ಹದಿನೈದು ಪ್ರಮುಖ ವಿರೋಧಪಕ್ಷಗಳ ನಾಯಕರು ಪಟ್ನಾದಲ್ಲಿ ಈಚೆಗೆ ಒಟ್ಟಾಗಿ ಸಭೆ ನಡೆಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ದಿಸೆಯಲ್ಲಿ ಇಟ್ಟಿರುವ ಮೊದಲ ಪ್ರಮುಖ ಹೆಜ್ಜೆ ಇದು. ಚುನಾವಣೆಗೆ ಈಗ ಒಂದು ವರ್ಷದಷ್ಟು ಕಾಲಾವಕಾಶವೂ ಉಳಿದಿಲ್ಲ. ಹೀಗಾಗಿ ಈ ಬಗೆಯ ಪ್ರಯತ್ನ ವೇಗ ಪಡೆದಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮತ್ತು ಅವರು ಪ್ರತಿನಿಧಿಸುವ ಬಿಜೆಪಿಗೆ ಸೈದ್ಧಾಂತಿಕವಾಗಿ ಹಾಗೂ ರಾಜಕೀಯವಾಗಿ ಸವಾಲೊಡ್ಡಲು ಸಮಾನ ವೇದಿಕೆಯೊಂದನ್ನು ಸೃಷ್ಟಿಸುವ ಹಂಬಲ ಈ ನಾಯಕರದ್ದಾಗಿದೆ. ಮೊದಲು ಹಿಮಾಚಲ ಪ್ರದೇಶದಲ್ಲಿ, ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಗೆಲುವು ಸಿಕ್ಕಿರುವುದು ವಿರೋಧಪಕ್ಷಗಳಿಗೆ ಈ ದಿಸೆಯಲ್ಲಿ ಸ್ಫೂರ್ತಿಯನ್ನು ತುಂಬಿದೆ. ಮುಂಬರುವ ಚುನಾವಣೆಯಲ್ಲಿ ತಮ್ಮ ಅಸ್ತಿತ್ವದ ಪ್ರಶ್ನೆಯೇ ಅಡಗಿದೆ ಎಂದು ಭಾವಿಸಿ ಆ ಚುನಾವಣೆಯನ್ನು ವಿರೋಧ ಪಕ್ಷಗಳು ಗಂಭೀರವಾಗಿ ತೆಗೆದುಕೊಂಡಂತಿವೆ. ಒಗ್ಗಟ್ಟಾಗಿ ಬಿಜೆಪಿಯನ್ನು ಎದುರಿಸುವ ತುರ್ತೊಂದು ಅವುಗಳ ಮುಂದಿದೆ. ಪ್ರಜಾಪ್ರಭುತ್ವ ಯಾವಾಗಲೂ ಬದಲಾವಣೆಯನ್ನು ಬಯಸುತ್ತಿರುತ್ತದೆ. ಈ ಕಾರಣದಿಂದ, ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಇಳಿಸುವ ವಿರೋಧಪಕ್ಷಗಳ ಹಂಬಲ ಸಹಜವಾದುದು. ಯಾವುದೇ ಪಕ್ಷ ಸುದೀರ್ಘ ಅವಧಿಯವರೆಗೆ ಅಧಿಕಾರದಲ್ಲಿದ್ದರೆ ತನ್ನ ಸ್ಥಾನ ತುಂಬಬಲ್ಲವರು ಯಾರೂ ಇಲ್ಲ ಎಂಬ ಮನೋಭಾವ ಬಲಿತು ನಿರಂಕುಶಾಧಿಕಾರದ ಧೋರಣೆಯನ್ನು ಅದು ಮೈಗೂಡಿಸಿಕೊಳ್ಳುತ್ತದೆ. ಸಮಾಜದಲ್ಲಿ ಹೆಚ್ಚುತ್ತಿರುವ ಸಂಘರ್ಷಮಯ ವಾತಾವರಣ ಮತ್ತು ಬೆಳೆಯುತ್ತಿರುವ ದಮನಕಾರಿ ಪ್ರವೃತ್ತಿಯು ತಮಗೆ ಒಟ್ಟಾಗಲು ಹಾಗೂ ಬಿಜೆಪಿಯ ವಿರುದ್ಧ ಗಟ್ಟಿಯಾದ ಮೈತ್ರಿಕೂಟವನ್ನು ಕಟ್ಟಲು ಅವಕಾಶ ಸೃಷ್ಟಿಯಾಗುವಂತೆ ‘ಭೂಮಿಯನ್ನು ಹದಗೊಳಿಸಿದೆ’ ಎಂದು ವಿರೋಧ ಪಕ್ಷಗಳು ಭಾವಿಸಿವೆ. ಹೀಗಾಗಿ ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗಿಟ್ಟು ಮೋದಿ ನೇತೃತ್ವದ ಸರ್ಕಾರಕ್ಕೆ ಸವಾಲೊಡ್ಡಲು ಅವುಗಳು ಸಜ್ಜಾಗುತ್ತಿವೆ. ಬೆಲೆ ಏರಿಕೆಯೂ ಸೇರಿದಂತೆ ಜನಸಾಮಾನ್ಯರ ಬದುಕನ್ನು ಸುಡುತ್ತಿರುವ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ಈ ಪಕ್ಷಗಳ ನೇತಾರರು ಭಾವಿಸಿದ್ದಾರೆ. ಒಂದೇ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ಸಜ್ಜಾಗಿರುವ ಪಕ್ಷಗಳು ಹನ್ನೊಂದು ರಾಜ್ಯಗಳಲ್ಲಿ ಸರ್ಕಾರಗಳನ್ನು ರಚಿಸಿವೆ ಮತ್ತು ಆಯಾ ರಾಜ್ಯಗಳ ಚುನಾವಣೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮತವನ್ನೂ ಗಳಿಸಿವೆ. ಈ ಪಕ್ಷಗಳ ನಾಯಕರಲ್ಲಿ ಪ್ರಭಾವಿಗಳಿದ್ದಾರೆ. ಚುನಾವಣೆ ತಂತ್ರ ಹಾಗೂ ಪ್ರಚಾರದಲ್ಲಿ ಪಳಗಿದವರೂ ಇದ್ದಾರೆ. ಆಡಳಿತದಲ್ಲಿ ಅನುಭವಿಗಳೂ ಹೌದು. ಈ ಎಲ್ಲ ಅಂಶಗಳು ವಿರೋಧಪಕ್ಷಗಳ ವೇದಿಕೆಗೆ ಬಲ ತುಂಬಬಲ್ಲವು.

ವಿರೋಧಪಕ್ಷಗಳಿಗೆ ಎಷ್ಟು ಅವಕಾಶಗಳಿವೆಯೋ ಅಷ್ಟೇ ಸವಾಲುಗಳೂ ಉಂಟು. ಜನಪ್ರಿಯತೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೋದಿ ಅವರ ವರ್ಚಸ್ಸಿಗೆ ಸರಿಸಮನಾದ ವರ್ಚಸ್ಸು ಹೊಂದಿರುವ ನಾಯಕ ವಿರೋಧ ಪಕ್ಷಗಳ ಪಾಳಯದಲ್ಲಿ ಸದ್ಯಕ್ಕೆ ಇಲ್ಲ. ಕೆಲವು ಜನಪ್ರಿಯ ನಾಯಕರು ಇದ್ದರೂ ಅವರ ಪ್ರಭಾವ ರಾಷ್ಟ್ರದ ಉದ್ದಗಲಕ್ಕೂ ಒಂದೇ ರೀತಿಯಲ್ಲಿ ಚಾಚಿಕೊಂಡಿಲ್ಲ. ಇನ್ನೊಂದೆಡೆ, ಮೋದಿ ನೇತೃತ್ವದ ಸರ್ಕಾರವು ದೇಶದ ಮೇಲೆ ಬಿಗಿಹಿಡಿತ ಹೊಂದಿದೆ. ಕೆಲವು ಸ್ವಾಯತ್ತ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ಮೇಲೂ ತನ್ನ ಪ್ರಭಾವವನ್ನು ಹೊಂದಿದೆ. ಚುನಾವಣೆ ಎದುರಿಸುವಂತಹ ‘ಬಲಾಢ್ಯ’ವಾದ ವ್ಯವಸ್ಥೆಯನ್ನೂ ಬಿಜೆಪಿ ಬೆಳೆಸಿಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಆ ಪಕ್ಷವನ್ನು ಎದುರಿಸಲು ವಿರೋಧಪಕ್ಷಗಳಿಗೆ ಅಂಕಗಣಿತಕ್ಕಿಂತ ಹೆಚ್ಚಾಗಿ ಬೇಕಿರುವುದು ಅವುಗಳ ಒಗ್ಗಟ್ಟನ್ನು ಗಟ್ಟಿಗೊಳಿಸಬಲ್ಲ ‘ಕೆಮಿಸ್ಟ್ರಿ’. ಒಟ್ಟಾಗಲು ಹೊರಟಿರುವ ಕೆಲವು ಪಕ್ಷಗಳಲ್ಲಿ ಆಂತರಿಕ ತಿಕ್ಕಾಟಗಳಿವೆ. ನಾಯಕತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಇವೆ. ಪರಸ್ಪರರನ್ನು ಕಂಡು ಹಲ್ಲು ಮಸೆಯುವ ನಾಯಕರೂ ಇದ್ದಾರೆ. ಪಟ್ನಾ ಸಭೆಯ ಬೆನ್ನಹಿಂದೆಯೇ ಕಾಂಗ್ರೆಸ್ ವಿರುದ್ಧ ಎಎಪಿ ಭಿನ್ನರಾಗ ತೆಗೆದಿದ್ದು ಈಗ ಜಗಜ್ಜಾಹೀರಾಗಿದೆ. ಪರಸ್ಪರ ವಿರೋಧಾಭಾಸಗಳಿಂದ ಕೂಡಿದ ಭಿನ್ನ ಸಿದ್ಧಾಂತದ ಪ್ರತಿಪಾದಕರನ್ನು ಒಂದೇ ವೇದಿಕೆಯಲ್ಲಿ ಹಿಡಿದು ನಿಲ್ಲಿಸುವುದೆಂದರೆ ತಕ್ಕಡಿಯಲ್ಲಿಟ್ಟು ಕಪ್ಪೆಗಳನ್ನು ತೂಗಿದಂತೆ. ಅಲ್ಲದೆ, ಈ ಪಕ್ಷಗಳು ಹೆಚ್ಚಿನ ಯಶಸ್ಸು ಗಳಿಸಿರುವುದು ವಿಧಾನಸಭೆ ಚುನಾವಣೆಗಳಲ್ಲಿ. ಲೋಕಸಭೆ ಚುನಾವಣೆಯಲ್ಲಿ ಚರ್ಚೆಯಾಗುವ ವಿಷಯಗಳಿಗೂ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಚರ್ಚೆಯಾಗುವ ವಿಷಯಗಳಿಗೂ ಅಜಗಜಾಂತರವಿದೆ. ಮೋದಿ ಅವರನ್ನು ಮತ್ತು ಬಿಜೆಪಿಯನ್ನು ವಿರೋಧಿಸುವ ಕಾರಣಕ್ಕೆ ಮಾತ್ರವಲ್ಲದೆ ಜನ ತಮ್ಮನ್ನು ಏತಕ್ಕಾಗಿ ಬೆಂಬಲಿಸಬೇಕು ಎಂಬುದನ್ನು ಜನರ ಮುಂದೆ ವಿವರಿಸುವಂತಹ ಕೆಲಸವನ್ನೂ ಈ ಪಕ್ಷಗಳು ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ತಾವೊಂದು ವೇಳೆ ಅಧಿಕಾರಕ್ಕೆ ಬಂದರೆ ಒಟ್ಟಾಗಿ ಮುನ್ನಡೆಯುವುದಾಗಿ ಮತ್ತು ಒಳ್ಳೆಯ ಆಡಳಿತವನ್ನು ನೀಡುವುದಾಗಿ ಜನರಿಗೆ ಮನವರಿಕೆ ಮಾಡಿಕೊಡಬೇಕು. ಆ ನಿಟ್ಟಿನಲ್ಲಿ ಅವುಗಳು ಇನ್ನೂ ದೀರ್ಘ ಹಾದಿಯನ್ನು ಸವೆಸಬೇಕಿದೆ. ಆ ಹಾದಿಯಲ್ಲಿ ಶಿಮ್ಲಾ ಮುಂದಿನ ನಿಲ್ದಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.