದಿ ಹೇಳಿದೆ. ಹಸಿವಿಗೂ ಅಪೌಷ್ಟಿಕತೆಗೂ ನೇರ ಸಂಬಂಧ ಇದೆ. ಅದನ್ನು ಈ ವರದಿ ದೃಢಪಡಿಸುತ್ತದೆ. ಇವೆರಡೂ ದೇಶದ ಜನರಲ್ಲಿ ರಕ್ತಹೀನತೆಗೆ (ಅನೀಮಿಯ) ಕಾರಣವಾಗುತ್ತಿವೆ. ಕರ್ನಾಟಕವೂ ಇದಕ್ಕೆ ಹೊರತಲ್ಲ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್)–5 ವರದಿಯ ಪ್ರಕಾರ, ಕರ್ನಾಟಕದಲ್ಲಿ 6ರಿಂದ 59 ತಿಂಗಳವರೆಗಿನ ಮಕ್ಕಳಲ್ಲಿ ಶೇಕಡ 65.5ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. 15ರಿಂದ 49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಈ ಪ್ರಮಾಣ ಶೇ 47.8ರಷ್ಟಿದ್ದರೆ, ಗರ್ಭಿಣಿಯ ರಲ್ಲಿ ಶೇ 45.7ರಷ್ಟು ಮಂದಿಯಲ್ಲಿ ರಕ್ತಹೀನತೆ ಪತ್ತೆಯಾಗಿತ್ತು. 15ರಿಂದ 19 ವರ್ಷ ವಯಸ್ಸಿನ ಯುವತಿಯರ ಪೈಕಿ ಶೇ 49.4ರಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದರೆ, ಇದೇ ವಯಸ್ಸಿನ ಯುವಕರ ಪೈಕಿ ಶೇ 26.5ರಷ್ಟು ಜನರಲ್ಲಿ ರಕ್ತಹೀನತೆ ಇದೆ ಎಂದು ವರದಿ ಹೇಳಿದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆಯ ನಿವಾರಣೆಗೆ ದಶಕಗಳಿಂದಲೂ ಪ್ರಯತ್ನ ನಡೆಯುತ್ತಿದೆ.

ಪೌಷ್ಟಿಕ ಆಹಾರದ ಪೂರೈಕೆ, ವಿಟಮಿನ್ ಮತ್ತು ಖನಿಜಾಂಶಯುಕ್ತ ಗುಳಿಗೆಗಳು, ಔಷಧಿ ವಿತರಣೆಯ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇಂತಹ ಕಾರ್ಯಕ್ರಮಗಳ ಅನುಷ್ಠಾನದ ಹೊಣೆ ಹೊತ್ತಿವೆ. ಕೆಲವು ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆಯ ಮೂಲಕವೂ ಜಾರಿಗೊಳಿಸಲಾಗಿದೆ. ಇಷ್ಟಾದರೂ ಅಪೌಷ್ಟಿಕತೆ ಮತ್ತು ರಕ್ತಹೀನತೆಯ ನಿವಾರಣೆ ಸಾಧ್ಯವಾಗಿಲ್ಲ ಎಂಬುದನ್ನು ಎನ್‌ಎಫ್‌ಎಚ್‌ಎಸ್ ವರದಿಯಲ್ಲಿನ ಅಂಕಿಅಂಶಗಳು ನಿರೂಪಿಸುತ್ತಿವೆ.

ಯಾದಗಿರಿ, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೀದರ್, ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಹೆಚ್ಚು ಪ್ರಮಾಣದಲ್ಲಿವೆ. ಈ ಭಾಗದಲ್ಲಿ ವಿಶೇಷ ಯೋಜನೆಗಳು ಜಾರಿಯಲ್ಲಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಈ ನ್ಯೂನತೆಗಳನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಈಗ ಕೇಂದ್ರ ಸರ್ಕಾರದ ‘ರಕ್ತಹೀನತೆ ಮುಕ್ತ ಭಾರತ’ ಯೋಜನೆಯ ಅಡಿಯಲ್ಲಿ ‘ರಕ್ತಹೀನತೆಮುಕ್ತ ಕರ್ನಾಟಕ’ ಯೋಜನೆಗೆ ಚಾಲನೆ ನೀಡಲಾಗಿದೆ. ಆರು ಹಂತಗಳಲ್ಲಿ ಅನುಷ್ಠಾನಗೊಳ್ಳುವ ಈ ಯೋಜನೆಗೆ ₹ 185.74 ಕೋಟಿ ಅನುದಾನ ಒದಗಿಸಲಾಗಿದೆ.

ರಕ್ತಹೀನತೆ ಮತ್ತು ಅಪೌಷ್ಟಿಕತೆ ಪತ್ತೆ ಮಾಡಲು ಸಾಮೂಹಿಕ ತಪಾಸಣೆ, ಮಕ್ಕಳಿಗೆ ವಿಟಮಿನ್ ‘ಎ’ ಗುಳಿಗೆ ವಿತರಣೆ, ಗರ್ಭಿಣಿಯರ ತಪಾಸಣೆ, ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲದ ಗುಳಿಗೆ ವಿತರಣೆಯಂತಹವು ಯೋಜನೆಯಲ್ಲಿ ಸೇರಿವೆ. ಆಯ್ದ 102 ತಾಲ್ಲೂಕುಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೋಷಕಾಂಶಯುಕ್ತ ಊಟ ಒದಗಿಸುವುದೂ ಈ ಯೋಜನೆಯ ಭಾಗವಾಗಿದೆ. ‘ಅನೀಮಿಯಮುಕ್ತ ಕರ್ನಾಟಕ’ ಯೋಜನೆಯು ಪ್ರಚಾರಕ್ಕೆ ಸೀಮಿತವಾಗದೆ, ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕು.

ರಕ್ತಹೀನತೆ ಮತ್ತು ಅಪೌಷ್ಟಿಕತೆಯು ಮಕ್ಕಳು ಹಾಗೂ ಮಹಿಳೆಯರ ಆರೋಗ್ಯಕ್ಕೆ ಸವಾಲೇ ಹೌದು. ಮಕ್ಕಳ ಬೆಳವಣಿಗೆ ಕುಂಠಿತವಾಗುವುದು, ಕಲಿಕೆಯಲ್ಲಿನ ನ್ಯೂನತೆಗೂ ಕಾರಣವಾಗುತ್ತವೆ. ಅಪೌಷ್ಟಿಕತೆ ಮತ್ತು ರಕ್ತಹೀನತೆಗೆ ನೇರವಾದ ಸಂಬಂಧವಿದೆ. ಔಷಧಿ, ಗುಳಿಗೆಗಳ ವಿತರಣೆಯಿಂದಷ್ಟೇ ಈ ಸಮಸ್ಯೆಗೆ ಪರಿಹಾರ ಕಷ್ಟಸಾಧ್ಯ. ಜನರು ಅಗತ್ಯ ಪ್ರಮಾಣದ ಪೋಷಕಾಂಶ ಮತ್ತು ಖನಿಜಾಂಶಯುಕ್ತ ಆಹಾರ ಸೇವಿಸಿದರೆ ಈ ಸಮಸ್ಯೆಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ನ್ಯೂನತೆಯ ತೀವ್ರತೆಗೆ ತಕ್ಕಂತೆ ಜನರಿಗೆ ಪೌಷ್ಟಿಕ ಆಹಾರ ಒದಗಿಸಬೇಕು. ನ್ಯೂನತೆಗೆ ಒಳಗಾದ ಎಲ್ಲರಿಗೂ ಪೌಷ್ಟಿಕ ಆಹಾರ ತಲುಪುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವಂತಹ ವ್ಯವಸ್ಥೆಯೊಂದನ್ನು ರೂಪಿಸಬೇಕು. ಸಮಸ್ಯೆ ತೀವ್ರವಾಗಿರುವ ಜಿಲ್ಲೆ, ತಾಲ್ಲೂಕುಗಳ ಮೇಲೆ ವಿಶೇಷ ನಿಗಾ ಇಡಬೇಕು. ಈ ನ್ಯೂನತೆಗಳನ್ನು ಮೂಲೋತ್ಪಾಟನೆ ಮಾಡುವ ಉದ್ದೇಶದ ಕಾರ್ಯಕ್ರಮಗಳನ್ನು ಅತ್ಯಂತ ಬದ್ಧತೆಯಿಂದ ಅನುಷ್ಠಾನಕ್ಕೆ ತರಬೇಕಾದ ಹೊಣೆ ರಾಜ್ಯ ಸರ್ಕಾರದ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.