ಅರಣ್ಯವೂ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ನಾಶ, ನೀರು ಮತ್ತು ರಾಸಾಯನಿಕಗಳನ್ನು ಅತಿಯಾಗಿ ಬೇಡುವ ಕೃಷಿ ಪದ್ಧತಿಯ ಸತತ ಪಾಲನೆ ಜೊತೆಗೆ ಹವಾಮಾನ ಬದಲಾವಣೆ ಪ್ರಕ್ರಿಯೆ ತೀವ್ರವಾಗುತ್ತಿರುವುದು ಇಂದಿನ ಬರಕ್ಕೆ ಮೂಲ ಕಾರಣವೆಂದು ಹೇಳಬಹುದು.

ಹಾಗೆಯೇ ಜನರ ಹಲವು ಮೌಢ್ಯ, ಪ್ರಮಾದಗಳನ್ನೂ ಮುಚ್ಚಿಡಲಾಗದು. ಸಾವಿರಾರು ಅಡಿ ಆಳದ ಕೊಳವೆ ಬಾವಿ ತೋಡಿ, ಇತಿಮಿತಿ ಇಲ್ಲದೆ ಅಂತರ್ಜಲವನ್ನು ಬಳಸಿ, ರೇಷ್ಮೆ, ಟೊಮೆಟೊದಂತಹ ಅತಿ ನೀರು ಬೇಡುವ ಬೆಳೆಗಳನ್ನು ಬೆಳೆಯುವುದು ನಮ್ಮ ಮೌಢ್ಯಕ್ಕೆ ಕನ್ನಡಿ ಹಿಡಿಯುತ್ತದೆ. ದೇಶದಲ್ಲಿ ವಾರ್ಷಿಕವಾಗಿ ಸರಾಸರಿ 1170 ಮಿ.ಮೀ. ಮಳೆ ಬೀಳುತ್ತಿದರೂ ಇದನ್ನು ಇಂಗಿಸಿ, ಅಂತರ್ಜಲ ವೃದ್ಧಿಪಡಿಸದಿರುವುದು ನಮ್ಮ ಮತ್ತೊಂದು ಮೌಢ್ಯ. ಇವೆಲ್ಲದರ ಪರಿಣಾಮವಾಗಿ ಆಪತ್ಕಾಲದಲ್ಲಿ ಕುಡಿಯುವ ನೀರಿಗೂ ಇಂದು ಕೊರತೆ ಎದುರಾಗಿದೆ. ಅರಣ್ಯ ನಾಶವೂ ನಿರಂತರವಾಗಿದೆ. ದೇಶದ ಭೂ ಭಾಗದಲ್ಲಿ ಕನಿಷ್ಠ ಶೇ 33ರಷ್ಟು ಅರಣ್ಯ ಅತ್ಯಗತ್ಯವೆಂದು ತಿಳಿದಿದ್ದರೂ, ಇದರ ಪ್ರಮಾಣ ಇಳಿದು ಇಳಿದು ಈಗ ಶೇ 23ಕ್ಕೆ ಬಂದಿದೆ.

ವಿಚಿತ್ರ ಎಂದರೆ ದೇಶದ ದಕ್ಷಿಣ ಭಾಗದಲ್ಲಿ ಬರ, ಅನಾವೃಷ್ಟಿಯಾಗಿದ್ದರೆ ಉತ್ತರದ ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶಗದಲ್ಲಿ ಪ್ರವಾಹ ತೀವ್ರಗೊಂಡು ಅತಿವೃಷ್ಟಿ ತಲೆದೋರಿರುತ್ತದೆ. ರಾಜ್ಯದಲ್ಲಿ ಏಪ್ರಿಲ್ನಲ್ಲಿ ವಾಡಿಕೆಗಿಂತ ಶೇ 76ರಷ್ಟು ಅಧಿಕ ಮಳೆಯಾಗಿ ಅತಿವೃಷ್ಟಿಯಾಗಿದ್ದರೆ, ಈಗ ಆಗಸ್ಟ್, ಸೆಪ್ಟೆಂಬರ್ನಲ್ಲಿ ಬರಗಾಲ ಎದುರಾಗಿದೆ. ಇವೆಲ್ಲ ಹವಾಮಾನ ಬದಲಾವಣೆಯ ಭೀಕರ ಅಟಾಟೋಪಗಳೆಂಬುದನ್ನು ಒಪ್ಪಿಕೊಳ್ಳಲು ನಾವಿನ್ನೂ ಸಿದ್ಧವಾಗಿಲ್ಲದಿರುವುದೇ ದೊಡ್ಡ ದುರಂತ.

ಹಿಂಗಾರು, ಮುಂಗಾರುಗಳೆಂಬ ನಮ್ಮ ವಾಡಿಕೆ ಮಳೆ ಆಧಾರಿತ ಕೃಷಿ ಪದ್ಧತಿ ಈಗ ಅಪ್ರಯೋಜಕವಾಗುತ್ತಿದೆ. ಪರಿಸರ ಮಾಲಿನ್ಯ, ಆ ಮೂಲಕ ಹವಾಮಾನದಲ್ಲಿ ಸೂಕ್ಷ್ಮ ಕಣಗಳ (Particulate Matter) ಸಾಂದ್ರತೆ ಅಧಿಕವಾಗಿರುವುದು ದೇಶದಲ್ಲಿ ಮೇಘರಾಜನ ವಿಚಿತ್ರ ವರ್ತನೆಗೆ ಕಾರಣ ಎಂಬುದು ಇತ್ತೀಚೆಗೆ ನಡೆದ ಜಪಾನ್ ಮೂಲದ ಉನ್ನತ ಸಂಶೋಧನೆಯಿಂದ ದೃಢಪಟ್ಟಿದೆ.

ಬರದ ತೀವ್ರತೆ ಅಧಿಕವಾದ ಹಾಗೇ ದನದ ಮಾಂಸವೂ ಅಗ್ಗವಾಗುವುದು ಒಂದು ಕಟು ಆರ್ಥಿಕ ನಿಯಮ. ಇದರಿಂದ ಬರಿದೇ ಬೆಳೆಹಾನಿಯಲ್ಲ; ಬರದ ಪರಿಣಾಮವಾಗಿ ಜಾನುವಾರಿಗೆ ಮೇವು, ನೀರು ಸಿಗದೇ ಅವು ಕಟುಕರ ಪಾಲಾಗಿ ಇಡೀ ಗ್ರಾಮೀಣ ಅರ್ಥವ್ಯವಸ್ಥೆಯ ಬುಡಕ್ಕೇ ಕೊಡಲಿ ಏಟು ಬೀಳುವಂತಾಗುತ್ತದೆ. ಹಾಗಾಗಿ ಸರ್ಕಾರ ಜಾನುವಾರಿಗೆ ಮೇವು ಮತ್ತು ನೀರಿನ ಪೂರೈಕೆಯಿಂದ ಬರ ಎದುರಿಸುವ ಸಿದ್ಧತೆ ಪ್ರಾರಂಭಿಸಬೇಕು. ಮುಂಗಾರಿನ ಚೆಲ್ಲಾಟಕ್ಕೆ ಹೊಂದಿಕೊಂಡ ತಳಿ, ತಂತ್ರಜ್ಞಾನ, ಬೆಳೆ ಪದ್ಧತಿಯನ್ನು ರೂಪಿಸಿ ರೈತರಿಗೆ ತಲುಪಿಸುವುದಕ್ಕೆ ಆದ್ಯತೆ ಸಿಗಬೇಕು.
-ಡಾ. ಟಿ.ಎನ್.ಪ್ರಕಾಶ ಕಮ್ಮರಡಿ,
ಅಧ್ಯಕ್ಷ, ಕರ್ನಾಟಕ ಕೃಷಿ ಬೆಲೆ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.