ಮಹಾರಾಷ್ಟ್ರದ ಲೋಣಾವಳದ ಜಲಪಾತದ ಬಳಿ ಈಚೆಗೆ ಒಂದೇ ಕುಟುಂಬದ ಐವರು ಕೊಚ್ಚಿಕೊಂಡು ಹೋದ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಷ್ಟು ಕರುಣಾಜನಕವಾಗಿತ್ತು. ಇಹಲೋಕ ಯಾತ್ರೆಯ ಕಟ್ಟ ಕಡೆಯ ದೃಶ್ಯವನ್ನೂ ನಿರ್ವಿಕಾರ ಭಾವದಿಂದ ಮೊಬೈಲ್ ಕ್ಯಾಮೆರಾ ಮೂಲಕ ಸೆರೆಹಿಡಿದು ಜಾಲತಾಣಗಳಲ್ಲಿ ಹರಿಯಬಿಟ್ಟ ಜೊತೆಗಾರರ ಏಕಾಗ್ರತೆಯ ಬಗೆಗೆ ಏನೂ ಹೇಳುವಂತಿಲ್ಲ! ಆದರೆ ಪ್ರತಿವರ್ಷ ಮಳೆಗಾಲದುದ್ದಕ್ಕೂ ಒಂದಲ್ಲ ಒಂದು ಕಡೆ ಸಂಭವಿಸುವ ಇಂತಹ ದುರಂತಗಳು ಮರುಕಳಿಸಬೇಕೆ? ಯಾರದೋ ಕುಟುಂಬವನ್ನು ನಿರಂತರ ಶೋಕದ ದಳ್ಳುರಿಗೆ ದೂಡಬೇಕೇ?

ಪ್ರವಾಸಿಗರು ಭೇಟಿ ನೀಡುವ ಇಂತಹ ತಾಣಗಳಲ್ಲಿ, ನೀರಿನ ವೇಗದ ಅರಿವಿಲ್ಲದೆ ಜಲಪಾತಗಳ ಬಳಿಗೆ ಹೋಗಿ ಸಾವು ತಂದುಕೊಳ್ಳುತ್ತಿರುವಲ್ಲಿ ತಪ್ಪು ಪ್ರವಾಸಿಗರದ್ದೂ ಇದೆ, ಪ್ರವಾಸಿ ತಾಣಗಳನ್ನು ನಿರ್ವಹಿಸುವ ಹೊಣೆ ಹೊತ್ತವರದ್ದೂ ಇದೆ ಎಂಬುದು ನಿಜ. ಅಜಾಗರೂಕರಾಗಿರುವ ಪ್ರವಾಸಿಗರದು ದುರಂತದಲ್ಲಿ ಸಿಂಹಪಾಲು. ಅಲ್ಲಿ ಮುಂಜಾಗರೂಕತೆಗೆ ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತದ್ದೂ ಪಾತ್ರ ಇರುತ್ತದೆ. ಪಟ್ಟಣಗಳ ಬಿರು ಬೇಸಿಗೆಯ ಕಾವನ್ನು ಅನುಭವಿಸಿರುವ ಜನರಿಗೆ ನೀರು ಧುಮ್ಮಿಕ್ಕುವ ಹಿತಕರ ನೋಟ ಕಣ್ಣುಗಳಿಗೆ ಹಬ್ಬವಾಗಬಹುದು. ಇನ್ನಷ್ಟು ಹತ್ತಿರದಿಂದ ಕಾರ್ಗಾಲದ ವೈಭವವನ್ನು ಕಂಡು ಮನ ತಣಿಸಿಕೊಳ್ಳುವ ಕಾತರವೂ ದಟ್ಟವಾಗಿರಬಹುದು.

ಸರ್ಕಾರವು ಕಡಲ ತಡಿಗಳಲ್ಲಿ ಪ್ರವಾಸಿಗರ ರಕ್ಷಣೆಯನ್ನೇ ಧ್ಯೇಯವಾಗಿರಿಸಿಕೊಂಡು ಮುಳುಗು ತಜ್ಞರ ತಂಡವನ್ನು ಸನ್ನದ್ಧ ಸ್ಥಿತಿಯಲ್ಲಿರಿಸುತ್ತದೆ. ಅಲೆಗಳ ಹೊಡೆತಕ್ಕೆ ಸಿಲುಕಿ ನೀರುಪಾಲಾದವರನ್ನು ರಕ್ಷಿಸಲು ಅವರು ಶಕ್ತಿಮೀರಿ ಶ್ರಮಿಸುತ್ತಾರೆ. ವಾಯುಭಾರದ ಒತ್ತಡವಿರುವ ಸಮಯವಾಗಿದ್ದರೆ ಕಡಲಿನ ಸಮೀಪ ಹೋಗದಂತೆ ತಡೆಯುತ್ತಾರೆ.

ಜಲಪಾತದಂತಹ ಪ್ರವಾಸಿ ಕೇಂದ್ರಗಳಲ್ಲಿ ಕೂಡ ಪ್ರವಾಸಿಗರಿಗೆ ಬೆಂಗಾವಲಾಗಿ ಸಂರಕ್ಷಕ ಪಡೆಯನ್ನು ಸ್ಥಳೀಯ ಆಡಳಿತ ವ್ಯವಸ್ಥೆಗೊಳಿಸಿದ್ದರೆ ಎಷ್ಟೋ ದುರಂತಗಳನ್ನು ತಡೆಯಬಹುದು. ಇವರಿಗೆ ಕೊಡುವ ವೇತನವನ್ನು ಪ್ರವಾಸಿಗರಿಂದ ಪ್ರವೇಶ ಶುಲ್ಕದ ಹೆಸರಿನಲ್ಲಿ ಪಡೆಯಬಹುದು. ಲೋಣಾವಳದಲ್ಲಿ ದುರಂತ ಇದ್ದಕ್ಕಿದ್ದಂತೆ ಸಂಭವಿಸಿದ್ದಲ್ಲ. ಜೊತೆಗಾರರು ಅವರ ರಕ್ಷಣೆಗಾಗಿ ಕಾಡು ಬಳ್ಳಿಗಳನ್ನು ಕಿತ್ತು ತಂದು ಅವರತ್ತ ಎಸೆಯಲು ಪ್ರಯತ್ನಿಸಿದ್ದಾರೆ. ಅಲ್ಲಿದ್ದ ಯಾರಾದರೂ ಒಬ್ಬರು ಆ ಭೀಕರ ಪರಿಸ್ಥಿತಿಯಲ್ಲಿ ಅಗ್ನಿಶಾಮಕ ದಳದವರಿಗೋ ಪೊಲೀಸರಿಗೋ ಕರೆ ಮಾಡಿರಬಹುದು. ಆದರೆ ಸಾವಿನ ದವಡೆಯಿಂದ ಈ ನತದೃಷ್ಟರನ್ನು ಪಾರು ಮಾಡಲು ಯಾರಿಗೂ ಆಗಲಿಲ್ಲ.

ಎಲ್ಲಿ ಜೀವಕ್ಕೆ ಅಪಾಯವಿದೆಯೋ ಅಲ್ಲಿ ತಡೆಬೇಲಿಗಳನ್ನು ನಿರ್ಮಿಸಬೇಕಿತ್ತು. ಸಂರಕ್ಷಣಾ ವೀಕ್ಷಕರನ್ನು ನೇಮಿಸಬೇಕಿತ್ತು. ಸ್ಥಳೀಯ ಆಡಳಿತದ ಬೇಜವಾಬ್ದಾರಿತನ ಅನೇಕರ ಜೀವಗಳಿಗೆ ಬೆಲೆಯಿಲ್ಲದಂತೆ ಮಾಡಿದೆ. ವರ್ಷಗಳ ಹಿಂದೆ ಜಮಾಲಾಬಾದ್ ಕೋಟೆ ನೋಡಲು ಮೇಲಕ್ಕೇರಿದ ವಿದ್ಯಾರ್ಥಿಯೊಬ್ಬ ಕೆಳಗುರುಳಿದ್ದ ವಿಷಯ ಹಲವು ದಿನಗಳವರೆಗೂ ಗೊತ್ತಾಗಿರಲಿಲ್ಲ. ಬೆಟ್ಟದ ಬುಡದ ಪೊದೆಯೊಳಗೆ ಅವನು ಆಹಾರ, ನೀರಿಲ್ಲದೆ ಜೀವ ಉಳಿಸಿಕೊಂಡಿದ್ದುದೇ ವಿಸ್ಮಯವಾಗಿತ್ತು.

ಚಾರ್ಮಾಡಿ ಘಾಟಿಯಂತಹ ಅಪಾಯಕಾರಿ ರಸ್ತೆಗಳಲ್ಲಿ ಅಂಚಿಗೆ ಹೋಗಿ ಸೆಲ್ಫಿ ತೆಗೆದುಕೊಳ್ಳುವ ಪ್ರವಾಸಿಗರಿದ್ದಾರೆ. ನಿಸರ್ಗದ ಸುಖವನ್ನು ಅನುಭವಿಸುವ ಉತ್ಸಾಹ ಕೆಲವೊಮ್ಮೆ ಅಪಾಯಕಾರಿ ಆಗುತ್ತದೆ. ಇಲ್ಲಿ ಅಪಾಯ ಸಂಭವಿಸಿದರೆ ಕೂಡಲೇ ರಕ್ಷಣೆಗೆ ಧಾವಿಸುವ ಪಡೆಗಳಿಲ್ಲ. ಮೊಬೈಲ್ ಫೋನ್ಗೆ ಇಲ್ಲಿ ಸಂಪರ್ಕ ಸಿಗುವುದಿಲ್ಲ. ಮಳೆಗಾಲದಲ್ಲಿ ಅಪಾಯ ಸಂಭವಿಸಿದಾಗ ಜೀವ ರಕ್ಷಣೆಗೆ ತ್ವರಿತ ನೆರವು ಸಿಗುವ ವ್ಯವಸ್ಥೆಯಾದರೂ ಜಾಗೃತ ಸ್ಥಿತಿಯಲ್ಲಿದ್ದರೆ ಒಳ್ಳೆಯದು.

ಇಷ್ಟೆಲ್ಲ ಸಾವು– ನೋವು ತುಂಬಿದ ಸುದ್ದಿಗಳು ಪ್ರತಿದಿನ ಎಂಬಂತೆ ವರದಿಯಾಗುತ್ತಲೇ ಇದ್ದರೂ ಪ್ರವಾಸ ಮಾಡುವವರಿಗೆ ಅವು ಎಚ್ಚರಿಕೆಯ ಗಂಟೆಯಾಗುವುದಿಲ್ಲ ಎಂಬುದೇ ಸೋಜಿಗ. ಆಡಳಿತ ವ್ಯವಸ್ಥೆ ಜಡ್ಡುಗಟ್ಟಿರುವುದೂ ಇಂತಹ ದುರಂತಗಳು ಸಂಭವಿಸುವುದಕ್ಕೆ ಕಾರಣ. ಅಪಾಯಕಾರಿ ಸ್ಥಳಗಳಲ್ಲಿ ‘ಇಲ್ಲಿಂದ ಮುಂದೆ ಕಾಲಿಡಬಾರದು’ ಎಂಬ ಫಲಕವಾದರೂ ಇರಲಿ. ಅದರಾಚೆ ದಾಟಿದವರಿಗೆ ನಿರ್ದಯವಾಗಿ ದಂಡ ವಿಧಿಸಲು ಒಬ್ಬ ಸಿಬ್ಬಂದಿಯನ್ನು ನೇಮಿಸಲಿ. ಪ್ರವಾಸಿಗರು ದುರದೃಷ್ಟವಶಾತ್ ಸಾವಿನ ದವಡೆಗೆ ಸಿಲುಕಿದರೆ ತ್ವರಿತವಾಗಿ ರಕ್ಷಣೆಗೆ ಧಾವಿಸಲು ಬೇಕಾದ ವ್ಯವಸ್ಥೆ ಕೈಗೊಳ್ಳುವುದೂ ಇದೇ ಸಿಬ್ಬಂದಿಯ ಹೊಣೆಯಾಗಲಿ.

ವರ್ಷಗಳ ಹಿಂದೆ ಕೊಡಗಿನ ತಲಕಾವೇರಿಯಲ್ಲಿ ಬೆಟ್ಟವೇ ಕುಸಿದು ದಂಪತಿ ಸಮಾಧಿಯಾದರು. ಆದರೆ ಈ ಪ್ರದೇಶದ ಕಾಡುಗಳಲ್ಲಿದ್ದ ಆನೆಗಳು ದಿನಗಳ ಮೊದಲೇ, ರಾತ್ರಿ ಹೊತ್ತಿನಲ್ಲಿ ಜತೆಗೂಡಿ ಓಡುತ್ತ ಹಾಸನದ ಕಡೆಯ ಕಾಡುಗಳನ್ನು ಸೇರಿಕೊಂಡವಂತೆ. ಪ್ರಾಕೃತಿಕ ವಿಕೋಪ ಸಂಭವಿಸುವ ಮುನ್ಸೂಚನೆ ಅದೆಷ್ಟೋ ಪ್ರಾಣಿಗಳಿಗೆ ಬಹು ಮೊದಲೇ ತಿಳಿಯುತ್ತದೆಂಬ ಸತ್ಯಕ್ಕೆ ಈ ಘಟನೆ ಉದಾಹರಣೆ. ಆದರೆ ಮನುಷ್ಯ ಬುದ್ಧಿವಂತನೆನಿಸಿಕೊಂಡು ಮೇರೆ ಮೀರಿದರೆ ನೀರು ಮತ್ತು ಬೆಂಕಿಯಿಂದ ಪಾರಾಗಲು ಸಾಧ್ಯವಿಲ್ಲ ಎಂಬ ಅರಿವಿದ್ದರೂ ಪ್ರವಾಸದ ಮೋಜಿನ ಹುರುಪಿನಲ್ಲಿ ಜೀವ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.

ನಿಸರ್ಗದ ಸುಖಕರ ತಾಣಗಳು ಜೀವಹರಣದ ತಾಣಗಳಾಗದಂತೆ ವ್ಯವಸ್ಥೆಯೊಂದು ಬಹಳ ಜರೂರಾಗಿ ರೂಪುಗೊಳ್ಳಲೇಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.