ಪರಿಸರ ಸಂರಕ್ಷಣೆಗಾಗಿ ವಿಶ್ವ ಪರಿಸರ ದಿನ, ಮಣ್ಣಿಗಾಗಿ ಪ್ರತ್ಯೇಕ ವಿಶ್ವ ಮಣ್ಣು ದಿನ, ಪುಟಾಣಿ ಗುಬ್ಬಚ್ಚಿಗಾಗಿ ವಿಶ್ವ ಗುಬ್ಬಚ್ಚಿ ದಿನ, ನದಿಗಳಿಗಾಗಿ ವಿಶ್ವ ನದಿ ದಿನ, ಸ್ವಚ್ಛತೆಗಾಗಿ ಶೌಚ ದಿನ... ಹೀಗೆ ಅನೇಕ ಬಗೆಯ ದಿನಗಳನ್ನು ನಿಗದಿಪಡಿಸಿಕೊಂಡು ಆಚರಿಸುತ್ತಲೇ ಇರುತ್ತೇವೆ. ಇಂದು (ಮೇ 30), ನಮ್ಮೆಲ್ಲರ ದಿನಬಳಕೆಯ ತರಕಾರಿಗಳಲ್ಲಿ ಒಂದಾದ ಆಲೂಗೆಡ್ಡೆಯ ದಿನಾಚರಣೆ ವಿಶ್ವದಾದ್ಯಂತ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಜರುಗುತ್ತಿರುವ ಈ ದಿನಾಚರಣೆಯ ಧ್ಯೇಯವಾಕ್ಯ ‘ವೈವಿಧ್ಯವನ್ನು ಬೆಳೆಸೋಣ, ಭರವಸೆಯನ್ನು ಉಣಿಸೋಣ’ ಎಂಬುದಾಗಿದೆ.

ದೂರದ ದಕ್ಷಿಣ ಅಮೆರಿಕದ ಎಂಡೀಸ್ ಪರ್ವತಶ್ರೇಣಿಯಲ್ಲಿ 10,000 ವರ್ಷಗಳ ಹಿಂದೆ ಅಂಕುರಿಸಿದ ಆಲೂಗೆಡ್ಡೆ, ಈಗಿನ ದಿನೋಪಯೋಗಿ ತರಕಾರಿಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಹಲವು ಜೀವಸತ್ವಗಳನ್ನು ಒಳಗೊಂಡಿರುವ ಆಲೂಗೆಡ್ಡೆಯಿಂದ ಪಲ್ಯ, ಸಾಂಬಾರ್, ಸಾಲಡ್, ಸಾಗುದಂತಹ ಸಾಮಾನ್ಯ ಖಾದ್ಯಗಳಿಂದ ಹಿಡಿದು ಬಾಯಲ್ಲಿ ನೀರೂರಿಸುವ ಕರಿದ ಚಿಪ್ಸ್, ಬೋಂಡ, ಸಮೋಸ, ಕಟ್ಲೆಟ್, ಫಿಂಗರ್ ಚಿಪ್ಸ್, ಪರೋಟದಂತಹ ಪದಾರ್ಥಗಳವರೆಗೆ ತಯಾರಿಸಬಹುದಾದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮಸಾಲೆ ದೋಸೆಯ ಜೊತೆಗೆ ಆಲೂಗೆಡ್ಡೆಯ ಪಲ್ಯ ಇಲ್ಲದಿರುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

ನಮ್ಮ ನಿತ್ಯ ಬಳಕೆಯ ಆಲೂಗೆಡ್ಡೆಗೆ ಸಾಕ್ಷಾತ್ ವಿಶ್ವಸಂಸ್ಥೆಯೇ ಮಾನ್ಯತೆ ನೀಡಿ ಅದಕ್ಕೊಂದು ದಿನವನ್ನೂ ನಿಗದಿ ಮಾಡಿ ‘ಆಲೂಗೆಡ್ಡೆಯ ಮಹತ್ವವನ್ನು ಸಾರಿರಿ’ ಎಂದು ಕರೆ ನೀಡಿದೆ. ವಿಶ್ವದಲ್ಲಿ 5,000 ಬಗೆಯ ಆಲೂಗೆಡ್ಡೆ ತಳಿಗಳಿವೆ. ಬೇರೆ ತರಕಾರಿಗಳಿಗೆ ಹೋಲಿಸಿದರೆ ‘ಬಡಜನರ ಸ್ನೇಹಿತ’ ಎಂಬ ಖ್ಯಾತಿಯುಳ್ಳ ಆಲೂಗೆಡ್ಡೆಯ ಬೆಲೆ ಕಡಿಮೆಯಾದ್ದರಿಂದ ಸಾಮಾನ್ಯರಿಂದ ಹಿಡಿದು ಶ್ರೀಮಂತರ ಅಡುಗೆ ಮನೆಗಳಲ್ಲಿಯೂ ಆಲೂಗೆಡ್ಡೆ ಇರುತ್ತದೆ.

ನಮ್ಮ ದೇಶದಲ್ಲಿ 69 ಬಗೆಯ ಆಲೂಗೆಡ್ಡೆಗಳನ್ನು ಹಿಂದಿನ ಮೂರು ಶತಮಾನಗಳಿಂದ ಬೆಳೆಯಲಾಗುತ್ತಿದೆ. ಪ್ರತಿ ತಿಂಗಳು ಹಲವು ಲಕ್ಷ ಟನ್ಗಳಷ್ಟು ಹೊರದೇಶಗಳಿಗೆ ರಫ್ತಾಗುತ್ತದೆ. ಆಲೂಗೆಡ್ಡೆಯು ಪೆರು ದೇಶದ ರಾಷ್ಟ್ರೀಯ ಬೆಳೆಯಾಗಿದೆ. ಈ ಉತ್ಪನ್ನದ ಪ್ರಾಮುಖ್ಯದ ಅರಿವು ಮೂಡಿಸಲು ಪ್ರತಿ ವರ್ಷದ ಮೇ 30ರಂದು ಅಲ್ಲಿ ಆಲೂಗೆಡ್ಡೆ ರಾಷ್ಟ್ರೀಯ ದಿನಾಚರಣೆ ನಡೆಯುತ್ತದೆ. ಆಲೂಗೆಡ್ಡೆಯ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಲು ವಿಶ್ವಸಂಸ್ಥೆಯ ಮುಂದೆ ವಿಚಾರ ಪ್ರಸ್ತಾಪಿಸಿದ ಪೆರು, ವಿಶ್ವಮಟ್ಟದ ಆಚರಣೆಗೆ ದಿನವೊಂದನ್ನು ನಿಗದಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪೆರುವಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಆಲೂಗೆಡ್ಡೆ ತಳಿಗಳಿವೆ. ವಿಶ್ವಸಂಸ್ಥೆಯ ಮುಂದಾಳತ್ವದಲ್ಲಿ ಫುಡ್ ಆ್ಯಂಡ್ ಅಗ್ರಿಕಲ್ಚರ್ ಆರ್ಗನೈಜೇಷನ್ (ಎಫ್ಎಒ) ಆಲೂಗೆಡ್ಡೆ ದಿನಾಚರಣೆ ನಡೆಸುವ ನೆವದಲ್ಲಿ ಅದರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮಹತ್ವಗಳನ್ನು ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ವಿಶ್ವದ ಬಹುತೇಕ ವಾಯುಗುಣಗಳಲ್ಲಿ ಬೆಳೆಯುವ ಸಾಮರ್ಥ್ಯವಿರುವ ಆಲೂಗೆಡ್ಡೆಯು ಹಲವು ದೇಶಗಳ ಮುಖ್ಯ ಬೆಳೆಯಾಗಿದೆ. ಹಸಿವು, ಅಪೌಷ್ಟಿಕತೆ ಮತ್ತು ಬಡತನ ನಿವಾರಣೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ಆಹಾರ ಭದ್ರತೆಯ ವಿಷಯದಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಆಲೂಗೆಡ್ಡೆಯು ಪರಿಸರಸ್ನೇಹಿ ಬೆಳೆಯಾಗಿದ್ದು, ಕಡಿಮೆ ಶಾಖವರ್ಧಕ ಅನಿಲಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ ಎಂಬುದು ಪತ್ತೆಯಾಗಿದೆ. ವಿಶ್ವ ಆರ್ಥಿಕತೆಗೆ ತನ್ನದೇ ಮಹತ್ವದ ಕೊಡುಗೆ ನೀಡುತ್ತಿರುವ ಆಲೂಗೆಡ್ಡೆ ಬೆಳೆಯು ಜಾಗತಿಕ ವ್ಯವಸಾಯ, ಆರ್ಥಿಕ ಅಭಿವೃದ್ಧಿಗೆ ಗಟ್ಟಿ ನೆಲೆ ಒದಗಿಸುವುದಲ್ಲದೆ, ಆಹಾರ ಅಭದ್ರತೆ ಮತ್ತು ಅಪೌಷ್ಟಿಕತೆ ಕಡಿಮೆ ಮಾಡುವಲ್ಲಿ ನಾವು ಯಾರೂ ಊಹಿಸದಂತಹ ಕೆಲಸ ಮಾಡಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವದ ಎಲ್ಲ ಭಾಗಗಳಲ್ಲಿಯೂ ಆಲೂಗೆಡ್ಡೆಯನ್ನು ಬೆಳೆಯಲಾಗುತ್ತಿದೆಯಾದರೂ ಚೀನಾ ಮತ್ತು ಭಾರತವು ವಿಶ್ವದ ಒಟ್ಟು ಬೆಳೆಯ ಮೂರನೇ ಒಂದು ಭಾಗದಷ್ಟು ಉತ್ಪಾದನೆ ಮಾಡುತ್ತಿವೆ. ವಾರ್ಷಿಕ 9.5 ಕೋಟಿ ಟನ್ ಉತ್ಪಾದನೆ ಮಾಡುತ್ತಿರುವ ಚೀನಾ ಪ್ರಥಮ ಸ್ಥಾನದಲ್ಲಿದ್ದರೆ, 5.4 ಕೋಟಿ ಟನ್ ಉತ್ಪಾದನೆ ಮಾಡುತ್ತಿರುವ ನಾವು ಎರಡನೇ ಸ್ಥಾನದಲ್ಲಿದ್ದೇವೆ ಮತ್ತು 20 ಲಕ್ಷ ಟನ್ ಬೆಳೆಯುವ ಉಕ್ರೇನ್ ಮೂರನೇ ಸ್ಥಾನದಲ್ಲಿದೆ.

ಅಚ್ಚರಿಯ ವಿಷಯವೆಂದರೆ, ಆಲೂಗೆಡ್ಡೆ ಬೆಳೆಯುವ ವಿಷಯದಲ್ಲಿ ಹತ್ತನೇ ಸ್ಥಾನದಲ್ಲಿರುವ ನೆದರ್ಲ್ಯಾಂಡ್ಸ್, ಬೆಳೆಯನ್ನು ರಫ್ತು ಮಾಡುವ ದೇಶಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ. ನಮ್ಮ ಉತ್ತರಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಆಲೂಗೆಡ್ಡೆ ಬೆಳೆಯುವ ರಾಜ್ಯವೆನಿಸಿದೆ. ವರ್ಷದುದ್ದಕ್ಕೂ ಬೆಳೆಯಬಹುದಾದ ಬೆಳೆಗೆ ವರ್ಷದ ಋತುಗಳಿಗೆ ಅನುಸಾರವಾಗಿ ಕನಿಷ್ಠ 80ರಿಂದ ಗರಿಷ್ಠ 130 ದಿನಗಳು ಬೇಕಾಗುತ್ತವೆ.

ವಿಟಮಿನ್ ‘ಸಿ’ ಜೊತೆಗೆ ಪೊಟ್ಯಾಶಿಯಂ, ಪಿಷ್ಟ ಪದಾರ್ಥ, ವಿಟಮಿನ್ ‘ಬಿ6’ ಮತ್ತು ಖನಿಜಾಂಶಗಳು ಹೇರಳವಾಗಿರುವ ಆಲೂಗೆಡ್ಡೆಯು ಹೃದಯದ ಆರೋಗ್ಯ, ಮಾಂಸಖಂಡಗಳು ಮತ್ತು ನರಮಂಡಲದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೆರವಾಗುತ್ತದೆ. ಹೊಳೆಯುವ ಬಿಳಿ ಬಣ್ಣದ ಆಲೂಗೆಡ್ಡೆಗಿಂತ ಮಾಸಲು ಬಣ್ಣದ ಆಲೂಗೆಡ್ಡೆಯಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕಗಳು (ಆ್ಯಂಟಿ ಆಕ್ಸಿಡೆಂಟ್) ಇರುತ್ತವೆ. ಕಬ್ಬಿಣ, ರಂಜಕ, ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ ಮತ್ತು ಸತುವಿನ ಅಂಶಗಳು ನಮ್ಮ ದೇಹದ ಮೂಳೆಗಳ ಆರೋಗ್ಯವನ್ನು ಕಾಪಾಡುತ್ತವೆ. ರಕ್ತದೊತ್ತಡ, ಉರಿಯೂತ, ಕ್ಯಾನ್ಸರ್ ನಿಯಂತ್ರಣಕ್ಕೆ ಬೇಕಾದ ಪೊಟ್ಯಾಶಿಯಂ ಮತ್ತು ಫೋಲೆಟ್ಗಳು ಆಲೂಗೆಡ್ಡೆಯಲ್ಲಿ ಹೇರಳವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.