ಬದುಕನ್ನು ಬಂದಂತೆ ಎದುರಿಸುವುದು, ಸವಾಲಾಗಿ ಸ್ವೀಕರಿಸುವುದು, ಕಷ್ಟಗಳ ವಿರುದ್ಧ ಈಜುವುದು ಎಂಬ ನುಡಿಗಟ್ಟುಗಳೆಲ್ಲ ಕ್ಲೀಷೆ ಎಂಬಷ್ಟು ಹಳತಾದವು. ಬದುಕನ್ನು ಸಿನಿಮಾದಂತೆ ರೂಪಿಸುವುದು ಎಂಬ ಹೊಸ ಪದಗುಚ್ಛವೊಂದು ನಮ್ಮ ದೈನಂದಿನ ಬದುಕಿನಲ್ಲಿ ಸ್ಥಾನ ಪಡೆಯುತ್ತಿದೆ ಎಂಬುದೊಂದು ಆತಂಕಕಾರಿ ವಿಸ್ಮಯ.

ಪ್ರಿ-ವೆಡ್ಡಿಂಗ್ ಫೋಟೊ ಶೂಟಿಂಗ್‍ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಿಗೆ ಬಿದ್ದ ಇತ್ತೀಚೆಗಿನ ಮೂರು ಸಂಗತಿಗಳನ್ನು ಗಮನಿಸೋಣ. ಮೊದಲನೆಯದು, ಬಿಳಿಯ ಬೆಡ್‌ಶೀಟಿನಲ್ಲಿ ಮೈ ಸುತ್ತಿಕೊಂಡು ಅರೆನಗ್ನ ಸ್ಥಿತಿಯಲ್ಲಿ ಕಾಣುವಂತಹ ಒಂದಷ್ಟು ಭಾವ ಭಂಗಿಗಳಲ್ಲಿ ತೆಗೆಯಲಾದ ಫೋಟೊಗಳು. ಅದರ ಕುರಿತು ಬಹುಶಃ ಹೆಚ್ಚಿನ ವಿವರಣೆ ಅಗತ್ಯವಿಲ್ಲ.

ಎರಡನೆಯದು, ಮದುವೆ ದಿಬ್ಬಣ ಹೋಗುತ್ತಿರುವಾಗ ಆ್ಯಕ್ಸಿಡೆಂಟ್ ಆಗಿ ಮುಖ, ತಲೆಯೆಲ್ಲ ರಕ್ತ ಮಯವಾದರೆ ಹೇಗಿರಬಹುದೋ ತೀವ್ರವಾಗಿ ಗಾಯಗೊಂಡ ಸ್ವರೂಪದಲ್ಲಿ, ಆ ರೀತಿಯ ಮೇಕಪ್ಪಿನಲ್ಲಿ ಛಾಯಾಚಿತ್ರಗಳು. ಮೂರನೆಯದು, ನೀರ ನಡುವೆ ತೆಪ್ಪದಲ್ಲಿ ಸಾಗಿದ ಭಾವಿ ವಧೂವರರು, ದಡದಲ್ಲಿ ನಿಂತು ಛಾಯಾಗ್ರಾಹಕ ಕ್ಲಿಕ್ಕಿಸುವ ಫೋಟೊಕ್ಕಾಗಿ ಪೋಸ್ ಕೊಡುವಷ್ಟರಲ್ಲಿ ತೆಪ್ಪ ಮಗುಚಿದ ಕಥೆ. ಅರಳಿ ಬಾಳಬೇಕಾದ ಹೂವುಗಳು ಫೋಟೊಫ್ರೇಮಿನೊಳಗೆ ಉಳಿದುಹೋಗುವಂತಾದ ದುರಂತ ಕಥೆ.

ಪ್ರಿ-ವೆಡ್ಡಿಂಗ್ ಫೋಟೊ ಶೂಟಿಂಗ್ ಎಂಬ ಪರಿಕಲ್ಪನೆ ದಿನದಿಂದ ದಿನಕ್ಕೆ ತಾಳುತ್ತಿರುವ ಸ್ವರೂಪ ಆಘಾತಕಾರಿ ಮಾತ್ರವಲ್ಲ ಅಸಹ್ಯ ಕೂಡಾ. ವೈಯಕ್ತಿಕ ಆಲ್ಬಮ್ಮಿಗಾಗಿ ತೆಗೆಸಿಕೊಳ್ಳುವ ಫೋಟೊಗಳು, ಮುಂದೊಂದು ದಿನ ಕುಳಿತು ಹಳೆಯ ನೆನಪುಗಳನ್ನು ಕೆದಕುವಾಗ ಮಧುರಾಲಾಪದ ತಂಗಾಳಿಯಂತಾದಾವು ಎಂಬ ಕಾರಣಕ್ಕೆ ದಿನಗಳನ್ನು ವ್ಯಯಿಸುವುದಾದರೆ ಸರಿ. ಆದರೆ ಅವುಗಳನ್ನು ಬೇಕಾಬಿಟ್ಟಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವವರು ಯಾರು? ಸ್ವತಃ ಆ ಚಿತ್ರಗಳಲ್ಲಿನ ಪಾತ್ರಧಾರಿಗಳೋ ಅಥವಾ ಇನ್ನಾರಾದರೋ ಎಂಬ ಗೊಂದಲ ಕಾಡುತ್ತದೆ.

ಖಾಸಗಿತನದ ಹಕ್ಕೊಂದು ಎಲ್ಲರಿಗೂ ಅಗತ್ಯವಾಗಿ ಬೇಕಾದದ್ದೇ ಆದರೂ ಸಂಬಂಧಪಟ್ಟವರೂ ಪಡದವರೂ ಇವರ ಖಾಸಗಿಕ್ಷಣಗಳನ್ನು ಜಾಲಾಡುವಂತಾದರೆ ಅದಕ್ಕಿಂತ ಘೋರ ಇನ್ನೇನಿಲ್ಲ. ಫೋಟೊಗ್ರಫಿ ದುಬಾರಿಯಾಗಿದ್ದ ಕಾಲದಲ್ಲಿ ಪ್ರತೀ ಫೋಟೊವೂ ಅಮೂಲ್ಯವಾಗಿತ್ತು. ರೋಲ್ ಮುಗಿದು ಹೋಗುವ ಭೀತಿಗೆ ಸಿಕ್ಕಸಿಕ್ಕದ್ದನ್ನೆಲ್ಲ ಕ್ಲಿಕ್ಕಿಸುವ ಚಟ ಯಾರಿಗೂ ಇರಲಿಲ್ಲ. ಇಂದು ಹಾಗಿಲ್ಲ. ಬೇಕಾಗಿಯೋ ಬೇಡದೆಯೋ ನಮ್ಮೆಲ್ಲರ ಕೈಯಲ್ಲೂ ಮೊಬೈಲ್ ಕ್ಯಾಮೆರಾಗಳಿವೆ. ನಾವು ಯಾವ ಸಂದರ್ಭದಲ್ಲಿ ಯಾರ ಮೊಬೈಲ್ ಕ್ಲಿಕ್ಕಿಗೆ ಗುರಿಯಾಗುತ್ತೇವೋ ಗೊತ್ತಿಲ್ಲ. ಪಾಪರಾಜಿಗಳ ಭಯ ಯಾರಿಗಿಲ್ಲ ಹೇಳಿ! ಬಸ್ ಸ್ಟ್ಯಾಂಡಲ್ಲಿ ನಿಂತು ತಲೆಕೆರೆದುಕೊಂಡದ್ದು, ರಸ್ತೆಬದಿ ಪಾನಿಪೂರಿ ತಿನ್ನುವುದಕ್ಕಾಗಿ ಬಾಯ್ತೆರೆದದ್ದು ಎಲ್ಲವೂ ಯಾರದೋ ಮೊಬೈಲಲ್ಲಿ ದಾಖಲಾದರೂ ಆದಾವು!

ಸರಳವಾದ ಬದುಕನ್ನು ಸಂಕೀರ್ಣಗೊಳಿಸುತ್ತಾ ನಡೆಯುತ್ತಿದ್ದೇವೆ. ಮಧ್ಯಮವರ್ಗದವರಿಗೆ ಇಂದು ಮದುವೆಯ ಖರ್ಚಿನ ಜೊತೆಗೆ ಪ್ರಿ-ವೆಡ್ಡಿಂಗ್ ಫೋಟೊಗಳಿಗಾಗಿಯೂ ಹಣ ವ್ಯಯಿಸಬೇಕಾಗುವುದು ಒಂದು ಹೊರೆಯೇ ಹೌದು. ಆದರೆ ಸವಿನೆನಪುಗಳಿಗಾಗಿ ತೆಗೆಸಬೇಕಾದ ಫೋಟೊಗಳನ್ನು ಸಿನಿಮಾ ಶೂಟಿಂಗಿನ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಅಗತ್ಯ ಏನು? ಹುಡುಗಿ ಎತ್ತರದ ಬೆಟ್ಟದಿಂದ ಬೀಳುವಂತೆ, ಹುಡುಗ ಹೀರೊನಂತೆ ಬಂದು ಅವಳನ್ನು ರಕ್ಷಿಸುವಂತೆಲ್ಲ ಚಿತ್ರೀಕರಣ ಮಾಡಹೊರಟು ಎಡವಟ್ಟುಗಳಾದರೆ ಅವರ ತಾಯ್ತಂದೆಯರು ಮಾಡಬೇಕಾದುದು ಏನು?

ಇಂದು ಬದುಕಿಗೂ ಸಿನಿಮಾಕ್ಕೂ ನಡುವಿನ ಅಂತರ ತೀರಾ ಕಡಿಮೆಯಾಗಿದೆ. ‘ನಾವು ಬದುಕಿದ್ದೇವೆ ಎಂದು ಗೊತ್ತಾಗಬೇಕಾದರೆ ಫೇಸ್‌ಬುಕ್ಕಿನಲ್ಲಿ ಫೋಟೊ ಶೇರ್ ಮಾಡುತ್ತಲೋ ನಮ್ಮ ಆಲೋಚನೆಗಳನ್ನು ಶೇರ್ ಮಾಡುತ್ತಲೋ ಇರಬೇಕು’ ಎಂಬುದು ಸನ್ಮಿತ್ರರ ಅನುಭವದ ಮಾತು! ಒಪ್ಪತಕ್ಕದ್ದೇ. ಆದರೆ ಬದುಕುವುದೇ ಸಾಮಾಜಿಕ ಜಾಲತಾಣಗಳಿಗಾಗಿ, ಜಾಲತಾಣಗಳಲ್ಲಿ ಅಲ್ಲವಲ್ಲ? ವ್ಯತ್ಯಾಸದ ಆ ಒಂದು ಸೂಕ್ಷ್ಮವಾದ ತಂತು ಕತ್ತರಿಸಿಹೋಗುತ್ತಿದೆ.

ಹಲವರ ಸ್ಟೇಟಸ್ಸುಗಳನ್ನು ಗಮನಿಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ತಮ್ಮನ್ನು ತಾವೇ ಹೀರೊ, ಹೀರೊಯಿನ್ನುಗಳಂತೆ ಬಿಂಬಿಸಿಕೊಳ್ಳುವ, ಫೋಟೊಗಳ ಜತೆಗೆ ನುಡಿಮುತ್ತುಗಳನ್ನು ಹಾಕುವ ಸ್ವ-ವೈಭವೀಕರಣಗೀಳಾಗಿ ಬೆಳೆಯುತ್ತಿದೆ. ಸೆಲ್ಫಿಯೆಂಬುದು ಮನಸ್ಸಿನ ವಿಕಾರವನ್ನು ಬಿಂಬಿಸುವ ಮಟ್ಟಕ್ಕೆ ತಿರುಗಿದೆ. ಬದುಕನ್ನು ಸಂಭ್ರಮಿಸುವುದು ಎಂಬುದರ ನಿಜಾರ್ಥ ಏನು?

ಸಂಸ್ಕೃತಿ-ಆಚರಣೆಗಳಲ್ಲಿ ಬದಲಾವಣೆಗಳಾಗಲಿ, ದಿನದಿಂದ ದಿನಕ್ಕೆ ಉತ್ತಮಿಕೆಯ ಕಡೆಗೆ ಜೀವನ ಸಾಗಲಿ ಎಂದುಕೊಳ್ಳುವುದರಲ್ಲಿ ತಪ್ಪಿಲ್ಲದಿರಬಹುದು. ಆದರೆ ಅಲ್ಲಿ ನಿಜಕ್ಕೂ ಕಳೆದುಹೋಗುತ್ತಿರುವುದೇನು? ಬದಲಾವಣೆಯೆಂಬುದು ಸುಧಾರಣೆಯಾದರೆ ಸಂತೋಷ. ಪತನವಾದರೆ ಹೇಗೆ? ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯಬದ್ಧ ಆಚರಣೆಗಳಿಗೆ ಅವುಗಳದೇ ಆದ ಅರ್ಥವಿದೆ. ಅವನ್ನೆಲ್ಲ ಮೀರಿ ಆಧುನಿಕರೆನಿಸಿಕೊಳ್ಳುವ ಭರಾಟೆ ನಮ್ಮೊಳಗಿನ ಮುಗ್ಧತೆಯನ್ನು, ಕುತೂಹಲವನ್ನು, ಆಯಾ ಕ್ಷಣಗಳಲ್ಲಿ ಬದುಕುವ ಸಂತೋಷವನ್ನು ಎಲ್ಲವನ್ನೂ ಕಸಿದುಕೊಂಡು ಹೋಗುತ್ತಿದೆ.

ಬದುಕು ಅವರವರ ವೈಯಕ್ತಿಕ ಆಯ್ಕೆ, ಹಕ್ಕು ಎಂದೆಲ್ಲ ನಾವು ಮಾತನಾಡಬಹುದು. ಆದರೆ ನಾವಿರುವ ಸಮಾಜಕ್ಕೂ ನಮ್ಮ ಬದ್ಧತೆಯ ಕೆಲವಂಶಗಳು ಸಲ್ಲಬೇಡವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.