ಶಿಕ್ಷಣ ಸಂಸ್ಥೆಯೊಂದರ ಮುಖ್ಯ ಅಧ್ಯಾಪಕರನ್ನು ಭೇಟಿಯಾಗಲು ಶಾಲೆಗೆ ಹೋಗಿದ್ದೆ. ಅವರು ಪರೀಕ್ಷಾ ಸಿದ್ಧತೆಯ ಸಭೆಯಲ್ಲಿ ಭಾಗಿಯಾಗಿದ್ದರು. ಸ್ವಲ್ಪ ಸಮಯ ಶಾಲೆಯ ಉಪವನದಲ್ಲಿ ಸುತ್ತಾಡತೊಡಗಿದೆ. ವಿದ್ಯಾರ್ಥಿಗಳು ಡಬ್ಬಿ ತೆರೆದು ಊಟ ಮಾಡುತ್ತಿದ್ದರು. ಹಲವು ಮಕ್ಕಳ ಡಬ್ಬಿಯಲ್ಲಿ ಬ್ರೆಡ್, ಬನ್, ಬಿಸ್ಕತ್ತು, ಚಾಕೊಲೇಟ್ ಇದ್ದವು. ಕೆಲವು ಮಕ್ಕಳ ಡಬ್ಬಿಗಳಲ್ಲಿ ಹೋಟೆಲ್ ತಿಂಡಿಗಳಿದ್ದವು. ಚಪಾತಿ, ರೊಟ್ಟಿ, ಪಲಾವ್, ಕಾಳು, ಮೊಟ್ಟೆ, ಅನ್ನದ ಪದಾರ್ಥ ತಂದಿದ್ದ ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಬೆಳೆಯುತ್ತಿರುವ ಮಕ್ಕಳು ಗುಣಮಟ್ಟದ ಆಹಾರ ಸೇವನೆಯಿಂದ ವಂಚಿತರಾಗುತ್ತಿರುವುದನ್ನು ಕಂಡು ಬಹಳ ಬೇಸರವಾಯಿತು.

ಸ್ವಲ್ಪ ಸಮಯದ ನಂತರ ಮುಖ್ಯ ಅಧ್ಯಾಪಕರು ಭೇಟಿಯಾದರು. ಅವರ ಮುಂದೆ ಈ ವಿಷಯ ಪ್ರಸ್ತಾಪಿಸಿದೆ. ಅದಕ್ಕೆ ಅವರು, ‘ಪಾಲಕರು ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕೆಂದು ವಿಪರೀತ ಶ್ರಮಪಡುತ್ತಾರೆ. ಆದರೆ ಒಳ್ಳೆಯ ಆಹಾರ ಕೊಡುವುದರತ್ತ ಗಮನ ಕೊಡುವುದಿಲ್ಲ. ಮಕ್ಕಳ ಮಧ್ಯಾಹ್ನದ ಊಟಕ್ಕೆ ಮನೆಯಲ್ಲಿ ಸಿದ್ಧಪಡಿಸಿದ ಪೌಷ್ಟಿಕ ಆಹಾರ ಕಳಿಸಬೇಕು, ಜಂಕ್ಫುಡ್ ಕೊಡಬಾರದು ಎಂದು ಸುತ್ತೋಲೆಯ ಮೂಲಕ ಪಾಲಕರಿಗೆ ಸೂಚನೆ ನೀಡಿದ್ದೆ. ನಾನು ಎರಡನೆಯ ಬಾರಿ ಖಡಕ್ ಸೂಚನೆ ನೀಡಿದ ಮೇಲೆ ಪಾಲಕರ ದೊಡ್ಡ ಗುಂಪು ಸ್ಕೂಲಿಗೆ ಬಂದು, ‘ಬೆಳಿಗ್ಗೆ 8 ಗಂಟೆಗೇ ಊಟ ಸಿದ್ಧಪಡಿಸಲು ಆಗುವುದಿಲ್ಲ. ನಮಗೆ ಕೆಲಸಕ್ಕೆ ಹೋಗುವ ಅವಸರ ಇರುತ್ತದೆ. ಒಳ್ಳೆಯ ಹೋಟೆಲ್ ಅಥವಾ ಬೇಕರಿಯಿಂದ ಆಹಾರ ಪದಾರ್ಥಗಳನ್ನು ತಂದು ಲಂಚ್ ಬಾಕ್ಸ್ಗಳಲ್ಲಿ ಹಾಕಿ ಕಳಿಸುತ್ತೇವೆ. ಮಕ್ಕಳು ಬಹಳ ಇಷ್ಟಪಡುತ್ತಾರೆ’ ಎಂದು ಸಬೂಬು ಹೇಳಿಹೋದರು’ ಎಂದು ತಮ್ಮ ಅಸಹಾಯಕತೆಯನ್ನು ವಿವರಿಸಿದರು.

ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳ ಊಟದ ಡಬ್ಬಿಗಳು ಬಹಳ ಆಕರ್ಷಕವಾಗಿರುತ್ತವೆ. ಆದರೆ ಅನೇಕ ಮಕ್ಕಳ ಡಬ್ಬಿಗಳಲ್ಲಿ ಊಟ ಇರುವುದಿಲ್ಲ, ಬದಲಾಗಿ ಹೋಟೆಲ್ ಅಥವಾ ಬೇಕರಿ ತಿನಿಸುಗಳು ತುಂಬಿಕೊಂಡಿರುತ್ತವೆ. ಮುಂಜಾನೆ ಶಾಲೆಯ ಬಸ್ ಬರುವ ವೇಳೆಗೆ ಬಿಸಿ ಅಡುಗೆ ಸಿದ್ಧಪಡಿಸುವುದು ಪಾಲಕರಿಗೆ ಸಾಧ್ಯವಾಗದ್ದರಿಂದ ಅವರು ಇಂತಹ ಆಹಾರ ಪದಾರ್ಥಗಳನ್ನು ಕಳಿಸುತ್ತಾರೆ. ಆದರೆ ಇದರಿಂದ ಮಕ್ಕಳ ಆರೋಗ್ಯದ ಮೇಲೆ ಆಗುವ ವಿಪರೀತ ಪರಿಣಾಮಗಳ ಬಗ್ಗೆ ಅವರು ಗಮನ ಕೊಡದಿರುವುದು ಬಹಳ ನೋವಿನ ಸಂಗತಿ.

1990ರ ದಶಕದವರೆಗೆ ನಗರಗಳಲ್ಲಿ ಇದ್ದು ಕಲಿಯುತ್ತಿದ್ದ ವಿದ್ಯಾರ್ಥಿಗಳು ತಮ್ಮ ಹಳ್ಳಿಗಳಿಂದ ಬಸ್ಗಳ ಮೂಲಕ ಬುತ್ತಿ ತರಿಸಿಕೊಳ್ಳುತ್ತಿದ್ದರು. ಆಗ ‘ಬಸ್ ಬುತ್ತಿ ಪಾಸ್’ ವ್ಯವಸ್ಥೆ ಇತ್ತು. ನಾನು 70– 80ರ ದಶಕದಲ್ಲಿ ಗೋಕಾಕಿನಲ್ಲಿ ಓದುವಾಗ, ಊರಿನಿಂದ ಬುತ್ತಿ ತರಿಸಿ ಸಹಪಾಠಿಗಳೊಂದಿಗೆ ಹಂಚಿಕೊಂಡು ಊಟ ಮಾಡುತ್ತಿದ್ದೆ. ಈಗ ಆ ಸೊಬಗು ಮಾಯವಾಗಿದೆ. ಊಟವು ಮಕ್ಕಳಿಗೆ ಸಂಭ್ರಮವಾಗಬೇಕು. ಊಟ ಮಾಡಿದ ಕೂಡಲೇ ಉತ್ಸಾಹ ಹೆಚ್ಚಿ ಅವರ ಮುಖದ ಮೇಲೆ ಕಳೆ ಮೂಡಬೇಕು.

ಪೌಷ್ಟಿಕ ಸಮತೋಲಿತ ಆಹಾರವು ಮಕ್ಕಳ ಕಲಿಕೆ ಮತ್ತು ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸು
ತ್ತದೆ. ಅಗತ್ಯ ಆಹಾರ ಪೋಷಕಾಂಶಗಳಿಂದ ವಂಚಿತರಾಗುವ ಮಕ್ಕಳು ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ಉತ್ಸಾಹದ ಕೊರತೆಯಿಂದ ಬಳಲುತ್ತಾರೆ. ಜಂಕ್ಫುಡ್ ಮತ್ತು ಹೋಟೆಲ್ ಆಹಾರ ಪದಾರ್ಥಗಳನ್ನು ಉಪಾಹಾರ ಹಾಗೂ ಊಟವಾಗಿ ಮಕ್ಕಳು ಸೇವಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಇದು ಅಧಿಕ ತೂಕ, ಸ್ಥೂಲಕಾಯ, ರೋಗನಿರೋಧಕ ಶಕ್ತಿಯ ಕೊರತೆಗೆ ಕಾರಣವಾಗುತ್ತದೆ. ತಾಳ್ಮೆ, ಹೊಂದಾಣಿಕೆಯ ಮನೋಭಾವ ಕಡಿಮೆಯಾಗಿ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ಅಪಾಯ ಕೂಡ ಇರುತ್ತದೆ.

ಇನ್ನೊಂದು ನೋವಿನ ಸಂಗತಿ ಎಂದರೆ, ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲಾ ಕಾಲೇಜುಗಳ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಕ್ಯಾಂಟೀನ್ಗಳನ್ನು ನಡೆಸುತ್ತಿವೆ. ಇವುಗಳಲ್ಲಿ ಕೆಲವು ಕ್ಯಾಂಟೀನ್ಗಳ ‘ಸೇವೆ’ ಇನ್ನೂ ಭಯಾನಕವಾಗಿದೆ. ಇವುಗಳಿಗೆ ಆಹಾರ ಪದಾರ್ಥಗಳನ್ನು ಕೆಲವು ಏಜೆನ್ಸಿಗಳು ಪೂರೈಸುತ್ತಿವೆ. ನಸುಕಿನಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥಗಳನ್ನು ಪುನಃ ಬಿಸಿ ಮಾಡಿ ಮಕ್ಕಳಿಗೆ ದಿನವಿಡೀ ನೀಡಲಾಗುತ್ತದೆ. ಈ ಪದಾರ್ಥಗಳು ರುಚಿ ಮತ್ತು ಪೌಷ್ಟಿಕತೆಯನ್ನು ಕಳೆದುಕೊಂಡಿರುತ್ತವೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಪೂರೈಸುವ ಬಿಸಿಯೂಟ ಅವರ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳಿಗೂ ಉತ್ತಮ ಊಟ ಸಿಗುವ ವ್ಯವಸ್ಥೆಯನ್ನು ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುವವರು ಕಡ್ಡಾಯವಾಗಿ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಎಸ್.ಆರ್.ಮನಹಳ್ಳಿ ಅವರು ಹೇಳುವ ಮಾತನ್ನು ಎಲ್ಲರೂ ಪಾಲಿಸಬೇಕಾಗಿದೆ.

ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಎಂಬ ಹಂಬಲದಿಂದ ಹೆಚ್ಚು ಹಣ ಸುರಿದು ಖಾಸಗಿ ಶಾಲೆಗಳಿಗೆ ಸೇರಿಸುವ ಪಾಲಕರು, ಅವರ ಊಟ, ಉಪಾಹಾರ, ಆರೋಗ್ಯದ ಬಗ್ಗೆಯೂ ಗಮನಕೊಡಬೇಕಾದ ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಇದಕ್ಕೆ ಕಟ್ಟುನಿಟ್ಟಾಗಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಖಾಸಗಿ ಶಾಲೆಗಳು ಕೂಡ ಗುಣಮಟ್ಟದ ಬಿಸಿಯೂಟ ತಯಾರಿಸಿ ಮಕ್ಕಳಿಗೆ ಉಣಬಡಿಸುವ ಯೋಜನೆ ರೂಪಿಸುವುದು ಅವಶ್ಯ. ‘ಊಟವು ಆರೋಗ್ಯ, ಆಯುಷ್ಯ, ಸಂತೋಷವನ್ನು ನಿರ್ಧರಿಸುತ್ತದೆ. ಆರೋಗ್ಯಪೂರ್ಣ ಯುವಜನ ದೇಶದ ಸಂಪತ್ತು’ ಎನ್ನುವ ಮಾತನ್ನು ಮರೆಯದಿರೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.