ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಪ್ರಜಾಪ್ರಭುತ್ವದ ಹೊಳಪು ಕಳೆದುಕೊಂಡ ಹಸೀನಾ ಚಾರಿತ್ರಿಕ ಗೆಲುವು

Published : 14 ಜನವರಿ 2024, 21:27 IST
Last Updated : 14 ಜನವರಿ 2024, 21:27 IST
ಫಾಲೋ ಮಾಡಿ
Comments

ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಗೆದ್ದಿರುವುದರಲ್ಲಿ ಅಂತಹ ಆಶ್ಚರ್ಯವೇನೂ ಇಲ್ಲ. ‘ಇದು ಜನರ ಗೆಲುವು’ ಎಂದು ಚುನಾವಣಾ ಫಲಿತಾಂಶವನ್ನು ಹಸೀನಾ ಅವರು ಬಣ್ಣಿಸಿದ್ದಾರೆ. ಆದರೆ, ಪರಿಸ್ಥಿತಿ ಹಾಗೆ ಬಣ್ಣಿಸುವ ರೀತಿಯಲ್ಲಿ ಇರಲಿಲ್ಲ. ಶೇಕಡ 40ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪ್ರಮುಖ ವಿರೋಧ ಪಕ್ಷವಾಗಿದ್ದ ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಚುನಾವಣೆಯನ್ನು ಬಹಿಷ್ಕರಿಸಿತ್ತು. ತಟಸ್ಥ ಉಸ್ತುವಾರಿ ಸರ್ಕಾರದ ಮೇಲ್ವಿಚಾರಣೆಯಲ್ಲಿ ಚುನಾವಣೆ ನಡೆಯಬೇಕು ಎಂಬ ಬಿಎನ್‌ಪಿಯ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದ್ದು‍ ಇದಕ್ಕೆ ಕಾರಣ. ಪ್ರಧಾನಿಯಾಗಿ ಹಸೀನಾ ಅವರ ಸತತ ನಾಲ್ಕನೇ ಅವಧಿಯಲ್ಲಿ ಕೂಡ ರಾಜಕೀಯ ಸಂಬಂಧಗಳು ವಿಷಮಯವಾಗಿಯೇ ಇರಲಿವೆ ಎಂಬುದಕ್ಕೆ ಇದು ಸೂಚನೆಯೂ  ಹೌದು. ಅವಾಮಿ ಲೀಗ್‌ ಮತ್ತು ಬಿಎನ್‌ಪಿ ನಡುವಣ ಸಂಘರ್ಷವೂ ನಿರಂತರವಾಗಿ ನಡೆಯಲಿದೆ. ಕಳೆದ 10–12 ವರ್ಷಗಳಲ್ಲಿ ಈ  ಎರಡು ಪಕ್ಷಗಳ ಮೇಲಾಟವನ್ನು ಬಾಂಗ್ಲಾ ದೇಶದ ಬೀದಿಗಳು ಕಂಡಿದ್ದವು. ವಿರೋಧ ಪಕ್ಷವು ವ್ಯಾಪಕವಾಗಿ ಧರಣಿ ಮತ್ತು ಪ್ರತಿಭಟನೆಗಳನ್ನು ನಡೆಸಿದರೆ, ಸರ್ಕಾರವು ಕಠಿಣ ಕ್ರಮಗಳ ಮೂಲಕ ಅವುಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸಿತ್ತು. ಪ್ರತಿಯೊಂದು ಪ್ರತಿಭಟನೆಯ ಸಂದರ್ಭದಲ್ಲಿಯೂ ಹಿಂಸೆ ಮತ್ತು ರಕ್ತಪಾತ ಅನಿವಾರ್ಯ ಎಂಬಂತೆ ನಡೆದಿದ್ದವು. ಪ್ರಗತಿಪರ ನಾಯಕಿ ಎಂದು ಜಗತ್ತು ಒಂದು ಕಾಲದಲ್ಲಿ ಕೊಂಡಾಡಿದ್ದ ಹಸೀನಾ ಅವರು, ಟೀಕಾಕಾರರು ಮತ್ತು ಮಾಧ್ಯಮವನ್ನು ಸುಮ್ಮನಿರಿಸಿ ಅಧಿಕಾರದ ಮೇಲೆ ಬಿಗಿಹಿಡಿತ ಸಾಧಿಸುವುದಕ್ಕಾಗಿ ನಿರಂಕು
ಶಾಧಿಕಾರಿಯಾಗಿ ಪರಿವರ್ತಿತರಾಗಿದ್ದಾರೆ. ಬಾಂಗ್ಲಾ ದೇಶದ ರಾಷ್ಟ್ರಪಿತ ಶೇಖ್‌ ಮುಜೀಬುರ್‌ ರೆಹಮಾನ್‌ ಅವರ ರಾಜಕೀಯ ಉತ್ತರಾಧಿಕಾರಿಯಾದ ಹಸೀನಾ ಅವರು ದಮನಕಾರಿಯಾಗಿ ಬದಲಾಗಿದ್ದು ದುರದೃಷ್ಟಕರ. 

ಬಾಂಗ್ಲಾ ದೇಶವನ್ನು ಜಗತ್ತು ನೋಡುವ ರೀತಿಯೇ ಸರಿಯಾಗಿಲ್ಲ ಎಂದು ಹಸೀನಾ ಅವರು ಹೇಳುತ್ತಿದ್ದಾರೆ. ಅವರು ಮತ್ತು ಅವರ ಪಕ್ಷದ ಪ್ರತಿಪಾದನೆ ಹೀಗಿದೆ: ‘ಐದು ದಶಕಗಳ ಹಿಂದೆ ಹಿಂಸಾತ್ಮಕ ಸನ್ನಿವೇಶ
ದಲ್ಲಿ ಸೃಷ್ಟಿಯಾದ ಸಣ್ಣ ದೇಶ ನಮ್ಮದು. ವಿರೋಧ ಪಕ್ಷಗಳು ‘ಪ್ರಜಾಸತ್ತಾತ್ಮಕ’ ಅಲ್ಲದ ರೀತಿಯಲ್ಲಿ
ವರ್ತಿಸಿದ್ದನ್ನು ನಿಭಾಯಿಸಲೇಬೇಕಾಗಿತ್ತು. ಈ ಎಲ್ಲದರ ನಡುವೆಯೂ ದೇಶದ ಅರ್ಥ ವ್ಯವಸ್ಥೆಯನ್ನು
ಉತ್ತಮಪಡಿಸಲು ನಮಗೆ ಸಾಧ್ಯವಾಗಿದೆ. ಹಾಗೆಯೇ ಮುಸ್ಲಿಂ ತೀವ್ರವಾದದ ವಿರುದ್ಧ ಕಠಿಣ ಕ್ರಮಗಳನ್ನೂ ಕೈಗೊಳ್ಳಲಾಗಿದೆ’. ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಹಿಂದಕ್ಕೆ ಜಾರುವ ಪ್ರವೃತ್ತಿ ಈಗ ಕಾಣಿಸಿಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಹಸೀನಾ ಅವರು ಈ ‍ಪ್ರದೇಶದಲ್ಲಿ ಮತ್ತು ಜಗತ್ತಿನಲ್ಲಿ ಇನ್ನಷ್ಟು ಉತ್ತಮವಾದ ನಿದರ್ಶನವಾಗಿ ನಿಲ್ಲಬೇಕಿತ್ತು ಎಂದು ಜಗತ್ತಿನ ಹಲವು ದೇಶಗಳು ಬಯಸುತ್ತಿವೆ. 

ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಿ ಸೆರೆಯಲ್ಲಿ ಇರಿಸಿರುವುದು ಅಕ್ರಮ ಎಂದು ಅಮೆರಿಕ ಹಾಗೂ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿವೆ. ಆದರೆ, ಹಸೀನಾ ಅವರ ಪುನರಾಯ್ಕೆಯನ್ನು ಭಾರತವು ಸ್ವಾಗತಿಸಿದೆ. ಭಾರತದ ಜೊತೆಗೆ ಬಾಂಗ್ಲಾ ದೇಶವು ಸ್ನೇಹದಿಂದ ಇದೆ. ಚಾರಿತ್ರಿಕ ಗೆಲುವಿಗಾಗಿ ಹಸೀನಾ ಅವರಿಗೆ ಅಭಿನಂದನೆ ಸಲ್ಲಿಸಿದ ಮೊದಲಿಗರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಒಬ್ಬರು. ಭಾರತವು ಹಸೀನಾ ಅವರನ್ನು ಎರಡು ದಶಕಗಳಿಂದ ನಿರಂತರವಾಗಿ ಬೆಂಬಲಿಸುತ್ತಲೇ ಬಂದಿದೆ. ನೆರೆಯ ದೇಶಗಳು ಇಸ್ಲಾಂ ಮೂಲಭೂತವಾದಕ್ಕೆ ನೀಡುವ ಒತ್ತಾಸೆಯ ಕುರಿತು ಭಾರತವು ಕಳವಳ ಹೊಂದಿದೆ. ಈ ಕುರಿತ ಭಾರತದ ಅಗತ್ಯಗಳಿಗೆ ಹಸೀನಾ ಅವರು ‍ಪೂರಕವಾಗಿ ಸ್ಪಂದಿಸಿದ್ದಾರೆ. ಹಸೀನಾ ಅವರಿಗೂ ಹಿಂದೆ ಪ್ರಧಾನಿಯಾಗಿದ್ದ ಖಲೀದಾ ಜಿಯಾ ಅವರ ನೇತೃತ್ವದ ಮೈತ್ರಿಕೂಟದಲ್ಲಿ ಮುಸ್ಲಿಂ ಮೂಲಭೂತವಾದಿ ರಾಜಕೀಯ ಪ‍ಕ್ಷಗಳು ಇದ್ದವು. ಹಾಗಾಗಿ, ಆ ಅವಧಿಯು ದುಃಸ್ವಪ್ನವಾಗಿ ಕಾಡಿದ್ದನ್ನು ಭಾರತವು ಇನ್ನೂ ಮರೆತಿಲ್ಲ. ಅಲ್ಪಸಂಖ್ಯಾತರಾದ ಹಿಂದೂಗಳು  ಮತ್ತು ಅವರ ಪೂಜಾ ಸ್ಥಳಗಳ ರಕ್ಷಣೆಗೆ ಹಸೀನಾ ಅವರು ದೃಢ ಕ್ರಮಗಳನ್ನು ಕೈಗೊಂಡಿದ್ದಾರೆ. ಭಾರತ ಮತ್ತು ಚೀನಾದ ವಿಷಮ ಸಂಬಂಧವನ್ನು ಹಸೀನಾ ಅವರು ಸರಿಯಾಗಿ ಗ್ರಹಿಸಿಕೊಂಡಿದ್ದಾರೆ; ಹಾಗಾಗಿ, ಚೀನಾದ ವಿಚಾರದಲ್ಲಿ ಭಾರತಕ್ಕೆ ಪೂರಕವಾಗಿ ನಡೆದುಕೊಂಡಿದ್ದಾರೆ. ವಿರೋಧಾಭಾಸದ ಅಂಶವೆಂದರೆ, ಹಸೀನಾ ಅವರಿಗೆ ಭಾರತ ನೀಡುತ್ತಿರುವ ಬೆಂಬಲವೇ ಸ್ವದೇಶದಲ್ಲಿ ಅವರ ಜನಪ್ರಿಯತೆ ಕುಸಿಯಲು ಕಾರಣವಾಗಿದೆ. ರಾಜಕೀಯವಾಗಿ ಅವರ ಶಕ್ತಿ ಕುಗ್ಗುತ್ತಿದೆ ಎಂಬುದನ್ನು ಭಾರತವು ನಿರ್ಲಕ್ಷಿಸುವಂತಿಲ್ಲ. ಬಾಂಗ್ಲಾ ದೇಶದಲ್ಲಿ ಸ್ಥಿರ ಮತ್ತು ಪ್ರಜಾಸತ್ತಾತ್ಮಕ ಸರ್ಕಾರ ಇರುವುದು ಭಾರತ ಹಾಗೂ ಈ  ಪ್ರದೇಶದ ಹಿತಾಸಕ್ತಿಗೆ ಅಗತ್ಯವಾಗಿದೆ. ಭಾರತದಿಂದ ಬಾಂಗ್ಲಾ ದೇಶಕ್ಕೆ ಈ ಸಂದೇಶ ಹೋಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT