ಶುಕ್ರವಾರ, 5 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

Published 2 ಜುಲೈ 2024, 22:26 IST
Last Updated 2 ಜುಲೈ 2024, 22:26 IST
ಅಕ್ಷರ ಗಾತ್ರ

ಮೊಬೈಲ್ ಶುಲ್ಕ ಏರಿಕೆ: ಟ್ರಾಯ್ ಪರಾಮರ್ಶಿಸಲಿ

ಖಾಸಗಿ ದೂರಸಂಪರ್ಕ ಕಂಪನಿಗಳಾದ ಜಿಯೊ, ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ತಾವು ನೀಡುವ ಮೊಬೈಲ್ ಫೋನ್‌ ಕರೆ ಮತ್ತು ಇಂಟರ್ನೆಟ್ ಸೇವೆಗಳ ಶುಲ್ಕವನ್ನು ಶೇಕಡ 12ರಿಂದ ಶೇ 27ರವರೆಗೆ ಏರಿಕೆ ಮಾಡುತ್ತಿರುವುದಾಗಿ ಘೋಷಿಸಿವೆ. ಒಂದು ಕಾಲದಲ್ಲಿ ನಿಮಿಷ, ಸೆಕೆಂಡ್‌ಗಳ ಲೆಕ್ಕದಲ್ಲಿ ನಿಗದಿಯಾಗುತ್ತಿದ್ದ ಕರೆ ದರ ವ್ಯವಸ್ಥೆ ಇಂದು ಇಲ್ಲ. ಇದೇನಿದ್ದರೂ ಅನಿಯಮಿತ ಕರೆಗಳ ಕಾಲ.

ಇಂದು ಮೊಬೈಲ್ ಫೋನ್‌ ಸೇವೆಯ ಬಳಕೆ ಹೆಚ್ಚಾಗಿದೆ. ದೇಶದಲ್ಲಿ ಶೇ 90ರಷ್ಟು ಜನರಲ್ಲಿ ಮೊಬೈಲ್ ಫೋನ್ ಇದೆ. ಅಂದರೆ ಮೊಬೈಲ್‌ ಫೋನ್‌ ಸೇವೆಗಳು ಇಂದು ಎಲ್ಲರಿಗೂ ಅನಿವಾರ್ಯ ಎಂಬಂತೆ ಆಗಿವೆ. ದೂರಸಂಪರ್ಕ ಕ್ಷೇತ್ರದಲ್ಲಿ ಕೃತಕವಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಈಗ ಕಂಪನಿಗಳು ಘೋಷಿಸಿರುವ ಬೆಲೆ ಏರಿಕೆಯನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಒಮ್ಮೆ ಪರಾಮರ್ಶಿಸುವುದು ಸೂಕ್ತವಾದೀತು.

–ರಮೇಶ ವಿ. ವಂಕಲಕುಂಟಿ, ಕಾಮನೂರು, ಕೊಪ್ಪಳ

***

ಬೆಲೆ ಏರಿಕೆ ಆಯಿತು, ಗುಣಮಟ್ಟ ಹೆಚ್ಚಲಿ

ದೇಶದ ದೂರಸಂಪರ್ಕ ವಲಯದ ಕಂಪನಿಗಳು ಅಂತೂ ತಮ್ಮ ಸೇವಾ ಶುಲ್ಕವನ್ನು ಹೆಚ್ಚು ಮಾಡಿವೆ. ಇದು ಜನರ ಕಿಸೆಗೆ ಹೊರೆ ಎಂದು ತಕ್ಷಣಕ್ಕೆ ಅನ್ನಿಸಿದರೂ ದೂರಸಂಪರ್ಕ ವಲಯವನ್ನೂ ದೀರ್ಘಾವಧಿಯಲ್ಲಿ ಅದು ದೇಶದ ಜನರಿಗೆ ಒದಗಿಸಬೇಕಿರುವ ಸೇವೆಗಳನ್ನೂ ಗಮನಿಸಿದರೆ ಈ ಬೆಲೆ ಏರಿಕೆ ಸಮರ್ಥನೀಯ ಎಂಬುದು ಗೊತ್ತಾಗುತ್ತದೆ. ಈ ಕ್ಷೇತ್ರದಲ್ಲಿ ದರಸಮರ ಅತಿಯಾಗಿತ್ತು. ಇದು ಬಹಳ ಅನಾರೋಗ್ಯಕರವಾಗಿತ್ತು. ಸೇವಾ ಶುಲ್ಕವನ್ನು ವರ್ಷಗಳಿಂದ ಹೆಚ್ಚಿಸದೆ ಇದ್ದುದರ ಪರಿಣಾಮವಾಗಿ, ಈಗ ಮಾಡಿರುವ ಹೆಚ್ಚಳವು ತುಸು ಜಾಸ್ತಿ ಎಂದು ಅನ್ನಿಸಬಹುದು. ಆದರೆ ಬೆಳೆಯುತ್ತಿರುವ ಅರ್ಥ ವ್ಯವಸ್ಥೆಯಲ್ಲಿ ಎಲ್ಲ ಉತ್ಪನ್ನಗಳ ಹಾಗೂ ಸೇವೆಗಳ ಬೆಲೆಯಲ್ಲಿ ಕಾಲಕಾಲಕ್ಕೆ ಹೆಚ್ಚಳ ಆಗುವುದು ಸಹಜ. ಬೆಲೆಯು ವರ್ಷಗಳ ಕಾಲ ಏರಿಕೆಯೇ ಆಗದಿದ್ದರೆ ಅದು ಅಸಹಜ. ಬೆಲೆ ಏರಿಕೆಯು ಹೆಚ್ಚಿನ ಗುಣಮಟ್ಟದ ಸೇವೆಗೆ ದಾರಿ ಮಾಡಿಕೊಡಲಿ.

–ರಾಮಚರಣ್ ಶೆಟ್ಟಿ, ಕುಂದಾಪುರ

***

ರಾಜ್ಯದ ಜನ ಇದನ್ನು ಗಮನಿಸಬೇಕಿದೆ

ರಾಜ್ಯದ ಕೆಲವು ಸ್ವಾಮೀಜಿಗಳು, ಮಠಾಧೀಶರು, ‘ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಿ, ಇವರಿಗೆ ಈ ಸ್ಥಾನ ನೀಡಿ’ ಎಂದೆಲ್ಲ ಹೇಳುತ್ತಿರುವುದು ಬಹಳ ವಿಷಾದಕರ. ಜಗದ್ಗುರುಗಳು ಎಂದು ಹೇಳಿಕೊಳ್ಳುತ್ತಾ ತಮ್ಮ ಜಾತಿಯನ್ನು ವಿಜೃಂಭಿಸುವ ಕೆಲವು ಮಠಾಧೀಶರಿಂದಾಗಿ ಇಂದು ಸಮಾಜದಲ್ಲಿ ಶಾಂತಿಗಿಂತ ಅಸಹನೆಯೇ ಹೆಚ್ಚಾಗುತ್ತಿರುವುದು ದುರಂತ. ಈ ಸ್ವಾಮೀಜಿಗಳೆಲ್ಲರೂ ತಮ್ಮನ್ನು ತಾವು ಏನೆಂದು ತಿಳಿದುಕೊಂಡಿದ್ದಾರೆ? ಇವರಿಗೆ ರಾಜಕೀಯದಲ್ಲಿ ಆಸಕ್ತಿ ಇದ್ದಲ್ಲಿ ಪೀಠ ತ್ಯಜಿಸಿ ನೇರ ಅಖಾಡಕ್ಕೆ ಇಳಿಯಲಿ. ಧರ್ಮ ಬೋಧನೆ (!?) ಮಾಡುವ ಮುಖ್ಯ ಕೆಲಸ ಬಿಟ್ಟು ‘ಇವರು ಮುಖ್ಯಮಂತ್ರಿಯಾಗಲಿ, ಇವರು ಅಧ್ಯಕ್ಷ ಆಗಲಿ’ ಎಂದು ಹೇಳಲು ಇವರಿಗೇನು ಅಧಿಕಾರ?

ಇನ್ನು, ಉಪಮುಖ್ಯಮಂತ್ರಿಯವರೇ ಮುಖ್ಯಮಂತ್ರಿ ಬಳಿ ತಮಗೆ ಸ್ಥಾನ ಬಿಟ್ಟು ಕೊಡಿ ಅಂದಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು. ಮುಖ್ಯಮಂತ್ರಿ ಅದಕ್ಕೆ ಸೂಕ್ತ ಉತ್ತರ ಕೊಡುತ್ತಿದ್ದರೋ ಅಥವಾ ಧಾರಾಳತನ ತೋರುತ್ತಿದ್ದರೋ ಯಾರಿಗೆ ಗೊತ್ತು? ಈ ಸ್ವಾಮೀಜಿಗಳು ತಮ್ಮ ಮಿತಿ ಅರಿತು ನಡೆದರೆ ಚೆನ್ನ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.

–ಸಿರಿವಂತೆ ಚಂದ್ರಶೇಖರ್, ಸಿರಿವಂತೆ, ಸಾಗರ

***

ಜನರಿಗೆ ಬುದ್ಧಿ ಬರುವುದು ಎಂದು?

‘ಪ್ರಾಣಿಗಳಿಗೂ ಬದುಕುವ ಹಕ್ಕು ಇದೆ’ ಎಂಬ ಸದಾಶಿವ್‌ ಸೊರಟೂರು ಅವರ ಲೇಖನ (ಸಂಗತ, ಜುಲೈ 2) ಅರಿವು ಮೂಡಿಸುವಂತಿದೆ. ಲೇಖಕರಿಗೆ ಆದ ಅನುಭವ ನನಗೂ ಆಗಿದೆ. ಸುಮಾರು 40 ವರ್ಷಗಳ ಹಿಂದೆ ಗಜೇಂದ್ರಗಡ ಸಮೀಪದ ಕುಂಟೋಜಿ ಗ್ರಾಮದ ಒಂದು ಆಕಳು ನನ್ನ ದ್ವಿಚಕ್ರ ವಾಹನಕ್ಕೆ ಯಾವಾಗಲೂ ಬೆನ್ನುಹತ್ತಿ ಕೂಗುತ್ತಿತ್ತು. ಪಶುವೈದ್ಯನಾದ ನನಗೆ ಈ ಆಕಳಿನ ವರ್ತನೆ ಬಗ್ಗೆ ಕುತೂಹಲ ತಡೆಯಲಾಗಲಿಲ್ಲ. ಆಕಳಿನ ಕರುವಿಗೆ ಒಬ್ಬ ದ್ವಿಚಕ್ರ ಸವಾರ ಡಿಕ್ಕಿ ಹೊಡೆದು, ಅದು ಮೃತಪಟ್ಟಿತ್ತು ಎಂಬುದನ್ನು ಊರಿನ ಹಿರಿಯರೊಬ್ಬರು ನನಗೆ ತಿಳಿಸಿದರು. ಪ್ರಾಣಿಗಳಿಗೂ ಭಾವನೆಗಳಿವೆ, ತಮ್ಮ ಸಿಟ್ಟನ್ನು ಅವು ತೋರಿಸಬಲ್ಲವು ಎಂಬುದು ಸತ್ಯ. ನಿರ್ಭಾವುಕ ಜನರಿಗೆ ಬುದ್ಧಿ ಬರುವುದೆಂದೋ?

–ಅನಿಲಕುಮಾರ ಮುಗಳಿ, ಧಾರವಾಡ

***

ಶಿಕ್ಷಣ ರಂಗ: ಆತ್ಮಾವಲೋಕನ ಬೇಕು

ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶದ್ವಾರದಂತೆ ಇರುವ ನೀಟ್ ಪರೀಕ್ಷೆಯು ಒಂದು ದಂಧೆಯಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇದು ನೂರಕ್ಕೆ ನೂರು ಸರಿಯಾದ ಮಾತು! ಆದರೆ, 20-30 ವರ್ಷಗಳ ಹಿಂದೆ ಬಡ ಮತ್ತು ಕೆಳಮಧ್ಯಮ ವರ್ಗಗಳ ಕೈಗೂ ಎಟುಕುವಂತಿದ್ದ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಹಳ್ಳಹಿಡಿದಿದ್ದು ಏಕೆ ಎನ್ನುವ ಆತ್ಮಾವಲೋಕನವನ್ನು ನಮ್ಮ ವ್ಯವಸ್ಥೆ ಮಾಡಿಕೊಳ್ಳಬೇಕು. ಏಕೆಂದರೆ, ಪೂರ್ವ ಪ್ರಾಥಮಿಕದಿಂದ ಎಂ.ಟೆಕ್, ಎಂ.ಡಿ.ವರೆಗಿನ ಕಾಲೇಜುಗಳ ಜುಟ್ಟು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ರಾಜಕಾರಣಿಗಳ ಮುಷ್ಟಿಯಲ್ಲೇ ಇದೆ.

ಪ್ರಾಮಾಣಿಕ ದುಡಿಮೆ ಮತ್ತು ಆದಾಯ ನೆಚ್ಚಿಕೊಂಡಿರುವ ಯಾರೊಬ್ಬರೂ ಮಕ್ಕಳನ್ನು ಒಳ್ಳೆಯ ಗುಣಮಟ್ಟದ ಶಾಲೆಗೆ ಸೇರಿಸುವುದು ಸಾಧ್ಯವಿಲ್ಲ ಎನ್ನುವ ಸ್ಥಿತಿ ಇದೆ. ರಾಹುಲ್ ಅವರು ಸಂಸತ್ತಿನಲ್ಲಿ ನೀಟ್ ವಿರುದ್ಧ ಗುಡುಗಿದ್ದಾರೆ, ನಿಜ. ಆದರೆ ಇದೇ ಸಂದರ್ಭದಲ್ಲಿ ಅವರದೇ ಪಕ್ಷದ ನೇತೃತ್ವದ ಸರ್ಕಾರವಿರುವ ನಮ್ಮ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಆರ್‌ಐ ಕೋಟಾ ಅಡಿ 500ಕ್ಕೂ ಹೆಚ್ಚು ಸೂಪರ್ ನ್ಯೂಮರರಿ ಸೀಟುಗಳನ್ನು ಸೃಷ್ಟಿಸಬೇಕೆಂಬ ಕೆಟ್ಟ ಆಲೋಚನೆ ಮುನ್ನೆಲೆಗೆ ಬಂದಿದೆ. ಇದರಿಂದ ಎಷ್ಟು ಕೋಟಿ ಹಣ ಬರುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರೇ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ನೀಟ್ ಸ್ವಚ್ಛವಾಗಬೇಕು, ನಿಜ. ಅದಕ್ಕಿಂತ ಮುಖ್ಯವಾಗಿ ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ಅಸಹ್ಯಕರ ವ್ಯಾಪಾರ ನಿಲ್ಲಬೇಕು.

–ಬಿ.ಎಸ್. ಜಯಪ್ರಕಾಶ ನಾರಾಯಣ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT