ವಿಚಾರಣಾಧೀನ ಕೈದಿಗಳನ್ನು ಹಾಗೂ ಸಣ್ಣ ಅಪರಾಧಗಳಲ್ಲಿ ಭಾಗಿಯಾಗಿದ್ದಕ್ಕೆ ಶಿಕ್ಷೆಗೆ ಗುರಿಯಾದವರನ್ನು ಜೈಲಿನಿಂದ ಬಿಡುಗಡೆ ಮಾಡಲು ಯೋಜನೆಯೊಂದನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಈ ರೀತಿ ಮಾಡುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಇದು ಸ್ವಾಗತಾರ್ಹ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಭಾಗವಾಗಿ ಹಲವು ಕಾರ್ಯಕ್ರಮಗಳನ್ನು ದೇಶದಲ್ಲಿ ಹಮ್ಮಿಕೊಳ್ಳಲಾಗಿದೆ, ಆಚರಿಸಲಾಗುತ್ತಿದೆ.

ಹತ್ತು ವರ್ಷಗಳಿಂದ ಜೈಲಿನಲ್ಲಿ ಇರುವವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು, 14 ವರ್ಷಗಳಿಂದ ಜೈಲಿನಲ್ಲಿ ಇರುವವರಿಗೆ ಕ್ಷಮಾಪಣೆ ನೀಡುವ ಬಗ್ಗೆ ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ.ಎಂ. ಸುಂದರೇಶ್ ಅವರು ಇರುವ ನ್ಯಾಯಪೀಠವು ಹೇಳಿದೆ. ನಿರ್ದಿಷ್ಟವಾಗಿ ಹೇಳುವುದಾದಲ್ಲಿ, ಆರ್ಥಿಕವಾಗಿ ದುರ್ಬಲರಾಗಿರುವ ಕೈದಿಗಳನ್ನು ಬಿಡುಗಡೆಗೆ ಪರಿಗಣಿಸಬೇಕು ಎಂದು ತಿಳಿಸಿದೆ. ಕೈದಿಗಳಿಗೆ ಕ್ಷಮಾಪಣೆ ನೀಡಲು ಏಕರೂಪದ ನೀತಿಯೊಂದನ್ನು ರೂಪಿಸಲು ಕೋರ್ಟ್ ಸಲಹೆ ಮಾಡಿದೆ.

ಪ್ರಕರಣಗಳಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ನ್ಯಾಯಾಂಗಕ್ಕೆ 10 ವರ್ಷಗಳಾದರೂ ಸಾಧ್ಯವಾಗದೇ ಇದ್ದರೆ, ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲಿನಲ್ಲಿ ಇರುವವರು ಜಾಮೀನು ಪಡೆದು ಹೊರಬರಬೇಕು ಎಂಬುದು ಹೊಸ ನಿಲುವು ಅಲ್ಲ. ಆದರೆ ಈ ವಿಚಾರವಾಗಿ ನೀತಿಯೊಂದನ್ನು ರೂಪಿಸಲು ಗಂಭೀರ ಪ್ರಯತ್ನಗಳು ಆಗಿಲ್ಲ.

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುದರ ಸಂಭ್ರಮವನ್ನು ದೇಶವು ಸೋಮವಾರ ಆಚರಿಸಲಿದೆ. ಸ್ವಾತಂತ್ರ್ಯವನ್ನು ಕಳೆದುಕೊಂಡ ವ್ಯಕ್ತಿಗಳು ಅಂದು ಜೈಲಿನಿಂದ ಬಿಡುಗಡೆ ಆದರೆ ಅದು ಸೂಕ್ತ ಕ್ರಮ ಆಗುತ್ತದೆ. ವಿಚಾರಣಾಧೀನ ಕೈದಿಗಳ ಪೈಕಿ ಹಲವರು ತಮ್ಮ ಬದುಕಿನ ಬಹುಮುಖ್ಯ ಅವಧಿಯನ್ನು ಜೈಲಿನಲ್ಲಿ ವ್ಯರ್ಥವಾಗಿ ಕಳೆಯುತ್ತಾರೆ. ನ್ಯಾಯಾಲಯವೇ ಹೇಳಿರುವಂತೆ, ವಿಚಾರಣಾಧೀನ ಕೈದಿಯನ್ನು ಕೊನೆಯಲ್ಲಿ ನಿರಪರಾಧಿ ಎಂದು ಘೋಷಿಸಿದರೂ ಆತನಿಗೆ ಕಳೆದುಹೋದ ಜೀವನ ಮತ್ತೆ ಸಿಗುವುದಿಲ್ಲ. ವಿಚಾರಣಾಧೀನ ಕೈದಿಗಳ ಪೈಕಿ ಹಲವರಿಗೆ ಒಳ್ಳೆಯ ವಕೀಲರನ್ನು ನೇಮಕ ಮಾಡಿಕೊಳ್ಳುವ ಆರ್ಥಿಕ ಶಕ್ತಿ ಇರುವುದಿಲ್ಲ.

ಇನ್ನು ಹಲವರಿಗೆ ಕಾನೂನು ಪ್ರಕ್ರಿಯೆಗಳ ಅರಿವು ಇರುವುದಿಲ್ಲ. ತೀರಾ ಸಣ್ಣ ಅಪರಾಧ ಎಸಗಿದ ಅಥವಾ ಯಾವುದೇ ಅಪರಾಧ ಎಸಗದ ಕೈದಿಗಳು ವಿಚಾರಣೆಯ ಹೆಸರಿನಲ್ಲಿ ಜೈಲಿನಲ್ಲಿ ಇದ್ದಿರಬಹುದು. ಜೈಲು ವಾಸದ ಅವಧಿಯಲ್ಲಿ ಅವರಲ್ಲಿ ಕೆಲವರು ಪಕ್ಕಾ ಕ್ರಿಮಿನಲ್ಗಳಾಗಿ ಬದಲಾಗಿ ಬಿಡಬಹುದು. ನ್ಯಾಯದಾನ ವ್ಯವಸ್ಥೆಗೆ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಆಗದೇ ಇದ್ದರೆ ಅದು ವಿಚಾರಣಾಧೀನ ಕೈದಿಯ ತಪ್ಪು ಆಗುವುದಿಲ್ಲ. ಹೀಗಾಗಿ, ವ್ಯವಸ್ಥೆಯಲ್ಲಿ ಇರುವ ಲೋಪಕ್ಕೆ ಇಂತಹ ಕೈದಿಗಳು ಬೆಲೆ ತೆರುವಂತಹ ಸ್ಥಿತಿ ನಿರ್ಮಾಣ ಆಗಬಾರದು. ನ್ಯಾಯದಾನ ತ್ವರಿತವಾಗಿ ಆಗಬೇಕಾದುದು ಅಗತ್ಯ.

ಕೈದಿಗಳನ್ನು ಸಮಾಜದ ಜೊತೆ ಬೆಸೆಯುವ ಉದ್ದೇಶವನ್ನು ಹೊಂದಿರುವ ಸುಧಾರಣಾವಾದಿ ನ್ಯಾಯವ್ಯವಸ್ಥೆಗೆ ಬದ್ಧತೆ ತೋರಬೇಕಾದ ಅಗತ್ಯವನ್ನು ಕೂಡ ಕೋರ್ಟ್ ಒತ್ತಿಹೇಳಿದೆ. ಜೈಲುಗಳು ವಿಚಾರಣಾಧೀನ ಕೈದಿಗಳಿಂದ ತುಂಬಿರುವ ಸ್ಥಿತಿಯನ್ನು ಹಾಗೂ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿದರೆ ಕೋರ್ಟ್ ನೀಡಿರುವ ಸಲಹೆ ಎಷ್ಟು ಮಹತ್ವದ್ದು ಎಂಬುದು ಗೊತ್ತಾಗುತ್ತದೆ. ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೂ ಹಲವು ಬಾರಿ ಹೇಳಿದೆ. ಜಾಮೀನಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ಕೂಡ ಅದು ರೂಪಿಸಿದೆ.

ವಿಚಾರಣೆ ಎದುರಿಸುತ್ತಿರುವ ಕೈದಿಗಳ ಬಿಡುಗಡೆಯನ್ನು ತ್ವರಿತಗೊಳಿಸಬೇಕಾದ ಅಗತ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಮಾತನಾಡಿದ್ದಾರೆ. ದೇಶದ ಪಾಲಿಗೆ ಮಹತ್ವದ್ದಾಗಿರುವ ಕೆಲವು ಆಚರಣೆಗಳ ಸಂದರ್ಭದಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವ ಪ್ರವೃತ್ತಿಯು ಹಲವು ದೇಶಗಳಲ್ಲಿ ಇದೆ. ಭಾರತ ಕೂಡ ಸೀಮಿತ ನೆಲೆಯಲ್ಲಿ ಈ ಕೆಲಸವನ್ನು ಮಾಡಿದೆ. ಈಗ ಸರ್ಕಾರಗಳು ಸುಪ್ರೀಂ ಕೋರ್ಟ್ನ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು, ತೀರಾ ಸಣ್ಣ ಪ್ರಮಾಣದ ಅಪರಾಧ ಎಸಗಿದವರನ್ನು, ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಬೇಕು. ಸ್ವಾತಂತ್ರ್ಯ ದಿನಕ್ಕೆ ಸೂಕ್ತವಾದ ಮಾನವೀಯ ತೀರ್ಮಾನ ಅದಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.