ಡೆಂಗಿ, ಮಲೇರಿಯಾದಂತಹ ರೋಗಗಳು ಬಂದಾಗ ಆ ಕ್ಷಣದ ಮಟ್ಟಿಗಷ್ಟೇ ಸರ್ಕಾರ ಒಂದಷ್ಟು ತುರ್ತು ಕ್ರಮಗಳನ್ನು ಕೈಗೊಳ್ಳುತ್ತದೆ. ಆ ನಂತರ ಅದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಸುಮ್ಮನಾಗುತ್ತದೆ.

ಆರೋಗ್ಯ ಸೇವೆಗಳನ್ನು ನೀಡುವಲ್ಲಿ ಅನಾಸಕ್ತಿ ತೋರುತ್ತಿರುವ ಸರ್ಕಾರ, ಇದಕ್ಕಾಗಿ ಖರ್ಚು ಮಾಡುವ ಹಣದ ಪ್ರಮಾಣವನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ವಿಧಿಸಿರುವ ಮಾನದಂಡಗಳ ಪ್ರಕಾರ, ಯಾವುದೇ ದೇಶ ಆರೋಗ್ಯ ಸೇವೆಗಾಗಿ ತನ್ನ ಒಟ್ಟು ಜಿಡಿಪಿಯ ಕನಿಷ್ಠ ಶೇ 5ರಷ್ಟನ್ನಾದರೂ ಖರ್ಚು ಮಾಡಬೇಕು. ದುರದೃಷ್ಟವಶಾತ್ ಭಾರತ ಸರ್ಕಾರ ಕೇವಲ ಶೇ 1ರಷ್ಟು ಹಣವನ್ನು ಮೀಸಲಿಡುತ್ತಿದೆ. ಏಷ್ಯಾ ಖಂಡದ ಇನ್ನೊಂದು ಪ್ರಮುಖ ರಾಷ್ಟ್ರ ಚೀನಾ ಶೇ 3, ಅಮೆರಿಕ ಶೇ 8.3ರಷ್ಟು ಹಣವನ್ನು ಆರೋಗ್ಯ ಸೇವೆಗಾಗಿ ಖರ್ಚು ಮಾಡುತ್ತಿವೆ.

ಯಾವುದೇ ರೋಗವನ್ನು ಪತ್ತೆ ಹಚ್ಚಬೇಕೆಂದರೆ ಸುಸಜ್ಜಿತ ಪ್ರಯೋಗಾಲಯ, ನುರಿತ ವೈದ್ಯಕೀಯ ಸಿಬ್ಬಂದಿ ಬೇಕಾಗುತ್ತದೆ. ಬೆಂಗಳೂರಿನಂತಹ ಮಹಾನಗರಗಳನ್ನು ಹೊರತುಪಡಿಸಿದರೆ ವಿವಿಧ ಜಿಲ್ಲಾ ಆಸ್ಪತ್ರೆಗಳಲ್ಲಿಯೇ ಇಂತಹ ಸೌಲಭ್ಯಗಳ ಕೊರತೆ ಇದೆ. ಬರೀ ಪ್ರಯೋಗಾಲಯ ಇದ್ದರೆ ಸಾಲದು, ಅದಕ್ಕೆ ಉತ್ತಮ ತರಬೇತಿ ಪಡೆದ ನರ್ಸಿಂಗ್ ಸಿಬ್ಬಂದಿಯೂ ಬೇಕು. ಆದರೆ, ರಾಜ್ಯದ ಆರೋಗ್ಯ ಕ್ಷೇತ್ರದ ಶೇ 80ರಷ್ಟು ಭಾಗ ಖಾಸಗಿಯವರ ಕೈಯಲ್ಲಿದೆ. ಅವರು ಹೇಗಾದರೂ ಮಾಡಿ ಸರ್ಕಾರಿ ಆಸ್ಪತ್ರೆಯಲ್ಲಿರುವ ಸಿಬ್ಬಂದಿಯನ್ನು ತಮ್ಮ ಆಸ್ಪತ್ರೆಗಳತ್ತ ಸೆಳೆಯುತ್ತಾರೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಹಾಗೂ ನರ್ಸಿಂಗ್ ಪದವೀಧರರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ.

ಬಹುತೇಕ ಸಂದರ್ಭಗಳಲ್ಲಿ ಡೆಂಗಿ ಜ್ವರವೇನೂ ಮಾರಣಾಂತಿಕ ಕಾಯಿಲೆ ಅಲ್ಲ. ಶೇ 1ರಷ್ಟು ಮಾತ್ರ ಮರಣ ಪ್ರಮಾಣದ ಸಂಭವವಿದೆ. ಹಾಗೆಂದು ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ. ಡೆಂಗಿ ಜ್ವರ ಬಂದ ವ್ಯಕ್ತಿಯ ಮೈಯಲ್ಲಿ ಸೇರಿಕೊಳ್ಳುವ ರೋಗಾಣುಗಳು ಮೊದಲು ಮಾಡುವ ಕೆಲಸ ರಕ್ತವನ್ನು ಹೆಪ್ಪುಗಟ್ಟಿಸುವುದು. ಉತ್ತಮ ರೋಗನಿರೋಧಕ ಶಕ್ತಿ ಇದ್ದರೆ ಈ ಜ್ವರದಿಂದ ಯಾವ ತೊಂದರೆಯೂ ಇಲ್ಲ. ಮಕ್ಕಳು ಹಾಗೂ ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕರುಳಿನಲ್ಲಿ ಮತ್ತು ಮೆದುಳಿನಲ್ಲಿ ರಕ್ತ ಬೇಗನೇ ಹೆಪ್ಪುಗಟ್ಟುತ್ತದೆ. ಇದಕ್ಕೆ ಕಾರಣ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದು. ನಮ್ಮ ದೇಹದಲ್ಲಿ ಲಕ್ಷಾಂತರ ಪ್ಲೇಟ್‌ಲೆಟ್‌ಗಳಿರುತ್ತವೆ. ಅವು ಹತ್ತೋ, ಇಪ್ಪತ್ತೋ ಪ್ರಮಾಣದಲ್ಲಿ ಕಡಿಮೆಯಾದರೆ ಅದಕ್ಕೆ ಚಿಕಿತ್ಸೆಯ ಅಗತ್ಯವಿಲ್ಲ. ಆದರೆ, ರೋಗಿಯಲ್ಲಿ ಎಷ್ಟು ಪ್ರಮಾಣದಲ್ಲಿ ಪ್ಲೇಟ್‌ಲೆಟ್ಸ್‌ಗಳು ಕಡಿಮೆಯಾಗಿವೆ ಎಂಬುದನ್ನು ಪತ್ತೆಹಚ್ಚಬೇಕಲ್ಲ?

ಅದಕ್ಕಾಗಿಯಾದರೂ ಆಸ್ಪತ್ರೆಯಲ್ಲಿ ಪ್ರಯೋಗಾಲಯದ ಅವಶ್ಯಕತೆ ಇರುತ್ತದೆ. ಅಂತಹ ಸುಸಜ್ಜಿತ ಪ್ರಯೋಗಾಲಯಗಳು ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿರುವ ಸರ್ಕಾರಿ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇರುವುದಿಲ್ಲ. ಇವುಗಳನ್ನು ಆರಂಭಿಸಲು ದೊಡ್ಡ ಪ್ರಮಾಣದ ಬಂಡವಾಳವೇನೂ ಬೇಕಾಗದು. ಆದರೆ, ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಇದು ಸಾಧ್ಯವಾಗಿಲ್ಲ. ಖಾಸಗಿಯಾಗಿ ದೊಡ್ಡ ಆಸ್ಪತ್ರೆಗಳನ್ನು ನಡೆಸುವವರೇ ಸರ್ಕಾರಿ ಆಸ್ಪತ್ರೆ, ಔಷಧಿ ಹಾಗೂ ಆರೋಗ್ಯ ಸೇವೆಗಳ ನೀತಿನಿರೂಪಕ ಮಂಡಳಿಗಳ ಸದಸ್ಯರಾಗಿರುತ್ತಾರೆ. ಅವರಿಂದ ಸರ್ಕಾರಿ ಆರೋಗ್ಯ ವ್ಯವಸ್ಥೆ ಸುಧಾರಣೆ ಬಗ್ಗೆ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ?

ರಾಜ್ಯ ಸರ್ಕಾರ ‘ಯಶಸ್ವಿನಿ’, ‘ವಾಜಪೇಯಿ ಆರೋಗ್ಯಶ್ರೀ’ಯಂತಹ ಯೋಜನೆಗಳನ್ನು ಖಾಸಗಿ ಆಸ್ಪತ್ರೆಗಳಿಗೂ ವಿಸ್ತರಿಸಿದೆ. ಇದೊಂದು ತಪ್ಪು ನಡೆ. ಯೋಜನೆಗಳನ್ನು ಖಾಸಗಿಯವರಿಗೆ ವಹಿಸಿದಷ್ಟೂ ಅವುಗಳ ಮೇಲೆ ಸರ್ಕಾರದ ಹಿಡಿತ ಸಡಿಲವಾಗುತ್ತಾ ಹೋಗುತ್ತದೆ. ಭವಿಷ್ಯದಲ್ಲಿ ಒಂದು ದಿನ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಕನಿಷ್ಠ ಹಣವನ್ನೂ ಮೀಸಲಿಡದ ಪರಿಸ್ಥಿತಿ ಬಂದರೂ ಬರಬಹುದು. ಆಗ ಗ್ರಾಮೀಣ ಬಡ ರೋಗಿಗಳ ಸ್ಥಿತಿ ಇನ್ನಷ್ಟು ಡೋಲಾಯಮಾನವಾಗುತ್ತದೆ.

ದುಬಾರಿ ಆರೋಗ್ಯ ಸೇವೆಗೂ ಬಡವರ ಬಡತನ ಇನ್ನಷ್ಟು ಹೆಚ್ಚಾಗಲಿಕ್ಕೂ ಪರಸ್ಪರ ನಿಕಟ ಸಂಬಂಧವಿದೆ. ಉದಾಹರಣೆಗೆ, ಕಾಯಿಲೆಯೊಂದರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಸೇರುವ ಹಳ್ಳಿಗನೊಬ್ಬ ಗುಣಮುಖನಾಗಿ ವಾಪಸ್ ಮನೆಗೆ ಬರುವಷ್ಟರಲ್ಲಿ ಆಸ್ಪತ್ರೆ ಶುಲ್ಕ ಹಲವು ಸಾವಿರಗಳಿಗೆ ಏರಿರುತ್ತದೆ. ಇರುವ ಭೂಮಿಯೊಂದನ್ನೇ ನಂಬಿಕೊಂಡ ಅವನಿಗೆ ಬಿಲ್ ಪಾವತಿ ಮಾಡಲು ಆ ಭೂಮಿಯನ್ನೇ ಮಾರಬೇಕಾದ ಪರಿಸ್ಥಿತಿ ಬರಬಹುದು. ಇಲ್ಲವೇ ಮಾಡಿದ ಸಾಲವನ್ನು ದುಡಿಮೆಯ ಮೂಲಕ ತೀರಿಸಲು ಮುಂದಾದರೆ, ಹೆಚ್ಚು ಖರ್ಚಾಗುತ್ತದೆ ಎಂಬ ಕಾರಣಕ್ಕೆ ಆ ವ್ಯಕ್ತಿ ಪೌಷ್ಟಿಕ ಆಹಾರ ಸೇವನೆಯನ್ನೇ ಕಡಿಮೆ ಮಾಡಬಹುದು. ಇದರಿಂದ ಮತ್ತೆ ಕಾಯಿಲೆ ಬೀಳುತ್ತಾನೆ. ಅದಕ್ಕಾಗಿ ಮತ್ತೆ ಚಿಕಿತ್ಸೆ ಪಡೆಯುತ್ತಾನೆ. ಪುನಃ ಸಾಲ ಮಾಡುತ್ತಾನೆ. ಈ ವಿಷವರ್ತುಲ ನಿರಂತರವಾಗಿ ಮುಂದುವರಿದು ಗ್ರಾಮೀಣರನ್ನು ಹೈರಾಣಾಗಿಸುತ್ತದೆ.

ಅಮೆರಿಕದಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರಜೆಗಳಿಗೆ ಆರೋಗ್ಯ ವಿಮೆಯನ್ನು ಕಡ್ಡಾಯ ಮಾಡಲಾಗಿದೆ. ಯಾವುದೇ ಕಾಯಿಲೆ ಇದ್ದರೂ ವಿಮಾ ಕಂಪೆನಿಯೇ ರೋಗಿಯ ಎಲ್ಲ ವೈದ್ಯಕೀಯ ವೆಚ್ಚವನ್ನೂ ಭರಿಸುತ್ತದೆ. ಆದರೆ, ನಮ್ಮ ದೇಶದಲ್ಲಿ ರೋಗಿ ತನ್ನ ಜೇಬಿನಿಂದಲೇ ಹಣ ಖರ್ಚು ಮಾಡಬೇಕಾಗುತ್ತದೆ. ಔಷಧಿ, ರಕ್ತ, ಪ್ಲೇಟ್‌ಲೆಟ್‌ಗಳಂತಹ ಚಿಕಿತ್ಸಾ ಸೌಲಭ್ಯಗಳನ್ನು ಖರೀದಿಸಬೇಕಾಗುತ್ತದೆ. ಹೀಗೆ ಖರೀದಿ ಮಾಡುವ ಪ್ರಕ್ರಿಯೆ ರೋಗಿಯು ಸರ್ಕಾರಿ ಆಸ್ಪತ್ರೆಯಲ್ಲಿದ್ದಾಗಲೂ ಮುಂದುವರಿಯುತ್ತದೆ. ಏಕೆಂದರೆ, ದೊಡ್ಡ ಕಾಯಿಲೆಗಳನ್ನು ಗುಣಪಡಿಸಲು ಬೇಕಾದ ಉಚಿತ ಔಷಧಿಗಳ ಲಭ್ಯತೆ ನಮ್ಮ ರಾಜ್ಯದಲ್ಲಿ ಬಹಳಷ್ಟು ಬಾರಿ ಇರುವುದಿಲ್ಲ.

ಹಾಗೆ ನೋಡಿದರೆ, ತಮಿಳುನಾಡು, ರಾಜಸ್ತಾನ ಹಾಗೂ ಕೇರಳ ರಾಜ್ಯಗಳಲ್ಲಿ ಅತ್ಯುತ್ತಮ ಔಷಧಿ ವಿತರಣಾ ವ್ಯವಸ್ಥೆ ಜಾರಿಯಲ್ಲಿದೆ. ಅಲ್ಲಿನ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹೊರಗಿನಿಂದ ಔಷಧಿ ತರುವುದಕ್ಕೆ ಆಸ್ಪದ ನೀಡುವುದಿಲ್ಲ.

ಜಿಲ್ಲಾ ಆಸ್ಪತ್ರೆಯಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೂ ಆನ್‌ಲೈನ್ ಸಂಪರ್ಕವಿದ್ದು, ಖಾಲಿಯಾದ ಔಷಧಿಯನ್ನು ಕೂಡಲೇ ಮುಖ್ಯ ಔಷಧಿ ಭಂಡಾರದ ಮುಖ್ಯಸ್ಥರ ಗಮನಕ್ಕೆ ತರಬೇಕು. ಮನವಿ ಸಲ್ಲಿಕೆಯಾದ ಕೂಡಲೇ ಔಷಧಿ ಪೂರೈಕೆ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದರಿಂದ ಬಡ ರೋಗಿಗಳು ಔಷಧಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವುದು ತಪ್ಪುತ್ತದೆ.

ಈ ರಾಜ್ಯಗಳಲ್ಲಿನ ವ್ಯವಸ್ಥೆಯನ್ನು ಉಳಿದ ರಾಜ್ಯಗಳೂ ಅನುಸರಿಸಲು ಮುಂದಾಗಬೇಕು. ಈಗ ನಡೆಯುತ್ತಿರುವ ಆರೋಗ್ಯ ಕ್ಷೇತ್ರದ ಖಾಸಗೀಕರಣ ಪ್ರಕ್ರಿಯೆಯನ್ನು ನೋಡಿದರೆ, ಅಂತಹ ಕ್ರಮಗಳನ್ನು ಅಳವಡಿಸಿಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ.

ರೋಗಿಗಳೇ ಆಸ್ಪತ್ರೆಯ ಖರ್ಚನ್ನು ಭರಿಸುವುದಕ್ಕೆ 12ನೇ ಹಣಕಾಸು ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವೆಚ್ಚವನ್ನು ಕಡಿತಗೊಳಿಸಲು ಯಾವುದೇ ಕಾಲಾವಕಾಶವನ್ನು ಆಯೋಗ ನಿಗದಿ ಮಾಡಿಲ್ಲ. ಕೇಂದ್ರ ಬಜೆಟ್‌ನಲ್ಲಿ ಆರೋಗ್ಯಕ್ಕೆ ಹೆಚ್ಚು ಹಣವನ್ನು ಮೀಸಲಿಡುವ ಮೂಲಕ ಇದನ್ನು ಸಾಧಿಸಬಹುದು. ಇದರಿಂದ ಹೆಚ್ಚು ಹೆಚ್ಚು ಸಾರ್ವಜನಿಕ ಆಸ್ಪತ್ರೆಗಳನ್ನು ಆರಂಭಿಸಬಹುದು. ಆದರೆ, ಯೋಜನಾ ಆಯೋಗ ಖಾಸಗಿ ವಲಯವನ್ನು ನಿಯಂತ್ರಿಸುವ ಮೂಲಕ ಇದನ್ನು ಸಾಧಿಸುವ ಸಲಹೆಯನ್ನು ನೀಡಿದೆ!

‘ಭಾರತದ ಆರೋಗ್ಯ ವ್ಯವಸ್ಥೆ ಪರಿಣಾಮಕಾರಿಯಾಗುವಂತೆ ಮಾಡಲು ಹಲವು ವರ್ಷಗಳೇ ಬೇಕಾಗುತ್ತವೆ’ ಎಂಬುದನ್ನು ಆಯೋಗ ತನ್ನ ವರದಿಯಲ್ಲಿ ಒಪ್ಪಿಕೊಂಡಿದೆ. ಆದರೆ, ‘ವರ್ಷಗಳು’ ಎಂಬ ಪದಕ್ಕೆ ನಿರ್ದಿಷ್ಟ ವ್ಯಾಖ್ಯಾನ (ಎಷ್ಟು ವರ್ಷಗಳ ಕಾಲಮಿತಿ) ನೀಡುವ ಗೋಜಿಗೆ ಹೋಗಿಲ್ಲ!

ಇದಕ್ಕೆ ವಿರುದ್ಧವಾಗಿ ಸರ್ಕಾರ ತನ್ನದೇ ನೀತಿಗಳನ್ನು ತರಲಾರಂಭಿಸಿದೆ. ಇರುವ ಸರ್ಕಾರಿ ಆಸ್ಪತ್ರೆಗಳನ್ನೂ (ಬಹುತೇಕ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳು) ಖಾಸಗಿಯವರ ಕೈಗೊಪ್ಪಿಸುವ ಕೆಲಸವನ್ನು ನಿಧಾನವಾಗಿ ಆರಂಭಿಸಿದೆ.

ಇಂತಹ ಸ್ಥಿತಿಯಲ್ಲಿ, ಆರೋಗ್ಯ ಸೇವೆಗಾಗಿ ಹೆಚ್ಚು ಅನುದಾನ ನೀಡುವ ಸಂವೇದನೆಯನ್ನು ಸರ್ಕಾರಕ್ಕೆ ಮೂಡಿಸಬೇಕಾಗಿದೆ. ಜೊತೆಗೆ ದೊರೆತ ಅನುದಾನದಲ್ಲಿ ಸ್ಥಳೀಯ ಆಡಳಿತಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಾಗಿದೆ. ಆಡಳಿತ ವಿಕೇಂದ್ರೀಕರಣದ ಮೂಲಕ ಆಸ್ಪತ್ರೆಗಳಲ್ಲಿ ಉತ್ತಮ ಸೌಲಭ್ಯ ದೊರಕುವಂತೆ ನೋಡಿಕೊಳ್ಳಬೇಕಾದ ಹೊಣೆ ಸರ್ಕಾರದ ಮೇಲಿದೆ.

* ನಿರೂಪಣೆ: ಮನೋಜಕುಮಾರ್ ಗುದ್ದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.