ಜನರ ಅಭ್ಯುದಯಕ್ಕೆ ನೇರ ಸಂಬಂಧವಿರುವ ಶಿಕ್ಷಣ, ಆರೋಗ್ಯ, ನೀರಾವರಿ ಹಾಗೂ ಪಂಚಾಯತ್ ರಾಜ್ನಂತಹ ಪ್ರಮುಖ ಇಲಾಖೆಗಳಿಗೆ ಮೀಸಲಿಟ್ಟಿದ್ದ ಬಜೆಟ್ (2016–17) ಅನುದಾನದಲ್ಲಿ ₹ 13 ಸಾವಿರ ಕೋಟಿಯಷ್ಟು ಹಣ ಬಳಕೆಯಾಗದೆ ಉಳಿದಿರುವುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಬಯಲು ಮಾಡಿದೆ. ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆರ್ಥಿಕ ಸಂಪನ್ಮೂಲದ ಕೊರತೆಯ ಸಬೂಬು ಹೇಳುತ್ತಾ ಕಾಲಹರಣ ಮಾಡುವ ಪರಿಪಾಟ ಹೆಚ್ಚಾಗಿರುವ ಈ ದಿನಗಳಲ್ಲಿ ಲಭ್ಯವಿರುವ ಅನುದಾನವನ್ನು ಸಹ ಬಳಕೆ ಮಾಡದಿರುವುದು ಅಕ್ಷಮ್ಯ. ಯೋಜನೆಗಳನ್ನು ಕಾರ್ಯಗತಗೊಳಿಸುವ ಸ್ಥಾನದಲ್ಲಿ ಕುಳಿತು ನಿದ್ದೆಗೆ ಜಾರಿರುವ ಅಧಿಕಾರಿಗಳೇ ಇದಕ್ಕೆ ಹೊಣೆ. ಆರ್ಥಿಕ ವರ್ಷದ ಕೊನೆಯ ಎರಡು ಕೆಲಸದ ದಿನಗಳಲ್ಲಿ ನೂರಾರು ಕೋಟಿ ಮೊತ್ತವನ್ನು ವಿನಿಯೋಗ ಮಾಡಿರುವುದು, ಕೆಲವು ಯೋಜನೆಗಳಿಗೆ ಮೀಸಲಿಟ್ಟ ಮೊತ್ತಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿರುವುದು, ವಿದ್ಯಾರ್ಥಿವೇತನಕ್ಕೆ ಬಳಸಬೇಕಾಗಿದ್ದ ₹ 260 ಕೋಟಿಯನ್ನು ವೈಯಕ್ತಿಕ ಖಾತೆಗಳಲ್ಲಿ ಠೇವಣಿ ಇಟ್ಟಿರುವುದು, ವೆಚ್ಚ ಮಾಡಿದ ಹಣಕ್ಕೆ ಬಿಲ್ ಸಲ್ಲಿಸದೇ ಇರುವುದು– ಇಂತಹ ಹತ್ತಾರು ಲೋಪಗಳನ್ನು ವರದಿಯಲ್ಲಿ ಎತ್ತಿ ತೋರಲಾಗಿದೆ. ಒಟ್ಟು ಬಜೆಟ್ ವೆಚ್ಚದ ಶೇ 19ರಷ್ಟು ಪ್ರಮಾಣದ ಖರ್ಚಿಗೂ ಸ್ವೀಕೃತಿಗೂ ತಾಳೆಯೇ ಆಗುತ್ತಿಲ್ಲ ಎಂಬುದನ್ನೂ ಪತ್ತೆ ಹಚ್ಚಲಾಗಿದೆ. ಜನಪರ ಹಾಗೂ ಪಾರದರ್ಶಕ ಆಡಳಿತ ಕೊಡುತ್ತೇವೆ ಎಂದು ಕೊಚ್ಚಿಕೊಳ್ಳುವ ಆಡಳಿತಗಾರರಿಗೆ ಈ ಆರ್ಥಿಕ ಅಶಿಸ್ತು ಶೋಭೆ ತಂದುಕೊಡುವುದಿಲ್ಲ. ರಾಜ್ಯ ಬೊಕ್ಕಸದ ಒಂದು ಪೈಸೆಯೂ ಪೋಲಾಗದಂತೆ, ಪ್ರತಿಪೈಸೆಯೂ ಸದ್ವಿನಿಯೋಗ ಆಗುವಂತೆ ನೋಡಿಕೊಂಡು ಪೋಷಕನ ಪಾತ್ರವನ್ನು ವಹಿಸಬೇಕಾಗಿದ್ದ ಆಗಿನ ಸಚಿವ ಸಂಪುಟ ಮಾಡಿದ್ದೇನು ಎಂಬ ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಅದರಲ್ಲೂ ವಿಜಯಪುರ ಜಿಲ್ಲೆಯ ಉಸ್ತುವಾರಿಯೂ ಆಗಿದ್ದ ಆಗಿನ ಜಲಸಂಪನ್ಮೂಲ ಸಚಿವರು ತಮ್ಮದೇ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಗೆ ಮೀಸಲಿಟ್ಟ ಹಣ ಖರ್ಚಾಗದಿದ್ದರೂ ಮೌನ ತಾಳಿದ್ದು ಏಕೆ?

ಶಿಕ್ಷಣ ಮತ್ತು ಆರೋಗ್ಯ ಎಷ್ಟೊಂದು ಸೂಕ್ಷ್ಮವಲಯಗಳೆಂದರೆ ಸಕಾಲಕ್ಕೆ ಆರ್ಥಿಕ ನೆರವು ಸಿಗದಿದ್ದರೆ ಎರಡರಲ್ಲೂ ಸರಿಪಡಿಸಲು ಆಗದಷ್ಟುಏರು–ಪೇರುಗಳು ಉಂಟಾಗುತ್ತವೆ. ಆದ್ದರಿಂದಲೇ ಇವುಗಳನ್ನು ಆದ್ಯತಾ ಕ್ಷೇತ್ರಗಳೆಂದು ಗುರುತಿಸಿರುವುದು. ಕೇಂದ್ರದಿಂದ ಬಂದ ಅನುದಾನವೂ ಸೇರಿದಂತೆ ಬಜೆಟ್ನಲ್ಲಿ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ಖರ್ಚು ಮಾಡದಿರುವುದು ರಾಜ್ಯದ ಅಭಿವೃದ್ಧಿಗೆ ಆದ ಹಿನ್ನಡೆ. ಈ ಎಚ್ಚರ ಅಧಿಕಾರಿ ವರ್ಗದಲ್ಲಿ ಇರಬೇಕಿತ್ತು. ವೇತನ ಆಯೋಗದ ಶಿಫಾರಸುಗಳ ಜಾರಿಗಿಂತ ಆದ್ಯತಾ ವಲಯಗಳ ಅನುದಾನದ ವಿನಿಯೋಗಕ್ಕೆ ಹೆಚ್ಚಿನ ಮಹತ್ವವಿದೆ ಎಂಬುದನ್ನೂ ಅರಿಯಬೇಕಿತ್ತು. ಸಿಎಜಿ ವರದಿ ಗುರುತಿಸಿದಂತೆ ವಿವಿಧ ಇಲಾಖೆಗಳಲ್ಲಿ ಆಯವ್ಯಯ ನಿರ್ವಹಣೆ ಸಮರ್ಪಕವಾಗಿಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಏನು ಮಾಡಿದರೂ ನಡೆಯುತ್ತದೆ ಎನ್ನುವ ಉಡಾಫೆ ಧೋರಣೆ ಸಲ್ಲದು. ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮಾಡಿರುವುದಕ್ಕೆ ಆಯಾ ವಿಭಾಗದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಅವರಿಗೆ ತಕ್ಕಶಾಸ್ತಿ ಮಾಡಬೇಕು. ರಾಜ್ಯದ ಆರೋಗ್ಯ ಮತ್ತು ಶಿಕ್ಷಣ ವಲಯಗಳ ವೆಚ್ಚದ ಅನುಪಾತ, ದೇಶದ ಇತರ ರಾಜ್ಯಗಳ ಸರಾಸರಿಗಿಂತ ಕಡಿಮೆಯಿರುವುದು ಕೂಡ ಕಳವಳದ ಸಂಗತಿ. ಈ ಲೋಪವನ್ನೂ ಸರ್ಕಾರ ತಕ್ಷಣ ಸರಿಪಡಿಸಬೇಕು. ವಿವಿಧ ಮೀಸಲು ನಿಧಿಗಳ ನಿರ್ವಹಣೆ ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿಯನ್ನು ನಿರೂಪಿಸಬೇಕು. ಅಳತೆ ಮೀರಿದ ಹಾಗೂ ಅನಗತ್ಯವಾದ ಪೂರಕ ವೆಚ್ಚಗಳನ್ನು ತಪ್ಪಿಸಬೇಕು. ಬಜೆಟ್ ಬೇಡಿಕೆಗಳ ಪರಿಶೀಲನೆ, ವೆಚ್ಚಗಳ ಗತಿಯ ಮೇಲೆ ನಿಗಾ ಇಡಲು ಸಬಲವಾದ ವ್ಯವಸ್ಥೆಯನ್ನು ರೂಪಿಸಬೇಕು. ಆಯಾ ಆರ್ಥಿಕ ವರ್ಷದ ಅನುದಾನವನ್ನು ಅದೇ ಅವಧಿಯಲ್ಲಿ ವ್ಯಯಿಸಿ, ಹೊಸ ಬಜೆಟ್ ಮೇಲೆ ಬೀಳುವ ಮುಂದುವರಿದ ಕಾಮಗಾರಿಗಳ ಹೊರೆಯನ್ನೂ ಇಳಿಸಬೇಕು. ಹಣಕಾಸು ಇಲಾಖೆಯನ್ನು ಕಕ್ಕುಲಾತಿಯಿಂದ ತಮ್ಮ ಬಳಿಯೇ ಇಟ್ಟುಕೊಂಡಿರುವ ಮುಖ್ಯಮಂತ್ರಿ, ಆರ್ಥಿಕ ಶಿಸ್ತನ್ನು ತರಲು ಬದ್ಧತೆ ಪ್ರದರ್ಶಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.