ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿರ ದಿನಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧ ಗಂಭೀರವಾದ ಆರೋಪಗಳು ಇಲ್ಲವಾದರೂ ಹಲವಾರು ಅಡೆತಡೆಗಳನ್ನು ಅವರು ದಾಟಿದ್ದಾರೆ. ಸಾವಿರ ದಿನಗಳ ತಮ್ಮ ಆಡಳಿತದ ಬಗ್ಗೆ ಸಂಪೂರ್ಣ ತೃಪ್ತಿ ಇದೆ ಎಂದು ಹೇಳುವ ಅವರು ಉಳಿದ ಸಮಯದಲ್ಲಿ ಇನ್ನೂ ಸಾಕಷ್ಟು ಸಾಧನೆ ಮಾಡುವ ಮಾತುಗಳನ್ನು ಆಡಿದ್ದಾರೆ. ಮುಂದಿನ ಎರಡು ವರ್ಷ ಕೂಡ ತಾವೇ ಮುಖ್ಯಮಂತ್ರಿಯಾಗಿರುವುದಾಗಿ ಹೇಳುವ ಸಿದ್ದರಾಮಯ್ಯ ಸಾವಿರ ದಿನಗಳ ಆಡಳಿತದ ಬಗ್ಗೆ ಬಂದ ಟೀಕೆ ಟಿಪ್ಪಣೆಗಳಿಗೆ ಇಲ್ಲಿ ಉತ್ತರಿಸಿದ್ದಾರೆ.

‘ನನ್ನ ವಿರುದ್ಧ ಟೀಕೆಗಳು ಬರುವುದಕ್ಕೆ ನಾನು ಹಿಂದುಳಿದ ವರ್ಗದವನು ಎನ್ನುವುದೂ ಒಂದು ಕಾರಣ. ಅದೊಂದೇ ಕಾರಣ ಅಲ್ಲ. ಆದರೆ ಅದೂ ಒಂದು ಕಾರಣ. ಸಾಮಾಜಿಕವಾಗಿ ಹಿಂದುಳಿದವರು ಅಧಿಕಾರದಲ್ಲಿ ಮುಂದುವರಿಯುವುದು ಕಷ್ಟ. ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರು ಎರಡು ವರ್ಷ ಪೂರ್ಣ ಅಧಿಕಾರದಲ್ಲಿರಲಿಲ್ಲ. ದೇವರಾಜ ಅರಸು ಅವರಿಗೆ ಹಿಂದುಳಿದ ವರ್ಗದವರ ನಾಯಕ ಎಂಬ ಕೀರ್ತಿ ಇದ್ದರೂ ಅವರು ಮೂಲತಃ ಹಿಂದುಳಿದ ವರ್ಗದವರಲ್ಲ. ಅವರು ಅರಸು ಜನಾಂಗದಿಂದ ಬಂದವರು. ಧರ್ಮಸಿಂಗ್ ಅವರು ರಜಪೂತರು. ಅವರನ್ನೂ ಹಿಂದುಳಿದ ವರ್ಗದವರು ಎಂದೇ ಗುರುತಿಸಲಾಗುತ್ತದೆ. ಆದರೆ ಅವರು ಸಾಮಾಜಿಕವಾಗಿ ಹಿಂದುಳಿದವರಲ್ಲ’ ಎಂದು ಅವರು ಹೇಳುತ್ತಾರೆ.

ಸಾವಿರ ದಿನಗಳ ಆಡಳಿತ, ಮುಂದಿನ ತಮ್ಮ ಕನಸುಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

* ಸಾವಿರ ದಿನಗಳ ಆಡಳಿತ ನಿಮಗೆ ತೃಪ್ತಿ ತಂದಿದೆಯಾ?
ಹೌದು. ಸಂಪೂರ್ಣ ತೃಪ್ತಿ ಇದೆ. ಸರ್ಕಾರದ ವಿರುದ್ಧ ಯಾವುದೇ ಕಪ್ಪು ಚುಕ್ಕೆಗಳಿಲ್ಲ. ಅರ್ಕಾವತಿ ಡಿನೋಟಿಫಿಕೇಷನ್ ಬಗ್ಗೆ ಆರೋಪ ಬಂದಿತ್ತು. ಆದರೆ ಈ ಪ್ರಕರಣದಲ್ಲಿ ನಾನು ತಪ್ಪು ಮಾಡಿಲ್ಲ. ನನ್ನ ಆತ್ಮಸಾಕ್ಷಿಯಂತೆಯೇ ನಡೆದುಕೊಂಡಿದ್ದೇನೆ. ನಾನು ತಪ್ಪು ಮಾಡಿದ್ದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರು ಒಪ್ಪಿಗೆ ಕೊಡಬೇಕಾಗಿತ್ತಲ್ವಾ?

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜನರಿಗೆ ಕೊಟ್ಟ ಭರವಸೆಗಳಲ್ಲಿ ಬಹುತೇಕ ಪೂರ್ಣಗೊಳಿಸಿದ್ದೇವೆ. ನಾನು ಇನ್ನೂ ಮೂರು ಬಜೆಟ್ ಮಂಡಿಸಬೇಕು. ಉಳಿದ ಎಲ್ಲ ಭರವಸೆಗಳನ್ನೂ ಪೂರೈಸುತ್ತೇವೆ. ನಾನು ಬಜೆಟ್ ಸಿದ್ಧತೆ ಮಾಡುವಾಗ ನಮ್ಮ ಪಕ್ಷದ ಪ್ರಣಾಳಿಕೆ ಇಟ್ಟುಕೊಂಡೇ ಇರುತ್ತೇನೆ.

ಪರಿಶಿಷ್ಟರ ಕಲ್ಯಾಣಕ್ಕೆ ಕ್ರಾಂತಿಕಾರಕ ಕಾಯ್ದೆಯನ್ನು ಜಾರಿ ಮಾಡಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ನೀಡುತ್ತಿದ್ದೇವೆ. ನಾವು ಅಧಿಕಾರಕ್ಕೆ ಬರುವ ಮೊದಲು ಪರಿಶಿಷ್ಟರಿಗೆ ಕೇವಲ ₹ 7800 ಕೋಟಿ ಅನುದಾನ ಇತ್ತು. ಕಳೆದ ಬಾರಿ ಅದು ₹ 15,800 ಕೋಟಿಗೆ ಏರಿಕೆಯಾಯಿತು. 2015–16ನೇ ಸಾಲಿಗೆ ಅದು ₹ 16,356 ಕೋಟಿಯಾಗಿದೆ.

* ನೀವು ಇಷ್ಟೆಲ್ಲಾ ಹೇಳಿದರೂ ನಿಮ್ಮ ಸರ್ಕಾರ ಟೇಕ್ಆಫ್ ಆಗಿಲ್ಲ ಎಂಬ ಭಾವನೆಯೇ ಇದೆಯಲ್ಲ ಯಾಕೆ?
ಸರ್ಕಾರ ಟೇಕ್ಆಫ್ ಆಗುವುದು ಎಂದರೆ ಏನು? ಇವೆಲ್ಲ ದುರುದ್ದೇಶಪೂರಿತ ಟೀಕೆಗಳು. ಸರ್ಕಾರ ಟೇಕ್ಆಫ್ ಆಗಿಲ್ಲ ಎಂದರೆ ಯಾವುದೇ ಕಾರ್ಯಕ್ರಮಗಳು ಅನುಷ್ಠಾನವಾಗಿರ ಬಾರದು. ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತವಾಗಿರಬೇಕಿತ್ತು. ಈಗ ಹಾಗೆ ಆಗಿಲ್ಲವಲ್ಲ. ಆಡಳಿತದಲ್ಲಿ ಯಾವುದೇ ದೋಷ ಇಲ್ಲ. ಜನ ಕಲ್ಯಾಣ ಕಾರ್ಯಕ್ರಮಗಳು ಜಾರಿಯಾಗುತ್ತಲೇ ಇವೆ.

ವಿದ್ಯಾಸಿರಿ, ಮೈತ್ರಿ, ಮನಸ್ವಿನಿ, ಹಾಲಿಗೆ ₹ 4 ಪ್ರೋತ್ಸಾಹಧನ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. 1.08 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯ ಲಾಭ ಸಿಗುತ್ತಿದೆ. 33 ಲಕ್ಷ ಎಪಿಎಲ್ ಕುಟುಂಬಗಳು ಪಡಿತರ ತೆಗೆದುಕೊಳ್ಳುತ್ತಿ ದ್ದಾರೆ. ರೈತರಿಗೆ ₹ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಕಳೆದ ವರ್ಷ ₹ 9300 ಕೋಟಿ ಸಾಲ ನೀಡಲಾಗಿದೆ. ಈ ವರ್ಷ ₹ 10 ಸಾವಿರ ಕೋಟಿ ನೀಡಲಾಗುತ್ತದೆ. ಹೀಗಿದ್ದೂ ಟೇಕ್ಆಫ್ ಆಗಿಲ್ಲ ಎಂದರೆ ಏನರ್ಥ?

ಹಸಿವು ಮುಕ್ತ ಕರ್ನಾಟಕ ನನ್ನ ಕನಸು
* ನಿಮ್ಮ ಕನಸಿನ ಕರ್ನಾಟಕ ಯಾವುದು?
ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕು. ಮಕ್ಕಳು ಅಪೌಷ್ಟಿಕತೆಯಿಂದ ನರಳಬಾರದು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಬೇಕು. ಎಲ್ಲರಿಗೂ ಶುದ್ಧ ಕುಡಿಯುವ ನೀರು ಸಿಗಬೇಕು. ವಿದ್ಯುತ್ ಕೊರತೆ ಇರಬಾರದು. ಕೈಗಾರಿಕೆ ಅಭಿವೃದ್ಧಿಯಾಗಬೇಕು.

* ಇದರಲ್ಲಿ ಬೆಂಗಳೂರು ಅಭಿವೃದ್ಧಿ ಸೇರಲೇ ಇಲ್ಲವಲ್ಲ?
ಬೆಂಗಳೂರು ಅಭಿವೃದ್ಧಿಯಾಗಬೇಕು. ಅದೂ ನಮ್ಮ ಆದ್ಯತೆಗಳಲ್ಲಿ ಒಂದು.

* ಇದು ಬಹಳ ದೊಡ್ಡ ಕನಸು ಎನ್ನಿಸುವುದಿಲ್ಲವೇ?
5 ವರ್ಷಗಳಲ್ಲಿ ಇವನ್ನೆಲ್ಲಾ ಮಾಡಬೇಕು ಎಂಬ ಕನಸು ಕಂಡಿದ್ದೇನೆ.

* ನೀವು ಚೆನ್ನಾಗಿ ಕೆಲಸ ಮಾಡುತ್ತಿರಬಹುದು. ಆದರೆ ನಿಮ್ಮ ಸಂಪುಟದ ಸಹೋದ್ಯೋಗಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರಿದೆ.
ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೇ ತರಹ ಇರಲು ಸಾಧ್ಯವಿಲ್ಲ. ನನ್ನ ಸಂಪುಟದಲ್ಲಿ ಅದಕ್ಷರು, ಅಪ್ರಾಮಾಣಿಕರು ಇದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಇನ್ನೂ ಹೆಚ್ಚು ಚೆನ್ನಾಗಿ ಕೆಲಸ ಮಾಡಬೇಕು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆಡಳಿತವನ್ನು ಇನ್ನಷ್ಟು ಚುರುಕುಗೊಳಿಸಬೇಕು ಎನ್ನುವುದನ್ನೂ ಒಪ್ಪುತ್ತೇನೆ. ಸಕಾಲ, ಮೊಬೈಲ್ ಒನ್ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಭ್ರಷ್ಟಾಚಾರ ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಆಡಳಿತವನ್ನು ಜನರ ಇನ್ನಷ್ಟು ಹತ್ತಿರಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ.

* ಈಗ ಇರುವ ಸಂಪುಟ ನಿಮ್ಮ ಆಯ್ಕೆಯೇ ಹೌದಾ?
ಅದರಲ್ಲಿ ಅನುಮಾನವೇ ಬೇಡ. ಇದು ನನ್ನ ಆಯ್ಕೆಯ ಸಂಪುಟ.

* ಸಂಪುಟದಲ್ಲಿ ಕೆಲವು ಅಸಮರ್ಥರಿದ್ದಾರೆ. ಕೆಲವರಿಗೆ ಕಣ್ಣು ಕಾಣದು, ಕಿವಿ ಕೇಳಿಸದು ಎನ್ನುವ ಪರಿಸ್ಥಿತಿ ಇದೆ. ಅಂತಹವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ?
ಸಂಪುಟ ರಚಿಸುವಾಗ ಬೇರೆ ಬೇರೆ ಕಾರಣಗಳಿಗಾಗಿ ಕೆಲವರನ್ನು ತೆಗೆದುಕೊಳ್ಳಬೇಕಾಗುತ್ತದೆ. ಜಾತಿ, ಧರ್ಮ, ಸಾಮಾಜಿಕ ನ್ಯಾಯ ಮುಂತಾದ ಅನಿವಾರ್ಯತೆಗಳಿರುತ್ತವೆ. ಉದಾಹರಣೆಗೆ ಬಾಬುರಾವ್ ಚಿಂಚನಸೂರ. ಅವರು ಬೆಸ್ತ ಸಮುದಾಯಕ್ಕೆ ಸೇರಿದವರು. ಬಹಳ ದೊಡ್ಡ ಜನಾಂಗ. ಹೈದರಾಬಾದ್ ಕರ್ನಾಟಕದಲ್ಲಿ ಜಾಸ್ತಿ ಇದೆ. ಇದನ್ನೆಲ್ಲಾ ನಿರ್ಲಕ್ಷಿಸಲು ಆಗದು. ಅದೇ ರೀತಿ ಇನ್ನೂ ಕೆಲವರಿದ್ದಾರೆ.

* ನೀವು ಯಾವುದೋ ಸಣ್ಣ ಜನಾಂಗದ ಸಚಿವರ ಬಗ್ಗೆ ಹೇಳುತ್ತಿದ್ದೀರಿ. ದೊಡ್ಡ ಮತ್ತು ಪ್ರಬಲ ಕೋಮಿನ ಸಚಿವರು ಕೂಡ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳಿವೆ?
ಎಲ್ಲ ಸಚಿವರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಯಾರೂ ಅದಕ್ಷರಲ್ಲ.

* ನಿಮ್ಮ ಸಂಕಟದ ಸಂದರ್ಭದಲ್ಲಿ ನಿಮ್ಮ ಬೆಂಬಲಕ್ಕೆ ಯಾವುದೇ ಸಚಿವರು ಬರುತ್ತಿಲ್ಲ ಯಾಕೆ?
ನನಗೆ ಸಂಕಟಗಳೇ ಬಂದಿಲ್ಲ. ಇನ್ನು ಸಚಿವರು ಬೆಂಬಲಕ್ಕೆ ಬರುವ ಮಾತೆಲ್ಲಿ?

* ಉದಾಹರಣೆಗೆ ಡಿ.ಕೆ.ರವಿ ಸಾವಿನ ಪ್ರಕರಣ.
ಡಿ.ಕೆ.ರವಿ ಸಾವಿನ ಪ್ರಕರಣ ಸಂಕಷ್ಟ ಅಲ್ಲ. ಆರೋಪವೂ ಅಲ್ಲ. ಆದರೆ ಆಗ ಸಚಿವರಾದ ಟಿ.ಬಿ.ಜಯಚಂದ್ರ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ ಮುಂತಾದವರು ನನ್ನ ಬೆಂಬಲಕ್ಕೆ ಬಂದಿದ್ದರು.

* ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಎಲ್ಲ ಸಚಿವರ ಕಾರ್ಯಶೈಲಿ ಮೌಲ್ಯಮಾಪನ ಮಾಡುವುದಾಗಿ ಹೇಳಿದ್ದರು. ಈಗ ಅವರೇ ಸಂಪುಟ ಸೇರಿದ್ದಾರೆ. ಮೌಲ್ಯಮಾಪನ ನಡೆಯುತ್ತಿದೆಯೇ?
ಹೌದು, ನಾನೇ ಮೌಲ್ಯಮಾಪನ ಮಾಡುತ್ತಿದ್ದೇನೆ. ನಿಗದಿತ ಸಮಯದಲ್ಲಿ ಎಲ್ಲ ಖಾತೆಗಳಲ್ಲಿ ಏನೇನಾಗಿದೆ ಎಂದು ನೋಡುತ್ತಿದ್ದೇನೆ.

* ಸಂಪುಟ ಪುನರ್ರಚನೆ ಯಾವಾಗ ಮಾಡುತ್ತೀರಿ?
ಬಜೆಟ್ ಅಧಿವೇಶನದ ನಂತರ ಸಂಪುಟ ಪುನರ್ರಚನೆ ಮಾಡುತ್ತೇನೆ.

* ಎಷ್ಟು ಜನರನ್ನು ಕೈಬಿಡುತ್ತೀರಿ? ಯಾರನ್ನು ಕೈಬಿಡುತ್ತೀರಿ?
ಅದನ್ನೆಲ್ಲ ಈಗ ಹೇಳಲು ಸಾಧ್ಯವಿಲ್ಲ.

* ನಿಮ್ಮದು ನಿಧಾನಗತಿ ಸರ್ಕಾರ. ಯಾವುದೇ ನಿರ್ಣಯವನ್ನು ಬೇಗ ತೆಗೆದುಕೊಳ್ಳುವುದಿಲ್ಲ. ಉದಾಹರಣೆಗೆ ನಿಗಮ– ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿ ಎಷ್ಟು ದಿನವಾಯಿತು. ಇನ್ನೂ ಸದಸ್ಯರನ್ನು ನೇಮಕ ಮಾಡಿಲ್ಲ?
ನಮ್ಮದು ನಿಧಾನಗತಿಯ ಸರ್ಕಾರ ಅಲ್ಲ. ನಿಗಮ– ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ನೇಮಕದಲ್ಲಿ ವಿಳಂಬವಾಗಿದೆ ನಿಜ. ಆದರೆ ಇದಕ್ಕೆ ಬೇರೆ ಬೇರೆ ಕಾರಣಗಳಿವೆ. ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿಯೇ ನಿರ್ದೇಶಕರ ನೇಮಕಕ್ಕೆ ಮುಂದಾಗಿದ್ದೆವು. ಆದರೆ ನಗರದ ಶಾಸಕರು ಬಂದು, ಈಗ ಮಾಡುವುದು ಬೇಡ ಚುನಾವಣೆ ಮುಗೀಲಿ ಎಂದರು. ನಂತರ ಗ್ರಾಮ ಪಂಚಾಯಿತಿ ಚುನಾವಣೆ ಬಂತು. ಆಮೇಲೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಚುನಾವಣೆ ನಡೆಯಿತು. ಅದರ ನಂತರ ವಿಧಾನಸಭೆ ಉಪ ಚುನಾವಣೆ, ಈಗ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆದವು. ಹೀಗಾಗಿ ಕೊಂಚ ವಿಳಂಬವಾಯಿತು. ಈಗ ಎಲ್ಲ ನೇಮಕಾತಿಗಳನ್ನೂ ಮಾಡುತ್ತೇವೆ.

* ಎಚ್.ಡಿ.ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಟೀಕೆ ಮಾಡುವುದು ಸರಿ. ಆದರೆ ಎಸ್.ಎಂ.ಕೃಷ್ಣ ಅವರೂ ಟೀಕೆ ಮಾಡುತ್ತಾರೆ ಯಾಕೆ? ಬಿಬಿಎಂಪಿ ಚುನಾವಣೆ ಪ್ರಚಾರಕ್ಕೂ ಅವರು ಬರಲಿಲ್ಲವಲ್ಲ?
ಅವರು ಯಾಕೆ ನನ್ನ ಬಗ್ಗೆ ಟೀಕೆ ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ.

* ಒಂದು ನಿರ್ಧಾರ ಮಾಡುವುದು, ತಕ್ಷಣವೇ ಹಿಂದಕ್ಕೆ ಸರಿಯುವುದು ನಿಮ್ಮ ಸರ್ಕಾರದ ಹವ್ಯಾಸವೇ ಆಗಿಬಿಟ್ಟಿದೆ. ಇದಕ್ಕೆ ಉದಾಹರಣೆಗಳೆಂದರೆ ಮೌಢ್ಯ ನಿಷೇಧ ಕಾಯ್ದೆ ಮತ್ತು ಮಠಗಳ ನಿಯಂತ್ರಣ ಕಾಯ್ದೆ.
ಮೌಢ್ಯ ನಿಷೇಧ ಕಾಯ್ದೆಯನ್ನು ನಾವು ಇನ್ನೂ ರೂಪಿಸಿರಲೇ ಇಲ್ಲ. ರಾಷ್ಟ್ರೀಯ ಕಾನೂನು ಶಾಲೆಯವರು ಒಂದು ಕರಡು ಮಸೂದೆ ಕೊಟ್ಟಿದ್ದರು. ಅಷ್ಟರಲ್ಲಾಗಲೇ ಭಾರೀ ಟೀಕೆಗಳು ಬಂದವು. ಮಠಗಳ ನಿಯಂತ್ರಣದ ಕಾಯ್ದೆ ಪ್ರಸ್ತಾಪವೇ ಇರಲಿಲ್ಲ. ಯಾರಾದರೂ ಮಠಗಳನ್ನು ನಿಯಂತ್ರಿಸಲು ಸಾಧ್ಯವೇ?

ನನ್ನ ಬಗ್ಗೆ ಇಂತಹ ಟೀಕೆಗಳು ಸಹಜವಾಗಿಬಿಟ್ಟಿವೆ. ನಾನು ಒಂದು ಸಭೆಯಲ್ಲಿ ಕಡಿಮೆ ಬೆಲೆಯಲ್ಲಿ ಮದ್ಯ ಪೂರೈಕೆ ಮಾಡುವ ಪ್ರಸ್ತಾಪ ಮಾಡಿದೆ. ಆಗ ತಕ್ಷಣ ಸಿದ್ದರಾಮಯ್ಯ ಸಾರಾಯಿ ವಾಪಸು ತರುತ್ತಿದ್ದಾರೆ ಎಂದು ಗುಲ್ಲೆಬ್ಬಿಸಲಾಯಿತು. ನಾನು ಹೇಳಿದ್ದು ಅಗ್ಗದ ಮದ್ಯದ ವಿಚಾರ ಮಾತ್ರ.

ಸಾರಾಯಿ ಇದ್ದಾಗ ₹ 12ಕ್ಕೆ ಒಂದು ಪ್ಯಾಕೆಟ್ ಸಿಗುತ್ತಿತ್ತು. ಮೂರು ಪ್ಯಾಕೆಟ್ ಕುಡಿದರೂ ₹ 36ಕ್ಕೆ ಎಲ್ಲ ಮುಗಿಯುತ್ತಿತ್ತು. ಈಗ ಒಂದು ಕ್ವಾರ್ಟರ್ಗೆ ₹70–₹80 ಇದೆ. ಬಡವರ ಕೂಲಿ ಹಣ ಎಲ್ಲ ಅದಕ್ಕೇ ವ್ಯಯವಾಗುತ್ತಿದೆ. ನನ್ನ ಆಲೋಚನೆ ಈ ದಿಕ್ಕಿನಲ್ಲಿ ಇತ್ತು. ನಾನು ಹಣಕಾಸು ಸಚಿವನಾಗಿದ್ದಾಗಲೂ ಈ ಪ್ರಸ್ತಾಪ ಮುಂದಿಟ್ಟಿದ್ದೆ. ನಾನೂ ಅಬಕಾರಿ ಸಚಿವನಾಗಿದ್ದೆ. ಆದರೆ ನನ್ನ ಮೇಲೆ ಯಾವುದೇ ಆರೋಪಗಳು ಬಂದಿರಲಿಲ್ಲ.

* ಮಹಾದಾಯಿ ವಿವಾದ ಬಗೆಹರಿಸಲು ಯಾಕೆ ಸಾಧ್ಯವಾಗುತ್ತಿಲ್ಲ?
ಮಹಾದಾಯಿ ವಿವಾದ ಬಗೆಹರಿಸುವುದರಲ್ಲಿ ರಾಜ್ಯ ಸರ್ಕಾರದ ಪಾತ್ರ ಏನಿದೆ? ಅದನ್ನು ಬಗೆಹರಿಸುವ ಅಧಿಕಾರ ಇರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮಾತ್ರ. ನಾವು ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋದಾಗ ಅವರು ‘ನೀವು ಗೋವಾ ಮತ್ತು ಮಹಾರಾಷ್ಟ್ರಗಳ ವಿರೋಧ ಪಕ್ಷಗಳ ನಾಯಕರನ್ನು ಒಪ್ಪಿಸಿ’ ಎಂದರು. ಯಾರಾದರೂ ಹೀಗೆ ಮಾತನಾಡುತ್ತಾರಾ? ಈ ಹಿಂದೆ ಯಾವುದೇ ಪ್ರಧಾನಿ ಹೀಗೆ ಮಾಡಿದ ಉದಾಹರಣೆ ಇದೆಯಾ? ನಿಯೋಗದಲ್ಲಿ ನಾವು ಮಾತ್ರ ಅಲ್ಲ, ಮಠಾಧೀಶರಿದ್ದರು, ರೈತ ನಾಯಕರಿದ್ದರು. ಆದರೂ ಪ್ರಧಾನಿ ಹೀಗೆ ಹೇಳಿದರು. ಎರಡೂ ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳೇ ಇದ್ದಾರೆ. ಪ್ರಧಾನಿ ಕರೆದಿದ್ದರೆ ಅವರು ಬರಲ್ಲ ಎನ್ನುತ್ತಿದ್ದರಾ?

ಅದು ಹೋಗಲಿ, ನಮ್ಮ ಬಿಜೆಪಿ ಸಂಸತ್ ಸದಸ್ಯರು ಪ್ರಧಾನಿ ಮೇಲೆ ಒತ್ತಡ ಹೇರುವ ಕೆಲಸ ಮಾಡಿದರಾ? ಗೋವಾ ಮುಖ್ಯಮಂತ್ರಿಗೆ ನಾನು ಪತ್ರ ಬರೆದರೆ ಅವರು ಬರುವುದು ಬೇಡ ಎಂದರು. ಉಮಾ ಭಾರತಿ ಅವರು ಕೂಡ ತಾವು ಮಧ್ಯಪ್ರವೇಶ ಮಾಡಲ್ಲ ಎಂದರು. ಈ ವಿಷಯದಲ್ಲಿ ನಾವು ಎಲ್ಲಿ ವಿಫಲರಾಗಿದ್ದೇವೆ ನೀವೇ ಹೇಳಿ.

* ನೀವು ಕೇಂದ್ರದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರೆ ಹೀಗಾಗುತ್ತಿರಲಿಲ್ಲ. ಪ್ರಧಾನಿ ಕರೆದ ಸಭೆಗಳಿಗೆ ನೀವು ಹೋಗುವುದಿಲ್ಲ ಯಾಕೆ?
ಪ್ರಧಾನಿ ಕರೆದ ಎಲ್ಲ ಸಭೆಗಳಿಗೆ ಹೋಗಿದ್ದೇನೆ. ಭೂಸ್ವಾಧೀನ ಕಾಯ್ದೆಗೆ ಸಂಬಂಧಿಸಿದಂತೆ ನೀತಿ ಆಯೋಗ ಕರೆದ ಸಭೆಗೆ ಹೋಗಿರಲಿಲ್ಲ. ಈ ಕಾಯ್ದೆಯನ್ನು ವಿರೋಧಿಸಿ ನಮ್ಮ ಪಕ್ಷದ ಯಾವುದೇ ಮುಖ್ಯಮಂತ್ರಿಯೂ ಹೋಗಿರಲಿಲ್ಲ. ಬಿಜೆಪಿಯವರು ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಾರೆ.

* ನಿಮ್ಮ ಅಧಿಕಾರದ ಅವಧಿಯಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಗೆಡವಿದ ಆರೋಪವಿದೆ. ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರ ನೇಮಕವಾಗಿಲ್ಲ. ಲೋಕಾಯುಕ್ತಕ್ಕೆ ‘ಅಷ್ಟು ಪ್ರಾಮಾಣಿಕರಲ್ಲದವರನ್ನು’ ನೇಮಕ ಮಾಡಲು ಹೊರಟಿದ್ದೀರಿ ಎಂಬ ಆರೋಪವಿದೆ?
ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲು ರಾಜ್ಯಪಾಲರಿಗೆ ಹೆಸರುಗಳನ್ನು ಶಿಫಾರಸು ಮಾಡಿದ್ದೆವು. ಆದರೆ ರಾಜ್ಯಪಾಲರು ತಿರಸ್ಕರಿಸಿದರು. ನಂತರ ಈ ವಿಷಯ ಹೈಕೋರ್ಟ್ಗೆ ಹೋಯಿತು. ಈಗ ಕೋರ್ಟ್ ತಡೆಯಾಜ್ಞೆ ತೆರವಾಗಿದೆ. ಶೀಘ್ರವೇ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸಲಾಗುವುದು.

* ಕೆಪಿಎಸ್ಸಿಯ ಕೆಲವು ಸದಸ್ಯರನ್ನು ಅಮಾನತು ಮಾಡಲು ಶಿಫಾರಸು ಮಾಡಿದ್ದೀರಿ. ಆದರೆ ಇನ್ನೂ ಅಮಾನತು ಆಗಿಲ್ಲ?
ಅಮಾನತು ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದೇವೆ, ಅವರಿನ್ನೂ ಅಮಾನತು ಆದೇಶ ಮಾಡಿಲ್ಲ.

* ನೀವು ರಾಜ್ಯಪಾಲರನ್ನು ಭೇಟಿ ಮಾಡಿ ವಿವರಣೆ ನೀಡಬಹುದಾಗಿತ್ತಲ್ಲ?
ಈ ಬಗ್ಗೆ ಅವರಿಗೆ ವಿವರಣೆಯನ್ನೂ ನೀಡಿದ್ದೇನೆ. ಆದರೂ ಅಮಾನತು ಆದೇಶ ಬಂದಿಲ್ಲ. ಇದು ಬಿಟ್ಟು ನಾನು ಇನ್ನೇನು ಮಾಡಲು ಸಾಧ್ಯ.

* ಲೋಕಾಯುಕ್ತ ಸ್ಥಾನಕ್ಕೆ ಎಸ್.ಆರ್.ನಾಯಕ್ ಅವರೇ ಬೇಕು ಎಂಬ ಹಟ ಯಾಕೆ?
ಹಟ ಏನಿಲ್ಲ. ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದವರು. ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿದ್ದವರು. ಆಗ ಅವರ ವಿರುದ್ಧ ಯಾವುದೇ ಆರೋಪಗಳಿರಲಿಲ್ಲ. ಈಗ ಯಾಕೆ ವಿವಾದ? ವಿರೋಧ ಪಕ್ಷದ ನಾಯಕರ ಅಭಿಪ್ರಾಯ ಕೇಳಬೇಕು ಎಂದು ಕಾಯ್ದೆಯಲ್ಲಿದೆ. ಬಹುಮತದ ತೀರ್ಮಾನವಾಗಬೇಕು ಎಂಬ ನಿಯಮವಿಲ್ಲ. ಅಲ್ಲದೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿಯಾಗಲಿ, ವಿರೋಧ ಪಕ್ಷದ ಮುಖಂಡರಾಗಲಿ ಎಸ್.ಆರ್.ನಾಯಕ್ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿಲ್ಲ. ನಾಯಕ್ ಬಗ್ಗೆ ಆಕ್ಷೇಪಗಳಿವೆ, ಅದರ ಬದಲು ವಿಕ್ರಂಜಿತ್ ಸೇನ್ ಅವರನ್ನು ಪರಿಗಣಿಸಿ ಎಂದು ಸಲಹೆ ಮಾಡಿದ್ದರು. ವಿಕ್ರಂಜಿತ್ ಸೇನ್ ಅವರು ಕನ್ನಡಿಗರಲ್ಲ. ಕನ್ನಡಿಗ ಮತ್ತು ಕನ್ನಡಿಗರಲ್ಲದವರ ನಡುವೆ ಆಯ್ಕೆ ಪ್ರಶ್ನೆ ಬಂದಾಗ ನಾನು ಕನ್ನಡಿಗರನ್ನು ಆಯ್ಕೆ ಮಾಡಿದ್ದೇನೆ.

* ಲೋಕಾಯುಕ್ತಕ್ಕೆ ಕನ್ನಡಿಗರು ಬೇಕು, ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬೇಡ ಅಲ್ವೆ?
ಮುಖ್ಯ ಕಾರ್ಯದರ್ಶಿ ಹುದ್ದೆ ಹಿರಿತನದ ಆಧಾರದಲ್ಲಿ ನೇಮಕ ಮಾಡುವ ಹುದ್ದೆ. ಈಗಿನ ಮುಖ್ಯ ಕಾರ್ಯದರ್ಶಿ ಕನ್ನಡಿಗರು. ಹಿಂದಿನವರು ಕನ್ನಡಿಗರಾಗಿರಲಿಲ್ಲ. ಈಗಿನವರೂ ಕನ್ನಡಿಗರಲ್ಲ ಎಂದು ಪ್ರಚಾರ ಮಾಡಲಾಯಿತು. ಆದರೆ ಅವರು ಇಲ್ಲಿಯೇ ಹುಟ್ಟಿದ್ದಾರೆ. ಇಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ.

* ಲೋಕಾಯುಕ್ತರು ಕನ್ನಡಿಗರಲ್ಲದಿದ್ದರೆ ಏನು ನಷ್ಟ?
ಲೋಕಾಯುಕ್ತರು ಜನರ ನಡುವೆ ಕೆಲಸ ಮಾಡಬೇಕು. ಕನ್ನಡಿಗರಾದರೆ ಅನುಕೂಲ.

* ಕಬ್ಬು ಬೆಳೆಗಾರರಿಗೆ ಯಾಕೆ ಇನ್ನೂ ಹಣ ಕೊಡಿಸಲು ಸಾಧ್ಯವಾಗಿಲ್ಲ?
ಕಬ್ಬು ಬೆಳೆಗಾರರಿಗೆ ಹಣ ಕೊಡಿಸಲು ನಾವು ಪ್ರಾಮಾಣಿಕವಾಗಿ ಯತ್ನ ಮಾಡಿದ್ದೇವೆ. 2013–14ನೇ ಸಾಲಿನಲ್ಲಿ ಒಂದು ಟನ್ ಕಬ್ಬಿಗೆ ಸರ್ಕಾರದಿಂದಲೇ ₹350 ಕೊಟ್ಟಿದ್ದೇವೆ. ಯಾವುದೇ ರಾಜ್ಯದಲ್ಲಿ ಅಥವಾ ನಮ್ಮ ರಾಜ್ಯದ ಇತಿಹಾಸದಲ್ಲಿ ಹೀಗೆ ಮಾಡಿದ ಉದಾಹರಣೆ ಇಲ್ಲ. ಒಟ್ಟಾರೆ ₹ 1540 ಕೋಟಿ ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ನೀಡಿದ್ದೇವೆ. 2014–15ನೇ ಸಾಲಿನಲ್ಲಿ ಮತ್ತೆ ಸಕ್ಕರೆ ಬೆಲೆ ಕುಸಿತವಾಯಿತು. ಈಗ ಬೆಲೆ ಜಾಸ್ತಿ ಆಗಿದೆ. ಈ ಬಾರಿ ಪೂರ್ಣ ಹಣ ಕೊಡಲೇಬೇಕು. ನಾವು ನಿಗದಿ ಮಾಡಿದ ಹಣ ಕೊಡಲು ಆಗಲ್ಲ ಎಂದು ಕಾರ್ಖಾನೆಗಳು ನ್ಯಾಯಾಲಯದ ಮೊರೆ ಹೋದವು. ನಾವು ವಶಪಡಿಸಿಕೊಂಡ ಸಕ್ಕರೆ ಹರಾಜು ಮಾಡಲು ಕೂಡ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಇದರಿಂದ ಹಣ ಕೊಡಿಸಲು ಸಾಧ್ಯವಾಗಲಿಲ್ಲ.

* ನಿಮ್ಮ ಅವಧಿಯಲ್ಲಿಯೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರಲ್ಲ?
ಹಾಗೆಲ್ಲ ಹೇಳಲಾಗದು. ಮೊದಲು ಎರಡು ವರ್ಷ ರೈತರ ಆತ್ಮಹತ್ಯೆ ಹೆಚ್ಚಾಗಿರಲಿಲ್ಲ. ಈ ಬಾರಿ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಮಳೆ ಕೊರತೆ, ಬೆಲೆ ಕುಸಿತ ಮುಂತಾದ ಕಾರಣಗಳಿವೆ. ರಾಜ್ಯದಲ್ಲಿ ಬರಗಾಲ ಇದೆ. ಇದರಿಂದಾಗಿ ಸರಿಯಾಗಿ ಬೆಳೆ ಕೈಗೆ ಸಿಗುತ್ತಿಲ್ಲ. ಬೆಳೆ ಚೆನ್ನಾಗಿದ್ದಾಗ ಬೆಲೆ ಸಿಗುವುದಿಲ್ಲ. ಇದರಿಂದ ರೈತರು ಹತಾಶರಾಗುತ್ತಿದ್ದಾರೆ. ಸಾಲ ಮಾಡಿಕೊಂಡಿದ್ದಾರೆ. ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಸರಿಯಲ್ಲ. ರೈತರ ಆತ್ಮಹತ್ಯೆಗೆ ರಾಜ್ಯ ಸರ್ಕಾರವನ್ನು ಮಾತ್ರ ದೂರಲು ಸಾಧ್ಯವಿಲ್ಲ. ಮಹಾರಾಷ್ಟ್ರದಲ್ಲಿ ಈ ಬಾರಿ 3800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಕಡಿಮೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈಗ ಹೆಚ್ಚು ಮಾಡಿಕೊಂಡಿದ್ದಾರೆ ಎನ್ನಲು ಸಾಧ್ಯವಿಲ್ಲ. ರೈತರ ಆತ್ಮಹತ್ಯೆಗೆ ಈಗ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೀಡುವ ಪರಿಹಾರವನ್ನೂ ನಮ್ಮ ಸರ್ಕಾರ ಹೆಚ್ಚು ಮಾಡಿದೆ.

* ಕೃಷಿ ಬೆಲೆ ಆಯೋಗ ಏನು ಮಾಡುತ್ತಿದೆ?
ಕೃಷಿ ಬೆಲೆ ಆಯೋಗ ವರದಿ ನೀಡಿದೆ. ಅದನ್ನು ಪರಿಶೀಲಿಸಿ ಈ ಬಾರಿಯ ಬಜೆಟ್ನಲ್ಲಿ ಈ ಬಗ್ಗೆ ಕಾರ್ಯಕ್ರಮ ಪ್ರಕಟಿಸಲಾಗುವುದು.

* ನೀವು ಇಷ್ಟೆಲ್ಲ ಸಾಧನೆ ಮಾಡಿದ್ದರೂ ನಿಮ್ಮ ಪಕ್ಷ ಚುನಾವಣೆಗಳಲ್ಲಿ ಸೋತಿದ್ದು ಯಾಕೆ?
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆದ ಚುನಾವಣೆಗಳಲ್ಲಿ ನಾವು ಕಳಪೆ ಸಾಧನೆ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ನಾವು 9 ಸ್ಥಾನ ಗೆದ್ದೆವು. ನಂತರ ವಿಧಾನಸಭೆಯ ಮೂರು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ 2 ಸ್ಥಾನ ಗೆದ್ದೆವು. ಈಚೆಗೆ ನಡೆದ ಉಪ ಚುನಾವಣೆಯಲ್ಲಿಯೂ ನಮ್ಮ ಸಾಧನೆ ಕಳಪೆಯಲ್ಲ. ನಮ್ಮದು ಒಂದೇ ಸ್ಥಾನ ಇತ್ತು. ಅದನ್ನು ಉಳಿಸಿಕೊಂಡಿದ್ದೇವೆ. ಹೆಬ್ಬಾಳದಲ್ಲಿಯೂ ನಾವು ಗೆಲ್ಲುತ್ತೇವೆ ಎಂದೇ ನಿರೀಕ್ಷಿಸಿದ್ದೆವು.

ಆದರೆ ಅಲ್ಲಿ ಗೊಂದಲ ಉಂಟಾಗಿದ್ದರಿಂದ ಸೋಲು ಅನುಭವಿಸಬೇಕಾಯಿತು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿಯೂ ನಾವು ಹೆಚ್ಚಿನ ಸ್ಥಾನ ಗೆದ್ದಿದ್ದೇವೆ. 15–16 ಜಿಲ್ಲಾ ಪಂಚಾಯಿತಿಯಲ್ಲಿ ನಾವು ಅಧಿಕಾರಕ್ಕೆ ಬರುವ ನಿರೀಕ್ಷೆ ಇತ್ತು. ಆದರೆ 10 ಜಿಲ್ಲೆಗಳಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. 11 ಜಿಲ್ಲೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಕೂಡ ಉತ್ತಮ ಸಾಧನೆ ಮಾಡಿಲ್ಲ. ನಾವು ಗೆದ್ದುಬಿಟ್ಟಿದ್ದೇವೆ ಎಂದು ಅವರು ಬೀಗುವಂತಿಲ್ಲ.

* ಇನ್ನೂ ಎರಡು ವರ್ಷ ನೀವೇ ಮುಖ್ಯಮಂತ್ರಿಯಾಗಿ ಇರುತ್ತೀರಾ?
ಹೌದು, ಹೌದು ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಅನುಮಾನ ಬೇಡ.

ಮುಖ್ಯಮಂತ್ರಿಯಾದ ಮೇಲೆ ಒರಟು ಭಾಷೆ ಬಿಟ್ಟಿದ್ದೀನಿ!

* ನಿಮ್ಮ ಸರ್ಕಾರಕ್ಕೆ ಐಎಎಸ್ ಅಧಿಕಾರಿಗಳಿಂದ ಹೇಗೆ ಸಹಕಾರ ಸಿಗುತ್ತಿದೆ. ಅವರನ್ನು ನೀವು ಒರಟು ಭಾಷೆಯಲ್ಲಿ ಕರೆಯುತ್ತೀರಿ ಎಂಬ ಆರೋಪಗಳಿವೆ?ಒರಟು ಭಾಷೆ ಎಲ್ಲ ಉಪಮುಖ್ಯಮಂತ್ರಿಯಾಗಿದ್ದಾಗಿನ ಕತೆ. ಈಗ ಅದೆಲ್ಲ ಇಲ್ಲ. ಯಾರನ್ನೂ ಒರಟಾಗಿ ಮಾತನಾಡಿಸುವುದಿಲ್ಲ. ಮುಖ್ಯಮಂತ್ರಿಯಾದವನು ಹಾಗೆಲ್ಲ ಮಾತನಾಡಬಾರದು. ಅಧಿಕಾರಿಗಳು ಚೆನ್ನಾಗಿ ಸಹಕರಿಸುತ್ತಿದ್ದಾರೆ.

*ನೀವು ಪ್ರಾಮಾಣಿಕ ಅಧಿಕಾರಿಗಳಿಗೆ ಶಿಕ್ಷೆ ಕೊಡುತ್ತೀರಿ ಎಂಬ ಆರೋಪವಿದೆ ಯಾಕೆ?
ಯಾವ ಪ್ರಾಮಾಣಿಕ ಅಧಿಕಾರಿಗೆ ನಾನು ಶಿಕ್ಷೆ ಕೊಟ್ಟಿದ್ದೇನೆ. ಒಂದು ಉದಾಹರಣೆ ಕೊಡಿ ನೋಡೋಣ.

* ಅನುಪಮಾ ಶೆಣೈ, ರಶ್ಮಿ ಮಹೇಶ್?
ಅನುಪಮಾ ಶೆಣೈ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ರಶ್ಮಿ ಮಹೇಶ್ ಅವರಿಗೂ ನ್ಯಾಯ ಕೊಟ್ಟಿದ್ದೇವೆ. ಯಾರೇ ಪ್ರಾಮಾಣಿಕ ಅಧಿಕಾರಿಗಳು ಇದ್ದರೂ ಅವರಿಗೆ ಬೆಂಬಲ ನೀಡುತ್ತೇನೆ. ನನಗೆ ಗೊತ್ತಿದ್ದೂ ಯಾವುದೇ ಅಧಿಕಾರಿಗೆ ಅನ್ಯಾಯ ಮಾಡಿಲ್ಲ, ಮಾಡಲ್ಲ. ಭಟ್ಟಾಚಾರ್ಯ, ಸುಧೀರ್ ಕೃಷ್ಣ ಮುಂತಾದ ಪ್ರಾಮಾಣಿಕ ಅಧಿಕಾರಿಗಳು ನನ್ನ ಜೊತೆ ಕೆಲಸ ಮಾಡಿದ್ದಾರೆ. ಯಾರಿಗೂ ತೊಂದರೆ ಕೊಟ್ಟಿಲ್ಲ.

* ರಶ್ಮಿ ಅವರು ನೀಡಿದ ದೂರಿನ ಕತೆ ಏನಾಯಿತು?
ಆ ಬಗ್ಗೆ ಲತಾ ಕೃಷ್ಣರಾವ್ ಅವರಿಂದ ತನಿಖೆ ಮಾಡಿಸಲಾಯಿತು. ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ವರದಿ ನೀಡಿದರು. ಮತ್ತೆ ಏನು ಕ್ರಮ ಕೈಗೊಳ್ಳುವುದು?

2 ವರ್ಷದಲ್ಲಿ ಕಣ್ಣಿಗೆ ಕಾಣುವ ಬದಲಾವಣೆ
* ಈಗಲೂ ನೀವು ನಗರ ಪ್ರದೇಶಗಳಲ್ಲಿ ಜನಪ್ರಿಯರಲ್ಲ ಅಲ್ವಾ?
ನಾನು ಜನಪ್ರಿಯ ಅಲ್ಲ ಎಂದಾದರೆ ಬಿಬಿಎಂಪಿ ಚುನಾವಣೆಯಲ್ಲಿ ನಮಗೆ 76 ಸ್ಥಾನಗಳು ಸಿಗುತ್ತಿರಲಿಲ್ಲ. ನಗರದ ಜನ ನಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಬಿಜೆಪಿ ಇಲ್ಲಿ ಜನಪ್ರಿಯ ಎಂದಾದರೆ ಅವರೇ ಸಂಪೂರ್ಣವಾಗಿ ಗೆದ್ದುಕೊಳ್ಳಬೇಕಾಗಿತ್ತಲ್ಲ. ಲೋಕಸಭಾ ಚುನಾವಣೆಯಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ಗೆದ್ದವರು ಬಿಬಿಎಂಪಿಯಲ್ಲಿ ಯಾಕೆ ಬಿದ್ದರು. ನಗರದ ಜನರಿಗೆ ನಮ್ಮ ಬಗ್ಗೆ ಒಲವು ಇಲ್ಲ ಎಂದಾದರೆ ನಮ್ಮ ಠೇವಣಿ ಹೋಗಬೇಕಾಗಿತ್ತು. ನಗರ ಪ್ರದೇಶದಲ್ಲಿ ನಮಗೂ ಬಿಜೆಪಿಯವರಿಗೂ ಅಂತಹ ವ್ಯತ್ಯಾಸ ಏನೂ ಇಲ್ಲ. ಮತ ಗಳಿಕೆಯಲ್ಲಿ ನಮಗೂ ಅವರಿಗೂ ಶೇ 2ರಷ್ಟೂ ವ್ಯತ್ಯಾಸ ಇಲ್ಲ.

* ಆದರೂ ನಗರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕೆಲಸವಾಗಿಲ್ಲ?
ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದ ಮೇಲೂ ಬಿಬಿಎಂಪಿಯಲ್ಲಿ ಎರಡು ವರ್ಷ ಅವರೇ ಅಧಿಕಾರ ನಡೆಸಿದರು. ನಾವು ಕೊಟ್ಟ ಹಣವನ್ನು ಸದ್ಬಳಕೆ ಮಾಡಲಿಲ್ಲ. ಘನತ್ಯಾಜ್ಯ ವಿಲೇವಾರಿಗೆ ಹಣ ಕೊಟ್ಟೆವು. ರಸ್ತೆ ದುರಸ್ತಿಗೆ ಅನುದಾನ ನೀಡಿದೆವು. ಆದರೆ ಯಾವುದೇ ಸದ್ಬಳಕೆಯಾಗಲಿಲ್ಲ.

ಬಿಜೆಪಿ ಅಧಿಕಾರದ ಅವಧಿಯಲ್ಲಿ ಸಿಕ್ಕಾಪಟ್ಟೆ ಸಾಲ ಮಾಡಿದ್ದರು. ಪಾಲಿಕೆಯ 11 ಆಸ್ತಿಯನ್ನು ಅಡ ಇಟ್ಟಿದ್ದರು. ಈಗ ಬಿಬಿಎಂಪಿ ನಮ್ಮ ಕೈಗೆ ಬಂದಿದೆ. ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಒಂದೇ ಪಕ್ಷದ ಆಡಳಿತದಲ್ಲಿದ್ದರೆ ಕೆಲಸ ಸುಗಮವಾಗಿ ಆಗುತ್ತದೆ. ಹಾಗಾಗಿ ಈಗ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅಡ ಇಡಲಾಗಿದ್ದ ಎರಡು ಆಸ್ತಿಗಳನ್ನು ಬಿಡಿಸಿಕೊಂಡಿದ್ದೇವೆ. ಇನ್ನು ಎರಡು ವರ್ಷಗಳಲ್ಲಿ ಕಣ್ಣಿಗೆ ಕಾಣುವಷ್ಟು ಬದಲಾವಣೆಯಾಗುತ್ತದೆ. ಬೆಂಗಳೂರು ಅಭಿವೃದ್ಧಿಗೇ ಪ್ರತ್ಯೇಕ ಸಚಿವರನ್ನು ನೇಮಿಸಲಾಗಿದೆ.

* ಬಿಬಿಎಂಪಿ ವಿಭಜನೆಯ ಕತೆ ಏನಾಯ್ತು?
ನಾವು ಈಗಲೂ ವಿಭಜನೆಯ ಪರವಾಗಿಯೇ ಇದ್ದೇವೆ. ಅದಕ್ಕೆ ಸಂಬಂಧಿಸಿದಂತೆ ಕಾಯ್ದೆ ಮಾಡಿ ರಾಷ್ಟ್ರಪತಿ ಅವರಿಗೆ ಕಳುಹಿಸಿಕೊಟ್ಟಿದ್ದೆವು. ಅವರು ಕೆಲವು ಸ್ಪಷ್ಟನೆ ಕೇಳಿದ್ದಾರೆ. ಅವನ್ನೂ ನೀಡಿದ್ದೇವೆ. ವಿಭಜನೆ ಬಗ್ಗೆ ಅಧ್ಯಯನ ನಡೆಸಲು ರಚಿಸಿದ್ದ ಸಮಿತಿ ಕೂಡ ವರದಿ ನೀಡಿದೆ. ಬಿಜೆಪಿಯವರು 110 ಹಳ್ಳಿಗಳನ್ನು, 7 ಸ್ಥಳೀಯ ಸಂಸ್ಥೆಗಳನ್ನು ಬೆಂಗಳೂರಿಗೆ ಸೇರಿಸಿಬಿಟ್ಟರು. ಅದರಿಂದ ಬಿಬಿಎಂಪಿ ವಾರ್ಡ್ಗಳ ಸಂಖ್ಯೆ 198ಕ್ಕೆ ಏರಿತು. ಇಷ್ಟೊಂದು ದೊಡ್ಡ ನಗರವನ್ನು ನಿರ್ವಹಿಸುವುದು ಕಷ್ಟ. ದೇಶದ ಯಾವುದೇ ನಗರಗಳಲ್ಲಿಯೂ ಈ ವ್ಯವಸ್ಥೆ ಇಲ್ಲ.

ದೇಶಪಾಂಡೆ ಬಂದ ನಂತರ ಬಂಡವಾಳ ಬರಲಿಲ್ಲ
* ಬಂಡವಾಳ ಹೂಡಿಕೆ ಸಮಾವೇಶದ ಹೊಸ್ತಿಲಿನಲ್ಲಿ ದೇಶಪಾಂಡೆ ಅವರಿಗೆ ಕೈಗಾರಿಕಾ ಖಾತೆ ಕೊಟ್ಟಿರಿ. ಈ ಕೆಲಸ ಮೊದಲೇ ಮಾಡಬಹುದಿತ್ತಲ್ಲ?
ದೇಶಪಾಂಡೆ ಬಂದ ಮೇಲೆ ಬಂಡವಾಳ ಹೂಡಿಕೆ ಸಮಾವೇಶ ಮಾಡಲಾಗಿದೆ, ಅವರು ಬಂದ ಮೇಲೆ ಬಂಡವಾಳ ಹರಿದು ಬಂತು ಎನ್ನುವುದೇ ತಪ್ಪು. 2015ರಲ್ಲಿಯೇ ಬಂಡವಾಳ ಹೂಡಿಕೆ ಸಮಾವೇಶ ಮಾಡಲು ಸಿದ್ಧತೆ ನಡೆದಿತ್ತು. ಚುನಾವಣೆಗಳು ಬಂದಿದ್ದರಿಂದ ಅದನ್ನು ಮುಂದೂಡಲಾಯಿತು.

ಕೈಗಾರಿಕಾ ಖಾತೆ ನನ್ನ ಬಳಿ ಇರುವಾಗಲೇ ನಾನು ಕೈಗಾರಿಕಾ ನೀತಿ ರೂಪಿಸಿದ್ದೆ. ಅದು ದೇಶದಲ್ಲಿಯೇ ಅತ್ಯುತ್ತಮ ಕೈಗಾರಿಕಾ ನೀತಿ ಎಂದು ಹೆಸರಾಗಿದೆ. ಬೇರೆ ಬೇರೆ ರಾಜ್ಯದವರು ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ನನ್ನ ಬಳಿ ಹಲವಾರು ಖಾತೆಗಳಿದ್ದವು. ನಾನು ಬೇಗ ಸಂಪುಟ ವಿಸ್ತರಣೆ ಮಾಡಿ ಖಾತೆಗಳನ್ನು ಹಂಚುವ ನಿರ್ಧಾರ ಮಾಡಿದ್ದೆ. ಆದರೆ ಹಲವಾರು ಕಾರಣಗಳಿಂದ ಸಂಪುಟ ವಿಸ್ತರಣೆ ಮುಂದಕ್ಕೆ ಹೋಯಿತು. ಅದಕ್ಕೆ ಇನ್ನು ವಿಳಂಬ ಬೇಡ ಎಂದು ಕೈಗಾರಿಕಾ ಖಾತೆ ದೇಶಪಾಂಡೆ ಅವರಿಗೆ ಕೊಟ್ಟೆ. ಬಂಡವಾಳ ಹೂಡಿಕೆ ಸಮಾವೇಶ ಮಾಡುವುದಕ್ಕಾಗಿಯೇ ದೇಶಪಾಂಡೆ ಅವರಿಗೆ ಕೈಗಾರಿಕಾ ಖಾತೆ ಕೊಟ್ಟಿದ್ದಲ್ಲ.

* ಸಿದ್ದರಾಮಯ್ಯ ಕೈಗಾರಿಕಾ ವಿರೋಧಿ ಎನ್ನುವುದು ಯಾಕೆ?
ಇದು ತಪ್ಪು ಪ್ರಚಾರ ಆಗಿದೆ. ಯಾಕೆ ಹೀಗಾಗಿದೆ ಎನ್ನುವುದು ನನಗೂ ಗೊತ್ತಿಲ್ಲ. ನಾನು ಕೈಗಾರಿಕಾ ವಿರೋಧಿ ಎಂದಾಗಿದ್ದರೆ ಅಥವಾ ಕರ್ನಾಟಕ ‘ಕೈಗಾರಿಕಾ ಸ್ನೇಹಿ’ ಅಲ್ಲ ಎನ್ನುವುದಾಗಿದ್ದರೆ ರತನ್ ಟಾಟಾ, ಅಂಬಾನಿ, ನಾರಾಯಣಮೂರ್ತಿ, ಅಜೀಂ ಪ್ರೇಮ್ಜಿ ಮುಂತಾದ ಕೈಗಾರಿಕೋದ್ಯಮಿಗಳು ಬಂದು ಕರ್ನಾಟಕವನ್ನು ಹೊಗಳುತ್ತಿರಲಿಲ್ಲ.

ಕೈಗಾರಿಕಾ ವಾತಾವರಣ ಸರಿಯಾಗಿಲ್ಲ ಎಂದಾದರೆ ಅವರು ತಮ್ಮ ಅನುಭವವನ್ನು ಹೇಳಬೇಕಾಗಿತ್ತಲ್ಲ? ಅದು ಬಿಟ್ಟು ರಾಜ್ಯದ ಬಗ್ಗೆ ಹೊಗಳಿದ್ದು ಯಾಕೆ? ನೀವು ಹೀಗೇ ಮಾತನಾಡಿ ಎಂದು ನಾವು ಹೇಳಿಕೊಟ್ಟಿಲ್ಲವಲ್ಲ.

(‘ಸಿದ್ದರಾಮಯ್ಯ ಸಾವಿರ ದಿನಗಳು’ ಲೇಖನ ಸರಣಿ ಮುಗಿಯಿತು)
ಚಿತ್ರಗಳು: ಎಂ.ಎಸ್.ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.