ಕೊರೊನಾ ಸೋಂಕು ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ಮಾಧ್ಯಮ ಜಗತ್ತಿನಲ್ಲಿ ಯಾರು ಒಳ್ಳೆಯವರು, ಯಾರು ನಂಬಿಕಸ್ತರು ಎಂಬುದು ಈ ಕಷ್ಟಕಾಲದಲ್ಲಿಯೇ ಸಾಬೀತಾಗಿದ್ದು ವಿಚಿತ್ರವಾದರೂ ಸತ್ಯ!

ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಭಿನ್ನವಾಗಿ ಆಧುನಿಕ ಕಾಲದಲ್ಲಿ ಹೆಚ್ಚು ಜನರ ಧ್ವನಿಯಾಗಬಲ್ಲ ಮಾಧ್ಯಮವೆಂದು ಬಿಂಬಿಸಿಕೊಂಡ ವಾಟ್ಸ್ಆ್ಯಪ್ ಎಂಬ ‘ಭಯಂಕರ’ ಮಾಧ್ಯಮದ ಬೇಜವಾಬ್ದಾರಿ ರೂಪವು ಜಗತ್ತಿನೆದುರು ಅನಾವರಣಗೊಂಡಿದ್ದು, ಕೊರೊನಾ ಸಂಕಷ್ಟ ಸಂದರ್ಭದ ದೊಡ್ಡ ಜ್ಞಾನೋದಯ.

ಸಾಂಪ್ರದಾಯಿಕ ಜನಪ್ರಿಯ ಮಾಧ್ಯಮಗಳಾದ ಪತ್ರಿಕೆ, ರೇಡಿಯೊ, ಟಿ.ವಿ ಕೂಡಾ ಈ ವಾಟ್ಸ್ಆ್ಯಪಿನ ಅಬ್ಬರದೆದುರು ಸೊರಗಿದಂತೆ ಕಾಣತೊಡಗಿದ್ದವು. ಮುಖ್ಯವಾಗಿ, ಪತ್ರಿಕೆಗಳ ಹೆಗ್ಗಳಿಕೆ ಇದ್ದುದು ಅದಕ್ಕೆ ಗೇಟ್ಕೀಪರ್ಗಳಿದ್ದು, ತಪ್ಪುಗಳು ನುಸುಳದಂತೆ ಎಚ್ಚರಿಕೆ ವಹಿಸುತ್ತಿದ್ದರು ಎಂಬ ಕಾರಣಕ್ಕೆ. ಪ್ರತಿಯೊಂದು ಸುದ್ದಿಯೂ ಪ್ರಕಟಗೊಳ್ಳುವ ಮೊದಲು ಕನಿಷ್ಠ ಮೂರು ಜನರಿಂದ ಪರೀಕ್ಷಿಸಲ್ಪಡುತ್ತಿತ್ತು. ಜಗತ್ತಿನಲ್ಲಿ ನೇರ ಪ್ರಸಾರದ ದಿನಗಳು ಬಂದಾಗ, ಯಾರ ಅಡೆತಡೆ ಇಲ್ಲದೇ ಕೆಲವು ವಿಷಯಗಳು ನೇರ ಪ್ರಸಾರಗೊಳ್ಳಬಹುದು ಎಂಬುದು ಸಾಬೀತಾಯಿತು.

ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗನಡೆದ ಒಂದು ನೇರ ಪ್ರಸಾರದ ಕಾರ್ಯಕ್ರಮದಲ್ಲಿ, ಅದೂ ಸರ್ಕಾರಿ ಸ್ವಾಮ್ಯದ ಆಕಾಶವಾಣಿಯಲ್ಲಿ ಚಿಕ್ಕ ಮಗುವೊಂದು ‘ರಾಜೀವ್ ಗಾಂಧಿ ಚೋರ್ ಹೈ’ ಎಂದು ಅವರೆದುರೇ ಹೇಳಿದ್ದು, ಭಾರಿ ತರಂಗಗಳನ್ನು ಏಳಿಸಿತ್ತು, ಮಾತ್ರವಲ್ಲ, ಸಂಬಂಧಿಸಿದ ಆಧಿಕಾರಿಯ ತಲೆದಂಡಕ್ಕೂ ಕಾರಣವಾಗಿತ್ತು. ಇದು, ಯಾವುದೇ ನಿರ್ಬಂಧಗಳಿಲ್ಲದೇ ನೇರ ಪ್ರಸಾರವಾಗುವಕಾರ್ಯಕ್ರಮಗಳು ತಂದೊಡ್ಡಬಹುದಾದ ಸಮಸ್ಯೆಗಳನ್ನೂ ಎತ್ತಿ ತೋರಿಸಿತು.

ಮುಂದೆ ಟಿ.ವಿ.ಯಲ್ಲಿ 24x7 ಕಾರ್ಯಕ್ರಮಗಳ ಯುಗ ಆರಂಭಗೊಂಡು, ಬ್ರೇಕಿಂಗ್ ನ್ಯೂಸ್ಗಳು ಸಾಕಷ್ಟು ದೂಳೆಬ್ಬಿಸತೊಡಗಿದವು. ಇವುಗಳಿಗೆ ಯಾವುದೇ ಪ್ರಕಟಪೂರ್ವ ಪರಿಶೀಲನೆಯಿಲ್ಲ. ಹೀಗಾಗಿ ಹಸಿ ಹಸಿ ಸುಳ್ಳುಗಳು, ತಪ್ಪು ಮಾಹಿತಿಗಳು ಸುದ್ದಿಯಾಗಿ ನುಸುಳತೊಡಗಿದವು. ಸುದ್ದಿಯನ್ನು ಮೊದಲಿಗೆ ಕೊಡುವ ಧಾವಂತದಲ್ಲಿ ಈಗಲೂ ಕೆಲವು ವಾಹಿನಿಗಳು ಭಾಷೆಯನ್ನು ಕೊಲೆ ಮಾಡುವ, ಸುಳ್ಳುಕಥೆ ಹೆಣೆಯುವ ಅನೇಕ ಸಂದರ್ಭಗಳನ್ನು ನೋಡುತ್ತೇವೆ.

ಆದರೂ ಇತ್ತೀಚಿನವರೆಗೆ ಮಾಧ್ಯಮಗಳು ನೀಡಿದ್ದನ್ನು ಜನ ನಂಬುತ್ತಿದ್ದರು, ಗೌರವಿಸುತ್ತಿದ್ದರು.ಮಾಧ್ಯಮಗಳಲ್ಲಿ, ಅದರಲ್ಲೂ ಪತ್ರಿಕೆಗಳಲ್ಲಿ ಬಂದ ಸುದ್ದಿ ಸತ್ಯವೆಂಬ ನಂಬುಗೆಯಿತ್ತು. ಸಾಮಾಜಿಕ ಮಾಧ್ಯಮಗಳ ಕಾಲವು ಇದನ್ನು ಬುಡಮೇಲು ಮಾಡಿತು. ಸುದ್ದಿ ಅಥವಾ ಮಾಹಿತಿಗಾಗಿ ಟಿ.ವಿ.ಯನ್ನು ನೋಡುವ, ರೇಡಿಯೊ ಕೇಳುವ ಅಥವಾ ಮರುದಿನ ಬೆಳಿಗ್ಗೆ ಬರುವ ಪತ್ರಿಕೆಗಾಗಿ ಕಾಯುವ ವ್ಯವಧಾನ ಕಡಿಮೆಯಾಗಿ ವಾಟ್ಸ್ಆ್ಯಪ್, ಫೇಸ್ಬುಕ್ಗಳೇ ಸುದ್ದಿಯ ಮೂಲಗಳಾಗಿ ಬೆಳೆದವು. ಇವು ಸುದ್ದಿಯ ಗ್ರಾಹಕರಿಂದ, ಗ್ರಾಹಕರಿಗಾಗಿ ಸಂಗ್ರಹಿಸಿ ಹರಿಬಿಡಲ್ಪಟ್ಟಮಾಹಿತಿಗಳಾಗಿದ್ದವು. ಅವು ಸತ್ಯವೋ ನಿಖರವೋ ಯಾರಿಗೂ ಗೊತ್ತಿಲ್ಲ. ವಿಶೇಷವೆಂದರೆ, ಜನಸಾಮಾನ್ಯರ ಕೈಯಲ್ಲಿ ಸಾಮಾಜಿಕ ಮಾಧ್ಯಮಗಳಿದ್ದವು. ಹೀಗಾಗಿ, ದೊಡ್ಡ ಮಾಧ್ಯಮಗಳ ಅಹಂಕಾರವನ್ನು ಹಾಗೂ ಮಿತಿಯನ್ನು ಮುರಿಯುವ ಮಾಧ್ಯಮಗಳೆಂದು ಇವುಗಳನ್ನು ಕೊಂಡಾಡಲಾಯಿತು.

ಪತ್ರಿಕೆಗಳಲ್ಲಿ ಕೆಲವರು ಮಾತ್ರ ಬರೆಯಬಹುದು, ಟಿ.ವಿ.ಯಲ್ಲಿ ಕೆಲವರ ಮುಖವಷ್ಟೇ ಕಾಣಬಹುದು. ಆದರೆ ವಾಟ್ಸ್ಆ್ಯಪಿಗೆ ಯಾರ ಹಂಗೂ ಇಲ್ಲ. ಯಾರು ಏನನ್ನು ಬೇಕಾದರೂ ಸುದ್ದಿ ಮಾಡಬಹುದು! ಪತ್ರಿಕೆಗಳು, ವಾಹಿನಿಗಳು ತಿರಸ್ಕರಿಸಿದ ಸುದ್ದಿಯನ್ನೂ ಕ್ಷಣಮಾತ್ರದಲ್ಲಿ ಜಾಗತಿಕ ಮಟ್ಟಕ್ಕೆ ಹಂಚಿಬಿಡುವ ಸಾಧ್ಯತೆಯು ವಾಟ್ಸ್ಆ್ಯಪಿನ ಹೆಗ್ಗಳಿಕೆಯಾಯಿತು.

ಈ ಸಾಧ್ಯತೆಯೇ ಸಮಾಜಕ್ಕೆ ಕಂಟಕಪ್ರಾಯವಾಗಬಹುದೆಂದು ಆ ಕ್ಷಣಕ್ಕೆ ಗೊತ್ತಾಗಲಿಲ್ಲ. ಜನಸಾಮಾನ್ಯರ ಕೈಗೆ ಸುದ್ದಿಯ ಅಧಿಕಾರ ಕೊಟ್ಟ ಹೆಗ್ಗಳಿಕೆ. ಆದರೆ ಯಾವುದೇ ಗೇಟ್ ಕೀಪರುಗಳಿಲ್ಲದೇ ಯಾರ ಪರಿಶೀಲನೆಗೂ ಒಳಪಡದೇ ಮಾಹಿತಿಯೊಂದು ಸುದ್ದಿಯಾಗಿ ಬಿತ್ತರಗೊಂಡಾಗ ಆಗಬಹುದಾದ ಅನಾಹುತಗಳಿಗೆ ಕೊರೊನಾ ಸಮಯದಲ್ಲಿ ಸಾಕ್ಷಿ ಸಿಕ್ಕಿದೆ. ಒಂದೇ ಸಮನೆ ಹರಿದಾಡುವ ಈ ಮೆಸೇಜುಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ಗ್ರಹಿಸಲು ಕಷ್ಟವಾಗುತ್ತಿದೆ ಹಾಗೂ ಸತ್ಯವೋ ಸುಳ್ಳೋ ಎಂದು ಪರೀಕ್ಷೆಗೆ ಒಳಗಾಗುವ ವೇಳೆಗೆ ಅದು ಸಮಾಜದಲ್ಲಿ ಅವಾಂತರ ಸೃಷ್ಟಿಸಿರುತ್ತದೆ. ಈಚೆಗೆ ಅದೆಷ್ಟು ಸುಳ್ಳುಗಳು, ಆಘಾತಕಾರಿ ಅಂಶಗಳು ಹೀಗೆ ಹರಿದಾಡಿವೆ, ಜನಸಮುದಾಯಗಳ ಮಧ್ಯೆ ದ್ವೇಷ ಹುಟ್ಟಲು ಕಾರಣವಾಗಿವೆ ಎಂಬುದನ್ನು ಗಮನಿಸಿದ್ದೇವೆ.

ಕೊರೊನಾ ಅವಧಿಯು ವಾಟ್ಸ್ಆ್ಯಪ್ ಮಾರಿಯ ಎದುರು ನಮ್ಮ ಸಾಂಪ್ರದಾಯಿಕ ಮಾಧ್ಯಮಗಳ ತೂಕವನ್ನು ಹೆಚ್ಚಿಸಿದೆ. ನಮ್ಮ ಪತ್ರಿಕೆ, ಟಿ.ವಿ., ರೇಡಿಯೊಗಳೇ ಸುದ್ದಿಗೆ ವಿಶ್ವಾಸಾರ್ಹ ಮಾಧ್ಯಮಗಳು ಎಂಬುದನ್ನು ಶ್ರುತಪಡಿಸಿದೆ. ಸಾಮಾಜಿಕ ಮಾಧ್ಯಮಗಳ ಟೊಳ್ಳುತನವನ್ನು ಎತ್ತಿತೋರಿಸಿದೆ. ಈ ಸಂಕಷ್ಟದ ಸಮಯದಲ್ಲಿ ಜಾಗತಿಕ ಸತ್ಯವೊಂದು ಅರಿವಿಗೆ ಬಂದಿದ್ದು ಸಮಾಧಾನದ ಸಂಗತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.