ನೆರೆಮನೆಯ ಬಾಲಕನೊಬ್ಬ ನನ್ನ ಬಳಿ ಬಂದು ‘ಅಜ್ಜಾ, ನಮ್ಮ ಮಮ್ಮಿ, ಡ್ಯಾಡಿ ನನ್ನನ್ನ ಮಂಗಳೂರು ರೆಸಿಡೆನ್ಷಿಯಲ್ ಸ್ಕೂಲಿಗೆ ಸೇರಿಸ್ತಾರಂತೆ. ನನ್ನನ್ನು ಕರ್ಕೊಂಡು ಹೋಗಿ ಶಾಲೆ, ಹಾಸ್ಟೆಲ್ ಎಲ್ಲ ನೋಡ್ಕೊಂಡು ಬಂದಿದ್ದಾರೆ. ಅದೇ ಶಾಲೆಗೆ ನನ್ನನ್ನ ಸೇರಿಸ್ತಾರಂತೆ. ನನಗೆ ಮಮ್ಮಿ- ಡ್ಯಾಡೀನ ಬಿಟ್ಟು ಹೋಗಕ್ಕೆ ಮನಸ್ಸಿಲ್ಲ. ನಮ್ಮ ಶಾಲೆ ಚೆನ್ನಾಗಿದೆ. ಇಲ್ಲೇ ಕಲಿಬೇಕು ಅಂತ ಆಸೆ ನನಗೆ. ನೀವು ನನ್ನ ಡ್ಯಾಡಿಗೆ ಹೇಳಿ, ನನ್ನನ್ನ ಹಾಸ್ಟೆಲ್ಗೆ ಸೇರಿಸದಂತೆ ಮಾಡಬೇಕು. ನಿಮ್ಮ ಮಾತನ್ನ ಅವರು ಕೇಳ್ತಾರೆ’ ಎಂದು ದುಃಖದಿಂದ ಹೇಳಿದ ಮಾತು ಕೇಳಿ ನಾನು ನಲುಗಿಹೋದೆ.

ಬಾಲಕಿಯರೂ ಸೇರಿದಂತೆ ಅನೇಕ ಮಕ್ಕಳು ಮೌನದಲ್ಲಿ ಅನುಭವಿಸುವ ಆತಂಕದ ಕಥೆ ಇದು. ಮನೆಗಳಲ್ಲಿ ದಂಪತಿಗಳು ಮಾತ್ರ ಇರುತ್ತಾರೆ. ಮಕ್ಕಳು ವಸತಿಶಾಲೆಗಳಲ್ಲಿ ಇರುತ್ತಾರೆ. ಇದು ಈಗಿನ ಕೆಲವು ಕುಟುಂಬಗಳ ಚಿತ್ರಣ. ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳನ್ನು ದೂರದ ವಸತಿಶಾಲೆ
ಗಳಲ್ಲಿ ಇರಿಸಿ ಓದಿಸುವ ಹುಮ್ಮಸ್ಸು ಪಾಲಕರಲ್ಲಿ ಬೆಳೆಯತೊಡಗಿದೆ. ಮಕ್ಕಳು ಒಪ್ಪಲಿ ಬಿಡಲಿ ಅವರನ್ನು ಆಗ್ರಹಪೂರ್ವಕವಾಗಿ ವಸತಿಶಾಲೆಗೆ ಸೇರಿಸುತ್ತಿದ್ದಾರೆ.

ಚೆನ್ನಾಗಿ ಓದಲಿ ಎಂಬ ಹಂಬಲದಿಂದ ವಸತಿಶಾಲೆಗಳಲ್ಲಿ ಇರಿಸಿ, ಬಹಳಷ್ಟು ಹಣ ಖರ್ಚು ಮಾಡಿ ಓದಿಸುತ್ತಾರೆ. ಕೆಲವರು ಪ್ರತಿಷ್ಠೆಗಾಗಿ, ಹೆಚ್ಚು ಶುಲ್ಕ ವಸೂಲು ಮಾಡುವ ಸ್ಕೂಲುಗಳಿಗೆ ಸೇರಿಸುತ್ತಾರೆ. ಸಾಲ ಸೋಲ ಮಾಡಿಕೊಂಡು ದೂರದ ವಸತಿಶಾಲೆಗಳಲ್ಲಿ ಇರಿಸಿ ಓದಿಸುವ ಪಾಲಕರ ಸಂಖ್ಯೆಯೂ ದೊಡ್ಡದಿದೆ.

‘ಪ್ರತಿಷ್ಠಿತ’ ಶಾಲೆಗಳಲ್ಲಿ ಓದುವುದರಿಂದ ಮಕ್ಕಳು ಜಾಣರಾಗುತ್ತಾರೆ, ಹೆಚ್ಚು ಅಂಕ ಪಡೆಯುತ್ತಾರೆ, ಉನ್ನತ ಅವಕಾಶಗಳು ಬರುತ್ತವೆ ಎಂಬುದು ಪಾಲಕರ ನಂಬಿಕೆ. ಇಂಥ ಭ್ರಮೆಗಳನ್ನು ಮಾರಾಟ ಮಾಡುವುದಕ್ಕೆಂದೇ ಹಲವು ಖಾಸಗಿ ಶಾಲೆಗಳು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿವೆ. ಅವರು ಮನೆ ಮನೆಗೆ ಭೇಟಿ ನೀಡಿ, ಮಕ್ಕಳನ್ನು ವೈದ್ಯರು, ಎಂಜಿನಿಯರು ಮಾಡುತ್ತೇವೆ, ಐಎಎಸ್, ಕೆಎಎಸ್ ಪಾಸ್ ಮಾಡಿಸುತ್ತೇವೆ ಎಂದೆಲ್ಲ ಭರವಸೆ ಮೂಡಿಸುತ್ತಾರೆ. ಕಲಿಕೆಗೆ ಮಗುವಿನ ಆಸಕ್ತಿ, ಉತ್ಸಾಹ ಮತ್ತು ಆರೋಗ್ಯ ಬಹಳ ಮುಖ್ಯ. ಇವು ಕುಟುಂಬದೊಂದಿಗೆ ಇರುವ ಮಗುವಿಗೆ ಸಹಜವಾಗಿ ಲಭಿಸುತ್ತವೆ.

ಮಕ್ಕಳು ಮನೆಯಲ್ಲಿದ್ದರೆ ಸಂತೋಷದ ಗಾಳಿ ಸೂಸುತ್ತಿರುತ್ತದೆ. ಅವರು ಮನೆಯಲ್ಲಿದ್ದರೆ ಸೊಬಗು, ಸಂಭ್ರಮ. ಎಲ್ಲಕ್ಕಿಂತಲೂ ಮುಖ್ಯವಾಗಿ ಮಕ್ಕಳಲ್ಲಿ ಸುರಕ್ಷತೆ ಮತ್ತು ನೆಮ್ಮದಿಯ ಭಾವನೆಯನ್ನು ಹೆಚ್ಚಿಸುತ್ತದೆ. ಮಕ್ಕಳು ಜೊತೆಗಿದ್ದರೆ ಅವರ ಸಮಸ್ಯೆ, ತಲ್ಲಣಗಳಿಗೆ ತಕ್ಷಣ ಪರಿಹಾರ ಸೂಚಿಸಬಹುದು. ದೂರದ ವಸತಿಶಾಲೆಗಳಲ್ಲಿ ಇರುವ ಮಕ್ಕಳು ತಮ್ಮ ನೋವು, ಸಮಸ್ಯೆಗಳನ್ನು ಮೌನವಾಗಿ ಅನುಭವಿಸಬೇಕಾಗುತ್ತದೆ. ಇದು ಅವರ ಮಾನಸಿಕ ಮತ್ತು ದೈಹಿಕ ಹಿನ್ನಡೆಗೆ ಕಾರಣವಾಗುತ್ತದೆ.

ಸ್ನೇಹಿತರೊಬ್ಬರನ್ನು ಭೇಟಿಯಾಗಲು ಭಾನುವಾರ ಅವರ ಮನೆಗೆ ಹೋಗಿದ್ದೆ. ಮನೆಯಲ್ಲಿ ದಂಪತಿ ಮಾತ್ರ ಇದ್ದರು. ಮಕ್ಕಳು ಇರಲಿಲ್ಲ. ಸ್ನೇಹಿತನನ್ನು ವಿಚಾರಿಸಿದಾಗ, 8ನೇ ತರಗತಿಯಲ್ಲಿರುವ ಮಗ ಮಂಗಳೂರಲ್ಲಿ ಓದುತ್ತಿದ್ದಾನೆ, 5ನೇ ತರಗತಿಯಲ್ಲಿರುವ ಮಗಳು ಧಾರವಾಡದಲ್ಲಿ ಓದುತ್ತಿದ್ದಾಳೆ. ಇವರು ಓದುತ್ತಿರುವ ವಸತಿಶಾಲೆಗಳು ಬಹಳ ಚೆನ್ನಾಗಿವೆ. ಅಲ್ಲಿ ಶಿಸ್ತು ಅಂದರೆ ಶಿಸ್ತು. ವಾರದಲ್ಲಿ ಒಂದು ದಿನ ಮಾತ್ರ ಪಾಲಕರಿಗೆ ಫೋನ್ ಮಾಡಲು ಅವಕಾಶವಿದೆ. ಪಾಲಕರು ತಿಂಗಳ ಕೊನೆಯ ಶನಿವಾರ ಮತ್ತು ಭಾನುವಾರ ಮಕ್ಕಳನ್ನು ಭೇಟಿಯಾಗಬಹುದು, ಊಟ, ಉಪಾಹಾರ ಎಕ್ಸಲೆಂಟ್... ಇನ್ನೂ ಏನೇನೋ ಹೇಳುವ ತವಕದಲ್ಲಿದ್ದ ಅವರನ್ನು ತಡೆದು, ಮಕ್ಕಳು ಇಲ್ಲದೆ ಮನೆ ಬೋರ್ ಎನಿಸುವುದಿಲ್ಲವೇ ಎಂದು ಕೇಳಿದೆ. ‘ಅವರು ಚೆನ್ನಾಗಿ ಓದಿ ಬೆಳೆಯಬೇಕು. ಇದು ಕಾಂಪಿಟಿಷನ್ ಯುಗ. ಮನೆಯಲ್ಲಿದ್ದರೆ ಓದುವುದಿಲ್ಲ. ಬರೀ ಆಟ, ತುಂಟತನ ಮಾಡುತ್ತಾರೆ’ ಎಂದರು.

ಮಕ್ಕಳ ಚಟುವಟಿಕೆಗಳು ತುಂಟತನವಲ್ಲ, ಪ್ರಯೋಗಶೀಲತೆ. ಮಗು ಚೈತನ್ಯದ ಚಿಲುಮೆ. ಮಕ್ಕಳು ಹಟ, ಜಗಳ ಮಾಡುವುದು ಸಹಜ ಕ್ರಿಯೆ. ಆರೋಗ್ಯಪೂರ್ಣ ಮಗುವಿನ ಲಕ್ಷಣ ಅದು. ಪಾಲಕರು ಬೇಸರ ಮಾಡಿಕೊಳ್ಳದೆ ಪ್ರೀತಿಯಿಂದ ನೋಡಬೇಕು.

ಬಾಲ್ಯದಿಂದ ಹೊರಗೇ ಇದ್ದು ಓದಿ ಪದವಿ, ಸ್ನಾತಕೋತ್ತರ ಶಿಕ್ಷಣ ಪೂರ್ಣಗೊಳಿಸಿದವರು
ಮನೆಯಲ್ಲಿ ಇರುವುದಕ್ಕೆ ಇಷ್ಟಪಡುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಅಥವಾ ಉದ್ಯೋಗ ಹುಡುಕುವುದಾಗಿ ನೆಪ ಹೇಳಿ ನಗರಗಳಿಗೆ ಹೋಗಿ ಪಿ.ಜಿ.ಗಳಲ್ಲಿ ವಾಸಿಸತೊಡಗುತ್ತಾರೆ. ಪಾಲಕರು ಮತ್ತೆ ಖರ್ಚಿನ ಭಾರ ಹೊರಬೇಕು. ಮಕ್ಕಳು 10ನೇ ತರಗತಿಯವರೆಗಾದರೂ ಮನೆಯಲ್ಲಿಯೇ ಇದ್ದು ಓದಬೇಕು. ಇದರಿಂದ ಅವರೊಂದಿಗೆ ಊಟ ಮಾಡುವ, ಕಥೆ ಹೇಳುವ, ಅವರ ಮಾತು ಕೇಳಿಸಿಕೊಳ್ಳುವ ಸಕಾರಾತ್ಮಕ ಸಂವಹನ ನಡೆಯುತ್ತದೆ.

ಅನಿವಾರ್ಯ ಕಾರಣಗಳು ಇದ್ದಾಗ ಮಕ್ಕಳನ್ನು ಬೇರೆ ಕಡೆ ಇರಿಸಿ ಓದಿಸಬಹುದು. ಮಕ್ಕಳನ್ನು ಮನೆಯಲ್ಲಿಯೇ ಇಟ್ಟುಕೊಂಡು ಸ್ಥಳೀಯ ಶಾಲೆಗಳಲ್ಲಿ ಓದಿಸುವ ಮನೋಭಾವವನ್ನು ಪಾಲಕರು ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಸೌಲಭ್ಯಗಳು ಬಹಳಷ್ಟು ಬೆಳೆದಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.

ಆರಂಭದಲ್ಲಿ ನೆನಪಿಸಿದ ನಮ್ಮ ನೆರೆಮನೆಯ ಬಾಲಕನ ಬಗ್ಗೆ ಇನ್ನಷ್ಟು ಹೇಳುವುದಿದೆ. ಅವನ ತಂದೆ ತಾಯಿಯನ್ನು ಭೇಟಿ ಮಾಡಿ ಅವರ ಮಗನ ‘ಬಯಕೆ’ ವಿವರಿಸಿದೆ. ಅವರು ಒಪ್ಪಿಕೊಂಡು ಸ್ಥಳೀಯ ಶಾಲೆಗೆ ಕಳಿಸುತ್ತಿದ್ದಾರೆ. ನನ್ನನ್ನು ಕಂಡಾಗಲೆಲ್ಲ ಆ ಬಾಲಕ ಸಂತೋಷದಿಂದ ನಗುತ್ತಾನೆ. ನನಗೆ ಇಮ್ಮಡಿ
ಸಂತೋಷವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.