ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ‘ಸಂವಿಧಾನ ತಿದ್ದುಪಡಿ’ಗೆ (124ನೇ ಕಲಂ) ಮುಂದಾಗಿರುವ ಕೇಂದ್ರ ಸರ್ಕಾರದ ನಡೆ, ‘ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧ. ಅಷ್ಟೇ ಅಲ್ಲ, ಸಾಂವಿಧಾನಿಕ ಮೀಸಲಾತಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಪ್ರಯತ್ನ’ ಎನ್ನುತ್ತಾರೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

* ಮೀಸಲಾತಿಗೆ ಆರ್ಥಿಕ ಹಿಂದುಳಿಯುವಿಕೆ ಅಳತೆಗೋಲು ಅಲ್ಲವೇ?
ಸಂವಿಧಾನದಡಿ ಮೀಸಲಾತಿ ಅವಕಾಶವಿದ್ದರೂ ಮಾನದಂಡಗಳು ಒಂದೇ ಥರ ಇರಬೇಕು. ಎಸ್.ಸಿ, ಎಸ್.ಟಿ, ಇತರ ಹಿಂದುಳಿದ ವರ್ಗಗಳಿಗೆ ಮೀಸಲು ಕಲ್ಪಿಸಲು ಸಾಮಾಜಿಕ, ಶೈಕ್ಷಣಿಕ ಹಿಂದುಳಿಯುವಿಕೆ ಅಳತೆಗೋಲು. ಮೇಲ್ವರ್ಗದವರಿಗೆ ಶೇ 10 ಮೀಸಲು ನೀಡುವ ಕೇಂದ್ರದ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ. ಮೀಸಲು ನಿಗದಿಗೆ ವೈಜ್ಞಾನಿಕ ಅಂಕಿಅಂಶ ಅಗತ್ಯ. ಆ ನಿಟ್ಟಿನಲ್ಲಿ ಸಮೀಕ್ಷೆ ನಡೆದಿಲ್ಲ. ಹೀಗಿರುವಾಗ, ಈ ತೀರ್ಮಾನಕ್ಕೆ ಬರುವುದು ಎಷ್ಟು ಸರಿ?

* ಆರ್ಥಿಕ ಹಿಂದುಳಿಯುವಿಕೆಯನ್ನು ಮಾನದಂಡವಾಗಿ ಪರಿಗಣಿಸಬಾರದು ಎಂದರ್ಥವೇ?
ಸಂವಿಧಾನದ ಮೂಲ ಆಶಯದ ಬಗ್ಗೆ ಕೇಶವಾನಂದಭಾರತಿ ಪ್ರಕರಣದಲ್ಲಿ (1973) ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅದನ್ನು ಬದಲಿಸುವ ಅವಕಾಶ ಸಂಸತ್ತಿಗೂ ಇಲ್ಲ. ಮೂಲ ಆಶಯವೇ ಸಂವಿಧಾನಕ್ಕೆ ಬುನಾದಿ. ಹಿಂದುಳಿದಿರುವಿಕೆಯನ್ನು ಸಾಮಾಜಿಕ, ಶೈಕ್ಷಣಿಕ ನೆಲೆಯಲ್ಲಿ ಗುರುತಿಸಬೇಕೆಂಬ ಆಶಯ ಸಂವಿಧಾನದ್ದು. ಸಾಮಾಜಿಕ ಹಿಂದುಳಿದಿರುವಿಕೆ ಗುರುತಿಸುವಾಗಲೇ ಆರ್ಥಿಕ ಹಿಂದುಳಿಯುವಿಕೆ ಪರಿಗಣಿತವಾಗುತ್ತದೆ. ಜಾತಿ, ಬಡತನ, ಪ್ರಾತಿನಿಧ್ಯ, ಸಾಮಾಜಿಕ ಸ್ಥಿತಿಗತಿ ಎಲ್ಲ ಅಂಶಗಳು ಪರಿಗಣನೆಗೆ ಬರುತ್ತವೆ. ಕೇವಲ ಜಾತಿಯೊಂದನ್ನೇ ಆಧರಿಸಿ ಮೀಸಲಾತಿ ಬಂದಿಲ್ಲ. ಸಂವಿಧಾನದ ಮೂಲ ಆಶಯವನ್ನೇ ಪರಿಷ್ಕರಿಸಲು ಮುಂದಾಗಿರುವ ಕೇಂದ್ರದ ನಿಲುವು ಸಮರ್ಥನೀಯವಲ್ಲ.

* ಪರಿಶಿಷ್ಟ ಸಮುದಾಯ, ಇತರ ಹಿಂದುಳಿದ ವರ್ಗಕ್ಕೆ ಶೇ 50 ಮೀಸಲು ಕಡಿಮೆ ಅನಿಸುತ್ತಿದೆಯೇ?
ಎಸ್.ಸಿ. ಎಸ್.ಟಿ, ಇತರ ಹಿಂದುಳಿದ ವರ್ಗಕ್ಕೆ ಶೇ 50ರಷ್ಟು ಮೀಸಲು ನಿಗದಿಪಡಿಸುವ ಸಂದರ್ಭದಲ್ಲಿ ಅವಶ್ಯ ಇಲ್ಲ ಎಂಬ ಕಾರಣಕ್ಕೆ ಮೇಲ್ಜಾತಿಯನ್ನು ಹೊರಗಡೆ ಇಡಲಾಗಿತ್ತು. ಅಂಥವರನ್ನು ಈಗ ಮೀಸಲಾತಿ ಒಳಗಡೆ ತರುವ ಮೊದಲು ಅಧ್ಯಯನ ನಡೆಸಬೇಕಿತ್ತು. ಪರಿಶಿಷ್ಟ ಸಮುದಾಯ, ಇತರ ಹಿಂದುಳಿದ ವರ್ಗದ ಶೇ 50 ಮೀಸಲು ಪ್ರಮಾಣ ಹೆಚ್ಚಿಸಬೇಕೇ ಅಥವಾ ಕಡಿಮೆ ಮಾಡಬೇಕೇ ಎಂಬ ಬಗ್ಗೆಯೂ ನಿರ್ಣಯಕ್ಕೆ ಬರುವ ಅಗತ್ಯವಿದೆ.

* ಸಂಸತ್ತಿನ ನಡೆಯೇ ಪ್ರಶ್ನಾರ್ಹವೇ?
ಇಷ್ಟಬಂದಂತೆ ಸಂವಿಧಾನ ತಿದ್ದುಪಡಿಗೆ ಕಾನೂನು ಮಾಡಲು ಸಂಸತ್ತಿಗೆ ಅವಕಾಶ ಇಲ್ಲ. ಈ ಕೆಲಸಕ್ಕೆ ಕೈಹಾಕುವ ಮೊದಲು ಅಧ್ಯಯನ ಅಗತ್ಯ. ಸಂವಿಧಾನದ ಕಲಂ 15 ಮತ್ತು 16 ಅನ್ನೇ ಮರೆತು ಆರ್ಥಿಕ ಮಾನದಂಡದಡಿ ಮೀಸಲು ನೀಡುವುದು ಕೇಂದ್ರದ ಬಯಕೆ. ಸಂವಿಧಾನದ ಕಲಂ 340ರ ಪ್ರಕಾರ ಆರ್ಥಿಕ ಸ್ಥಿತಿಗತಿ ಪರಿಗಣಿಸಿ ಮೀಸಲು ನೀಡಲು ಅವಕಾಶವಿಲ್ಲ ಎಂದ ಮೇಲೆ ಸಂಸತ್ತಿನ ನಡೆ ಪ್ರಶ್ನಾರ್ಹವಲ್ಲವೇ?

* ಇಷ್ಟೊಂದು ಗಂಭೀರ ವಿಷಯ ಚರ್ಚೆಯೇ ಆಗಿಲ್ಲ...
ತಿದ್ದುಪಡಿ ಮಸೂದೆ ಎರಡೂ ಸದನಗಳಲ್ಲಿ ಗಂಭೀರ ಚರ್ಚೆಗೆ ಒಳಪಡಲೇ ಇಲ್ಲ. ಅಷ್ಟೇ ಅಲ್ಲ, ತರಾತುರಿಯಲ್ಲಿ ಅಂಗೀಕಾರಗೊಂಡಿರುವುದು ವಿಷಾದನೀಯ. ಪ್ರತಿಷ್ಠೆ, ಮತಗೋಸ್ಕರ ಇಂಥ ಕೆಲಸವನ್ನು ಯಾರೇ ಮಾಡಿದರೂ ಸಂವಿಧಾನದ ತತ್ವಗಳಿಗೆ ವಿರುದ್ಧ.

* ಕೇಂದ್ರದ ಈ ನಿಲುವು ಮತ್ತೆ ಕೋರ್ಟ್ ಮೆಟ್ಟಿಲೇರಿದರೆ?
ಆರ್ಥಿಕ ಹಿಂದುಳಿಯುವಿಕೆ ಮಾನದಂಡದಲ್ಲಿ ಮೀಸಲಾತಿ ಅಸಂವಿಧಾನಿಕ ಎಂದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಈ ತೀರ್ಪು ಮರು ಪರಿಶೀಲಿಸುವಂತೆ ಕೋರ್ಟ್ಗೆ ಕೇಂದ್ರ ಮನವಿ ಮಾಡಬೇಕಿತ್ತು. ಅದರ ಬದಲು, ಸಂವಿಧಾನ ತಿದ್ದುಪಡಿಗೆ ಮುಂದಾದರೆ, ಕೇಶವಾನಂದಭಾರತಿ ಪ್ರಕರಣದ ತೀರ್ಪು ಮುನ್ನಲೆಗೆ ಬರುವುದರಲ್ಲಿ ಸಂದೇಹವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.