ಬಹುಸಂಸ್ಕೃತಿಯ, ಬಹುಧರ್ಮಗಳ ಪ್ರಜಾತಂತ್ರ ರಾಷ್ಟ್ರ ಬಲಿಷ್ಠವಾಗಿರಲು ಬೇಕಿರುವ ಬಹುಮುಖ್ಯ ಅಂಶಗಳಲ್ಲಿ ಸಾಂವಿಧಾನಿಕ ಮೌಲ್ಯಗಳ ಪಾಲನೆ ಕೂಡ ಸೇರಿದೆ. ದೇಶದ ಮುಂದಿನ ಸರ್ಕಾರವನ್ನು ರಚಿಸುವವರು ಯಾರು ಎಂಬುದನ್ನು ನಿರ್ಧರಿಸಲು ಲೋಕಸಭೆಗೆ ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ, ದೇಶದ ಸಂವಿಧಾನ ಹೇಳಿರುವ ಮೌಲ್ಯಗಳನ್ನು ಯಾರು, ಎಷ್ಟರಮಟ್ಟಿಗೆ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ಚಿಕಿತ್ಸಕ ಮನಸ್ಸಿನಿಂದ ನೋಡುವುದೂ ಮುಖ್ಯವಾಗುತ್ತದೆ. ಈ ಹಿನ್ನೆಲೆಯಿಂದ ನೋಡಿದಾಗ, ದೇಶದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿರುವ ಬಿಜೆಪಿಯು ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕಣಕ್ಕಿಳಿಸಿರುವುದು ಯಾವ ಸಂದೇಶವನ್ನು ರವಾನಿಸುವ ಉದ್ದೇಶದ್ದು ಎಂಬುದು ಗೊತ್ತಾಗುತ್ತದೆ. ಪ್ರಜ್ಞಾ ಅವರು ಭಯೋತ್ಪಾದಕ ಕೃತ್ಯವನ್ನು ಎಸಗಿದ ಆರೋಪ ಎದುರಿಸುತ್ತಿರುವ ವ್ಯಕ್ತಿ. ಅವರ ಮೇಲಿನ ಆರೋಪಗಳು ತೀರಾ ಗಂಭೀರ ಸ್ವರೂಪದವು. ಆರೋಪಗಳಲ್ಲಿ ಯಾವುದೂ ಸಾಬೀತಾಗಿಲ್ಲ, ಆರೋಪ ಸಾಬೀತಾಗುವ ವರೆಗೆ ಆರೋಪಿ ನಿರ್ದೋಷಿ ಎಂಬುದು ಒಪ್ಪಿತ ಮಾತು. ಆದರೆ, ಪ್ರಜ್ಞಾ ವಿರುದ್ಧದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯವು ‘ಅವರ ವಿರುದ್ಧದ ಪ್ರಕರಣದಲ್ಲಿ ಮೇಲ್ನೋಟಕ್ಕೆ ಪುರಾವೆಗಳಿವೆ’ ಎಂದು ಹೇಳಿರುವುದನ್ನು ಗಮನಿಸಬೇಕು. ನ್ಯಾಯಾಲಯ ಈ ಮಾತು ಹೇಳಿರುವುದು ಪ್ರಜ್ಞಾ ಅವರು ನಾಮಪತ್ರ ಸಲ್ಲಿಸಿದ ನಂತರ. ಅಲ್ಲದೆ, ಪ್ರಜ್ಞಾ ಅವರು ಬಾಲಿಶವಾದ, ಹುತಾತ್ಮರ ಪಾಲಿಗೆ ಅವಮಾನಕಾರಿಯಾದ, ದೇಶದ ಸಾಮರಸ್ಯಕ್ಕೆ ಚ್ಯುತಿ ತರುವ ಮಾತುಗಳನ್ನು ಆಡುತ್ತಿದ್ದಾರೆ. ಅವರು ಆಡಿರುವ ಕೆಲವು ಮಾತುಗಳು ದೇಶದ ಪ್ರಜೆಯಾಗಿ ಪಾಲಿಸಬೇಕಿರುವ ಮೂಲಭೂತ ಕರ್ತವ್ಯಗಳಿಗೆ ಚ್ಯುತಿ ತರುವಂಥವು. ಪ್ರಜ್ಞಾ ಆಡುತ್ತಿರುವ ಕೆಲವು ಅಸಂಬದ್ಧ ಮಾತುಗಳಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆಯಾದರೂ, ಪ್ರಜ್ಞಾ ಅವರ ಬೆನ್ನಿಗೆ ನಿಲ್ಲುವ ಕೆಲಸವನ್ನು ಪಕ್ಷ ನಿಲ್ಲಿಸಿಲ್ಲ.

ಇನ್ನೊಂದು ಧರ್ಮದ ಶ್ರದ್ಧಾ ಕೇಂದ್ರವನ್ನು ಧ್ವಂಸಗೊಳಿಸಿದ ಕಾರ್ಯ ಹಿಂದುತ್ವದ ಪರ ಎಂದು ಬಿಂಬಿಸುವ ಕೆಲಸ ದಶಕಗಳಿಂದಲೂ ನಡೆದಿದೆ. ಅದೇ ಕೆಲಸದ ಭಾಗವಾಗಿ ಪ್ರಜ್ಞಾ ಅವರು, ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸುವ ಕಾರ್ಯದಲ್ಲಿ ತಾವು ಖುದ್ದಾಗಿ ಪಾಲ್ಗೊಂಡಿದ್ದಾಗಿ ಹೇಳಿದ್ದಾರೆ. ಇದು, ತಾವು ‘ಹಿಂದುತ್ವದ ಸೇನಾನಿ’ ಎಂದು ತೋರಿಸಿಕೊಳ್ಳುವ ಯತ್ನವಲ್ಲದೆ ಮತ್ತೇನೂ ಅಲ್ಲ. ಇಂತಹ ಮಾತುಗಳಿಂದಾಗಿ ಸಮಾಜದಲ್ಲಿ ಧರ್ಮ ಆಧಾರಿತ ಧ್ರುವೀಕರಣವಲ್ಲದೆ ಇನ್ನೇನನ್ನೂ ಸಾಧಿಸಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಮಾಧ್ಯಮಗಳು ಭಾರತದಲ್ಲಿ ನಡೆಯುತ್ತಿರುವ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಈ ಹೊತ್ತಿನಲ್ಲಿ ಇಂತಹ ಮಾತುಗಳ ಪರಿಣಾಮವಾಗಿ, ಉದಾರವಾದಿ ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳಲ್ಲಿ ಭಾರತದ ಬಗ್ಗೆ ನಕಾರಾತ್ಮಕ ಚಿತ್ರಣವಷ್ಟೇ ಮೂಡಬಹುದು. ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ, ಹುತಾತ್ಮ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಅವರು ಮೃತಪಟ್ಟಿದ್ದು ತಮ್ಮ ಶಾಪದಿಂದ ಎಂಬ ಮಾತಿನ ಮೂಲಕ ಪ್ರಜ್ಞಾ ಅವರು ತಮ್ಮ ಆಲೋಚನೆಯ ಮಟ್ಟ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಸೈನಿಕರ, ಹುತಾತ್ಮರ ಹೆಸರಿನಲ್ಲಿ ಮತ ಯಾಚಿಸುತ್ತಿರುವ ಬಿಜೆಪಿಯ ಪ್ರಮುಖರು ಇಂತಹ ಮಾತನ್ನಾಡುವ ಅಭ್ಯರ್ಥಿಗಳನ್ನು ಹೇಗೆ ಸಹಿಸಿಕೊಳ್ಳುತ್ತಿದ್ದಾರೆ? ಗೋಮೂತ್ರ ಕುಡಿದಿದ್ದರಿಂದಾಗಿ ಕ್ಯಾನ್ಸರ್ ಗುಣವಾಯಿತು ಎಂದು ಪ್ರಜ್ಞಾ ಹೇಳಿಕೊಂಡಿರುವುದು ಹಾಸ್ಯಾಸ್ಪದ. ಭಯೋತ್ಪಾದನಾ ಕೃತ್ಯದಲ್ಲಿ ಆರೋಪಿಯಾಗಿರುವವರನ್ನು ಅಭ್ಯರ್ಥಿಯನ್ನಾಗಿಸುವುದು ಅಂದರೆ, ಅವರ ಕೃತ್ಯವನ್ನು ಸಮರ್ಥಿಸಿದಂತೆಯೇ ಆಗುತ್ತದೆ, ಅಂಥವರಿಗೆ ಮಾನ್ಯತೆ ಕೊಟ್ಟಂತೆ ಆಗುತ್ತದೆ. ರಾಷ್ಟ್ರೀಯತೆ, ದೇಶಪ್ರೇಮದ ನೆಲೆಯಲ್ಲಿ ಚುನಾವಣೆ ಎದುರಿಸುತ್ತಿರುವ ಬಿಜೆಪಿ, ಪ್ರಜ್ಞಾ ಅವರಿಗೆ ಟಿಕೆಟ್ ನೀಡಿರುವುದು ವಿರೋಧಾಭಾಸದ ನಡೆ ಎನ್ನಬೇಕಾಗಿದೆ. ಸಾಂವಿಧಾನಿಕ ಆಶಯಗಳನ್ನು ಪಾಲಿಸಿದಾಗ ‘ದೇಶ ಮೊದಲು’ ಎಂಬ ಮಾತನ್ನು ಕ್ರಿಯಾರೂಪಕ್ಕೆ ತಂದಂತಾಗುತ್ತದೆ. ಆದರೆ, ಪ್ರಜ್ಞಾ ಅವರನ್ನು ಅಭ್ಯರ್ಥಿಯನ್ನಾಗಿಸಿ, ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಬಿಜೆಪಿ ತನ್ನ ಉದ್ದೇಶಶುದ್ಧಿಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.