ಇಂಧನ, ಆಹಾರೋತ್ಪನಗಳ ಬೆಲೆ ಗಗನಮುಖಿಯಾಗಿ ಜೀವನ ದುಬಾರಿಯಾಗಿದೆ. ಇದರ ಬೆನ್ನಲ್ಲೇ, ರಾಜ್ಯದಲ್ಲಿ ವಿದ್ಯುತ್ ದರ ಒಂದೇ ವರ್ಷದ ಅವಧಿಯಲ್ಲಿ ಎರಡು ಬಾರಿ ಹೆಚ್ಚಳವಾಗಿ ಜನಸಾಮಾನ್ಯರ ಬವಣೆ ಹೆಚ್ಚಿಸಿದೆ. ಈರುಳ್ಳಿ ಬೆಲೆ ತುಸು ಏರಿದರೂ, ಪೆಟ್ರೋಲ್ ಬೆಲೆಯಲ್ಲಿ ಕೊಂಚ ಹೆಚ್ಚಳವಾದರೂ ವಿರೋಧ ಪಕ್ಷದಲ್ಲಿದ್ದಾಗ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದ ಬಿಜೆಪಿ ನಾಯಕರ ವರಸೆ ಈಗ ಬದಲಾಗಿದೆ. ಆಡಳಿತ ಪಕ್ಷವಾಗಿ ಬಿಜೆಪಿಯು ಬೆಲೆ ಏರಿಕೆಯನ್ನು ಒಂದು ಸಮಸ್ಯೆಯನ್ನಾಗಿಯೇ ಪರಿಗಣಿಸಿದಂತಿಲ್ಲ ಎಂಬುದು ಅವರ ಮಾತುಗಳಿಂದಲೇ ವ್ಯಕ್ತವಾಗುತ್ತದೆ. ಕೋವಿಡ್ ತಂದಿತ್ತ ಆರ್ಥಿಕ ಸಂಕಟಗಳು ಈಗಲೂ ನಿವಾರಣೆ ಆಗಿಲ್ಲ. ಹಣದುಬ್ಬರ ಜಾಸ್ತಿಯಾಗಿರುವ ಈ ದಿನಗಳಲ್ಲಿ ವೆಚ್ಚ ಹೊಂದಾಣಿಕೆಯ ನೆವ ಮುಂದಿಟ್ಟು ದರ ಹೆಚ್ಚಿಸಲಾಗಿದೆ. 100 ಯೂನಿಟ್ಗೂ ಹೆಚ್ಚು ವಿದ್ಯುತ್ ಬಳಸುವವರು ಹೆಚ್ಚುವರಿಯಾಗಿ ₹ 19ರಿಂದ ₹ 31ರವರೆಗೆ ಪಾವತಿಸಬೇಕಾಗುತ್ತದೆ. ಏಪ್ರಿಲ್ನಲ್ಲಿ ಪ್ರತೀ ಯೂನಿಟ್ಗೆ 35 ಪೈಸೆ ಏರಿಸಲಾಗಿತ್ತು. ಈಗ ಪುನಃ ದರ ಏರಿಕೆಯ ಬಿಸಿ ತಟ್ಟಿದೆ. ‘ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ತಮ್ಮ ಮೇಲೆ ಬೀಳುತ್ತಿದ್ದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಅವಕಾಶ ಕೋರಿದ್ದವು. ಅದಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಅನುಮತಿ ನೀಡಿದೆ. ಈ ದರ ಏರಿಕೆಯ ವಿಚಾರದಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ’ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಸಮಜಾಯಿಷಿ ನೀಡಿದ್ದಾರೆ. ದರ ಏರಿಕೆಗೆ ಬೇಡಿಕೆ ಬಂದದ್ದು ಎಲ್ಲಿಂದ, ಒಪ್ಪಿಗೆ ನೀಡಿದ್ದು ಯಾರು ಎಂಬ ನೆಪ, ಕಾರಣಗಳು ಏನೇ ಇರಲಿ,ಹೊರೆ ಬೀಳುವುದು ಜನರಿಗೆ; ವರಮಾನ ಕೊನೆಗೆ ಸೇರುವುದು ಸರ್ಕಾರದ ಭಾಗವೇ ಆಗಿರುವ ಸಂಸ್ಥೆಗಳ ಖಜಾನೆಗೆ. ಆದಕಾರಣ ತಾಂತ್ರಿಕ ಅಂಶಗಳನ್ನು ಮುಂದಿಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಆಗದು.

ಉತ್ಪಾದನಾ ವೆಚ್ಚದ ಮೇಲೆ ಹದ್ದಿನ ಕಣ್ಣಿಟ್ಟು ಅದನ್ನು ಕಡಿಮೆ ಮಾಡಬೇಕಾದ, ಸೋರಿಕೆಯನ್ನು ತಡೆಗಟ್ಟಲು ಆಡಳಿತಾಂಗವನ್ನು ಚುರುಕುಗೊಳಿಸಬೇಕಾದ ಸರ್ಕಾರದ ಅದಕ್ಷತೆಯ ಪರಿಣಾಮವೇ ಈ ದರ ಏರಿಕೆ. ಕಲ್ಲಿದ್ದಲು ದರ ಏರಿಕೆಯಿಂದಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚಿತು; ಅದನ್ನು ಸರಿದೂಗಿಸಲು ಗ್ರಾಹಕರ ಮೇಲೆ ಹೊರೆಹಾಕುವ ಅನಿವಾರ್ಯ ಸೃಷ್ಟಿಯಾಗಿದೆ ಎಂಬ ಸಮಜಾಯಿಷಿಯನ್ನು ಕೆಇಆರ್ಸಿ ಕೊಟ್ಟಿದೆ. ಕಲ್ಲಿದ್ದಲು ಕೊರತೆ, ಕೊರತೆ ಕಾರಣಕ್ಕೆ ಕಲ್ಲಿದ್ದಲು ಬೆಲೆ ಏರಿಕೆಯಾಗುವ ಸಂಭವವನ್ನು ಅರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇದ್ದುದು ಸರ್ಕಾರ ಮತ್ತು ಕೆಪಿಸಿಎಲ್ನ ಲೋಪ.ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಎಲ್ಲವೂ ಅನುಕೂಲ, ಡಬ್ಬಲ್ ಎಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಆಗುವ ಪ್ರಯೋಜನ ಹೆಚ್ಚು ಎಂದು ಆಡಳಿತ ಪಕ್ಷದ ಮುಖಂಡರು 2018ರ ಚುನಾವಣೆ ವೇಳೆ ಪದೇ ಪದೇ ಹೇಳಿದ್ದರು. 2009ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕಕ್ಕೆ ಸೀಮಿತವಾಗಿ ಕಲ್ಲಿದ್ದಲು ಗಣಿಯೊಂದನ್ನು ಛತ್ತೀಸಗಡದಲ್ಲಿ ಹಂಚಿಕೆ ಮಾಡಲಾಗಿತ್ತು. ರಾಜ್ಯಕ್ಕೆ ಮೀಸಲಾದ ಕಲ್ಲಿದ್ದಲು ಗಣಿ ದಶಕ ಕಳೆದರೂ ಸಿಗಲಿಲ್ಲ.ಕಲ್ಲಿದ್ದಲು ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆ
ಯನ್ನು ಸಮರ್ಪಕವಾಗಿ ನಿಭಾಯಿಸಿದ್ದಿದ್ದರೆ ದರ ಏರಿಕೆಯ ಭಾರವನ್ನು ಜನರ ಮೇಲೆ ಹೇರುವ ಅವಶ್ಯವೇ ಇರುತ್ತಿರಲಿಲ್ಲ.ವಿದ್ಯುತ್ ದರ ಏರಿಸುವ ಸಂದರ್ಭದಲ್ಲಿ ವಿದ್ಯುತ್ ಸೋರಿಕೆಯಿಂದ ಆಗುತ್ತಿರುವ ನಷ್ಟದ ಬಗ್ಗೆ ಕೆಇಆರ್ಸಿ ಮಾತನಾಡುತ್ತದೆ; ಸರ್ಕಾರಕ್ಕೆ ಅಥವಾ ಎಸ್ಕಾಂಗಳಿಗೆ ಸಲಹೆಯನ್ನೂ ನೀಡುತ್ತದೆ. ಆದರೆ ಸೋರಿಕೆ ತಡೆಗಟ್ಟುವಿಕೆಗಾಗಿ ನೀಡಿರುವ ಸಲಹೆಗಳು ಅನುಷ್ಠಾನವಾಗಿವೆಯೇ ಎಂಬುದರ ಬಗ್ಗೆ ಕಣ್ಗಾವಲು ಇಡುವ ಕೆಲಸ, ಸೋರಿಕೆ ತಡೆಗಟ್ಟದಿದ್ದರೆ ಬೆಲೆ ಏರಿಕೆಗೆ ಆಸ್ಪದವನ್ನೇ ಕೊಡುವುದಿಲ್ಲ ಎಂಬ ಎಚ್ಚರಿಕೆಯನ್ನು ಕೆಇಆರ್ಸಿ ನಿರ್ವಹಿಸಿದಂತೆ ತೋರುವುದಿಲ್ಲ. ಎಸ್ಕಾಂಗಳಿಗೆ ₹11 ಸಾವಿರ ಕೋಟಿ ಬಾಕಿ ಇದೆ ಎಂದು ಸರ್ಕಾರ ಹೇಳಿದೆ. ಇದರಲ್ಲಿ ಬಹುಪಾಲು ಮೊತ್ತವನ್ನು ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳು ಪಾವತಿಸಬೇಕಿದೆ. ಸ್ಥಳೀಯ ಸಂಸ್ಥೆಗಳ ಆರ್ಥಿಕ ಶಕ್ತಿಯನ್ನು ಬಲಪಡಿಸಿ, ನೀರಿನ ಕರವನ್ನು ಸರಿಯಾಗಿ ವಸೂಲು ಮಾಡಿದ್ದರೆ ಎಸ್ಕಾಂಗಳ ಬಳಿ ಬಾಕಿ ಉಳಿಸಿಕೊಳ್ಳುವ ಅಗತ್ಯ ಇರುತ್ತಿರಲಿಲ್ಲ. ದರ ಏರಿಕೆಯನ್ನು ಯಾವುದೋ ನೆಪದಡಿ ಸಮರ್ಥನೆ ಮಾಡಿಕೊಳ್ಳುವ ಬದಲು ಆಧುನಿಕ ತಂತ್ರಜ್ಞಾನ ಬಳಸಿ ವೆಚ್ಚ–ಸೋರಿಕೆ ಕಡಿಮೆ ಮಾಡುವ ಪರ್ಯಾಯ ಮಾರ್ಗಗಳನ್ನು ಶೋಧಿಸುವತ್ತ ಮತ್ತು ಜನರಿಗೆ ಕಡಿಮೆ ದರದಲ್ಲಿ ಸೌಲಭ್ಯ ಒದಗಿಸುವತ್ತ ಸರ್ಕಾರ ಗಂಭೀರವಾಗಿ ಯೋಚಿಸಲು ಇದು ಸಕಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.