ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಇಂಧನ ಬೆಲೆ: ಜನಹಿತ– ವರಮಾನದ ನಡುವೆ ಸಮತೋಲನ ಬೇಕು

Published : 16 ಜೂನ್ 2024, 23:30 IST
Last Updated : 16 ಜೂನ್ 2024, 23:30 IST
ಫಾಲೋ ಮಾಡಿ
Comments

ಲೋಕಸಭಾ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಂಡ ನಂತರದಲ್ಲಿ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ದೇಶದಲ್ಲಿ 2010ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಪೆಟ್ರೋಲ್ ಬೆಲೆಯನ್ನು ನಿಯಂತ್ರಣ ಮುಕ್ತವಾಗಿಸಿತು. ನಂತರ, 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಡೀಸೆಲ್ ಬೆಲೆಯನ್ನು ನಿಯಂತ್ರಣದಿಂದ ಮುಕ್ತಗೊಳಿಸಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಆಗುವ ಏರಿಳಿತಗಳಿಗೆ ಅನುಗುಣವಾಗಿ ದೇಶಿ ಮಾರುಕಟ್ಟೆ ಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಸರಿಹೊಂದಿಸಿಕೊಳ್ಳುವುದು ಈ ನಡೆಯ ಉದ್ದೇಶ ಆಗಿತ್ತು.

ಇದನ್ನು ಮಾರುಕಟ್ಟೆ ಸುಧಾರಣೆಯ ದಿಸೆಯಲ್ಲಿ ಕೈಗೊಂಡ ದಿಟ್ಟ ಕ್ರಮ ಎಂದು ಆಗ ಕೆಲವರು ಪ್ರಶಂಸಿಸಿದ್ದರು ಕೂಡ. ಕೇಂದ್ರ ‍ಪೆಟ್ರೋಲಿಯಂ ಸಚಿವರು 2015ರಲ್ಲಿ ಸಂಸತ್ತಿಗೆ ನೀಡಿದ್ದ ಉತ್ತರವೊಂದರಲ್ಲಿ, ‘ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು ಮಾರುಕಟ್ಟೆ ಪರಿಸ್ಥಿತಿಯನ್ನು ಆಧರಿಸಿ ತೀರ್ಮಾನಿಸುತ್ತವೆ’ ಎಂದಿದ್ದರು. ಆದರೆ, ವಾಸ್ತವದಲ್ಲಿ ಭಾರತದಲ್ಲಿ ಜಾರಿಯಲ್ಲಿ ಇರುವ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ‘ನಿಯಂತ್ರಣದಿಂದ ಮುಕ್ತವಾಗಿಸುವ’ ನೀತಿಯು ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿಲ್ಲ; ಬದಲಿಗೆ ಅದು ಚುನಾವಣಾ ವೇಳಾಪಟ್ಟಿಯನ್ನು ನೇರವಾಗಿ ಅವಲಂಬಿಸಿದೆ. ದೇಶದಲ್ಲಿ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆ ಎದುರಾದ ಹೊತ್ತಿನಲ್ಲಿ ಈ ಎರಡು ತೈಲೋತ್ಪನ್ನಗಳ ಬೆಲೆಯನ್ನು ನಿಯಂತ್ರಿಸಲಾಗುತ್ತದೆ, ಚುನಾವಣೆ ಇಲ್ಲದಿದ್ದ ಸಂದರ್ಭಗಳಲ್ಲಿ ಅದನ್ನು ನಿಯಂತ್ರಣದಿಂದ ಮುಕ್ತವಾಗಿಸಲಾಗುತ್ತದೆ. ಈ ಮಾತಿಗೆ ಹಲವು ನಿದರ್ಶನಗಳು ಸಿಗುತ್ತವೆ. ಈ ಹಿನ್ನೆಲೆಯಲ್ಲಿಯೇ ಈಗ ರಾಜ್ಯ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿ, ಇವೆರಡು ಉತ್ಪನ್ನಗಳ ಚಿಲ್ಲರೆ ಮಾರಾಟ ದರ ಏರಿಸಿರುವುದನ್ನು ಅರ್ಥಮಾಡಿಕೊಳ್ಳಬೇಕು.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಆಗುವ ಏರಿಕೆಯು ಜನರ ನಿತ್ಯದ ವೆಚ್ಚಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ನೇರವಾಗಿ ಹಣದುಬ್ಬರದ ಏರಿಕೆಗೆ ಕಾರಣ ಆಗುತ್ತದೆ. ಕೋವಿಡ್‌ ಕಾರಣದಿಂದ ಜಾರಿಗೆ ಬಂದ ಲಾಕ್‌ಡೌನ್‌ ನಂತರದಲ್ಲಿ, 2022ರಲ್ಲಿ ದೇಶದಲ್ಲಿ ಹಣದುಬ್ಬರ ದರವು ವಿಪರೀತ ಮಟ್ಟಕ್ಕೆ ತಲುಪಿತ್ತು. ಆಗ ‘ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ತಗ್ಗಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಮನವಿ ಮಾಡಿಕೊಂಡಿತ್ತು. ಆದರೆ, ಆರ್‌ಬಿಐ ಮನವಿಗೆ ಸರ್ಕಾರಗಳು ಪೂರಕವಾಗಿ ಸ್ಪಂದಿಸದ ಕಾರಣಕ್ಕೆ, ಹಣದುಬ್ಬರ ದರವನ್ನು ನಿಯಂತ್ರಣದಲ್ಲಿ ಇರಿಸುವ ಹೊಣೆ ಹೊತ್ತಿರುವ ಆರ್‌ಬಿಐನ ಹಣಕಾಸು ನೀತಿ ಸಮಿತಿಯು ಅನಿವಾರ್ಯವಾಗಿ ರೆಪೊ ದರವನ್ನು ಹೆಚ್ಚಿಸಿತು’ ಎಂಬ ವರದಿಗಳಿವೆ. ಇದರ ನೇರ ಪರಿಣಾಮವಾಗಿ ಸಾಲಗಳು ತುಟ್ಟಿಯಾದವು. ಈ ಏರಿಕೆಯ ಪರೋಕ್ಷ ಪರಿಣಾಮಗಳು ಇನ್ನೂ ಹಲವು. ಈಗ ಹಣದುಬ್ಬರವು ಶೇಕಡ 4.75ರಷ್ಟು ಇದೆ. ಇದು ಶೇ 4ಕ್ಕೆ ಇಳಿಕೆ ಕಾಣಬೇಕಿದೆ. ಈ ಹಂತದಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದು ಸಮರ್ಥನೀಯ ಅಲ್ಲ. ವರಮಾನ ಸಂಗ್ರಹದ ಗುರಿಯನ್ನು ತಲುಪಲು ಈ ಹೆಚ್ಚಳ ಎಂಬ ಸಮರ್ಥನೆಯನ್ನು ಸರ್ಕಾರ ನೀಡಬಹುದಾದರೂ ಎಲ್ಲ ಬಗೆಯ ಉತ್ಪನ್ನಗಳ ಬೆಲೆ ಏರಿಕೆಯ ಮೇಲೆ ಅದು ಬೀರಬಹುದಾದ ಪರಿಣಾಮವನ್ನು ಗಮನಿಸಿದಾಗ ಈ ಸಮರ್ಥನೆಯು ದುರ್ಬಲವಾಗಿ ಕಾಣುತ್ತದೆ. ಚುನಾವಣೆ ಮುಗಿದಿರುವ ಕಾರಣ ತೈಲೋತ್ಪನ್ನ ಕಂಪನಿಗಳಿಗೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪ್ರತಿನಿತ್ಯ ಪರಿಷ್ಕರಿಸಲು ಕೇಂದ್ರ ಸರ್ಕಾರ ಕೂಡ ಶೀಘ್ರದಲ್ಲಿಯೇ ಅವಕಾಶ ಕಲ್ಪಿಸಬಹುದು. ಸರ್ಕಾರಗಳು ತಮ್ಮ ವರಮಾನ ಹೆಚ್ಚಳಕ್ಕೆ ಆದ್ಯತೆ ನೀಡುವಾಗ, ಜನರ ಆದಾಯದ ಮಿತಿಗಳ ಬಗ್ಗೆಯೂ ಗಮನಹರಿಸುವುದು ಒಳಿತು.

ಪೆಟ್ರೋಲ್‌, ಡೀಸೆಲ್‌ನಂತಹ ಜೀವನಾವಶ್ಯಕ ಉತ್ಪನ್ನಗಳ ಬೆಲೆಯಲ್ಲಿ ಸ್ಥಿರತೆ ಸಾಧಿಸದೆ ಹಣದುಬ್ಬರ ನಿಯಂತ್ರಣ ಕಷ್ಟಸಾಧ್ಯ. ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ನಿರ್ಧರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಮಾರುಕಟ್ಟೆ ಶಕ್ತಿಗಳಿಗೇ ಬಿಟ್ಟುಕೊಡುವುದು ಯುಕ್ತವಾದ ಕ್ರಮ ಆಗುವುದಿಲ್ಲ. ತೈಲೋತ್ಪನ್ನಗಳ ಬೆಲೆಯನ್ನು ಸಂಪೂರ್ಣವಾಗಿ ಸರ್ಕಾರಗಳೇ ತೀರ್ಮಾನಿಸುವ ವ್ಯವಸ್ಥೆಯು ಕಂಪನಿಗಳ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಬಹುದು. ಚುನಾವಣೆಯ ಸಂದರ್ಭಗಳಲ್ಲಿ ಮಾತ್ರ ಬೆಲೆಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇರಿಸುವುದು ಜನಹಿತದ ಕಾರ್ಯ ಆಗುವುದಿಲ್ಲ; ಅದು ಚುನಾವಣಾ ಹಿತಾಸಕ್ತಿಯ ಕಾರ್ಯ ಆಗುತ್ತದೆ. ಅಲ್ಲದೆ, ತೈಲೋತ್ಪನ್ನ ಮಾರಾಟ ಕಂಪನಿಗಳ ಹಣಕಾಸಿನ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು. ಹೀಗಾಗಿ, ಜನರ ನಿತ್ಯದ ಬದುಕು, ಬೆಲೆ ಏರಿಕೆಯ ನಿಯಂತ್ರಣ, ತೈಲೋತ್ಪನ್ನ ಮಾರಾಟ ಕಂಪನಿಗಳ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಸರ್ಕಾರಗಳು ಪೆಟ್ರೋಲ್, ಡೀಸೆಲ್ ಬೆಲೆಯ ಮೇಲೆ ನಿಗಾ ಇರಿಸಬೇಕು. ರಾಜ್ಯ ಸರ್ಕಾರವು ಈಗ ಮಾಡಿರುವ ಏರಿಕೆಯನ್ನು ಪುನರ್‌ ಪರಿಶೀಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT