ನಾವು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿರುವ ಮತ್ತು ಸ್ಥಾಪಿಸುತ್ತಿರುವ ಉದ್ದೇಶ ಏನು? ಈ ಉದ್ದೇಶಗಳನ್ನು ಇವು ಈಡೇರಿಸುತ್ತಿವೆಯೇ? ಈ ಉದ್ದೇಶ ಈಡೇರಿಕೆಗೆ ಅಗತ್ಯವಾದ ಸಂಪನ್ಮೂಲವನ್ನು ಒದಗಿಸಿದ್ದೇವೆಯೇ ಎಂಬ ಪ್ರಶ್ನೆಗಳನ್ನು, ತೆರಿಗೆ ನೀಡಿ ಸರ್ಕಾರಗಳು ನಡೆಯುವಂತೆ ನೋಡಿಕೊಳ್ಳುತ್ತಿರುವ ಜನರು ಮತ್ತು ಈ ತೆರಿಗೆ ಹಣ ಬಳಸಿಕೊಂಡು ತನಗೆ ಬೇಕಾದಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಸರ್ಕಾರಗಳು ಎಂದಾದರೂ ಕೇಳಿಕೊಂಡಿವೆಯೇ ಎಂದು ವಿಶ್ವವಿದ್ಯಾಲಯಗಳ ಬಗ್ಗೆ ಮಾತನಾಡಿದಾಗ ನಾಡಿನ ಹಿರಿಯ ವಿದ್ವಾಂಸರೊಬ್ಬರು ಪ್ರಶ್ನಿಸಿದರು.

ಈಗಾಗಲೇ ಸ್ಥಾಪನೆಗೊಂಡಿರುವ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮತ್ತು ಸ್ಥಾಪನೆ ಪ್ರಕ್ರಿಯೆ ಆರಂಭವಾಗಿರುವ ಲಲಿತಕಲಾ ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಪ್ರಶ್ನೆಗಳು ಪ್ರಸ್ತುತ ಎನಿಸುತ್ತವೆ.

ಸಂಗೀತ, ನೃತ್ಯ, ನಾಟಕ, ಚಿತ್ರಕಲೆ, ಶಿಲ್ಪಕಲೆಗಳೆಲ್ಲವೂ ಲಲಿತಕಲೆಗಳೇ ಆಗಿರುವುದರಿಂದ ಈ ಎಲ್ಲವೂ ಒಂದೇ ವಿಶ್ವವಿದ್ಯಾಲಯದಲ್ಲಿ ಇರುವುದು ಒಳ್ಳೆಯದು ಎಂಬುದು ಇದರ ಹಿಂದೆ ಇರುವ ಚಿಂತನೆ. ಇದಷ್ಟೇ ಅಲ್ಲ, ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡಲು ಹಣದ ಕೊರತೆ ಇದೆ, ಹಾಗಾಗಿ ಈ ಎರಡು ವಿಶ್ವವಿದ್ಯಾಲಯಗಳನ್ನು ಒಂದಾಗಿ ಮಾಡಿದರೆ ಸರ್ಕಾರದ ಹೊರೆ ತಗ್ಗುತ್ತದೆ ಎಂಬುದು ವಿಲೀನಕ್ಕೆ ಸರ್ಕಾರದ ಬಳಿ ಇರುವ ಸಮರ್ಥನೆ.

ರಾಜ್ಯದಲ್ಲಿ ಈಗ ಒಟ್ಟು 25 ವಿಶ್ವವಿದ್ಯಾಲಯಗಳಿವೆ. ರಾಜ್ಯದ ಬಜೆಟ್‌ನ ಮೊತ್ತ ₹1.63 ಲಕ್ಷ ಕೋಟಿ ತಲುಪಿದೆ. ರಾಜ್ಯ ಸರ್ಕಾರ ಬೇರೆ ಬೇರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ನೀಡಬೇಕಾದ ಅಗತ್ಯ ಇದೆ. ಹಾಗಿದ್ದರೂ 25 ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಅಗತ್ಯವಾದಷ್ಟು ಹಣ ಒದಗಿಸುವುದು ಸಾಧ್ಯವಿಲ್ಲ ಎಂದಾದರೆ ಅದು ನಮ್ಮ ಸರ್ಕಾರಗಳ ಚಿಂತನಾ ದಾರಿದ್ರ್ಯವನ್ನು ತೋರಿಸುತ್ತದೆಯೇ ಹೊರತು ಆರ್ಥಿಕ ದಾರಿದ್ರ್ಯವನ್ನಲ್ಲ.

ಲಲಿತಕಲೆಗಳಿಗೆ ಸಂಬಂಧಿಸಿ ಅಧ್ಯಯನ ಮತ್ತು ಸಂಶೋಧನೆಗಳೆಲ್ಲವೂ ಒಂದೇ ವಿಶ್ವವಿದ್ಯಾಲಯದ ಅಡಿಯಲ್ಲಿ ಬರಬೇಕು ಎಂದು ನಿರ್ಧರಿಸುವಾಗ ಇದು ಚಿಂತನೆ ನಡೆಸಿ ಕೈಗೊಂಡ ನಿರ್ಧಾರ ಎಂದೇ ಅನಿಸುವುದಿಲ್ಲ.

ಕರ್ನಾಟಕ ಸಂಗೀತ ತನ್ನ ಮಡಿವಂತಿಕೆ ಕೊಡವಿಕೊಂಡು ಅಗ್ರಹಾರದಿಂದ ಹೊರಬರಬೇಕು, ಎಲ್ಲ ವರ್ಗದ ಜನರ ನಡುವೆ ಬೆಳೆಯಬೇಕು ಎಂಬ ಚಿಂತನೆ ಹೊಂದಿದ್ದಕ್ಕಾಗಿ, ಅದಕ್ಕಾಗಿ ಕೆಲಸ ಮಾಡುತ್ತಿರುವುದಕ್ಕಾಗಿ ತಮಿಳುನಾಡಿನ ಸಂಗೀತಗಾರ ಟಿ.ಎಂ.ಕೃಷ್ಣ ಅವರಿಗೆ ಈ ವರ್ಷದ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಗಿದೆ. ಸಂಗೀತದಲ್ಲಿ ಸ್ವರ, ಲಯ, ಹಾಡುಗಾರಿಕೆಯ ಆಚೆಗೂ ಮಾಡುವುದಕ್ಕೆ ಕೆಲಸಗಳಿವೆ, ಸಂಗೀತವನ್ನು ಸಮಾಜ ಸುಧಾರಣೆಯ ಸಾಧನವನ್ನಾಗಿಯೂ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಕೃಷ್ಣ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಮ್ಯಾಗ್ಸೆಸೆ ಪ್ರತಿಷ್ಠಾನ ನೆನಪಿಸಿದೆ.

‘ಲಲಿತಕಲಾ ವಿಶ್ವವಿದ್ಯಾಲಯವನ್ನು ವೃತ್ತಿ ತರಬೇತಿ ಕೇಂದ್ರದ ರೀತಿ ಬೆಳೆಸಬೇಕು. ಅಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ವೃತ್ತಿ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಈಗ ರಾಜ್ಯದಲ್ಲಿ ಲಲಿತಕಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 3500ಕ್ಕೂ ಹೆಚ್ಚು’ ಎಂದು ಲಲಿತಕಲಾ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಡಾ. ಎಸ್.ಇ.ಪಾಟೀಲ್ ಹೇಳುತ್ತಾರೆ.

ಯಾವುದೇ ವ್ಯವಸ್ಥೆ ಹೆಚ್ಚು ಹೆಚ್ಚು ಕೇಂದ್ರೀಕೃತವಾಗುತ್ತಾ ಹೋದಂತೆ ಅದು ಜನರಿಂದ ಹೆಚ್ಚು ಹೆಚ್ಚು ದೂರವಾಗುತ್ತಾ ಹೋಗುತ್ತದೆ. ಜತೆಗೆ ದೊಡ್ಡತನದ ದರ್ಪ ಮತ್ತು ಊಳಿಗಮಾನ್ಯದ ಮನಸ್ಥಿತಿ ಬೆಳೆಸಿಕೊಳ್ಳುತ್ತದೆ. ಇದಕ್ಕೆ ಭಾರತದ ಶಿಕ್ಷಣ ವ್ಯವಸ್ಥೆಯೂ ಹೊರತಲ್ಲ. ಹೀಗಾಗಿಯೇ ತಳಮಟ್ಟದಿಂದ ಅಭಿವೃದ್ಧಿ ಆಗಬೇಕು ಎಂದು ಮಹಾತ್ಮ ಗಾಂಧಿ ಪ್ರತಿಪಾದಿಸಿದ್ದರು ಮತ್ತು ಕೆಲವು ದಶಕಗಳಿಂದ ವಿಕೇಂದ್ರೀಕರಣಕ್ಕೆ ನಾವು ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ.

2017ಕ್ಕೆ ಕೊನೆಯಾಗುವ 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಉನ್ನತ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳ ಪ್ರಮಾಣ ಶೇ 30ರಷ್ಟು ಏರಿಕೆಯಾಗಬೇಕು ಎಂಬ ಗುರಿಯನ್ನು ಯುಜಿಸಿ ಹಾಕಿಕೊಂಡಿದೆ. ಉನ್ನತ ಶಿಕ್ಷಣಕ್ಕೆ ಸೇರುತ್ತಿರುವವರ ಪ್ರಮಾಣ ಕಡಿಮೆಯೇ ಇರುವ ಬಗ್ಗೆ ಯುಜಿಸಿಗೆ ಕಳವಳವೂ ಇದೆ. ಹಾಗಾಗಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆ ಆಗುವುದು ಉತ್ತಮ ಎಂಬ ನಿಲುವನ್ನು ಅದು ಹೊಂದಿದೆ.

ರಾಜ್ಯದಲ್ಲಿ ಹಲವು ವಿಶ್ವವಿದ್ಯಾಲಯಗಳನ್ನು ವಿಭಜಿಸಲಾಗಿದೆ. ವಿಕೇಂದ್ರೀಕರಣ ಮತ್ತು ಜನರಿಗೆ ಹತ್ತಿರವಾಗಬೇಕು ಎಂಬುದೇ ಇದರ ಹಿಂದಿನ ಲೆಕ್ಕಾಚಾರ. 1964ರಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಈಗ ರಾಜ್ಯದಲ್ಲಿ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ 5 ವಿಶ್ವವಿದ್ಯಾಲಯಗಳಿವೆ. ಮೈಸೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯಗಳನ್ನು ವಿಭಜಿಸಲಾಗಿದೆ.

ಸಾಮಾನ್ಯ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿ ವಿಕೇಂದ್ರೀಕರಣ ಮತ್ತು ವಿಭಜನೆಯ ನೀತಿಯನ್ನು ಅನುಸರಿಸಲಾಗುತ್ತಿದೆ. ಆದರೆ ಸಂಗೀತ ಮತ್ತು ಲಲಿತಕಲೆಗಳಂತಹ ವಿಷಯ ವಿಶಿಷ್ಟ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿ ಭಿನ್ನ ನಿಲುವು ತಳೆಯಲಾಗಿದೆ. ವಿಷಯ ವಿಶಿಷ್ಟ ವಿಶ್ವವಿದ್ಯಾಲಯಗಳ ಉದ್ದೇಶ ಪದವಿ, ಸ್ನಾತಕೋತ್ತರ ಪದವಿಗಳನ್ನು ನೀಡುವುದಷ್ಟೇ ಅಲ್ಲ. ಅಧ್ಯಯನ, ಸಂಶೋಧನೆ ಮತ್ತು ಜ್ಞಾನ ನೆಲೆಗಳ ಸೃಷ್ಟಿ ಇವುಗಳ ಉದ್ದೇಶ. ಈ ವಿಶ್ವವಿದ್ಯಾಲಯಗಳು ಸಾಂಸ್ಕೃತಿಕ ಸಂವಾದವನ್ನು ಸೃಷ್ಟಿಸಬೇಕು ಎಂಬ ನಿರೀಕ್ಷೆ ವಿದ್ವಾಂಸರಲ್ಲಿ ಇದೆ.

ಎರಡು ವಿಶ್ವವಿದ್ಯಾಲಯಗಳನ್ನು ವಿಲೀನ ಮಾಡುವ ಪ್ರಸ್ತಾಪ ಮಾಡಿದಾಗ ಹಿರಿಯ ಕಲಾವಿದ ಕೆ.ಟಿ.ಶಿವಪ್ರಸಾದ್ ಆಕ್ರೋಶವನ್ನೇ ವ್ಯಕ್ತಪಡಿಸಿದರು. ‘ಎರಡು ಪ್ರತ್ಯೇಕ ವಿಶ್ವವಿದ್ಯಾಲಯ ಕಟ್ಟುವ ಕೆಲಸವನ್ನು ಈಗಾಗಲೇ ಆರಂಭಿಸಲಾಗಿದೆ. ಅಲ್ಲಿ ಏನಾಗಿದೆ ಎಂಬುದು ಬೇರೆ ಪ್ರಶ್ನೆ. ಆರಂಭ ಮಾಡಿದ್ದನ್ನು ಯಾಕೆ ಪೂರ್ಣಗೊಳಿಸಬಾರದು? ಎರಡೂ ವಿಶ್ವವಿದ್ಯಾಲಯಗಳಿಗಾಗಿ ಸಾಕಷ್ಟು ಹಣ ವೆಚ್ಚ ಮಾಡಲಾಗಿದೆ. ಇದು ಜನರ ಹಣ. ಹಿಂದೆ ಇದ್ದವರು ಎರಡು ಬೇರೆ ಬೇರೆ ವಿಶ್ವವಿದ್ಯಾಲಯ ಮಾಡಲು ಹೊರಟರು.

ಈಗ ಇರುವವರು ಒಂದು ಮಾಡಲು ಹೊರಟಿದ್ದಾರೆ. ಮುಂದೆ ಬರುವವರು ಬೇರೇನೋ ಮಾಡುತ್ತಾರೆ. ಇದು ಸರಿಯಾದ ಕ್ರಮ ಅಲ್ಲ’ ಎಂದು ಶಿವಪ್ರಸಾದ್ ಹೇಳುತ್ತಾರೆ.‘ಅಷ್ಟಕ್ಕೂ ವಿಲೀನ ಅಥವಾ ವಿಭಜನೆ ದೊಡ್ಡ ವಿಚಾರ ಅಲ್ಲ. ಅಲ್ಲಿ ವಿದ್ಯಾರ್ಥಿಗಳಿಗೆ ಏನನ್ನು ಕಲಿಸುತ್ತಿದ್ದೇವೆ ಎಂಬುದೇ ಮುಖ್ಯ. ಸಂಗೀತ ಮತ್ತು ಲಲಿತಕಲೆ ವಿಶ್ವವಿದ್ಯಾಲಯಗಳನ್ನು ಪ್ರತ್ಯೇಕವಾಗಿ ಇರಿಸಿಕೊಂಡು ಅವುಗಳನ್ನು ಆಧುನೀಕರಿಸುವ ಕೆಲಸ ಮಾಡುವುದು ಬಹಳ ಮುಖ್ಯ. ಚಿತ್ರಕಲೆ ಆಗಲಿ, ಸಂಗೀತ ಆಗಲಿ ಕಲಿತವರು ಅದರ ಮೂಲಕ ಜೀವನ ಕಂಡುಕೊಳ್ಳುವಂತಾಗಬೇಕು’ ಎಂದು ಅಭಿಪ್ರಾಯಪಡುತ್ತಾರೆ.

‘ವಿಲೀನ ಅಥವಾ ವಿಭಜನೆಯಂತಹ ಹೊರಮೈ ಬದಲಾವಣೆಯಿಂದ ಏನನ್ನೂ ಮಾಡಿದಂತಾಗುವುದಿಲ್ಲ. ವಿಶ್ವವಿದ್ಯಾಲಯಗಳಿಗೆ ಸೌಕರ್ಯ ಒದಗಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಸರಿಯಾದ ಶಿಕ್ಷಕರೇ ಇರುವುದಿಲ್ಲ. ಅನುದಾನಕ್ಕೆ ಕುಲಪತಿಗಳು ವಿಧಾನಸೌಧ ಅಲೆಯುವಂತಹ ಸ್ಥಿತಿ ಇದೆ’ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ.ವಿವೇಕ ರೈ ಹೇಳುತ್ತಾರೆ.

‘ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಕಾಯಂ ಪ್ರಾಧ್ಯಾಪಕರಿಗಿಂತ ಅತಿಥಿ ಪ್ರಾಧ್ಯಾಪಕರೇ ಹೆಚ್ಚಿದ್ದಾರೆ. ಇದರಿಂದಾಗಿ ವಿಶ್ವವಿದ್ಯಾಲಯಗಳು ಯಾವ ರೀತಿಯ ಶಿಕ್ಷಣ ನೀಡಬೇಕೋ ಅದು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ನಂಬಿಕೆಯಿಂದ ಅಲ್ಲಿಗೆ ಕಲಿಯಲು ಬರಲು ಸಾಧ್ಯವಾಗುವುದಿಲ್ಲ. ವಿಶ್ವವಿದ್ಯಾಲಯವೆಂದರೆ ಕಟ್ಟಡ ಅಲ್ಲ, ಅಲ್ಲಿನ ಶಿಕ್ಷಕರೇ ಅದರ ಜೀವಾಳ. ಅದೇ ಇಲ್ಲದ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಏನು ಪ್ರಯೋಜನ’ ಎಂದು ಅವರು ಪ್ರಶ್ನಿಸುತ್ತಾರೆ.

ಮುಂದೆ ಜಾನಪದ ವಿಶ್ವವಿದ್ಯಾಲಯವನ್ನೂ ಸಂಗೀತ ಮತ್ತು ಲಲಿತಕಲೆ ವಿಶ್ವವಿದ್ಯಾಲಯಕ್ಕೆ ಸೇರಿಸುವ ಬಗ್ಗೆ ಚಿಂತನೆ ಇದೆ ಎಂದೂ ಸಚಿವ ರಾಯರಡ್ಡಿ ಹೇಳಿದ್ದಾರೆ.ಜಾನಪದ ವಿಶ್ವವಿದ್ಯಾಲಯಕ್ಕೆ ಮಾಡಲು ಅಪಾರವಾದ ಕೆಲಸಗಳಿವೆ. ಜಾನಪದವೆಂದರೆ ಡೊಳ್ಳು ಕುಣಿತವಷ್ಟೇ ಅಲ್ಲ, ಜನಪದ ಜ್ಞಾನ, ಕಲೆ, ವೈದ್ಯ ಇತ್ಯಾದಿ ವಿಸ್ತಾರವಾದ ವಿಚಾರಗಳಿವೆ. ಈಗಿರುವುದನ್ನು ದಾಖಲಿಸಿಕೊಳ್ಳಬೇಕು, ಮರೆತು ಹೋಗಿರುವುದನ್ನು ನೆನಪಿಸಿ ತೆಗೆಯಬೇಕು, ನಾಶವಾಗಿಯೇ ಹೋಗಿವೆ ಎನ್ನುವಂಥವನ್ನು ಹುಡುಕಿ ಹೆಕ್ಕಿ ಜೋಪಾನ ಮಾಡಬೇಕು.

ಸಂಗೀತ ಮತ್ತು ಲಲಿತಕಲೆ ವಿಶ್ವವಿದ್ಯಾಲಯದ ಜತೆ ಸೇರಿಸಿಯೂ ಈ ಕೆಲಸಗಳನ್ನು ಮಾಡಬಹುದು ಎಂದು ಹೇಳಿದರೂ ಜಾನಪದ ಗುಂಗಿನಲ್ಲಿ ತನ್ಮಯವಾಗಿ ಜಾನಪದ ಸಂಶೋಧನೆ ನಡೆಸುವ ವಾತಾವರಣವನ್ನು ದೊಡ್ಡ ವ್ಯವಸ್ಥೆ ಕಟ್ಟಿಕೊಡುತ್ತದೆ ಎಂಬುದಕ್ಕೆ ಯಾವ ಖಾತರಿಯೂ ಇರುವುದಿಲ್ಲ. ಜ್ಞಾನ ನೆಲೆಗಳ ಸೃಷ್ಟಿ ವಿಶ್ವವಿದ್ಯಾಲಯಗಳ ಗುರಿ.

ಒಂದು ಊರಿನಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪನೆಯಾಗುವುದರೊಂದಿಗೆ ಗೊತ್ತಿಲ್ಲದ ಹಾಗೆ ಆ ಊರಿನ ಚಹರೆ ಬದಲಾಗುತ್ತಾ ಹೋಗುತ್ತದೆ. ಜನರು ಜ್ಞಾನಕ್ಕೆ ಹತ್ತಿರವಾಗುತ್ತಾ ಹೋಗುತ್ತಾರೆ. ದೊಡ್ಡದೊಂದು ವಿಶ್ವವಿದ್ಯಾಲಯವನ್ನು ಜನರು ದೂರ ನಿಂತು ಬೆರಗಿನಿಂದ ನೋಡುತ್ತಾರೆ. ತಮ್ಮದೇ ಊರಿನ ವಿಶ್ವವಿದ್ಯಾಲಯಗಳು ಜನರಿಗೆ ಹತ್ತಿರವಾಗುತ್ತವೆ. ಜ್ಞಾನ ಸೃಷ್ಟಿಯಲ್ಲಿ ಅವರು ಪಾಲುದಾರರಾಗುತ್ತಾರೆ.

ಕನ್ನಡ ವಿಶ್ವವಿದ್ಯಾಲಯ, ಸಂಗೀತ ವಿಶ್ವವಿದ್ಯಾಲಯ, ಲಲಿತಕಲೆಯಂತಹ ವಿಷಯ ವಿಶಿಷ್ಟ ವಿಶ್ವವಿದ್ಯಾಲಯಗಳ ವಿಚಾರದಲ್ಲಿ ಇದು ಆಗಬೇಕಾದ ಕೆಲಸ. ಹಾಗಾಗಿ ಹಣ ಹೆಚ್ಚು ಖರ್ಚಾಗುತ್ತದೆ, ವಿಶ್ವವಿದ್ಯಾಲಯಗಳನ್ನು ಒಂದಾಗಿಸಿ ಮಿತವ್ಯಯ ಸಾಧಿಸೋಣ ಎಂಬ ಜಿಪುಣತನವನ್ನು ಸರ್ಕಾರಗಳು ಕೈಬಿಡುವುದು ನಾಡಿನ ಜ್ಞಾನ ಸಮೃದ್ಧಗೊಳ್ಳುವ ದೃಷ್ಟಿಯಿಂದ ಒಳ್ಳೆಯದು.

ಸಂಗೀತ ಮತ್ತು ಲಲಿತಕಲೆಗಳ ಹಿಂದಿರುವ ತತ್ವ ಒಂದೆ. ಏಳು ಸ್ವರಗಳ ತತ್ವ ಎಲ್ಲ ಕಲೆಗಳಿಗೂ ಅನ್ವಯವಾಗುತ್ತದೆ. ಸಂಗೀತ, ಪ್ರದರ್ಶಕ ಕಲೆಗಳ ಅಧ್ಯಯನ ಒಂದೆಡೆ ನಡೆಯುವುದು ಪರಸ್ಪರ ಪೂರಕ.
-ಹನುಮಣ್ಣ ನಾಯಕ ದೊರೆ,ಸಂಗೀತ ವಿಶ್ವವಿದ್ಯಾಲಯದ ಮೊದಲ ಕುಲಪತಿ

ವಿಶ್ವವಿದ್ಯಾಲಯಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು. ಗಡಿಯಾರದಂತೆ ಕೆಲಸ ಮಾಡಬೇಕು. ಅದಕ್ಕೆ ಬೇಕಾದ ಸಕಲ ಸೌಕರ್ಯವನ್ನು ಸರ್ಕಾರ ಒದಗಿಸಬೇಕು. ಕೇವಲ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.
-ಪ್ರೊ. ಬಿ.ಕೆ.ಚಂದ್ರಶೇಖರ್, ಮಾಜಿ ಶಿಕ್ಷಣ ಸಚಿವ

64 ಕಲೆಗಳಲ್ಲಿ ಸಂಗೀತ, ಚಿತ್ರಕಲೆ, ಶಿಲ್ಪಕಲೆ ಎಲ್ಲವೂ ಸೇರುತ್ತವೆ. ಎರಡು ವಿಶ್ವವಿದ್ಯಾಲಯಗಳನ್ನು ವಿಲೀನ ಮಾಡಿ ಪರಿಪೂರ್ಣ ಸೌಕರ್ಯಗಳಿರುವ ವಿಶ್ವವಿದ್ಯಾಲಯ ಸ್ಥಾಪನೆ ಒಳ್ಳೆಯದೆ.
-ಡಾ. ಸರ್ವಮಂಗಳಾ ಶಂಕರ್, ಕುಲಪತಿ,ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.