ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಮಾತೊಂದಿದೆ. ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಕೈಗೊಂಡಿರುವ ಕ್ರಮ ಕೂಡ ಹಾಗೆಯೇ ಇದೆ. ಕೆರೆಯ ಪಾತ್ರ ಮತ್ತು ಅದರ ಹೊರ ಅಂಚಿನಿಂದ 30 ಮೀಟರ್ ಸುತ್ತಲಿನ ಮೀಸಲು ಪ್ರದೇಶದಲ್ಲಿ ಕಟ್ಟಡ ನಿರ್ಮಾಣವೂ ಸೇರಿದಂತೆ ಹಲವು ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಕೆರೆಗಳು ಇರುವುದು ನೀರು ಸಂಗ್ರಹಿಸುವುದಕ್ಕಾಗಿಯೇ ವಿನಾ ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲು ಅಲ್ಲ ಎಂದೂ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಕೆರೆಗಳಂತಹ ಜಲಮೂಲಗಳ ಸಂರಕ್ಷಣೆ ವಿಷಯದಲ್ಲಿ ಬಿಬಿಎಂಪಿಗೆ ತುಂಬಾ ತಡವಾಗಿ ಜ್ಞಾನೋದಯ ಆದಂತಿದೆ. ಒಂದೆಡೆ ಅತಿಕ್ರಮಣ, ಇನ್ನೊಂದೆಡೆ ಕೊಳಚೆ ನೀರಿನ ಆಕ್ರಮಣ– ಇವೆರಡರ ಅಡಕತ್ತರಿಯಲ್ಲಿ ಸಿಲುಕಿಕೊಂಡು ಕೆರೆಗಳು ಉಸಿರು ಕಳೆದುಕೊಳ್ಳುತ್ತಿರುವಾಗ ಅದು ಕಣ್ಮುಚ್ಚಿಕೊಂಡು ಕುಳಿತಿತ್ತು. ಕೆರೆಗಳ ಜೀವನಾಡಿಯಾದ ರಾಜಕಾಲುವೆಗಳು ಒತ್ತುವರಿಯಾಗಿ, ಅವುಗಳ ಮೇಲೆ ಕಟ್ಟಡಗಳು ಮೇಲೆದ್ದರೂ ಪಾಲಿಕೆ ಕಣ್ಣು ಬಿಟ್ಟಿರಲಿಲ್ಲ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು ಕೊಳಚೆ ನೀರನ್ನು ನೇರವಾಗಿ ಕೆರೆಗಳ ಒಡಲಿಗೆ ಬಿಟ್ಟರೂ ಕೇಳುವ ಗೋಜಿಗೆ ಹೋಗಿರಲಿಲ್ಲ. ಕುಂಭಕರ್ಣನ ನಿದ್ದೆಯಿಂದ ಬಿಬಿಎಂಪಿಯನ್ನು ಎಬ್ಬಿಸಲು, ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಆದೇಶಗಳ ರೂಪದಲ್ಲಿ, ಮೇಲಿಂದ ಮೇಲೆ ಅದರ ಕಿವಿಯನ್ನು ಹಿಂಡಬೇಕಾಯಿತು. ಕೆರೆ ಸಂರಕ್ಷಣೆಗೆ ಈಗ ಸುತ್ತೋಲೆಯನ್ನು ಹೊರಡಿಸಿದ್ದು ಕೂಡ ಕೋರ್ಟ್‌ನ ಅಂತಹ ಆದೇಶಗಳು ತಲೆಯ ಮೇಲೆ ತೂಗುಗತ್ತಿಯಂತೆ ತೂಗುತ್ತಿರುವ ಕಾರಣದಿಂದ. ಹಾಗಿದ್ದರೂ ನಗರ ಪರಿಸರದ ಕುರಿತು ಬಿಬಿಎಂಪಿ ಇಟ್ಟಿರುವ ಈಗಿನ ಜಾಗೃತಿಯ ಹೆಜ್ಜೆ ಸ್ವಾಗತಾರ್ಹ.

ಜಗತ್ತಿನ ಬಹುತೇಕ ನಾಗರಿಕತೆಗಳು ನದಿ ದಂಡೆಯ ಮೇಲೆಯೇ ಬೆಳೆದಿವೆ. ಆದರೆ, ನದಿಯಂತಹ ಜಲಮೂಲದಿಂದ ಬಹುದೂರದಲ್ಲಿ ನಿರ್ಮಾಣವಾದ ನಗರ ಬೆಂಗಳೂರು. ನೂರಾರು ವರ್ಷಗಳಿಂದ ಹೆಬ್ಬಾಳ, ವೃಷಭಾವತಿ ಹಾಗೂ ಕೋರಮಂಗಲ ಕಣಿವೆ ಪ್ರದೇಶದಲ್ಲಿ ಹರಿಯುತ್ತಿದ್ದ ನೀರೇ ಈ ಊರಿನ ಜಲಮೂಲವಾಗಿತ್ತು. ಮಳೆ ನೀರನ್ನು ಸಂಗ್ರಹಿಸಲು ನಗರ ನಿರ್ಮಾತೃಗಳು ಕೆರೆಗಳನ್ನು ನಿರ್ಮಿಸುತ್ತಲೇ ಹೋಗಿದ್ದರು. ಒಂದು ಕೆರೆ ತುಂಬಿ ಮತ್ತೊಂದು ಕೆರೆಗೆ ನೀರು ಹರಿಯಲು ‘ಸರಪಳಿ ರಾಜಕಾಲುವೆ’ಗಳ ವ್ಯವಸ್ಥೆಯನ್ನೂ ಮಾಡಿದ್ದರು. ಕೆರೆಗಳ ಒಡಲು ಸದಾ ಪರಿಶುದ್ಧ ನೀರಿನಿಂದ ತುಂಬಿರುತ್ತಿತ್ತು. ಬೇಸಿಗೆಯಲ್ಲೂ ಕುಡಿಯುವ ನೀರಿನ ಕೊರತೆ ಕಾಡುತ್ತಿರಲಿಲ್ಲ. ಜೊತೆಗೆ ‘ನಗರ ಮಹಾಪೂರ’ ಉಂಟಾಗದಂತೆಯೂ ಅವು ತಡೆಯೊಡ್ಡುತ್ತಿದ್ದವು. ಅಚ್ಚುಕಟ್ಟಾದ ಈ ವ್ಯವಸ್ಥೆಯನ್ನು ಬಿಬಿಎಂಪಿಯು ಸಂರಕ್ಷಿಸಿಕೊಂಡು ಬಂದಿದ್ದರೂ ಸಾಕಿತ್ತು. ಆದರೆ, ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಜಲಮೂಲಗಳನ್ನು ಅದು ಧಾರೆ ಎರೆದು ಕೊಟ್ಟಿದ್ದನ್ನು ಎ.ಟಿ. ರಾಮಸ್ವಾಮಿ ಸಮಿತಿ ವರದಿಯು ಎತ್ತಿ ತೋರಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 1,848 ಎಕರೆಯಷ್ಟು ಕೆರೆ ಅಂಗಳ ಪ್ರದೇಶ ಒತ್ತುವರಿಯಾಗಿದೆ ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಕೆರೆ ಪಾತ್ರಕ್ಕೆ ಒಂದು ಕಡೆಯಿಂದ ಕಟ್ಟಡ ತ್ಯಾಜ್ಯ ಸುರಿಯುತ್ತಾ ಹೋಗಿ ಅದನ್ನು ಅತಿಕ್ರಮಿಸುವುದು ಭೂಗಳ್ಳರಿಗೆ ಸುಲಭವಾಗಿಬಿಟ್ಟಿದೆ. ಬಹುತೇಕ ಕೆರೆಗಳಿಗೆ ಬೇಲಿ ಇಲ್ಲ. ಕಾವಲು ವ್ಯವಸ್ಥೆ ಸಹ ಇಲ್ಲ. ಇಷ್ಟೆಲ್ಲ ಇತಿಹಾಸ ಜನರ ಮುಂದಿರುವಾಗ, ಬಿಬಿಎಂಪಿಯು ಈಗ ಕೈಗೊಂಡಿರುವ ಕ್ರಮ, ಅವರಲ್ಲಿ ವಿಶ್ವಾಸ ಮೂಡಿಸಲು ಸಾಲದು. ತನ್ನ ಸುಪರ್ದಿಯಲ್ಲಿರುವ ಯಾವ ಕೆರೆಗೂ ಕೊಳಚೆ ನೀರು ಹರಿದು ಬರದಂತೆ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಅರ್ಧಕ್ಕೆ ಕೈಬಿಟ್ಟ ರಾಜಕಾಲುವೆಗಳ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿ, ಪೂರ್ಣಗೊಳಿಸಬೇಕು. ಭೂಗಳ್ಳರನ್ನೆಲ್ಲ ಕಾನೂನಿನ ಕಟಕಟೆಗೆ ತಂದು ನಿಲ್ಲಿಸಬೇಕು. ಮುಂದಿನ ಮಳೆಗಾಲದ ಹೊತ್ತಿಗಾದರೂ ಕೆರೆಗಳಲ್ಲಿ ಶುದ್ಧ ನೀರು ಸಂಗ್ರಹವಾಗುವಂತೆ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಬಿಬಿಎಂಪಿಯ ಸುತ್ತೋಲೆಗಳು ತೋರಿಕೆಯ ಕ್ರಮಗಳೆನಿಸಿಕೊಳ್ಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.