ಆರೋಗ್ಯ ಕಾಯ್ದುಕೊಳ್ಳುವಲ್ಲಿ ನಮ್ಮ ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಬಗ್ಗೆ ಈಗ ಜನಜಾಗೃತಿ ಮೂಡಿದೆ. ಪರಿಣಾಮವಾಗಿ, ಪ್ರತಿಯೊಬ್ಬರೂ ಆಹಾರದ ಬಗೆಗಷ್ಟೇ ಅಲ್ಲ ವ್ಯಾಯಾಮದ ಕುರಿತೂ ಗಮನ ನೀಡುತ್ತಿದ್ದಾರೆ.

ಆರಂಭದಲ್ಲಿ ನಡಿಗೆಗಷ್ಟೇ ಸೀಮಿತವಾಗಿದ್ದ ವ್ಯಾಯಾಮ, ಜಿಮ್‍ಗಳ ಸ್ಥಾಪನೆಯ ನಂತರ ಹೊಸದೊಂದು ಆಯಾಮವನ್ನು ಪಡೆಯಿತು. ಆದರೆ ತಿಂಗಳಿಗೆ ಇಂತಿಷ್ಟು ಹಣ ನೀಡಿ, ಒಂದಿಷ್ಟು ಸಮಯವನ್ನು ಮೀಸಲಿಟ್ಟು ಜಿಮ್‍ಗಳಿಗೆ ಹೋಗಲು ಎಲ್ಲರಿಗೂ ಸಾಧ್ಯವಿಲ್ಲ. ಈ ದಿಸೆಯಲ್ಲಿ ಸಾರ್ವಜನಿಕರು ಉದ್ಯಾನಗಳಲ್ಲಿ ವಾಕಿಂಗ್‍ನ ಜೊತೆ ಉಚಿತವಾಗಿ ವ್ಯಾಯಾಮ ಮಾಡಲು ಅವಕಾಶ ಒದಗಿಸುವ ಸ್ಥಳೀಯ ಸಂಸ್ಥೆಗಳ ‘ಜಂಗಲ್ ಜಿಮ್’ ಪರಿಕಲ್ಪನೆ ಯಶಸ್ವಿಯಾಯಿತು.

‘ಉದ್ಯಾನ ನಗರಿ’ ಎಂದೇ ಪ್ರಸಿದ್ಧವಾದ ಬೆಂಗಳೂರಿನಲ್ಲಿ ಬೆಳಿಗ್ಗೆ, ಸಂಜೆ ವಾಕಿಂಗ್ ಮಾಡುವವರು ಬಹಳಷ್ಟು ಜನ. ಅದೇ ಸಮಯದಲ್ಲಿ ಉದ್ಯಾನದಲ್ಲಿ ಒಂದಷ್ಟು ಹೊತ್ತು ಈ ರೀತಿಯ ಸಾಧನಗಳನ್ನು ಬಳಸುವುದು ಸುಲಭ ಮತ್ತು ಅನುಕೂಲಕರ. ವಿಶೇಷವಾಗಿ ಹಿರಿಯ ನಾಗರಿಕರಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟೇ ಸುಲಭವಾಗಿ ಮಾಡ ಬಹುದಾದ ಮತ್ತು ಮಹಿಳೆಯರಿಗೆ ಮಕ್ಕಳನ್ನು ಕಣ್ಗಾವಲಿನಲ್ಲೇ ಆಟವಾಡಲು ಬಿಟ್ಟು ತಾವೂ ವ್ಯಾಯಾಮ ಮಾಡಬಹುದಾದ ಉತ್ತಮ ಮಾರ್ಗವಿದು.

ಆರೇಳು ವರ್ಷಗಳ ಹಿಂದೆ ಬೆಂಗಳೂರಿನ ಉದ್ಯಾನಗಳಲ್ಲಿ ಸ್ಥಾಪನೆಯಾದ ಇಂತಹ ಜಿಮ್‍ಗಳು ಕ್ರಮೇಣ ಶಿವಮೊಗ್ಗ, ಮೈಸೂರು, ತುಮಕೂರಿನಂತಹ ನಗರಗಳಲ್ಲೂ ಬಳಕೆಗೆ ಬಂದವು. ತಜ್ಞರ ಸಲಹೆ ಪಡೆದು ಹಾಕಿದ ಸಾಧನಗಳು ಉತ್ತಮ ಗುಣಮಟ್ಟದವಾಗಿದ್ದರೂ ಜನರ ಬಳಕೆ ಹೆಚ್ಚಿದಂತೆಲ್ಲ ಸವೆತ, ಮುರಿತ ಸಹಜವೇ. ಜೊತೆಗೆ ತೆರೆದ ವಾತಾವರಣದಲ್ಲಿ ಇರುವುದರಿಂದ ಅವುಗಳಿಗೆ ತುಕ್ಕು ಹಿಡಿಯುವುದು ನಿರೀಕ್ಷಿತ. ಹೀಗಾಗಿ, ಅವುಗಳಿಗೆ ಆಗಾಗ ಆಯಿಲ್ ಹಾಕುವುದು, ಸಡಿಲವಾದ ನಟ್, ಬೋಲ್ಟ್ ಬಿಗಿ ಮಾಡುವುದು, ಹಾಳಾದ ಭಾಗ ತೆಗೆದು ಹೊಸದನ್ನು ಅಳವಡಿಸುವಂತಹ ನಿರ್ವಹಣೆ ಅಗತ್ಯ.

ಬೇಸರದ ಸಂಗತಿಯೆಂದರೆ, ಸ್ಥಾಪನೆಯಾದ ನಂತರ ಇವುಗಳ ಬಗ್ಗೆ ಗಮನಹರಿಸುವವರೇ ಇಲ್ಲದಂತೆ ಆಗಿರುವುದು. ಹೀಗಾಗಿ, ಹೆಚ್ಚಿನ ಉದ್ಯಾನಗಳಲ್ಲಿ ಈ ಸಾಧನಗಳನ್ನು ಬಳಸುವಾಗ ಸೀಮಿತವಾದ ಚಲನೆ, ಕರ್ಕಶ ಸದ್ದು ಸಾಮಾನ್ಯ. ಜತೆಗೆ ಅರ್ಧಂಬರ್ಧ ಮುರಿದ ಸಾಧನಗಳು ಗುಜರಿ ಅಂಗಡಿಯನ್ನು ಸೇರಲು ಸಿದ್ಧವಾಗಿರುತ್ತವೆ. ಹೆಚ್ಚಿನವರು ಹೇಗೋ ಇರುವುದರಲ್ಲೇ ಹೊಂದಾಣಿಕೆ ಮಾಡಿಕೊಂಡು ವ್ಯಾಯಾಮವನ್ನು ಮುಗಿಸುತ್ತಾರೆ. ಒಂದಷ್ಟು ಜನ ತಾವೇ ಒಟ್ಟಾಗಿ ಆಗಾಗ್ಗೆ ಇವುಗಳಿಗೆ ಆಯಿಲ್ ಹಾಕುತ್ತಾರೆ. ಹಾಳಾಗಿರುವ ಸಾಧನಗಳ ಕುರಿತು ಉದ್ಯಾನದಲ್ಲಿನ ಸಿಬ್ಬಂದಿಯ ಗಮನ ಸೆಳೆದರೆ, ‘ಗಿಡಮರಗಳ ನಿರ್ವಹಣೆಯಷ್ಟೇ ನಮ್ಮದು. ಇವುಗಳ ಬಗ್ಗೆ ನಮಗೇನೂ ಗೊತ್ತಿಲ್ಲ, ನಗರಪಾಲಿಕೆಯಲ್ಲಿ ವಿಚಾರಿಸಿ’ ಎಂಬ ಉತ್ತರ ಅವರಿಂದ ಬರುತ್ತದೆ.

ಪಾಲಿಕೆಯ ಸಿಬ್ಬಂದಿ, ‘ಅವನ್ನು ಹಾಕಿದವರು ಇಂಜಿನಿಯರ್‌ಗಳು. ತಾಂತ್ರಿಕ ಮಾಹಿತಿ ನಮಗಿಲ್ಲದ ಕಾರಣ ಅವರನ್ನು ವಿಚಾರಿಸಿಯೇ ಸರಿ ಮಾಡಬೇಕು. ಸಣ್ಣಪುಟ್ಟ ರಿಪೇರಿ ಇದ್ದರೆ ಮಾಡಬಹುದು. ಆದರೆ ಸಾಧನಗಳ ಭಾಗವೇನಾದರೂ ತುಂಡಾಗಿದ್ದರೆ ಆ ಬಗ್ಗೆ ತಯಾರಿಕಾ ಸಂಸ್ಥೆಗೆ ದೂರು ಕೊಟ್ಟು, ಅವರು ಪರಿಶೀಲಿಸಿ ಬೇರೆಯದನ್ನು ಹಾಕಬೇಕು. ತತ್‍ಕ್ಷಣ ಆಗುವ ಕೆಲಸವಲ್ಲ ಅದು. ಇದಕ್ಕೆಲ್ಲಾ ಸರಿಯಾದ ಮಾರ್ಗಸೂಚಿ ಇಲ್ಲ ಮತ್ತು ನಿರ್ವಹಣೆಗೆ ಮೊತ್ತ ನಿಗದಿಯಾಗಿಲ್ಲ. ಹಾಗಾಗಿ ಈ ರೀತಿಯ ಸಮಸ್ಯೆ ಆಗುತ್ತಿದೆ’ ಎನ್ನುತ್ತಾರೆ.

‘ಅದರೊಂದಿಗೆ ಜನರು ಸರಿಯಾದ ರೀತಿಯಲ್ಲಿ ಈ ಸಾಧನಗಳನ್ನು ಬಳಸುತ್ತಿಲ್ಲ. ವ್ಯಾಯಾಮ ಮಾಡಲು ಇಟ್ಟಿರುವ ಸಾಧನವನ್ನು ಉಯ್ಯಾಲೆಯಂತೆ ಶಕ್ತಿಮೀರಿ ಜೀಕುತ್ತಾರೆ. ಕೆಲವರಂತೂ ನಾಯಿಗಳನ್ನು ಕರೆತಂದು ಅವಕ್ಕೂ ವ್ಯಾಯಾಮ ಮಾಡಿಸುತ್ತಾರೆ. ಎಷ್ಟು ಭಾರ ತಡೆಯುತ್ತದೆ ಎಂದು ಪರೀಕ್ಷಿಸಲು ಎಳೆದಾಡುತ್ತಾರೆ. ಹೀಗೆ ಎಲ್ಲರೂ ಮನಸ್ಸಿಗೆ ಬಂದ ಹಾಗೆ ಬೇಕಾಬಿಟ್ಟಿ ಉಪಯೋಗಿಸಿದರೆ ಈ ಸಾಧನಗಳು ಬಾಳಿಕೆ ಬರುವುದಾದರೂ ಹೇಗೆ? ಕೆಲವರು ಇವುಗಳ ಭಾಗಗಳನ್ನು ಕಿತ್ತುಕೊಂಡು ಹೋಗಿ ಮಾರಾಟವನ್ನೂ ಮಾಡಿದ್ದಾರೆ! ನಾವು ಇಡೀ ದಿನ ಪಾರ್ಕಿನಲ್ಲಿ ಕುಳಿತು ಕಾವಲು ಕಾಯಲು ಸಾಧ್ಯವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಹೆಚ್ಚಿನ ಉದ್ಯಾನಗಳಲ್ಲಿ ಈ ಸಾಧನಗಳು ದುಃಸ್ಥಿತಿಯಲ್ಲಿ ಇವೆ. ತರಬೇತುದಾರರ ಮೇಲ್ವಿಚಾರಣೆ ಇಲ್ಲದ ಕಾರಣ, ವ್ಯಾಯಾಮ ಮಾಡುವ ಭರದಲ್ಲಿ ಅನಗತ್ಯ ಶಕ್ತಿ ಹಾಕಿ ಜನರಿಗೆ ಸ್ನಾಯು ಸೆಳೆತ, ಉಳುಕು ಉಂಟಾಗುವ, ಬಿದ್ದು ಗಾಯಗೊಳ್ಳುವ ಸಾಧ್ಯತೆ ಹೆಚ್ಚು.

ಉದ್ಯಾನಗಳಲ್ಲಿ ಇರುವ ಜಿಮ್‍ಗಳು ವ್ಯಾಯಾಮದ ಶಿಸ್ತನ್ನು ರೂಢಿಸಿಕೊಳ್ಳಲು, ಗಾಳಿ, ಬೆಳಕು, ಹಸಿರಿನ ನಡುವೆ ದೇಹದ ಜತೆ ಮನಸ್ಸನ್ನು ಉಲ್ಲಸಿತ ಗೊಳಿಸಲು, ಗೆಳೆಯರ ಗುಂಪಿನೊಂದಿಗೆ ಒಟ್ಟಾಗಿ ವ್ಯಾಯಾಮವನ್ನು ಆನಂದಿಸಲು ಅತ್ಯುತ್ತಮ ಮಾರ್ಗವೇ ಸರಿ. ಆದರೆ ಇವುಗಳನ್ನು ಉಪಯೋಗಿಸುವುದರಲ್ಲಿ ಶುಚಿತ್ವ ಕಾಯ್ದುಕೊಳ್ಳುವುದು, ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುವುದು, ಸಾಧನಗಳನ್ನು ಬಳಸುವ ಬಗ್ಗೆ ಜನರಿಗೆ ಮಾಹಿತಿ ಇರಬೇಕು. ಆದ್ದರಿಂದ ಈ ಜಂಗಲ್ ಜಿಮ್ ನಿರ್ವಹಣೆ ಮತ್ತು ಬಳಕೆಯ ಕ್ರಮಗಳ ಕುರಿತು ಸೂಚನಾಫಲಕ ಹಾಕುವ ಬಗ್ಗೆ ಸ್ಥಳೀಯ ಆಡಳಿತಗಳು ಗಮನಹರಿಸಬೇಕು. ಹಾಗೆಯೇ ಅವುಗಳನ್ನು ಜವಾಬ್ದಾರಿಯಿಂದ ಬಳಸುವ ಹೊಣೆ ಸಾರ್ವಜನಿಕರಾದ ನಮ್ಮದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.