ನ್ಯೂಸ್‌ಕ್ಲಿಕ್ ಸುದ್ದಿತಾಣದ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ, ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಎರಡು ಪ್ರತ್ಯೇಕ ಆದೇಶಗಳ ಮೂಲಕ ಸೂಚನೆ ನೀಡಿರುವುದು ನ್ಯಾಯಕ್ಕೆ ಹಾಗೂ ನ್ಯಾಯಸಮ್ಮತ ಪ್ರಕ್ರಿಯೆಗೆ ಸಂದ ಜಯ. ಈ ಎರಡು ಆದೇಶಗಳು ಪೊಲೀಸರು ಮತ್ತು ಸರ್ಕಾರದ ನಡೆಗೆ ನ್ಯಾಯಾಲಯ ವ್ಯಕ್ತಪಡಿಸಿರುವ ಗಂಭೀರ ಸ್ವರೂಪದ ಅಸಮ್ಮತಿಯೂ ಹೌದು. ಪುರಕಾಯಸ್ಥ ಅವರ ಬಂಧನವು ತಪ್ಪು, ಕಾನೂನುಬಾಹಿರ ಎಂದು ಕೋರ್ಟ್ ಹೇಳಿದೆ. ಬಂಧನದ ಪ್ರಕ್ರಿಯೆಯು ಕಾನೂನಿಗೆ ಅನುಗುಣವಾಗಿ ಇರಬೇಕು, ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸಬೇಕು ಎಂಬ ಅಂಶವನ್ನು ಕೋರ್ಟ್ ಒತ್ತಿಹೇಳಿದೆ. ಈ ಎರಡೂ ಪ್ರಕರಣಗಳು, ಭಿನ್ನ ದನಿಗಳನ್ನು ಹತ್ತಿಕ್ಕುವ, ಸರ್ಕಾರದ ಟೀಕಾಕಾರರ ಬಾಯಿ ಮುಚ್ಚಿಸುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಉದ್ದೇಶಕ್ಕೆ ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವುದರ ಬಗ್ಗೆ ಕಳವಳ ಮೂಡಲು ಕಾರಣವಾಗಿದ್ದವು. ವಿದೇಶಗಳಿಂದ ಹಣದ ನೆರವು ಪಡೆದು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಅಡಿಯಲ್ಲಿ ಪುರಕಾಯಸ್ಥ ಅವರನ್ನು 2023ರಲ್ಲಿ ಬಂಧಿಸಲಾಗಿತ್ತು. ನವಲಖಾ ಅವರನ್ನು 2020ರಲ್ಲಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಯಾವುದೇ ಸಾಕ್ಷ್ಯ ಇಲ್ಲದಿದ್ದರೂ, ರಾಜಕೀಯ ಕಾರಣಗಳಿಗಾಗಿ, ಹಗೆ ತೀರಿಸಿಕೊಳ್ಳುವ ಉದ್ದೇಶದಿಂದ ಈ ಇಬ್ಬರ ಬಂಧನ ಆಗಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

ಪುರಕಾಯಸ್ಥ ಅವರನ್ನು ಬಂಧಿಸಿದ್ದಕ್ಕೆ ಕಾರಣ ಏನು ಎಂಬುದನ್ನು ಲಿಖಿತ ರೂಪದಲ್ಲಿ ತಿಳಿಸದೇ ಇದ್ದುದಕ್ಕಾಗಿ, ಅವರ ಬಂಧನ ಹಾಗೂ ಅವರನ್ನು ಉದ್ದೇಶಿಸಿ ಹೊರಡಿಸಿದ್ದ ರಿಮಾಂಡ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಬಂಧನಕ್ಕೆ ಕಾರಣವನ್ನು ಲಿಖಿತ ರೂಪದಲ್ಲಿ ನೀಡದೇ ಇರುವುದು ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಹೇಳಿದೆ. ಪುರಕಾಯಸ್ಥ ಅವರ ಬಂಧನ ಪ್ರಕ್ರಿಯೆಯನ್ನು ‘ಗುಟ್ಟುಗುಟ್ಟಾಗಿ ನಡೆಸಲಾಯಿತು, ಇದು ಕಾನೂನಿನ ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸದೆ ನುಣುಚಿ
ಕೊಳ್ಳಲಿಕ್ಕೆ ಮುಚ್ಚುಮರೆಯಲ್ಲಿ ನಡೆಸಿದ ಯತ್ನ’ ಎಂದು ಕೋರ್ಟ್ ಕಟುವಾದ ಮಾತು ಹೇಳಿದೆ. ಹಿಂದಿನ ತೀರ್ಪೊಂದನ್ನು ವಿಸ್ತರಿಸಿರುವ ಕೋರ್ಟ್, ಯಾವುದೇ ಕಾನೂನಿನ ಅಡಿಯಲ್ಲಿ ವ್ಯಕ್ತಿಯನ್ನು ಬಂಧಿಸುವಾಗ, ಬಂಧನಕ್ಕೆ ಕಾರಣ ಏನು ಎಂಬುದನ್ನು ಆದಷ್ಟು ಬೇಗ ತಿಳಿದುಕೊಳ್ಳುವ ಹಕ್ಕು ಆ ವ್ಯಕ್ತಿಗೆ ಇರುತ್ತದೆ ಎಂದು ಹೇಳಿದೆ. ಈ ವಿಚಾರದಲ್ಲಿ ವಿನಾಯಿತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಕಾನೂನಿನ ಪ್ರಕ್ರಿಯೆಯನ್ನು ಸೂಕ್ತ ರೀತಿಯಲ್ಲಿ ಪಾಲಿಸಬೇಕಿರುವುದು ಕಾನೂನಿಗೆ ಅನುಗುಣವಾದ ಆಡಳಿತ ಎಂಬ ತತ್ವದ ಹೃದಯವಿದ್ದಂತೆ. ಈ ತತ್ವದ ಪಾಲನೆ ಆದಾಗ ಮಾತ್ರ ಸಂವಿಧಾನಕ್ಕೆ ಬೆಲೆ. ಈ ಪ್ರಕ್ರಿಯೆಯನ್ನು ಉಲ್ಲಂಘಿಸುವ ಕೆಲಸ ಆಗಬಾರದು. ಬಂಧನಕ್ಕೂ ಮೊದಲು ತನಿಖೆ ನಡೆದಿರಬೇಕು, ಬಂಧನಕ್ಕೆ ಕಾರಣ ನೀಡುವಾಗ ಅದರಲ್ಲಿ ತನಿಖೆಯ ವಿವರಗಳನ್ನೂ ಉಲ್ಲೇಖಿಸಬೇಕು. ಈ ಪ್ರಕ್ರಿಯೆಯನ್ನು ಪಾಲಿಸದ ಯಾವುದೇ ಬಂಧನವು ಅಸಿಂಧುವಾಗುತ್ತದೆ.

ನವಲಖಾ ಅವರಿಗೆ ಜಾಮೀನು ಮಂಜೂರು ಮಾಡುವಾಗ ಕೋರ್ಟ್, ಇನ್ನೊಂದು ವೈಫಲ್ಯದ ಬಗ್ಗೆ ಬೊಟ್ಟುಮಾಡಿದೆ. ನವಲಖಾ ಅವರು ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ಜೈಲಿನಲ್ಲಿ ಇದ್ದಾರೆ, ಅವರ ವಿಚಾರಣೆಯು ಪೂರ್ಣಗೊಳ್ಳುವುದಕ್ಕೆ ಬಹಳ ಕಾಲ ಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ. ನವಲಖಾ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ 370 ಸಾಕ್ಷಿಗಳು ಇದ್ದಾರೆ. ನವಲಖಾ ಅವರ ಜೊತೆ ಆರೋಪಿಗಳಾಗಿದ್ದ ಇತರ ಆರು ಮಂದಿಯನ್ನು ಈಗಾಗಲೇ ಜಾಮೀನಿನ ಅಡಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ನವಲಖಾ ಅವರ ವಿರುದ್ಧದ ದೋಷಾರೋಪಗಳನ್ನು ಇನ್ನಷ್ಟೇ ನಿಗದಿ ಮಾಡಬೇಕಿದೆ. ಪುರಕಾಯಸ್ಥ ಅವರು ಎಂಟು ತಿಂಗಳು ಜೈಲಿನಲ್ಲಿ ಇದ್ದರು. ನವಲಖಾ ಅವರು ನಾಲ್ಕು ವರ್ಷ ತಮ್ಮ ಸ್ವಾತಂತ್ರ್ಯ ಕಳೆದುಕೊಂಡಿದ್ದರು. ಇವರಿಬ್ಬರ ಪ್ರಕರಣದಲ್ಲಿ ಕಾನೂನಿಗೆ ಅನುಗುಣವಾದ ಆಡಳಿತ ಎಂಬ ತತ್ವವನ್ನು ಹಾಗೂ ನ್ಯಾಯ ವ್ಯವಸ್ಥೆಯ ಸೂತ್ರಗಳನ್ನು ಹೇಗೆ ಉಲ್ಲಂಘಿಸಲಾಯಿತು ಎಂಬುದನ್ನು ಕೋರ್ಟ್‌ನ ಆದೇಶಗಳು ಹೇಳುತ್ತಿವೆ. ಪ್ರಜೆಗಳ ಹಕ್ಕುಗಳನ್ನು ಗೌರವಿಸದ ಕಾನೂನು ಜಾರಿ ವ್ಯವಸ್ಥೆಯು ಸರ್ವಾಧಿಕಾರಿ ವ್ಯವಸ್ಥೆಯಂತೆ ಕಾಣುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.