2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರ್ಕಾರ ಮುಂದಿಟ್ಟ ‘ನೆರೆಹೊರೆ ಮೊದಲು’ ಯೋಜನೆ, ಭಾರತೀಯ ವಿದೇಶಾಂಗ ನೀತಿಯನ್ನು ಮರು ರೂಪಿಸುವ ದಿಟ್ಟ ಹೆಜ್ಜೆ ಎಂದು ಅಂತರರಾಷ್ಟ್ರೀಯ ರಾಜಕೀಯ ಚಿಂತಕರು ಸ್ಪಷ್ಟವಾಗಿ ಗುರುತಿಸಿದ್ದರು. ಮೋದಿ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಎಲ್ಲಾ ನಾಯಕರನ್ನು ಆಹ್ವಾನಿಸಿದ ಕ್ರಮವನ್ನು, ಆ ದೂರದೃಷ್ಟಿ ಯೋಜನೆಯ ಭಾಗ ಎಂದು ವಿಶ್ಲೇಷಿಸಲಾಗಿತ್ತು. ಈ ಒಕ್ಕೂಟದ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ, ಮುಖ್ಯವಾಗಿ ಏಷ್ಯಾ ಖಂಡದಲ್ಲಿ ಭಾರತ ಹೊಂದಿರುವ ಸಾರ್ವಭೌಮತ್ವವನ್ನು ಸೌಹಾರ್ದದಿಂದ ಕಾಪಿಟ್ಟುಕೊಳ್ಳುವ ಆಲೋಚನೆಯನ್ನು ಸರ್ಕಾರ ಇಟ್ಟ ಪ್ರತಿ ಹೆಜ್ಜೆಯಲ್ಲಿಯೂ ಗುರುತಿಸಬಹುದಾಗಿತ್ತು.

ಇಂತಹ ಹೊತ್ತಿನಲ್ಲೇ, ಚೀನಾದ ವ್ಯೂಹಾತ್ಮಕ ರಾಜಕೀಯದ ಭಾಗವಾಗಿ ಏಷ್ಯಾದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ಘಟಿಸಿದವು. 19ನೇ ಸಾರ್ಕ್ ಸಮ್ಮೇಳನ ಇಸ್ಲಾಮಾಬಾದ್ನಲ್ಲಿ ನಡೆಯುವ ಕುರಿತು ಭಾರತ ಎತ್ತಿದ ಪ್ರಶ್ನೆಗಳ ಕಾರಣಕ್ಕೆ ಭಾರತ ಮತ್ತು ಪಾಕಿಸ್ತಾನದ ಸಂಬಂಧವು ಸಂಘರ್ಷದ ಕಡೆ ಮುಖ ಮಾಡಿತು. ನೇಪಾಳದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಕೆ.ಪಿ.ಶರ್ಮಾ ಒಲಿ ಅವರನ್ನು ಪ್ರಧಾನಿ ಪಟ್ಟಕ್ಕೆ ಏರಿಸಿದವು. ಈಗ ಅವರು ಚೀನಾದ ನೆರವಿನೊಂದಿಗೆ ‘ನೇಪಾಳಿ ರಾಷ್ಟ್ರೀಯತೆ’ ಬಾವುಟವನ್ನು ಹಾರಿಸುತ್ತಿದ್ದಾರೆ. ಶ್ರೀಲಂಕಾದ ಮಹಿಂದಾ ರಾಜಪಕ್ಸೆ ಜಾಗದಲ್ಲಿ ಮೈತ್ರಿಪಾಲ ಸಿರಿಸೇನ ಅಧಿಕಾರಕ್ಕೆ ಬಂದಿದ್ದಾರೆ. ಇದಕ್ಕೂ ಮೊದಲು 2015ರ ಸುಮಾರಿಗೆ ಶ್ರೀಲಂಕಾದ ಕೊಲಂಬೊ ಸಮುದ್ರ ತೀರದಲ್ಲಿ ಚೀನಾ ಸಬ್ ಮರಿನ್ಗಳು ಕಂಡುಬಂದ ಕುರಿತು ಗುಪ್ತಚರ ಇಲಾಖೆಯ ವರದಿಗಳು ಪ್ರಸ್ತಾಪಿಸಿದ್ದವು. ಆ ಕಾರಣಕ್ಕೆ, ಶ್ರೀಲಂಕಾ ಅಧ್ಯಕ್ಷರ ಚುನಾವಣೆಯಲ್ಲಿ ಭಾರತ ಪ್ರಭಾವ ಬೀರಿತ್ತು ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದವು.

ಇಷ್ಟೆಲ್ಲಾ ಸಂಗತಿಗಳ ನಡುವೆಯೂ, ಚೀನಾ ಮತ್ತು ಪಾಕಿಸ್ತಾನದೊಂದಿಗೆ ಅಂತರರಾಷ್ಟ್ರೀಯ ಗಡಿಯಲ್ಲಿನ ಘರ್ಷಣೆಗಳ ಆಚೆಗೂ ಉತ್ತಮ ಸಂಬಂಧ ಹೊಂದುವ ಪ್ರಯತ್ನಗಳನ್ನು ಭಾರತ ಜಾರಿಯಲ್ಲಿಟ್ಟಿದೆ. ಅದರಲ್ಲಿಯೂ ಪಾಕಿಸ್ತಾನದೊಂದಿಗೆ ತನ್ನ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನವೊಂದು ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ನಡುವಿನ ಉಫಾ (Ufa) ಮಾತುಕತೆ ನಂತರ ಏರ್ಪಟ್ಟಿತ್ತು. ಅದರ ಭಾಗವಾಗಿ 2015ರಲ್ಲಿ ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯನ್ನು ಬ್ಯಾಂಕಾಕಿನಲ್ಲಿ ನಡೆಸಲಾಗಿತ್ತು. ನಂತರ ಮೋದಿ ಡಿಸೆಂಬರ್ನಲ್ಲಿ ಲಾಹೋರ್ಗೆ ಅನಿರೀಕ್ಷಿತ ಭೇಟಿ ನೀಡಿ ಷರೀಫ್ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಸಹ ಕೋರಿದ್ದರು.

ಆದರೆ, 2016ರ ಜನವರಿಯಲ್ಲಿ ಭಾರತದ ನೌಕಾನೆಲೆ ಪಠಾಣ್ಕೋಟ್ ಹಾಗೂ ಸೆಪ್ಟೆಂಬರ್ನಲ್ಲಿ ಉರಿ ಸೇನಾ ನೆಲೆ ಮೇಲಿನ ದಾಳಿ, ಅದಕ್ಕೆ ಪ್ರತಿಯಾಗಿ ಭಾರತ ನಡೆಸಿತು ಎನ್ನಲಾದ ಸರ್ಜಿಕಲ್ ಸ್ಟ್ರೈಕ್ ಭಾರತ– ಪಾಕಿಸ್ತಾನದ ಸಂಬಂಧವನ್ನು ಮೊದಲಿದ್ದ ಸ್ಥಿತಿಗೇ ತಂದು ನಿಲ್ಲಿಸಿದವು. 40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಇತ್ತೀಚಿನ ಪುಲ್ವಾಮಾ ದಾಳಿ ಭಾರತದ ಜನಸಾಮಾನ್ಯರಲ್ಲಿ ಪ್ರತೀಕಾರದ ಮನೋಭಾವವನ್ನು ಹುಟ್ಟುಹಾಕಿತು. ಸ್ವತಃ ಪ್ರಧಾನಿ ‘ನಾವು ಪ್ರತೀಕಾರ ತೆಗೆದುಕೊಳ್ಳುತ್ತೇವೆ’ ಎಂಬರ್ಥದ ಮಾತುಗಳನ್ನು ಹೇಳುವ ಒತ್ತಡ ಸೃಷ್ಟಿಯಾಯಿತು. ಪರಿಣಾಮವಾಗಿ, ಮಂಗಳವಾರ ಭಾರತದ ವಾಯುಪಡೆಯು ಪಾಕಿಸ್ತಾನದ ಗಡಿಯೊಳಕ್ಕೆ ನುಗ್ಗಿ ಜೈಷ್– ಎ– ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳನ್ನು ಧ್ವಂಸಗೊಳಿಸಿದೆ. ತಕ್ಕ ಪ್ರತೀಕಾರಕ್ಕೆ ತಾನೂ ಸಿದ್ಧ ಎಂದು ಪಾಕಿಸ್ತಾನ ಹೇಳಿದೆ. ಈ ಬೆಳವಣಿಗೆ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣವನ್ನು ಸೃಷ್ಟಿಸುತ್ತಿರುವಂತೆ ಕಾಣುತ್ತಿದೆ.

ಈ ಸ್ಥಿತಿಯಲ್ಲಿ ಎರಡೂ ಕಡೆಯ ಮಾಧ್ಯಮಗಳು, ಅದರಲ್ಲಿಯೂ ದೃಶ್ಯಮಾಧ್ಯಮಗಳು ಒಟ್ಟು ಸ್ಥಿತಿಯನ್ನು ರೋಚಕಗೊಳಿಸಿ ಬಿತ್ತರಿಸುತ್ತಿರುವುದರಿಂದ ಸಾರ್ವಜನಿಕವಾಗಿ ಯುದ್ಧೋನ್ಮಾದದ ಮನಸ್ಥಿತಿ ಸೃಷ್ಟಿಯಾದಂತೆ ಕಾಣುತ್ತಿದೆ. ಯುದ್ಧ ಎಂದರೆ ಟಿ.ವಿ. ಸ್ಟುಡಿಯೊಗಳಲ್ಲಿ ಕುಳಿತು ಆಡುವ ಆಕ್ರೋಶದ ಮಾತುಗಳಲ್ಲ, ಸ್ಟುಡಿಯೊ ರೂಮಿನ ಕಂಪ್ಯೂಟರ್ ಸೃಷ್ಟಿಸುವ ಗ್ರಾಫಿಕ್ ಯುದ್ಧಗಳಲ್ಲ ಎಂಬ ತಿಳಿವು ನಮ್ಮ ಮಾಧ್ಯಮಗಳಿಗೆ ದಕ್ಕಬೇಕಿದೆ.

ವಾಸ್ತವದಲ್ಲಿ ಇಂದಿಗೂ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಮೂಲ ಸೌಕರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸೋಲುತ್ತಿರುವ ಭಾರತ, ಪಾಕಿಸ್ತಾನದಂತಹ ಅಭಿವೃದ್ಧಿಶೀಲ ದೇಶಗಳ ನಡುವೆ ನಡೆಯುವ ಘರ್ಷಣೆಗಳು, ಈ ದೇಶಗಳ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ಅಸಮರ್ಪಕ ನಿರ್ಧಾರವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಜಾಗತಿಕ ರಾಜಕೀಯದಲ್ಲಿ ನಿಧಾನವಾಗಿ ರೂಪುಗೊಳ್ಳುತ್ತಿರುವ ಏಷ್ಯಾ ರಾಷ್ಟ್ರಗಳ ಸಕಾರಾತ್ಮಕ ಪ್ರಭಾವ ಒಮ್ಮೆಲೇ ಹಿಮ್ಮುಖವಾಗಿ ಚಲಿಸಲಿದೆ. ಜಗತ್ತಿನ ಶ್ರೀಮಂತ ರಾಷ್ಟ್ರಗಳ ರಾಜಕೀಯವೂ ಘರ್ಷಣೆಗಳ ಪರವೇ ಇರುವುದರಿಂದ, ಪ್ರಸ್ತುತ ಉದ್ವಿಗ್ನ ಸನ್ನಿವೇಶದ ಕುರಿತು ಎರಡೂ ದೇಶಗಳ ರಾಜಕೀಯ ನಾಯಕತ್ವ, ವಿದೇಶಾಂಗ ಸಚಿವಾಲಯ, ರಾಯಭಾರಿಗಳು ಸಮಚಿತ್ತದಿಂದ ಆಲೋಚಿಸಬೇಕಿದೆ. ಏಕೆಂದರೆ ‘ಯುದ್ಧಕ್ಕೆ ಆರಂಭವಿದೆ, ಕೊನೆ ಎಂಬುದಿಲ್ಲ’ ಎಂಬ ಜಾಗತಿಕ ಸತ್ಯವನ್ನು ಜಗತ್ತಿನ ಚರಿತ್ರೆ ಈಗಾಗಲೇ ನಮಗೆ ತಿಳಿಸಿಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.