ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ದಾಖಲೆಯ ಪ್ರಮಾಣದಲ್ಲಿ ಆಸ್ತಿ ತೆರಿಗೆ ಸಂಗ್ರಹದತ್ತ ದಾಪುಗಾಲು ಹಾಕಿದೆ. ನಗರದ ಅಭಿವೃದ್ಧಿ ಬಯಸಿದವರ ಪಾಲಿಗೆ ಇದೊಂದು ಸಂತಸದಾಯಕ ಸುದ್ದಿಯೇ ಸರಿ. ಅದೇ ಕಾಲಕ್ಕೆ ಬೇಸರ ಉಂಟುಮಾಡುವ ಸಂಗತಿ ಏನೆಂದರೆ, ಈ ತೆರಿಗೆ ಸಂಗ್ರಹದಲ್ಲಿ ₹ 754 ಕೋಟಿಯಷ್ಟು ಮೊತ್ತವನ್ನು ಒಟ್ಟಾರೆ 61 ಕಿ.ಮೀ. ಉದ್ದದ ರಸ್ತೆಗಳ ವೈಟ್ ಟಾಪಿಂಗ್ಗಾಗಿ ವ್ಯಯಿಸಲು ಬಿಬಿಎಂಪಿಯು ಯೋಜನೆ ರೂಪಿಸಿರುವುದು. ಕಳೆದ ಹಣಕಾಸು ವರ್ಷದಲ್ಲಿ ₹ 3,300 ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿತ್ತು.

ಈ ಹಣಕಾಸು ವರ್ಷದಲ್ಲಿ ₹ 4,600 ಕೋಟಿಯಷ್ಟು ತೆರಿಗೆ ಸಂಗ್ರಹದ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದೆ. ತೆರಿಗೆ ಸಂಗ್ರಹದಲ್ಲಿ ಹಿಂದಿನ ದಾಖಲೆಗಳನ್ನು ಮುರಿದಿರುವ ಬಿಬಿಎಂಪಿಯ ಸಾಧನೆಯು ನಿಸ್ಸಂಶಯವಾಗಿ ಅಭಿನಂದನಾರ್ಹ. ಆದರೆ, ಸಂಗ್ರಹವಾದ ಹೆಚ್ಚುವರಿ ವರಮಾನವನ್ನು ವೈಟ್ ಟಾಪಿಂಗ್ ಯೋಜನೆಗಾಗಿ ಖರ್ಚು ಮಾಡಲು ಹೊರಟಿರುವ ನಡೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಕೆಂದರೆ, ಈ ಯೋಜನೆಯ ಮೂಲಕ ಕಾಂಕ್ರೀಟ್ ಪದರು ಹಾಕಲು ಬಿಬಿಎಂಪಿಯು ಆಯ್ಕೆ ಮಾಡಿಕೊಂಡಿರುವ ಬಹುತೇಕ ರಸ್ತೆಗಳು ಈಗಾಗಲೇ ಸುಸ್ಥಿತಿಯಲ್ಲಿವೆ. ಉದಾಹರಣೆಗೆ, 2.2 ಕಿ.ಮೀ. ಉದ್ದದ ಎಂ.ಜಿ. ರಸ್ತೆಗೆ ₹ 45 ಕೋಟಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಸದ್ಯ ಈ ರಸ್ತೆ ತುಂಬಾ ಸುಸ್ಥಿತಿಯಲ್ಲಿದೆ. ತಕ್ಷಣದಲ್ಲೇ ದುರಸ್ತಿಯ ಅಗತ್ಯವಿರುವ ರಸ್ತೆಗಳು ನಗರದಲ್ಲಿ ನೂರಾರು ಸಂಖ್ಯೆಯಲ್ಲಿವೆ. ನಗರ ಹೊರವಲಯದಲ್ಲಿರುವ ಹಲವು ರಸ್ತೆಗಳಂತೂ ವಾಹನ ಸಂಚರಿಸಲು ಕೂಡ ಯೋಗ್ಯವಾಗಿಲ್ಲ. ಸುಸ್ಥಿತಿಯಲ್ಲಿರುವ ರಸ್ತೆಗಳಿಗಿಂತ ಕೆಟ್ಟ ಸ್ಥಿತಿಯಲ್ಲಿರುವ ರಸ್ತೆಗಳನ್ನೇ ಮೊದಲು ದುರಸ್ತಿಗೊಳಿಸಬೇಕು ಎನ್ನುವುದು ಸಾಮಾನ್ಯ ಜ್ಞಾನ. ಇದೇಕೆ ಬಿಬಿಎಂಪಿ ಆಡಳಿತದ ತಲೆಗೆ ಹೋಗಲಿಲ್ಲ?

ವೈಟ್ ಟಾಪಿಂಗ್ ಯೋಜನೆ ಕುರಿತು ಮತ್ತೊಂದು ಮಹತ್ವದ ಪ್ರಶ್ನೆಯೂ ಇದೆ. 2050ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯ ಪ್ರಮಾಣಕ್ಕೆ ಇಳಿಸುವ ಮಹತ್ವಾಕಾಂಕ್ಷಿ ಉದ್ದೇಶದಿಂದ ಬಿಬಿಎಂಪಿಯು ‘ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ’ಯನ್ನು (ಬಿಕ್ಯಾಪ್) ರೂಪಿಸಿದೆ. ಕಾಂಕ್ರೀಟ್ ಪದರಿನ ರಸ್ತೆಗಳು ಆ ಯೋಜನೆಗೆ ಅನುಗುಣವಾಗಿರುವವೇ ಎನ್ನುವುದು ಆ ಪ್ರಶ್ನೆ. ಯೋಜನೆಯ ಭಾಗವಾಗಿ, ಬಿಬಿಎಂಪಿಯು ಹವಾಮಾನ ಕ್ರಿಯಾ ಘಟಕವನ್ನು ಸ್ಥಾಪಿಸಿದೆ. ಬೆಂಗಳೂರಿನ ನೈಸರ್ಗಿಕ ಮೂಲ ಸೌಕರ್ಯಗಳನ್ನು ಕಾಪಾಡುವ, ಮರುಸ್ಥಾಪಿಸುವ, ಸುಸ್ಥಿತಿಯಲ್ಲಿಡುವ ವಿಷಯದಲ್ಲಿ ಸಮುದಾಯ ಸಹಭಾಗಿತ್ವದ ಅಗತ್ಯವನ್ನೂ ಸ್ಥಳೀಯ ಆಡಳಿತ ಪ್ರತಿಪಾದಿಸಿದೆ. ಹೀಗಿದ್ದೂ ವೈಟ್ ಟಾಪಿಂಗ್ ರಸ್ತೆಗಳು ಮತ್ತು ಅವು ಹವಾಮಾನ ಬದಲಾವಣೆಯ ಮೇಲೆ ಬೀರುವ ಪರಿಣಾಮದ ಕುರಿತು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಂದ ಅಭಿಪ್ರಾಯ ಪಡೆಯಲು ಯಾವುದೇ ಪ್ರಯತ್ನವೂ ನಡೆದಿಲ್ಲ.

ಕಾಂಕ್ರೀಟ್ ಹಾಕಿದ ರಸ್ತೆ 20 ವರ್ಷಗಳಿಂದ 45 ವರ್ಷಗಳವರೆಗೆ ಬಾಳಿಕೆ ಬರಲಿದೆ ಎಂಬುದು ಸರ್ಕಾರದ ವಾದ. ಒಂದು ಕಿ.ಮೀ. ವೈಟ್ ಟಾಪಿಂಗ್ಗೆ ಸರಾಸರಿ ₹ 9 ಕೋಟಿಯಿಂದ ₹ 10 ಕೋಟಿವರೆಗೆ ವೆಚ್ಚ ಭರಿಸಬೇಕಾಗುತ್ತದೆ. ಅಷ್ಟೇ ಉದ್ದದ ರಸ್ತೆಗೆ ಟಾರು ಹಾಕಿದರೆ ₹ 70 ಲಕ್ಷದಿಂದ ₹ 1 ಕೋಟಿವರೆಗೆ ಖರ್ಚು ಬರಲಿದೆ. ಜಗತ್ತಿನ ಅತಿಯಾದ ಸಂಚಾರ ದಟ್ಟಣೆ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. 61 ಕಿ.ಮೀ. ಉದ್ದದ ರಸ್ತೆಗಳಿಗೆ ಕಾಂಕ್ರೀಟ್ ಪದರ ಹಾಕುವ ಕಾಮಗಾರಿ ಶುರುವಾದ ಮೇಲೆ ಇಲ್ಲಿಯ ದಟ್ಟಣೆ ಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸುವುದು ಕಷ್ಟವಲ್ಲ.

ಕೆಲವು ಕಾರಣಗಳಿಗಾಗಿ, ರಸ್ತೆಗಳ ನಿರ್ಮಾಣವೊಂದೇ ತನ್ನ ಆದ್ಯ ಕರ್ತವ್ಯ ಎಂದು ಬಿಬಿಎಂಪಿಯು ಬಲವಾಗಿ ನಂಬಿದೆ. ಶಾಲೆಗಳನ್ನು ತೆರೆಯುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು, ಕಸಮುಕ್ತ ವಾತಾವರಣ ನಿರ್ಮಿಸುವುದು- ಯಾವುವೂ ತನ್ನ ಕೆಲಸಗಳಲ್ಲ, ಅವು ತಮ್ಮಷ್ಟಕ್ಕೆ ತಾವೇ ಆಗುವಂಥವು ಎಂದೂ ಪರಿಭಾವಿಸಿದೆ. ದೊಡ್ಡ ಪ್ರಮಾಣದ ಕಿಕ್ಬ್ಯಾಕ್ ಸಿಗುವುದರಿಂದಲೇ ಪಕ್ಷಾತೀತವಾಗಿ ಬಹುತೇಕ ರಾಜಕಾರಣಿಗಳು ಹಾಗೂ ಅಧಿಕಾರಿಗಳು ವೈಟ್ ಟಾಪಿಂಗ್ ಯೋಜನೆ ಅನುಷ್ಠಾನಕ್ಕಾಗಿ ಹಾತೊರೆಯುತ್ತಿರುವುದು ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಈ ಭಾವನೆ ಬಲಗೊಳ್ಳಲು ಅವಕಾಶ ನೀಡದೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿಯ ಹೆಚ್ಚುವರಿ ವರಮಾನದ ಪ್ರಯೋಜನ ಜನರಿಗೆ ತೀರಾ ಅಗತ್ಯವಾದ ಇತರ ಉದ್ದೇಶಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ದುಡ್ಡು ಪೋಲಾಗುವುದನ್ನೂ ತಪ್ಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.