ಕೇಂದ್ರ ಸರ್ಕಾರದ ನಿರ್ಭಯಾ ನಿಧಿಯ ನೆರವಿನಲ್ಲಿ ಬೆಂಗಳೂರು ನಗರದಾದ್ಯಂತ ಮಹಿಳೆಯರ ಸುರಕ್ಷತೆಗಾಗಿ ₹ 612 ಕೋಟಿ ವೆಚ್ಚದಲ್ಲಿ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸುವ ‘ಸುರಕ್ಷ ನಗರ’ ಯೋಜನೆಯ ಟೆಂಡರ್ ವಿಚಾರವು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿದೆ.

ಯೋಜನೆಯ ಟೆಂಡರ್ ಆಹ್ವಾನ ಸಮಿತಿಯ ಅಧ್ಯಕ್ಷರೂ ಆಗಿರುವ ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ಮತ್ತು ಗೃಹ ಇಲಾಖೆ ಕಾರ್ಯದರ್ಶಿಯಾಗಿರುವ ಮತ್ತೊಬ್ಬ ಐಪಿಎಸ್ ಅಧಿಕಾರಿ ಡಿ. ರೂಪಾ ಈ ವಿಚಾರದಲ್ಲಿ ಬೀದಿ ಜಗಳಕ್ಕೆ ನಿಂತಿದ್ದಾರೆ. ಕೆಲವು ದಿನಗಳಿಂದ ಈಚೆಗೆ ನಿತ್ಯವೂ ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.

‘ಸುರಕ್ಷ ನಗರ’ ಯೋಜನೆಯ ಟೆಂಡರ್‌ನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿರುವ ರೂಪಾ, ಫೇಸ್‌ಬುಕ್, ಟ್ವಿಟರ್ ಮತ್ತಿತರ ಸಾಮಾಜಿಕ ಮಾಧ್ಯಮಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಬಹಿರಂಗ ವೇದಿಕೆಗಳನ್ನೂ ಬಳಸಿಕೊಂಡು ನಿಂಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಯ ಮೂಲಕ ಪ್ರತ್ಯುತ್ತರ ನೀಡಲು ಯತ್ನಿಸಿರುವ ನಿಂಬಾಳ್ಕರ್, ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸಿರುವ ಆರೋಪವನ್ನು ರೂಪಾ ಅವರ ಮೇಲೆ ಹೊರಿಸಿದ್ದಾರೆ.

‘ಗೃಹ ಕಾರ್ಯದರ್ಶಿ’ಯ ಹೆಸರಿನಲ್ಲಿ ಟೆಂಡರ್‌ನ ತಾಂತ್ರಿಕ ವಿಷಯಗಳ ಕುರಿತು ಮಾಹಿತಿ ಪಡೆಯಲು ಯತ್ನಿಸಿದ ಆರೋಪದ ಮೇಲೆ ನಿಂಬಾಳ್ಕರ್ ದೂರು ನೀಡಿದ್ದಾರೆ. ಪ್ರತಿಯಾಗಿ, ಐಎಂಎ ಹಗರಣದಲ್ಲಿ ನಿಂಬಾಳ್ಕರ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿರುವ ವಿಷಯವನ್ನು ರೂಪಾ ಚರ್ಚೆಯ ಮುನ್ನೆಲೆಗೆ ತಂದಿದ್ದಾರೆ. ಇಬ್ಬರೂ ಅಧಿಕಾರಿಗಳ ಜಗಳ ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದು, ಸೇಡು ತೀರಿಸಿಕೊಳ್ಳಲು ಹವಣಿಸುವ ಪುಢಾರಿಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಜನಸಾಮಾನ್ಯರ ವಲಯದಲ್ಲಿ ವ್ಯಾಪಕವಾಗುತ್ತಿದೆ. ಟೆಂಡರ್ ವಿಚಾರದಲ್ಲಿ ಮಾತ್ರವಲ್ಲ, ವೈಯಕ್ತಿಕ ನಡವಳಿಕೆಯ ವಿಚಾರದಲ್ಲೂ ನಾಗರಿಕ ಸೇವಾ ನಿಯಮಾವಳಿಗಳನ್ನು ಮೀರಿ ನಡೆದುಕೊಳ್ಳು ತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಟೆಂಡರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿಂಬಾಳ್ಕರ್ ನೀಡಿದ್ದ ದೂರಿನಲ್ಲಿರುವ ವಿಷಯಗಳ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಆ ಬಳಿಕವೂ ಇಬ್ಬರ ನಡುವೆ ಸಂಘರ್ಷ ನಿಂತಿಲ್ಲ. ಪೊಲೀಸ್ ಇಲಾಖೆಯ ಉನ್ನತ ಸ್ಥಾನದಲ್ಲಿ ಇರುವ ಈ ಅಧಿಕಾರಿಗಳ ನಡುವಿನ ಬೀದಿ ಜಗಳವು ಪೊಲೀಸ್ ಇಲಾಖೆಯ ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಅವರೂ ಇವರನ್ನು ಅನುಕರಿಸಿದರೆ? ಒಬ್ಬರನ್ನೊಬ್ಬರು ಗೌರವಿಸದ, ಘರ್ಷಣೆಗೆ ಇಳಿಯುವ ಪ್ರವೃತ್ತಿ ಪೊಲೀಸ್ ಠಾಣೆಗಳವರೆಗೂ ವ್ಯಾಪಿಸುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ಇಲಾಖೆಯ ಘನತೆ, ಗೌರವವನ್ನು ಕುಗ್ಗಿಸುವ ರೀತಿಯಲ್ಲಿ ವರ್ತಿಸದಂತೆ ಇಬ್ಬರೂ ಅಧಿಕಾರಿಗಳಿಗೆ ಕಡಿವಾಣ ಹಾಕಬೇಕಾದ ತುರ್ತು ಇದೆ. ಅದರ ಜತೆಯಲ್ಲೇ ‘ಸುರಕ್ಷ ನಗರ’ ಟೆಂಡರ್ ಪ್ರಕ್ರಿಯೆಯ ಕುರಿತು ಎದ್ದಿರುವ ಅನುಮಾನಗಳನ್ನೂ ಹೋಗಲಾಡಿಸಬೇಕಾಗಿರುವುದು ರಾಜ್ಯ ಸರ್ಕಾರದ ಜವಾಬ್ದಾರಿ. 2019ರಲ್ಲೇ ಆರಂಭವಾದ ಯೋಜನೆಯಡಿ ಇನ್ನೂ ಟೆಂಡರ್ ಪ್ರಕ್ರಿಯೆಯನ್ನೇ ಪೂರ್ಣಗೊಳಿಸಲು ಆಗಿಲ್ಲ ಎಂಬುದು ಒಪ್ಪತಕ್ಕ ಸಂಗತಿಯಲ್ಲ.

ಇದು ನಗರದ ಭದ್ರತೆಗೆ ಸಂಬಂಧಿಸಿದ ವಿಚಾರ. ಇಂತಹ ಕೆಲಸಗಳಲ್ಲಿ ರಾಜಿ ಸಲ್ಲದು. ಟೆಂಡರ್ ಪ್ರಕ್ರಿಯೆಯಲ್ಲಿ ಯಾರೇ ಹಸ್ತಕ್ಷೇಪ ನಡೆಸಿದ್ದರೆ ಅಥವಾ ಯಾರಿಗಾದರೂ ಅನುಕೂಲ ಮಾಡಿಕೊಡಲು ಯತ್ನಿಸಿದ್ದರೆ ಅಂತಹವರನ್ನು ಪತ್ತೆ ಮಾಡಿ, ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸಬೇಕು. ತ್ವರಿತವಾಗಿ ಮತ್ತು ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಬೇಕು. ಯಾವುದೇ ಹಂತದ ಅಧಿಕಾರಿಗಳಾಗಲೀ ಸಿಬ್ಬಂದಿಯಾಗಲೀ ನಾಗರಿಕ ಸೇವಾ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಲು, ಬೀದಿ ಜಗಳಕ್ಕೆ ಇಳಿದು ಇಲಾಖೆಯ ಘನತೆಯನ್ನು ಕುಗ್ಗಿಸಲು ಅವಕಾಶ ನೀಡುವುದಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸುವ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.