ಪ್ರಕರಣದ ತನಿಖೆಗೆ ಅಡ್ಡಿಪಡಿಸುವುದರಿಂದ, ಕಿರುಕುಳಕ್ಕೆ ಗುರಿಯಾಗಿದ್ದಾರೆ ಎನ್ನಲಾದ ಮಹಿಳೆಗೆ ಅನ್ಯಾಯ ಎಸಗಿದಂತೆ ಆಗುತ್ತದೆ

ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಅಲ್ಲಿನ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಹೊಸದೊಂದು ಆಯಾಮ ಸೇರಿಕೊಂಡಿದೆ. ರಾಜಭವನದ ಮಹಿಳಾ ಉದ್ಯೋಗಿಯೊಬ್ಬರು ಬೋಸ್ ಅವರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಕ್ಕೆ ಸಂಬಂಧಿಸಿದ್ದು ಇದು. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವೊಂದನ್ನು ರಚಿಸಿದ್ದಾರೆ.

ರಾಜಭವನದ ಸಿ.ಸಿ. ಟಿ.ವಿ. ಕ್ಯಾಮೆರಾ ದಾಖಲೆಗಳನ್ನು ನೀಡುವಂತೆ ಕೇಳಿರುವ ತಂಡವು ಅಲ್ಲಿ ಕೆಲಸ ಮಾಡುತ್ತಿರುವ ಕೆಲವರಿಗೆ ಸಮನ್ಸ್ ನೀಡಿದೆ. ಆದರೆ ಆರೋಪಗಳನ್ನು ಅಲ್ಲಗಳೆದಿರುವ ರಾಜ್ಯಪಾಲರು ತನಿಖೆಗೆ ಸಹಕರಿಸದೇ ಇರಲು ತೀರ್ಮಾನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಬರುವ ಯಾವುದೇ ಸಂದೇಶವನ್ನು ಉಪೇಕ್ಷಿಸಬೇಕು ಎಂದು ಅವರು ರಾಜಭವನದ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ರಾಜಭವನಕ್ಕೆ ಪೊಲೀಸರು ಪ್ರವೇಶಿಸುವಂತೆ ಇಲ್ಲ ಎಂದು ತಾಕೀತು ಮಾಡಿದ್ದಾರೆ. ರಾಜ್ಯಪಾಲರಿಗೆ ಸಾಂವಿಧಾನಿಕ ರಕ್ಷಣೆ ಇರುವ ಕಾರಣ, ಪೊಲೀಸರು ತನಿಖೆಗೆ ಯಾವುದೇ ರೀತಿಯಿಂದಲೂ ಮುಂದಡಿ ಇರಿಸುವಂತೆ ಇಲ್ಲ, ತಮ್ಮ ವಿರುದ್ಧ ಯಾವುದೇ ಕ್ರಮ ಜರುಗಿಸುವಂತೆ ಇಲ್ಲ ಎಂದು ಕೂಡ ಬೋಸ್ ಅವರು ಹೇಳಿದ್ದಾರೆ.

ಆನಂದ ಬೋಸ್ ಅವರ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶ ಇದ್ದಿರಬಹುದು ಅಥವಾ ಇಲ್ಲದೆಯೂ ಇರಬಹುದು. ಅಲ್ಲದೆ, ಈ ಆರೋಪಗಳು ರಾಜ್ಯಪಾಲರ ವಿರುದ್ಧ ರಾಜಕೀಯಪ್ರೇರಿತವಾಗಿ ದಾಖಲಾಗಿರಬಹುದು. ಆನಂದ ಬೋಸ್ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ವಿರುದ್ಧ ಸಂಘರ್ಷದ ಹಾದಿಯನ್ನು ಹಿಡಿದಿದ್ದಾರೆ. ಬೋಸ್ ಮತ್ತು ಮಮತಾ ಅವರ ನಡುವೆ ಹಲವು ಬಾರಿ ಸಂಘರ್ಷ ಉಂಟಾಗಿದೆ. ಲೋಕಸಭಾ ಚುನಾವಣೆಯು ಇಬ್ಬರ ನಡುವಿನ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸುವ ಕೆಲಸ ಮಾಡಿದೆ. ಹೀಗಿದ್ದರೂ ಇವು ಯಾವುವೂ ಆರೋಪಗಳ ಗಾಂಭೀರ್ಯವನ್ನು ಕಡಿಮೆ ಮಾಡುವುದಿಲ್ಲ, ತನಿಖೆಯ ಅಗತ್ಯವನ್ನು ಇಲ್ಲವಾಗಿಸುವುದಿಲ್ಲ. ಲೈಂಗಿಕ ಕಿರುಕುಳದ ಆರೋಪವು ಯಾವಾಗಲೂ ಬಹಳ ಗಂಭೀರ. ಆ ಬಗ್ಗೆ ತನಿಖೆ ಆಗಬಾರದು ಎಂದು ರಾಜ್ಯಪಾಲರು ಹೇಳುವಂತಿಲ್ಲ. ಬಲಾಢ್ಯರ ವಿರುದ್ಧ ಇಂತಹ ಆರೋಪಗಳು ದಾಖಲಾದಾಗ, ಅಂತಹ ಪ್ರಕರಣಗಳನ್ನು ಹತ್ತಿಕ್ಕುವ ಕೆಲಸ ಆಗುತ್ತದೆ ಎಂಬ ಆಕ್ಷೇಪಗಳಲ್ಲಿ ನಿಜಾಂಶ ಇಲ್ಲದೇ ಇಲ್ಲ.

ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಕಾನೂನಿನ ಅಡಿಯಲ್ಲಿ ಇರುವ ರಕ್ಷಣೆಯು ಇಂತಹ ಪ್ರಕರಣಗಳಿಗೂ ಅನ್ವಯ ಆಗುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ತನಿಖೆಯನ್ನು ನಡೆಸಲು ಯಾವುದೇ ಅಡ್ಡಿ ಇಲ್ಲ, ಕ್ರಿಮಿನಲ್ ಕ್ರಮ ಜರುಗಿಸುವುದರಿಂದ ಮಾತ್ರ ಕಾನೂನಿನ ಅಡಿಯಲ್ಲಿ ರಕ್ಷಣೆ ಇರುತ್ತದೆ ಎಂಬ ಅಭಿಪ್ರಾಯ ಇದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ (ಸಿಜೆಐ) ರಂಜನ್ ಗೊಗೊಯಿ ಅವರ ವಿರುದ್ಧ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆಯನ್ನು ಕೈಗೊಳ್ಳಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಆ ತನಿಖೆಯು ಅದೆಷ್ಟು ಪರಿಣಾಮಕಾರಿಯಾಗಿ ನಡೆಯಿತು ಎಂಬುದು ಬೇರೆಯದೇ ವಿಚಾರ. ವಿರೋಧ ಪಕ್ಷಗಳ ನಾಯಕರು ಅಥವಾ ಬೇರೆ ಯಾವುದೇ ವ್ಯಕ್ತಿಯ ವಿರುದ್ಧ ತನಿಖೆ ಆರಂಭವಾದಾಗ, ಅವರು ತನಿಖೆಯನ್ನು ಎದುರಿಸಬೇಕು ಹಾಗೂ ತಾವು ಕಳಂಕರಹಿತರು ಎಂಬುದನ್ನು ಸಾಬೀತುಪಡಿಸಬೇಕು ಎಂದು ಆಗ್ರಹಿಸಲಾಗುತ್ತದೆ.

ರಾಜ್ಯಪಾಲರ ವಿರುದ್ಧ ಆರೋಪಗಳು ಕೇಳಿಬಂದಾಗ ಕೂಡ ಇದೇ ಬಗೆಯ ಆಗ್ರಹ, ವಾದ ಅನ್ವಯವಾಗಬೇಕು. ಅದರಲ್ಲೂ ಮುಖ್ಯವಾಗಿ ಆರೋಪಗಳು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿರುವಾಗ, ಬೇರೊಂದು ಬಗೆಯ ವಾದ ಮಂಡಿಸಲು ಆಗುವುದಿಲ್ಲ. ಆರೋಪಗಳು ಸತ್ಯವೇ ಆಗಿದ್ದಲ್ಲಿ, ತನಿಖೆಗೆ ಅಡ್ಡಿಪಡಿಸುವುದರಿಂದ, ಕಿರುಕುಳಕ್ಕೆ ಗುರಿಯಾದ ಮಹಿಳೆಗೆ ಅನ್ಯಾಯ ಎಸಗಿದಂತೆ ಆಗುತ್ತದೆ. ಸರ್ಕಾರದ ಜೊತೆಗಿನ ಮುಖಾಮುಖಿಯಲ್ಲಿ ಸಂವಿಧಾನ ನಿಗದಿಪಡಿಸಿರುವ ಮಿತಿಗಳನ್ನು ರಾಜ್ಯಪಾಲರು ಮೀರಿದ್ದಾರೆ, ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದ್ದಾರೆ. ಆದರೆ ಅವರು ಈಗ ತಮ್ಮ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿರುವಾಗ, ಸಂವಿಧಾನದ ಹಿಂದೆ ಅಡಗಿ ಕುಳಿತುಕೊಳ್ಳಲು ಯತ್ನಿಸುತ್ತಿರುವುದು ವ್ಯಂಗ್ಯದಂತೆ ಕಾಣುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.