‘ನಿರಂಜನ’ ಎಂಬ ಹೆಸರು ಪ್ರಗತಿಶೀಲ ಸಾಹಿತ್ಯದ ಒಂದು ರೋಮಾಂಚನ. ಈಗ ಅವರಿಗೆ ನೂರರ ನೆನಪಿನ ನಮನ.

ಪ್ರಗತಿಶೀಲ ಸಾಹಿತ್ಯಕ್ಕೆ ಸಾಂಸ್ಥಿಕ ಸ್ವರೂಪ ಮತ್ತು ಚಳವಳಿಯ ರೂಪ ಬಂದದ್ದು ಮುಂಬೈನಲ್ಲಿ, 1943ರಲ್ಲಿ. ಇದಕ್ಕೂ ಮುಂಚೆ ಸಾಹಿತ್ಯದಲ್ಲಿ ಪ್ರಗತಿಶೀಲ ನೆಲೆ-ನಿಲುವುಗಳನ್ನು ಕುರಿತ ಕಾಳಜಿ ವ್ಯಾಪಿಸತೊಡಗಿತ್ತು. 1943ರಲ್ಲಿ ಅಖಿಲ ಭಾರತ ಪ್ರಗತಿಶೀಲ ಬರಹಗಾರರ ಸಮ್ಮೇಳನ ನಡೆಯುವುದರ ಮೂಲಕ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಕಾರ್ಯಸೂಚಿಯ ಮುನ್ನೋಟ ಲಭ್ಯವಾಯಿತು. ಪ್ರಧಾನವಾಗಿ ಸಾಮ್ರಾಜ್ಯಶಾಹಿಯ ವಿರೋಧದ ಜೊತೆಗೆ ಜನರನ್ನು ಜಾಗೃತಗೊಳಿಸುವ ಸಾಹಿತ್ಯ ರಚನೆ ಮತ್ತು ಕ್ರಿಯೆಗೆ ಈ ಸಮ್ಮೇಳನವು ಪ್ರೇರಣೆ ಒದಗಿಸಿತು. ಸಮತಾವಾದಿ ಸಿದ್ಧಾಂತದ ಪ್ರಭಾವಕ್ಕೆ ಒಳಗಾದವರು ಮುಂಚೂಣಿಯಲ್ಲಿದ್ದ ಈ ಸಮ್ಮೇಳನದ ಪರಿಣಾಮದಿಂದ ಕರ್ನಾಟಕದಲ್ಲೂ ಪ್ರಗತಿಶೀಲತೆಯ ದನಿ ಕೇಳಿಸತೊಡಗಿತು. ಸಾಹಿತ್ಯಕ್ಕೆ ಸಮಾಜಮುಖಿ ಸಂಬಂಧವನ್ನು ಅಂತರ್ಗತಗೊಳಿಸುವ ತಾತ್ವಿಕತೆಗೆ ನೆಲೆ ಒದಗತೊಡಗಿತು. ಜನಸಾಮಾನ್ಯರ ಬದುಕು, ಸಾಹಿತ್ಯದ ಕೇಂದ್ರವಾಗಬೇಕೆಂಬ ಆಶಯ ಅನಾವರಣಗೊಂಡಿತು. ಇಂಥ ಆಶಯವುಳ್ಳ ಪ್ರಗತಿಶೀಲ ಸಾಹಿತ್ಯದ ‘ಸಾರಥಿ’ಗಳಾಗಿ ಅ.ನ.ಕೃ., ನಿರಂಜನ, ಬಸವರಾಜ ಕಟ್ಟೀಮನಿ, ಚದುರಂಗ, ಕುಮಾರ ವೆಂಕಣ್ಣ ಮುಂತಾದವರು ಮುಂಚೂಣಿಯಲ್ಲಿದ್ದರು. ಕನ್ನಡ ಸಾಹಿತ್ಯದಲ್ಲಿ ವಸ್ತುವಲಯ ಮತ್ತು ವಾಚಕ ವಲಯವನ್ನು ‘ವಿಸ್ತರಿಸಿದ’ ಶ್ರೇಯಸ್ಸು ಇಂಥ ಪ್ರಗತಿಶೀಲ ಸಾಹಿತಿಗಳಿಗೆ ಸಲ್ಲಬೇಕು.

ಕೆಲಕಾಲಾನಂತರ ಕೆಲವರಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ನಿಜ. ಹಾಗೆಂದು ಮೂಲ ಆಶಯ ಮೂಲೆ ಸೇರಲಿಲ್ಲ. ವಿಶೇಷವಾಗಿ ನಿರಂಜನ, ಕಟ್ಟೀಮನಿಯಂಥವರ ಸೈದ್ಧಾಂತಿಕ ಸ್ಪಷ್ಟತೆ ಮಾಸಿ ಹೋಗಲಿಲ್ಲ. ಹೀಗಾಗಿ ಇವರೆಲ್ಲ ಜನಸಾಮಾನ್ಯ ಓದುಗರನ್ನು ತಲುಪಿದ ಜನಪರ ಹಾಗೂ ಜನಪ್ರಿಯ ಸಾಹಿತಿಗಳಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಳಿದಿದ್ದಾರೆ. ಹೀಗೆ ಉಳಿಯುತ್ತ ಬೆಳೆಯುತ್ತ ಬಂದ ನಿರಂಜನರು ಜನಪ್ರಿಯ ಸಾಹಿತ್ಯವೆಂದರೆ ಜೊಳ್ಳು ರಚನೆಯಲ್ಲ ಎಂದು ತೋರಿಸಿಕೊಟ್ಟ ಒಬ್ಬ ಪ್ರಮುಖ ಪ್ರಗತಿಶೀಲ ಸಾಹಿತಿಯಾಗಿದ್ದಾರೆ. ನಿರಂಜನರ ನೆನಪು ಕನ್ನಡ ಸಾಹಿತ್ಯದ ಒಂದು ಪ್ರಮುಖ ಪ್ರಗತಿಶೀಲ ಕಾಲಘಟ್ಟಕ್ಕೆ ಸಲ್ಲಿಸುವ ಗೌರವ.

ನಿರಂಜನರ ಜನ್ಮನಾಮ ‘ಕುಳಕುಂದ ಶಿವರಾಯ’, ಇವರು ‘ನಿರಂಜನ’ರಾದದ್ದಕ್ಕೆ ಒಂದು ಪ್ರಬಲ ಕಾರಣವಿದೆ. ಹತ್ತನೇ ವರ್ಷದಲ್ಲೇ ಸುಳ್ಯದಲ್ಲಿ ಗಾಂಧೀಜಿಯವರನ್ನು ನೋಡಿದ ಅನುಭವದಿಂದ ಗಾಂಧಿ ವಿಚಾರಧಾರೆಯ ಸೆಳೆತಕ್ಕೆ ಸಿಕ್ಕಿ ಅನಂತರ ಕಾರ್ಲ್ ಮಾರ್ಕ್ಸ್, ಲೆನಿನ್ ಅವರ ಅಧ್ಯಯನದ ಪ್ರಭಾವಕ್ಕೆ ಒಳಗಾದರು. ಆಗ ಜಾಗತಿಕವಾಗಿ ಕೇಳಿ ಬರತೊಡಗಿದ್ದ ದುಡಿಯುವ ಜನರ ಪರವಾದ ದನಿಗೆ ತಾವೂ ಭಾಗಿಯಾಗುವ ತೀವ್ರತೆಯಿಂದ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದರು. ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿಯ ಕಾರ್ಯದರ್ಶಿಯಾದರು. ಆಗ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿತ್ತು. ಈ ಕಚೇರಿಯ ಹೊಣೆ ಹೊತ್ತಿದ್ದ ಶಿವರಾಯರು ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಪತ್ರಿಕೆಯಾದ ‘ಜನಶಕ್ತಿ’ಯ ಸಂಪಾದಕರಾಗಿದ್ದರು. ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ಪ್ರತಿರೋಧ ಒಡ್ಡಿದರು. ಬ್ರಿಟಿಷ್ ವಸಾಹತುಶಾಹಿ ಮತ್ತು ಸ್ಥಳೀಯ ಬಂಡವಾಳಶಾಹಿಯನ್ನು ಏಕಕಾಲಕ್ಕೆ ವಿರೋಧಿಸುವುದು ಅಂದಿನ ಕಮ್ಯುನಿಸ್ಟರ ನಿಲುವಾಗಿದ್ದು, ಶಿವರಾಯರು ಅದಕ್ಕನುಗುಣವಾಗಿ ಕ್ರಿಯಾಶೀಲರಾಗಿದ್ದರು. ಮುಂದೆ ಸರ್ಕಾರವು ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿದಾಗ ಭೂಗತರಾದ ‘ಕುಳಕುಂದ ಶಿವರಾಯ’ರು ‘ನಿರಂಜನ’ ಎಂಬ ಹೆಸರಿನಲ್ಲಿ ಆಳುವ ವರ್ಗ ವಿರೋಧಿಯಾದ ಲೇಖನಗಳನ್ನು ಬರೆಯತೊಡಗಿದರು. ಅಲ್ಲಿಂದ ಅವರಿಗೆ ‘ನಿರಂಜನ’ ಎಂಬ ಹೆಸರೇ ಖಾಯಂ ಆಯಿತು. ಸಮತಾವಾದಿ ಆಶಯವೂ ಅವರಲ್ಲಿ ಖಾಯಂ ಆಗಿ ಉಳಿಯಿತು, ಅಷ್ಟೇ ಅಲ್ಲ, ಕಾಲದ ಕರೆಗೆ ಓಗೊಡುತ್ತ ಬೆಳೆಯಿತು. ಈ ಬೆಳವಣಿಗೆಯ ಫಲವಾಗಿ ನಿರಂಜನರ ಸಾಹಿತ್ಯ ಸೃಷ್ಟಿ ವಿಸ್ತಾರಗೊಂಡಿತು.

ನಿರಂಜನರು ಸುಮಾರು ಇಪ್ಪತ್ತೈದು ಕಾದಂಬರಿ, ಆರು ಕಥಾ ಸಂಕಲನ, ಕೆಲವು ಅನುವಾದಗಳ ಮೂಲಕ ತಮ್ಮ ಆಶಯಗಳನ್ನು ಅಕ್ಷರಸ್ಥಗೊಳಿಸಿದ್ದಾರೆ. ಅನೇಕ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ. ಮಾಕ್ಸಿಂ ಗಾರ್ಕಿಯವರ ‘ಮದರ್’ ಕಾದಂಬರಿಯನ್ನು ಕನ್ನಡದಲ್ಲಿ ‘ತಾಯಿ’ಯಾಗಿಸಿದ ಹೆಗ್ಗಳಿಕೆ ಇವರದು. ಅಂತೆಯೇ ಮಧ್ಯಮ ವರ್ಗದ ಮನೆಗಳಲ್ಲಿದ್ದ ಸಾಹಿತ್ಯಾನುಭವವನ್ನು ‘ರಂಗಮ್ಮನ ವಠಾರ’ಕ್ಕೆ ತಂದ ವಿಸ್ತರಣೆಯೂ ಇವರದು. ನಿರಂಜನರು ಸಾಹಿತ್ಯವನ್ನು ವಠಾರದಲ್ಲಿ ಕಂಡಂತೆ, ಕಟ್ಟೀಮನಿಯವರು ಕಾರ್ಖಾನೆಗಳಲ್ಲಿ ಕಂಡರು. ಇಬ್ಬರೂ ಚಳವಳಿಯ ಆಶಯಗಳಿಗಾಗಿ ತೀವ್ರವಾದ ತುಡಿತಕ್ಕೆ ಒಳಗಾದರು. ಇದರ ಫಲವಾಗಿ ನಿರಂಜನರಿಂದ ‘ಚಿರಸ್ಮರಣೆ’ ಮತ್ತು ಬಸವರಾಜ ಕಟ್ಟೀಮನಿಯವರಿಂದ ‘ಜ್ವಾಲಾಮುಖಿಯ ಮೇಲೆ’ ಎಂಬ ಕಾದಂಬರಿಗಳು ರೂಪುಗೊಂಡವು. ಆರಂಭದ ವರ್ಷಗಳಲ್ಲಿ ನಮ್ಮ ವಿಮರ್ಶಾ ಲೋಕವು ಈ ಪ್ರಮುಖ ಕಾದಂಬರಿಗಳ ಕಡೆ ಗಂಭೀರ ಗಮನ ಕೊಡಲಿಲ್ಲ. ಅ.ನ.ಕೃ. ಅವರ ‘ಸಂಧ್ಯಾರಾಗ’ವನ್ನು ಕೂಡ ತಡವಾಗಿ ಗುರುತಿಸಲಾಯಿತು. ಬಹುಶಃ ದಶಕ ಕಳೆದ ಮೇಲೆ ಗಂಭೀರವಾಗಿ ಪರಿಗಣಿಸಿದ್ದು ವಿಮರ್ಶೆಯ ಒಂದು ವಿಪರ್ಯಾಸ ಎನ್ನಬಹುದು.

ಇಂದು ನಿರಂಜನ ಎಂದ ಕೂಡಲೆ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಗಳ ಮೂಲಕ ಗುರುತಿಸುತ್ತೇವೆ. ‘ಚಿರಸ್ಮರಣೆ’ಯು ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕಯ್ಯೂರು ಎಂಬ ಗ್ರಾಮದಲ್ಲಿ ನಡೆದ ರೈತ ಹೋರಾಟದ ನೈಜಕಥನ. ಏಕಕಾಲಕ್ಕೆ ಜಮೀನ್ದಾರಿಕೆಯ ದಬ್ಬಾಳಿಕೆ ಮತ್ತು ವಸಾಹತುಶಾಹಿ ಆಡಳಿತವನ್ನು ವಿರೋಧಿಸಿದ ಹೋರಾಟದ ಸೃಜನಶೀಲ ನಿರೂಪಣೆ. ‘ಮೃತ್ಯುಂಜಯ’ ಕಾದಂಬರಿಯು ಈಜಿಪ್ಟಿನ ಪೆರೊ ಆಳ್ವಿಕೆಯ ವಿರುದ್ಧ ನಡೆದ ಬಂಡಾಯದ ಕಥನ. ಇದು 4500 ವರ್ಷಗಳ ಹಿಂದಿನ ಇತಿಹಾಸದ ಸೃಜನಶೀಲ ದಾಖಲೆ. ನಿರಂಜನರ ಸಾಹಿತ್ಯ ಕೃಷಿಯು ಕತೆ, ಕಾದಂಬರಿ, ಅಂಕಣಗಳಿಗಷ್ಟೇ ಸೀಮಿತವಾಗಿರಲಿಲ್ಲ. ಕಿರಿಯರಿಗಾಗಿ ‘ಜ್ಞಾನಗಂಗೋತ್ರಿ’ ಎಂಬ ವಿಶ್ವಕೋಶವನ್ನು ರೂಪಿಸಿದರು. ‘ವಿಶ್ವಕಥಾಕೋಶ’ದ ಇಪ್ಪತ್ತೈದು ಸಂಪುಟಗಳ ಮುಖ್ಯ ಸಂಪಾದಕರಾಗಿ ಬಹುದೊಡ್ಡ ಕೆಲಸ ಮಾಡಿದರು. ಜಗತ್ತಿನ ವಿವಿಧ ದೇಶಗಳ ಆಯ್ದ ಕತೆಗಳನ್ನು ಸಂಕಲಿಸಿ, ಅನೇಕ ಲೇಖಕರನ್ನು ತೊಡಗಿಸಿಕೊಂಡು ಮಾಡಿದ ಈ ಸಂಘಟನಾತ್ಮಕ ಕೆಲಸವು ಇಂದಿಗೂ ಒಂದು ದಾಖಲೆಯಾಗಿದೆ.

ನಿರಂಜನರ ನೆನಪು ಯಾಕೆ ಮುಖ್ಯ ಎಂಬ ಅಂಶಕ್ಕೆ ಆಧಾರವಾಗಿ ನಾಲ್ಕು ವಿಷಯಗಳನ್ನು ಪ್ರಸ್ತಾಪಿಸುತ್ತೇನೆ

1) ಚಳವಳಿಯಲ್ಲಿ ತೊಡಗಿದವರ ಸಾಹಿತ್ಯ ಸೃಷ್ಟಿಯ ಬಗ್ಗೆ ಪೂರ್ವ ಗ್ರಹವೊಂದು ಕೆಲವರಲ್ಲಿ ಚಾಲ್ತಿಯಲ್ಲಿದೆ. ಇಂಥವರ ಸಾಹಿತ್ಯವು ಕಲಾತ್ಮಕತೆಗೆ ಕುಂದುಂಟು ಮಾಡಿರುತ್ತದೆಯೆಂಬುದು ಅಂಥವರ ಪೂರ್ವಗ್ರಹ. ಆದರೆ ಇಂಥ ಪೂರ್ವಗ್ರಹವನ್ನು ಸುಳ್ಳು ಮಾಡಿದ ಪ್ರಮುಖರಲ್ಲಿ ನಿರಂಜನರೂ ಒಬ್ಬರು.

2) ಜನಪ್ರಿಯ ಸಾಹಿತ್ಯವೆಂದರೆ ಜಾಳುಜಾಳಾಗಿರುತ್ತದೆಯೆಂದೂ ಗಂಭೀರ ವಿಷಯಗಳ ಅಭಿವ್ಯಕ್ತಿ ಇರುವುದಿಲ್ಲವೆಂದೂ ವಾದಿಸುವವರಿಗೆ ನಿರಂಜನರ ಕೆಲವು ಕತೆ, ಕಾದಂಬರಿಗಳು ಉತ್ತಮ ಉತ್ತರವಾಗಿದ್ದವು. ಗಂಭೀರ ವಸ್ತುವಿನ ಶಕ್ತಿ ಕುಂದದಂತೆ ಸಾಮಾನ್ಯ ಓದುಗರಿಗೆ ತಲುಪಿಸಲು ಸಾಧ್ಯ ಎಂಬುದಕ್ಕೆ ನಿರಂಜನರ ಸಾಹಿತ್ಯವೂ ಒಂದು ಸಾಕ್ಷಿ.

3) ಭಿನ್ನಾಭಿಪ್ರಾಯಗಳು ವ್ಯಕ್ತಿದ್ವೇಷವಾಗಬಾರದು ಎಂದು ನಿರಂಜನರು ನಂಬಿದ್ದರು. ಕನ್ನಡದ ಬಹು ಮುಖ್ಯ ಲೇಖಕರಲ್ಲಿ ಒಬ್ಬರಾದ ಅ.ನ.ಕೃ. ಅವರು ವೇಶ್ಯಾ ಸಮಸ್ಯೆ ಕುರಿತು, ನಗ್ನಸತ್ಯ, ಸಂಜೆಗತ್ತಲು, ಶನಿಸಂತಾನ ಎಂಬ ಕಾದಂಬರಿಗಳನ್ನು ಬರೆದಾಗ ನಿರಂಜನರು - ಇವು ಪ್ರಗತಿಶೀಲ ಸಾಹಿತ್ಯ ಅಲ್ಲ ಎಂದು ಟೀಕಿಸಿದರು. ಪ್ರಗತಿಶೀಲ ಸಾಹಿತಿಗಳೆಂದೇ ಪ್ರಸಿದ್ಧರಾಗಿದ್ದ ಅ.ನ.ಕೃ. ಮತ್ತು ನಿರಂಜನರ ನಡುವೆ ದೊಡ್ಡ ಭಿನ್ನಾಭಿಪ್ರಾಯ ಮೂಡಿತು. ಅ.ನ.ಕೃ. ಅವರು ತಮ್ಮ ನಿಲುವಿನ ಸಮರ್ಥನೆಗಾಗಿ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’ ಎಂಬ ಗ್ರಂಥವನ್ನು ರಚಿಸಿ ಪ್ರಾಚೀನ ಸಾಹಿತ್ಯದಿಂದ ಆಧುನಿಕದವರೆಗಿನ ಪ್ರೇಮ-ಕಾಮದ ಸನ್ನಿವೇಶಗಳ ನಿದರ್ಶನ ನೀಡಿದರು. ಆದರೂ ಭಿನ್ನಾಭಿಪ್ರಾಯ ನಿಲ್ಲಲಿಲ್ಲ. ಇಷ್ಟಾದರೂ ನಿರಂಜನರು ಅ.ನ.ಕೃ. ಕುರಿತು “ಅ.ನ.ಕೃ. ಅವರು ಒಂದು ಜೀವಮಾನದಲ್ಲಿ ಮಾಡಿದ್ದು ನೂರು ಜೀವಮಾನಗಳ ಕೆಲಸ” ಎಂದು ಹೊಗಳಿದ್ದಾರೆ. ಒಟ್ಟು ಕೊಡುಗೆಯನ್ನು ಗುರುತಿಸಿದ್ದಾರೆ. ಇದು ನಮಗೊಂದು ಪಾಠ.

4) ನಿರಂಜನರ ಆತ್ಮಸ್ಥೈರ್ಯ ಅಪರೂಪವಾದುದು. ದೇಹಕ್ಕೆ ಏನಾದರೂ ತೊಂದರೆಯಾದಾಗ ಕೆಲಸಗಳನ್ನು ಬಿಟ್ಟು ಕೊರಗುವವರೂ ಇದ್ದಾರೆ. ಅದೊಂದು ಮಾನವ ಸಹಜ ಲಕ್ಷಣವೂ ಆಗಿದೆ. ಆದರೆ ನಿರಂಜನ ಅವರು ಇದಕ್ಕೆ ಅಪವಾದ. ಅವರು ಪಾರ್ಶ್ವವಾಯುವಿನಿಂದ ಸಹಜ ನಡಿಗೆಯನ್ನು ಕಳೆದುಕೊಂಡಾಗಲೂ ಸುಮ್ಮನೆ ಕೂರಲಿಲ್ಲ. ಸಾಹಿತ್ಯ ರಚನೆಯನ್ನು ಕೈಬಿಡಲಿಲ್ಲ. ಅವರು ವಿಶ್ವಕಥಾಕೋಶದ ಯೋಜನೆಯನ್ನು ರೂಪಿಸಿ ಪೂರ್ಣಗೊಳಿಸಿದ್ದು ಇದೇ ಅವಧಿಯಲ್ಲಿ ಎನ್ನುವುದನ್ನು ಗಮನಿಸಿದಾಗ, ದೈಹಿಕ ಅಸಾಮರ್ಥ್ಯವನ್ನು ಹಿಮ್ಮೆಟ್ಟಿನಿಂತ ಆತ್ಮಸ್ಥೈರ್ಯವು ಎಂದೂ ಬತ್ತದ ಸ್ಫೂರ್ತಿ ಚಿಲುಮೆಯಾಗಿದೆ.

ಒಟ್ಟಾರೆ ನಿರಂಜನ ಅವರ ನೆನಪು, ಇಂದಿಗೂ ನಮಗೆ ಸ್ಫೂರ್ತಿದಾಯಕ ಹುರುಪು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.