ಹಾವೇರಿಯಲ್ಲಿ ಕನ್ನಡದ ಹಬ್ಬ ನಡೆಯುತ್ತಿದೆ. ಈ ನುಡಿಜಾತ್ರೆಯ ಕವಿಗೋಷ್ಠಿಯಲ್ಲಿ ‘ಕವಿತೆಗಳನ್ನು ವಾಚಿಸಬೇಕೆ ವಿನಾ ಹಾಡುವಂತಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹೇಳಿದ್ದಾರೆ. ಈ ನೆಲೆಯಲ್ಲಿ, ಕವಿತೆಯನ್ನು ಹಾಡುವ ನಮ್ಮ ಪರಂಪರೆಯ ಬಗೆಗಿನ ಒಂದು ಅವಲೋಕನ ಈ ಸಂದರ್ಭದಲ್ಲಿ ಪ್ರಸ್ತುತ ಎನಿಸಬಲ್ಲದು.

ನಾದದಿಂದ ಸಮೃದ್ಧವಾಗಿರುವ ಭಾವಗೀತೆಗಳನ್ನು ರಚಿಸಿದ ದ.ರಾ.ಬೇಂದ್ರೆಯವರು ತಮ್ಮ ಹಲವು ಕವಿತೆ ಗಳನ್ನು ಹಾಡುತ್ತಿದ್ದರು. ನೂರಾರು ಸ್ವರ ಪದಗಳನ್ನು ರಚಿಸಿದ ನಿಜಗುಣ ಶಿವಯೋಗಿಗಳು, ಆನು ಒಲಿದಂತೆ ಹಾಡುವೆ ಎನ್ನುವ ವಚನಕಾರರು, ಹಾಡು ಹಾಗೂ ಕವಿತೆಯನ್ನು ಒಂದಾಗಿ ಭಾವಿಸಿದ ಕೀರ್ತನಕಾರರು, ತತ್ವಪದಕಾರರು, ರಾಗ ತಾಳಗಳನ್ನು ನಿರ್ದೇಶಿಸಿ ಭಾವಗೀತೆಗಳನ್ನು ರಚಿಸಿದ ನವೋದಯರು, ಭಾವ ಗೀತೆಯಲ್ಲಿಯೇ ಭಿನ್ನ ಮಾದರಿಯ ಹಾಡುಗಳನ್ನು ಬರೆದು ಕಾವ್ಯ ಹಾಗೂ ಸಂಗೀತದ ಸಂಬಂಧವನ್ನು ಇನ್ನಷ್ಟು ಹತ್ತಿರಕ್ಕೆ ಬೆಸೆದ ನವ್ಯೋತ್ತರ ಕವಿಗಳು, ಸಾಮಾಜಿಕ ತಾರತಮ್ಯಗಳ ವಿರುದ್ಧ ಬಂಡೆದ್ದು ಹೋರಾಟದ ಹಾಡುಗಳನ್ನು ಬರೆದ ಸಿದ್ಧಲಿಂಗಯ್ಯ, ಬರಗೂರು ರಾಮಚಂದ್ರಪ್ಪ, ಕೋಟಿಗಾನಹಳ್ಳಿ ರಾಮಯ್ಯನವರವರೆಗೂ ಕವಿತೆಯನ್ನು ಹಾಡುವ ಪರಂಪರೆ ಬೆಳೆದುಬಂದಿದೆ.

ಜನಪದರಲ್ಲಿ ಹಾಡಿನ ಹಂಗನ್ನು ಹರಿದು ಕೊಂಡ ಒಂದಾದರೂ ಉದಾಹರಣೆ ದೊರೆಯು ವುದಿಲ್ಲ. ಕನ್ನಡದ ಆದಿಕವಿ ಪಂಪ ಸ್ವತಃ ಗಮಕಿ ಯಾಗಿದ್ದ. ಕನ್ನಡ ಸಾಹಿತ್ಯದೊಂದಿಗೆ ಕಾವ್ಯ ಹಾಗೂ ಹಾಡುಗಾರಿಕೆಯ ಸಂಬಂಧವೂ ಅಷ್ಟೇ ಸುದೀರ್ಘ ಚರಿತ್ರೆಯನ್ನು ಹೊಂದಿದೆ. ಕನ್ನಡ ಕಾವ್ಯವು ನವ್ಯಕಾವ್ಯ ಪರಿಸರಕ್ಕೆ ಪಕ್ಕಾಗದಿದ್ದರೂ ಎಪ್ಪತ್ತರ ದಶಕದಲ್ಲಿ ಅನೇಕರು ಆಂಗ್ಲಕವಿ
ಗಳನ್ನು ಅನುಕರಿಸಿ ಕನ್ನಡದಲ್ಲಿ ನವ್ಯಕವಿತೆ
ಗಳನ್ನು ರಚಿಸತೊಡಗಿದರು. ಮೇಲಾಗಿ ನವ್ಯಕವಿಗಳು ಕನ್ನಡದಲ್ಲಿ ಸಹಜವಾಗಿ ಅರಳತೊಡಗಿದ್ದ ಭಾವಗೀತೆ ಗಳನ್ನು, ನವೋದಯ ಹಾಗೂ ದಲಿತ, ಬಂಡಾಯ ಕವಿಗಳನ್ನು ಲೇವಡಿ ಮಾಡಿದ್ದು ಕೂಡಾ ನಡೆಯಿತು. ಎಲ್ಲವನ್ನೂ ಶ್ರೇಷ್ಠತೆಯ ಮಾನದಂಡದಿಂದ ನೋಡಿದ ನವ್ಯ ಬರಹಗಾರರು ಹಾಗೂ ವಿಮರ್ಶಕರು ಜನಪದ ಸಾಹಿತ್ಯ ಮತ್ತು ಕನ್ನಡದ ಭಾವಗೀತೆಯ ಹಾಡುಗಾರಿಕೆಯನ್ನು ಇಂದಿಗೂ ಒಪ್ಪಿಕೊಳ್ಳಲು ಸಿದ್ಧರಿಲ್ಲದಿರುವುದನ್ನು ಗಮನಿಸಬಹುದು.

ಕನ್ನಡದ ಹೆಚ್ಚುಗಾರಿಕೆಗೆ ಕಾರಣವಾಗಿರುವ ಸುಗಮ ಸಂಗೀತದಂತಹ ಕಾವ್ಯಸಂಗೀತದ ಮಾದರಿ ಗಳು ನಮ್ಮ ನೆರೆಯ ಬೇರಾವ ರಾಜ್ಯಭಾಷೆಗಳಲ್ಲಿಯೂ ಇಲ್ಲ ಎಂಬುದನ್ನು ಗಮನಿಸಬೇಕು. ಬಂಗಾಳಿಯಲ್ಲಿ ರವೀಂದ್ರ ಸಂಗೀತ, ನಜರುಲಿ ಸಂಗೀತ ಹುಟ್ಟಿ ಬೆಳೆದಿವೆ. ರಾಷ್ಟ್ರೀಯ ಚಳವಳಿ, ಕನ್ನಡ ಏಕೀಕರಣ ಚಳವಳಿ ಸಂದರ್ಭಗಳಲ್ಲಿ ಕನ್ನಡದ ಹಾಡುಗಳು ಹೋರಾಟದ ಕಿಚ್ಚು ಹೊತ್ತಿಸಿದ್ದನ್ನು ಮರೆಯಲಾಗದು. ವಿಮರ್ಶಕ ಕಿ.ರಂ.ನಾಗರಾಜ ಅವರು ಸಿದ್ಧಲಿಂಗಯ್ಯ ಅವರ ‘ಹೊಲೆಮಾದಿಗರ ಹಾಡು’ ಕೃತಿಗೆ ಮುನ್ನುಡಿ ಬರೆಯುತ್ತ, ‘ಕಾವ್ಯವನ್ನು ಮೌನವಾಗಿ ಓದಿಕೊಳ್ಳುವ ಪದ್ಧತಿಗೆ ಬದಲಾಗಿ ಗಟ್ಟಿಯಾಗಿ ಹಾಡಿಕೊಳ್ಳಬೇಕು’ ಎಂದಿದ್ದರು. ಡಿ.ಆರ್.ನಾಗರಾಜ್ ಕೂಡಾ ದಲಿತ, ಬಂಡಾಯ ಕವಿತೆಗಳ ಹಾಡುಗಾರಿಕೆಯ ಅಗತ್ಯವನ್ನು ಸಮರ್ಥಿಸಿದ್ದರು. ಕವಿತೆಯನ್ನು ಮೌನವಾಗಿ ಓದಿ ಕೊಳ್ಳಬೇಕು ಎಂಬ ವಾದ ತಪ್ಪೇನಲ್ಲ. ಆದರೂ ಗೇಯಲಯದ ಕವಿತೆಗಳನ್ನು ಒಳಗೊಂಡಂತೆ ಯಾವ ಕವಿತೆಯನ್ನೂ ಹಾಡಬಾರದು ಎಂಬ ಮಾತಿಗೆ ಅರ್ಥವಿಲ್ಲ. ಕನ್ನಡ ಕಾವ್ಯವು ಜನಮಾನಸಕ್ಕೆ ಹತ್ತಿರವಾದದ್ದು ಗಮಕ ಮೊದಲಾದ ಗಾಯನ ಪದ್ಧತಿಯಿಂದ. ಸುಗಮಸಂಗೀತದ ಹೆಸರಿನಲ್ಲಿ ಜನ ಪ್ರಿಯವಾಗಿರುವ ಇಂದಿನ ಭಾವಗೀತೆಯ ಗಾಯನ ಪದ್ಧತಿಯು ಗಮಕದ ಆಧುನಿಕ ರೂಪವಾಗಿದ್ದು, ಅನಕ್ಷರಸ್ಥ ಸಮುದಾಯಕ್ಕೂ ಕವಿ ರಚನೆಗಳು ಮನೆ ಮನ ತಲುಪಲು ಸಾಧ್ಯವಾಯಿತು.

‘ನಿಮ್ಮ ರಚನೆಗಳಲ್ಲಿ ನಿಮಗಿಷ್ಟವಾದ ಭಾವಗೀತೆ ಯಾವುದು’ ಎಂಬ ಅಭಿಮಾನಿಯೊಬ್ಬನ ಪ್ರಶ್ನೆಗೆ ಬೇಂದ್ರೆ, ‘ಕವಿಯಾಗಿ ನನಗೆ ಎಲ್ಲವೂ ಇಷ್ಟವೆ, ಆದರೂ ಏನಾದರೂ ಅನಾಹುತ ಸಂಭವಿಸಿ ನನ್ನ ಕವಿತೆಗಳು ನಾಶವಾಗುವ ಸನ್ನಿವೇಶ ಬಂದರೆ, ಜನರ ಬಾಯಲ್ಲಿ ಹಾಡಾಗಿ ಉಳಿದಿರುತ್ತದಲ್ಲ, ಅದೇ ನನ್ನ ಪ್ರಿಯ ಕವಿತೆ’ ಎಂದಿದ್ದರು. ಒಲವಿನ ಕವಿ ಕೆ.ಎಸ್.ನರಸಿಂಹಸ್ವಾಮಿಯವರು ತಾವು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಭಿಕ್ಷುಕನೊಬ್ಬ ‘ಒಂದಿರುಳು ಕನಸಿನಲಿ’ ಭಾವ ಗೀತೆಯನ್ನು ಹಾಡಿಕೊಂಡು ಬಂದಾಗ ರೋಮಾಂಚಿತ ರಾಗಿ, ‘ನಿಜಕ್ಕೂ ನನ್ನ ಕವಿತೆ ಸಾರ್ಥಕವಾಯಿತು,ಧನ್ಯನಾದೆ’ ಎಂದು ಉದ್ಗರಿಸಿದ್ದರು.

ಕನ್ನಡ ಸಾಹಿತ್ಯದ ಮೇರು ಪ್ರತಿಭೆಗಳಾದ ಎಂ. ಗೋಪಾಲಕೃಷ್ಣ ಅಡಿಗ ಹಾಗೂ ಚಂದ್ರಶೇಖರ ಕಂಬಾರ ಅವರ ನಡುವೆ ನಡೆದ ಒಂದು ಪುಟ್ಟ ಜಗಳ ಸಾಹಿತ್ಯದ ಓದುಗರಿಗೆ ಪರಿಚಿತವಾದದ್ದೆ. ಸಮಾ ರಂಭವೊಂದರಲ್ಲಿ ಕಂಬಾರರು ತಮ್ಮದೊಂದು ಕವಿತೆಯನ್ನು ಹಾಡಲು ಉತ್ಸುಕರಾದಾಗ ಅಡಿಗರು ‘ಕವಿತೆ ಇರುವುದು ಖಾಸಗಿಯಾಗಿ ಓದಿಕೊಳ್ಳಲು, ನೀವು ಹಾಡಬಾರದು’ ಎಂದರಂತೆ. ಇದನ್ನು ಒಪ್ಪದ ಕಂಬಾರರು ‘ನನ್ನ ಕವಿತೆ ಇರುವುದೇ ಹಾಡಲು’ ಎಂದು ಹಾಡಿದರಂತೆ. ಪ್ರೇಕ್ಷಕರು ಕಂಬಾರರ ಗಾಯನವನ್ನು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು ಕೂಡಾ.

ವಿಪರ್ಯಾಸವೆಂದರೆ, ಅಡಿಗರ ನವ್ಯಕವಿತೆಗಳು ಸಾಹಿತ್ಯಾಸಕ್ತರಲ್ಲಿ ಎಲ್ಲರನ್ನೂ ತಲುಪುವಲ್ಲಿ ಯಶಸ್ವಿ ಯಾಗಲಿಲ್ಲ. ಆದರೆ ಅವರು ಆರಂಭಿಕ ದಿನಗಳಲ್ಲಿ ಬರೆದ ಹತ್ತಾರು ಭಾವಗೀತೆಗಳು ಇಂದಿಗೂ ಜನ ಸಾಮಾನ್ಯರ ನಾಲಗೆಯಲ್ಲಿ ಪ್ರತಿದಿನ ಹಾಡಾಗಿ ನಲಿಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.