ಕರ್ನಾಟಕದ ನೀರಾವರಿ ಕತೆ ಎಂದರೆ ಬರಡು ಭೂಮಿಗೆ ಹಸಿರು ಸೀರೆ ಉಡಿಸಿ ರಾಜ್ಯದ ಅರ್ಥಿಕ ಬೆಳವಣಿಗೆಗೆ ಸಾಧನವಾಗುವ ಜಲ ಸಂಪನ್ಮೂಲದ ಕತೆ. ಆದರೆ ವ್ಯಥೆ ಎಂದರೆ ರಾಜ್ಯವಾಗಿ ಆರು ದಶಕಗಳಾದರೂ, ಸಂಪನ್ಮೂಲದ ಸರಿಯಾದ ಉಪಯೋಗವೇ ಅಗಿಲ್ಲ.
ಇದಕ್ಕೆ ಮುಖ್ಯ ಕಾರಣ ಆಡಳಿತ ಚುಕ್ಕಾಣಿ ಹಿಡಿದವರು ನೀರಾವರಿಯ ಬಗ್ಗೆ ಅನುಸರಿಸಿದ ಗೊತ್ತುಗುರಿಯಿಲ್ಲದ ನೀತಿ.

ಇದರ ಜೊತೆಗೂಡಿದ ದೂರದರ್ಶಿ ಧುರೀಣತ್ವದ ಅಭಾವದಿಂದ ನಮ್ಮ ಜನರ ಭೂಮಿಗೆ ತಲುಪ ಬೇಕಾದ ನಮ್ಮ ನೀರು ನೆರೆ ರಾಜ್ಯಗಳ ಪಾಲಾಗುತ್ತಿದೆ. ಇದೀಗ ಸಾವಿರ ದಿನಗಳ ಆಡಳಿತವನ್ನು ಪೂರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನರಿಗೆ ಬಂದ ಬಳುವಳಿ ಇದು. ಇದರಲ್ಲಿ ಏನೂ ಅರ್ಥಪೂರ್ಣ ಬದಲಾವಣೆ ಮತ್ತು ಚುರುಕುತನ ತರದೆ ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬಿಡುವ ಧಾವಂತದಲ್ಲಿ ಅವರಿದ್ದಾರೆ.

ದಿ. ನಿಜಲಿಂಗಪ್ಪನವರನ್ನು ಬಿಟ್ಟರೆ ಆ ಕುರ್ಚಿಯಲ್ಲಿ ವಿರಾಜಮಾನರಾದ ಯಾವ ಮಹನೀಯರೂ ನೀರಾವರಿ ಅಭಿವೃದ್ಧಿಯ ಬಗೆಗೆ ಹೆಚ್ಚಿನ ತಲೆ ಕೆಡಿಸಿಕೊಂಡಿರಲಿಲ್ಲ. ಅದರ ಬಗ್ಗೆ ಕನಸೂ ಕಂಡಿರಲಿಲ್ಲ, ಕನವರಿಸಲೂ ಇಲ್ಲ. ಸಿದ್ದರಾಮಯ್ಯನವರೂ ಇದಕ್ಕೆ ಹೊರತಲ್ಲ. ನಮ್ಮ ನೀರಾವರಿ ನೀತಿಯಲ್ಲಿ ದೂರದರ್ಶಿತ್ವದ ಅಭಾವಕ್ಕೆ ಎರಡು ಉದಾಹರಣೆಗಳನ್ನು ಕೊಡಬಹುದು. ಮೊದಲನೆಯದಾಗಿ ಕೃಷ್ಣಾ ನದಿಯಲ್ಲಿ ನೀರಿನ ಮೊದಲ ಆಂಶಿಕ ಹಂಚಿಕೆ ಮಾಡುವಾಗ ಬಚಾವತ್ ಆಯೋಗವು ನದಿ ಕೊಳ್ಳದ ಮೂರು ರಾಜ್ಯಗಳು - ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳು ತಮ್ಮ ತಮ್ಮ ಪಾಲಿನ 5 ಟಿ.ಎಂ.ಸಿ.ಟಿ.ಎಫ್.ಟಿ ಅಂದರೆ ಒಟ್ಟು 15 ಟಿ.ಎಂ.ಸಿ.ಎಫ್.ಟಿ ನೀರನ್ನು ಚೆನ್ನೈ ನಗರಕ್ಕೆ ಕುಡಿಯುವ ನೀರು ಪೂರೈಸಲು ಕೊಡಬೇಕು.

ಇದರನ್ವಯ, ಆಂಧ್ರ ಪ್ರದೇಶವು ತೆಲುಗು ಗಂಗಾ ಕಾಲುವೆಯನ್ನು ನಿರ್ಮಿಸಿತು, ಇದರಲ್ಲಿ ಸೋಜಿಗದ ಅಂಶವೆಂದರೆ ಕಾಲುವೆಯ ಸಾಮರ್ಥ್ಯ 15 ಟಿ.ಎಂ.ಸಿ.ಎಫ್.ಟಿ ಗಿಂತ ಬಹಳ ದೊಡ್ಡದಾಗಿತ್ತು. ಅದರ ಹಿಂದಿರುವ ಗುಟ್ಟು ಈಗ ಬಯಲಾಗಿದೆ. ಚೆನ್ನೈಗೆ ನೀರು ಪೂರೈಸುವ ನೆಪದಲ್ಲಿ ಕರ್ನಾಟಕ ಬಳಸದೇ ಇದ್ದ ನೀರನ್ನು ಉಪಯೋಗಿಸಲು ಎಂಭತ್ತರ ದಶಕದ ಮಧ್ಯದಲ್ಲಿಯೇ ಅದು ಯೋಜಿಸಿತ್ತು. ಬಹುಶಃ ನೀರಾವರಿ ಉಪಯೋಗ ಮಾಡುವದರಲ್ಲಿ ಕರ್ನಾಟಕ್ಕಿರುವ ಅನಾಸಕ್ತಿ ಆಂಧ್ರಪ್ರದೇಶ ಅಂದೇ ಊಹಿಸಿತ್ತು. ಅದರ ಅರಿವಿಲ್ಲದ ಕರ್ನಾಟಕ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡಿತ್ತು.

ಎರಡನೆಯದಾಗಿ ಕಾವೇರಿ. 1924ರ ಒಪ್ಪಂದದ ಪ್ರಕಾರ ನಮ್ಮ ರೈತರಿಗೆ ಆದ ಅನ್ಯಾಯ ಪರಿಮಾರ್ಜನೆಗೆ ಪ್ರಯತ್ನಿಸಲು ಕರ್ನಾಟಕ ರಾಜ್ಯ ನಿರ್ಮಾಣವಾಗಿ ಸುಮಾರು ಮೂರೂವರೆ ದಶಕದ ತನಕ ಏನೂ ಮಾಡಲಿಲ್ಲ. ಕಾವೇರಿ ನೀರು ಉಪಯೋಗಿಸುವ ಅಂದಿನ ಬ್ರಿಟಿಷ್ ಸರ್ಕಾರ ಮತ್ತು ಮೈಸೂರು ಸಂಸ್ಥಾನದ ನಡುವಿನ 50 ವರ್ಷದ ಒಪ್ಪಂದ ನಮ್ಮ ನೀರಾವರಿ ಹಿತಕ್ಕೆ ಮಾರಕವಾಗಿತ್ತೆಂದು ಎಲ್ಲರಿಗೂ ತಿಳಿದಿತ್ತು. ಕರ್ನಾಟಕ ರಾಜ್ಯ ನಿರ್ಮಾಣವಾದ ಮೇಲೆ ಬದಲಾದ ಭೌಗೋಲಿಕ ಪರಿಸ್ಥಿತಿಯಲ್ಲಿ ಹಳೆಯ ಒಪ್ಪಂದವು ಬಂಧನಕಾರಿ ಆಗುವುದಿಲ್ಲ. ವಾಸ್ತವತೆಯ ಆಧಾರದ ಮೇಲೆ ಮರುಹಂಚಿಕೆಯಾಗ ಬೇಕೆಂದು ಕಾನೂನು ಸಮರಕ್ಕೆ ಪ್ರಯತ್ನ ಮಾಡಬೇಕಿತ್ತು.

ಆದರೆ ಹಾಗೆ ಮಾಡಲಿಲ್ಲ. ಹೀಗಾಗಿ ರಾಜ್ಯ ನಿರ್ಮಾಣವಾಗಿ 1974ರ ವರೆಗೆ 1924ರ ಒಪ್ಪಂದದ ಗಡುವು ಮುಗಿಯುವವರೆಗೆ ಕಾಲಹರಣವಾಯಿತು. ನಂತರ ಉಳಿದ ಸಮಯ, ಕಾವೇರಿ ನ್ಯಾಯಾಧೀಕರಣ ರಚನೆಯಾಗಿ ಅದರ ತೀರ್ಪು ಬರುವ ತನಕ ಮತ್ತೆ ವಿಳಂಬ. (ಕಾನೂನು ಸಮರ ಹೇಗೆ ಮಾಡಬೇಕೆಂದು ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಕರ್ನಾಟಕ ಕಲಿಯುವದು ಒಳಿತು).
ಹೆಚ್ಚಿನ ಬರ ಪೀಡಿತ ಪ್ರದೇಶ ಹೊಂದಿರುವ ಕರ್ನಾಟಕಕ್ಕೆ ಕೃಷ್ಣಾ ಮತ್ತು ಕಾವೇರಿ ನದಿಗಳು ಜೀವನಾಡಿಗಳು.

ಕರ್ನಾಟಕಕ್ಕೆ ಒಟ್ಟು ಲಭ್ಯವೆಂದು ಅಂದಾಜು ಮಾಡಿದ 1699 ಟಿ.ಎಂಸಿ.ಎಫ್.ಟಿ ನೀರಿನಲ್ಲಿ, ಇವೆರಡರ ಪಾಲು 1564 ಟಿ.ಎಂ.ಸಿ.ಎಫ್.ಟಿ. ರಾಜ್ಯದಲ್ಲಿ ಸುಮಾರು 14 ಜಿಲ್ಲೆಗಳಲ್ಲಿ ವ್ಯಾಪಿಸಿರುವ ಕೃಷ್ಣಾ ಕಣಿವೆಯು ಕಾವೇರಿ ಕಣಿವೆ ಪ್ರದೇಶಕ್ಕಿಂತ ಸುಮಾರು ಮೂರು ಪಟ್ಟು ದೊಡ್ಡದು. ಯಾವ ಕಣಿವೆಯ ಜಲಸಂಪನ್ಮೂಲ ಉಪಯೋಗವಾದರೂ ಅದು ಆಯಾ ಪ್ರದೇಶಗಳಿಗಿಂತ ಜಾಸ್ತಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಾಧನ.

ಅದರಲ್ಲಿಯೂ ವ್ಯಾಪ್ತಿಯ ದೃಷ್ಟಿಯಲ್ಲಿ, ದೊಡ್ಡದಾದ ಕೃಷ್ಣಾ ಕಣಿವೆ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕಾಗಿತ್ತು. ದುರ್ದೈವದಿಂದ ಸರಕಾರಗಳು ತಳೆದ ನೀತಿಯಲ್ಲಿ ಈ ಸಮಗ್ರ ದೃಷ್ಟಿಕೋನವು ಪ್ರತಿಧ್ವನಿತವಾಗಲಿಲ್ಲ. ಪಕ್ಷಾತೀತ ಸರ್ವ ಸಮ್ಮತ ನೀತಿಯ ಅಭಾವದಿಂದ ಪ್ರತಿಯೊಂದು ಸರ್ಕಾರವೂ ತನ್ನದೇ ಆದ ಪ್ರಾಶಸ್ತ್ಯಗಳು, ರಾಜಕೀಯ ಹಿತಾಸಕ್ತಿ, ಪ್ರಾದೇಶಿಕ ದುರಾಗ್ರಹಗಳ ಮೂಲಕವೇ ನೀರಾವರಿ ಇಲಾಖೆ ನಿರ್ವಹಣೆಯನ್ನು ಮಾಡಿದ್ದರಿಂದ, ನೀತಿಯಲ್ಲಿ, ಯೋಜನೆಗಳ ಅನುಷ್ಠಾನದಲ್ಲಿ ಏಕತಾನತೆಯೇ ಇರಲಿಲ್ಲ. ಒಂದೆರಡು ಅಪವಾದಗಳನ್ನು ಬಿಟ್ಟರೆ ನೀರಾವರಿ ಮಂತ್ರಿ ಸ್ಥಾನ ನಿರ್ವಹಿಸಿದವರೆಲ್ಲರೂ ರಾಜಕೀಯವಾಗಿ ದುರ್ಬಲರೆ. ಕಾಲಮಿತಿಯೊಳಗೆ ಜಲಸಂಪನ್ಮೂಲ ಉಪಯೋಗಿಸುವ ಸಂಸ್ಕಾರವೇ ಕರ್ನಾಟಕದಲ್ಲಿ ಬರಲಿಲ್ಲ.

ಇದರ ಫಲವಾಗಿ ನೀರಿನ ಉಪಯೋಗದ ವಿಷಯದಲ್ಲಿ ಕರ್ನಾಟಕ ಕುಂಟುತ್ತಲೇ ಬಂದಿದೆ. ಉದಾಹರಣೆಗೆ ಕೃಷ್ಣಾ ಕೊಳ್ಳದಲ್ಲಿ, ಬಚಾವತ್ ನ್ಯಾಯಾಧೀಕರಣದಿಂದ ಲಭ್ಯವಾದ 734 ಟಿ.ಎಂ.ಸಿ.ಎಫ್.ಟಿ ನೀರನ್ನು 2000 ಇಸ್ವಿ ಗಡುವು ಮುಗಿದು ಮೇಲೆ 15 ವರ್ಷವಾದರೂ ಇನ್ನೂ ಉಪಯೋಗಿಸಿಲ್ಲ. ನಮ್ಮ ಪಾಲಿನ ನೀರು ಸಂಪೂರ್ಣ ಉಪಯೋಗವಾಗಿದೆ ಎಂದು ಹೇಳುವ ಎದೆಗಾರಿಕೆ, ಸರ್ಕಾರಕ್ಕಾಗಲೀ, ಮುಖ್ಯಮಂತ್ರಿಗಳಿಗಾಗಲೀ, ಜಲ ಸಂಪನ್ಮೂಲ ಮಂತ್ರಿಗಳಿಗಾಗಲೀ ಈಗಲೂ ಇಲ್ಲ. ಉಪಯೋಗಿಸಲಾಗದ ಸುಮಾರು 250–300 ಟಿ.ಎಂ.ಸಿ.ಎಫ್.ಟಿ ನೀರಿಗೆ ಬೇಕಾದ ಯೋಜನೆಗಳು ಇಲ್ಲದೇ ಆಂಧ್ರಪ್ರದೇಶಕ್ಕೆ ಇನ್ನೂ ಹರಿದು ಹೋಗುತ್ತಿದೆ.

ಇದರ ಮೇಲೆ ಬ್ರಜೇಶ ಕುಮಾರ ಹಿರಿತನದ ಎರಡನೆಯ ನ್ಯಾಯಾಧೀಕರಣ, ಈಗಾಗಲೇ ಹಂಚಿ ಉಳಿದ ನೀರಲ್ಲಿ 177 ಟಿ.ಎಮ್.ಸಿ.ಎಫ್.ಟಿ ಹೆಚ್ಚುವರಿ ನೀರನ್ನು ರಾಜ್ಯಕ್ಕೆ ನೀಡಿದೆ. ಉಪಯೋಗದ ಆಧಾರದ ಮೇಲೆ ಎರಡನೆಯ ನ್ಯಾಯಾಧೀಕರಣ ನದಿ ನೀರಿನ ಮರು ಹಂಚಿಕೆಯನ್ನು ಮಾಡಿದ್ದರೆ ಕರ್ನಾಟಕದ ರೈತರ ನೀರಾವರಿ ಕನಸು ಭಗ್ನವಾಗಿ ಹೊಗುತ್ತಿತ್ತು. ಪುಣ್ಯಕ್ಕೆ ಹಾಗೆ ಆಗಲಿಲ್ಲ.

ನಾವು ಸದ್ಯಕ್ಕೆ ಉಪಯೋಗಿಸದಿದ್ದರೂ ಮುಂದಿನ ತಾರೀಕಿನ ಚೆಕ್ಕು ಇದ್ದ ಹಾಗೆ ಅದು ನಮ್ಮ ಹೆಸರಿನಲ್ಲಿ ಇರುತ್ತದೆ. ಪ್ರಸಕ್ತ ಆಮೆಗತಿಯ ಅನುಷ್ಠಾನವನ್ನು ನೋಡಿದರೆ, ಬಳಸದ ನೀರು, ಮತ್ತು ಹೆಚ್ಚುವರಿಯಾಗಿ ಲಭಿಸಿದ ನೀರನ್ನು ಕರ್ನಾಟಕ ಎಂದು ಉಪಯೋಗ ಮಾಡಿಕೊಳ್ಳಬಹುದು ಎಂದು ಊಹಿಸುವದೂ ಕಷ್ಟ. ಸಿದ್ದರಾಮಯ್ಯನವರ ಒಂದೇ ಸಾಧನೆ ಎಂದರೆ ತಾವು ನೀರಾವರಿಗೆ ₹10 ಸಾವಿರ ಕೋಟಿ ಒದಗಿಸುವ ಮಾತು ಕೊಟ್ಟಂತೆ ನಡೆದಿದ್ದಾರೆ.

ಕೇವಲ ಬಜೆಟ್ನಲ್ಲಿ ಹಣ ಒದಗಿಸುವುದೊಂದು ಕಡೆ. ಅದನ್ನು ವೆಚ್ಚ ಮಾಡುವುದು ಇನ್ನೊಂದು ಕಡೆ. ಎರಡೂ ಬೇರೆ ಬೇರೆ ವಿಷಯಗಳೆಂದು ಹಣಕಾಸು ಖಾತೆ ನಿರ್ವಹಿಸಿ ಅನುಭವ ಇರುವ ಅವರಿಗೆ ತಿಳಿಯದೇ ಉಂಟೇ? 2014–15ರಲ್ಲಿ ಮೊದಲ ಬಾರಿ ಇಷ್ಟು ಹಣವನ್ನು ಸರ್ಕಾರವು ನೀರಾವರಿಗೆ ಕೊಟ್ಟಿದ್ದು ನಿಜ. 2014–15ರ ಆರ್ಥಿಕ ಸಮೀಕ್ಷೆಯ ಪ್ರಕಾರ 2014ರ ಡಿಸೆಂಬರ್ ವೇಳೆಗೆ ಖರ್ಚಾಗಿದ್ದು ಕೇವಲ ₹6 ಸಾವಿರ ಕೋಟಿ. ಇಡೀ ವರ್ಷ ಎಷ್ಟು ಖರ್ಚಾಯಿತು ಮತ್ತು 2015 ಡಿಸೆಂಬರ್ವರೆಗೆ ಏನಾಯಿತು ಎನ್ನುವುದನ್ನು ತಿಳಿಯಲು ಮುಂಬರುವ ಆರ್ಥಿಕ ಸಮೀಕ್ಷೆಯ ತನಕ ಕಾಯಬೇಕು.

ಹಿಂದಿನ ವರ್ಷಗಳ ಸಾಧನೆ ಪೂರ್ತಿ ಹಣ ಖರ್ಚಾಗಿರುತ್ತದೆ ಎನ್ನುವ ಆಶಾ ಭಾವನೆ ತಳೆಯಲು ಅವಕಾಶವೇ ಇಲ್ಲ. ಲಭ್ಯವಿರುವ ಸಮೀಕ್ಷೆಯ ಪ್ರಕಾರ 2009–10 ರಿಂದ ಯಾವ ವರ್ಷದಲ್ಲಿಯೂ ಬಜೆಟ್ನಲ್ಲಿ ಒದಗಿಸಿದ ಹಣ ಪೂರ್ತಿಯಾಗಿ ಖರ್ಚು ಮಾಡಲಾಗಿಲ್ಲ. 2009–10 ರಿಂದ 2013–14ರ ತನಕ ಒದಗಿಸಿದ ₹ 27 ಸಾವಿರ ಕೋಟಿಯಲ್ಲಿ ₹ 21,932 ಕೋಟಿ ವೆಚ್ಚವಾಗಿದೆ. ಕೃಷ್ಣಾ ಯೋಜನೆಗೆ ಮಾಡಬೇಕಾಗಿರುವ ಕೆಲಸ ಅಪಾರ.

ಅದೊಂದಕ್ಕೇ ₹ 10 ಸಾವಿರ ಕೋಟಿ ಒದಗಿಸಿದರೂ ಕಡಿಮೆ ಎಂದೆನಿಸುವಾಗ ಎಲ್ಲ ನೀರಾವರಿ ಯೋಜನೆಗೆ ಅಷ್ಟು ಹಣ ಒದಗಿಸುವದು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂತಾಗುತ್ತದೆ. ಇದರಿಂದ ಏನು ಮತ್ತು ಎಂತಹ ಅಭಿವೃದ್ಧಿ ಸಾಧ್ಯ? ಕೃಷ್ಣಾ ಕೊಳ್ಳದಲ್ಲಿ ಸುಮಾರು 400 ಟಿ ಎಮ್.ಸಿ.ಎಫ್.ಟಿ ನೀರು ಇನ್ನೂ ಉಪಯೋಗವಾಗಬೇಕು. ಈಗಾಗಲೇ ಪೂರ್ತಿಯಾಗಿದೆ ಎಂದೆನಿಸಿರುವ ಮಲಪ್ರಭಾ, ಘಟಪ್ರಭಾ ಯೋಜನೆಗಳಲ್ಲಿ ನೀರನ್ನು ರೈತರ ಹೊಲಗಳಿಗೆ ಒದಗಿಸುವ ಕೆಲಸವಾಗಬೇಕು

ಮಲಪ್ರಭಾ ಅಣೆಕಟ್ಟೆಯಲ್ಲಿ ನೀರಿನ ಕೊರತೆಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ತಲುಪುತ್ತಿಲ್ಲ. ಕಳಸಾ ಬಂಡೂರಿ ಯೋಜನೆಯೆ ಇದಕ್ಕೆ ತಾರಕ. ಅದರೆ ಈ ಬಗ್ಗೆ ಸರ್ಕಾರ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ತುಂಗಭದ್ರಾ ಅಣೆಕಟ್ಟಿನಲ್ಲಿ ತುಂಬಿದ ಹೂಳಿನಿಂದ ಅಣೆಕಟ್ಟಿನ ಸಂಗ್ರಹ ಸಾಮರ್ಥ್ಯದಲ್ಲಿ 10 ಟಿ. ಎಮ್ ಸಿ.ಎಫ್.ಟಿ ಖೋತಾ ಅಗಿದೆ.

ಎಲ್ಲದಕ್ಕಿಂತಲೂ ಹೆಚ್ಚು ಗಮನ ಹರಿಸಬೇಕಾದ್ದು ಕೃಷ್ಣಾ ನದಿಯ ಮೇಲೆ. ಆಲಮಟ್ಟಿ ನೀರು ಹಿಡಿದು 15 ವರ್ಷಗಳ ಮೇಲೆ ಆದರೂ ಅದರ ಉಪಯೋಗ ವಾಗುತ್ತಿಲ್ಲ. ಮುಂಭಾಗದಲ್ಲಿರುವ ನಾರಾ ಯಣಪುರ ಅಣೆಕಟ್ಟಿಗೆ ಸಮತೋಲನ ನೀರು ಸಂಗ್ರಹವಾಗುವದನ್ನು ಬಿಟ್ಟರೆ ಅದರಿಂದ ಯಾವ ಹೆಚ್ಚಿನ ಉಪಯೋಗವಾಗಿಲ್ಲ. ಅದಿರುವ ವಿಜಯಪುರ– ಬಾಗಲಕೋಟೆ ಜಿಲ್ಲೆಗಳಿಗೆ ಇನ್ನೂವರೆಗೆ ಗಣನೀಯವಾಗಿ ಲಾಭ ಅಗಿಯೇ ಇಲ್ಲ. ಮುಳವಾಡ ಯೋಜನೆಗೆ ಮುಹೂರ್ತವೇ ಬಂದಿಲ್ಲ. ಆಲಮಟ್ಟಿ ಎಡದಂಡೆ ಕಾಲುವೆ ಎಲ್ಲಿದೆ? ಎಂದು ಬರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ.

ಎಲ್ಲಕ್ಕಿಂತ ಮಹತ್ವದ್ದೆಂದರೆ ಆಲಮಟ್ಟಿ ಅಣೆಕಟ್ಟಿನ ಎತ್ತರದ ಬಗ್ಗೆ ಇದ್ದ ಕಾನೂನು ಕಂಟಕ ದೂರಾಗಿವೆ. ಅದರ ಎತ್ತರವನ್ನು 519 ಮೀ ಇಂದ 524 ಮೀ ಗೆ ಏರಿಸಲು ಮೊದಲು ಸುಪ್ರೀಂಕೋರ್ಟ್ ತಡೆಯಾಜ್ಞೆ ಈಗ ಬಾಧಕವಾಗುವಂತಿಲ್ಲ. ಏಕೆಂದರೆ ಎರಡನೆಯ ಕೃಷ್ಣಾ ನ್ಯಾಯಾಧೀಕರಣವು ಪೂರ್ತಿ ನೀರಿನ ಹಂಚಿಕೆ ಮಾಡಿದ್ದರಿಂದ ಯಾವ ನದಿ ಕೊಳ್ಳದ ರಾಜ್ಯಗಳು ಅಣೆಕಟ್ಟಿನ ಎತ್ತರವನ್ನು ಏರಿಸಲು ಚಕಾರ ಎತ್ತುವಂತಿಲ್ಲ.

ಕರ್ನಾಟಕಕ್ಕೆ ನ್ಯಾಯಾಧೀಕರಣದಿಂದ ದೊರಕಿರುವ ಹೆಚ್ಚುವರಿ ನೀರನ್ನು ಹಿಡಿಯಲಿರುವ ಸ್ಥಾನ ಆಲಮಟ್ಟಿಯೊಂದೇ. ಬೇರೆ ಅಣೆಕಟ್ಟುಗಳಿಗೆ ಈ ತ್ರಾಣವಿಲ್ಲ. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಇನ್ನೂ ಐದು ಮೀಟರ್ ಹೆಚ್ಚಿಸಿದರೆ ಸುಮಾರು 137 ಟಿ.ಎಮ್.ಸಿ.ಎಫ್.ಟಿ ನೀರು ಹಿಡಿದಿಡಬಹುದು.

ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವದು, ಮುಳುಗಡೆ ಪ್ರದೇಶಗಳ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವದು ಮತ್ತು ಸಂತ್ರಸ್ತರಿಗೆ ಪುನರ್ನಿವೇಶನ ವ್ಯವಸ್ಥೆ ಮಾಡುವದು ಇವುಗಳೆಲ್ಲ ಈಗ ಜರೂರಾಗಿ ಮಾಡಬೇಕಾದ ಕೆಲಸಗಳು. ಇದರ ಕಡೆಗೆ ಲಕ್ಷ್ಯ ವಹಿಸುವದನ್ನು ಬಿಟ್ಟು, ಜಲಸಂಪನ್ಮೂಲ ಸಚಿವರು ಆಲಮಟ್ಟಿಯ ಹಿನ್ನೀರು ಪ್ರದೇಶದಲ್ಲಿ ತಡೆಗೋಡೆ ಕಟ್ಟಿಸುವ ಮಾತನ್ನು ಆಡತೊಡಗಿದ್ದಾರೆ. ಯಾವ ಅಣೆಕಟ್ಟಿನ ಪ್ರದೇಶಕ್ಕೂ ಅವರಾಗಲೀ, ಮುಖ್ಯಮಂತ್ರಿಗಳಿಗಾಗಲೀ ಭೇಟಿ ನೀಡಿ ಪ್ರಗತಿಯ ಪರಿಶೀಲನೆ ಮಾಡುವ ವ್ಯವಧಾನ ತೋರಿಲ್ಲ.

ಇವರ ವರ್ತನೆ ನೋಡಿದರೆ ಎಸ್.ಎಂ ಕೃಷ್ಣರವರ ನೆನಪಾಗುತ್ತದೆ. ಅವರೂ ತಮ್ಮ ಐದು ವರ್ಷದ ಮುಖ್ಯ ಮಂತ್ರಿ ಅಧಿಕಾರದ ಅವಧಿಯಲ್ಲಿ ಮತ್ತು ಅದಕ್ಕೆ ಪೂರ್ವದಲ್ಲಿ ಉಪಮುಖ್ಯಮಂತ್ರಿಗಳಾಗಿ ದ್ದಾಗಲೂ ಒಂದು ಬಾರಿಯೂ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಪ್ರಗತಿ ಆಗಿದೆಯೋ ಇಲ್ಲವೋ ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದರ ಆಧಾರದ ಮೇಲೆ ಹಳೆ ಮೈಸೂರು ರಾಜ್ಯದವರಿಗೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಯಲ್ಲಿ ಆಸಕ್ತಿ ಇಲ್ಲವೆಂದು ನಿರ್ಧಾರಕ್ಕೆ ಬರುವದು ಅಲ್ಲಿನ ಒಳ್ಳೆಯ ಜನರಿಗೆ ಅವಮಾನ ಮಾಡಿದ ಹಾಗೆ.

ಈಗ ಒದಗಿಸಿರುವ ₹ 10 ಸಾವಿರ ಕೋಟಿ ಯಾವುದಕ್ಕೂ ಸಾಲದು. ಹಣವಿಲ್ಲವೆನ್ನುವ ನೆವವನ್ನು ಪದೇ ಪದೇ ಹೇಳುವ ಕಾಲಮುಗಿದಿದೆ. ಸಿದ್ದರಾಮಯ್ಯವವರು ಏನಾದರೂ ಮಾಡಿ, ಹೇಗಾದರೂ ಮಾಡಿ ಹೆಚ್ಚುವರಿ ಹಣವನ್ನು ಒದಗಿಸಿ, ನೀರಾವರಿ ಸೌಲಭ್ಯವನ್ನು ಇದಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಜನರಿಗೆ ಒದಗಿಸಬೇಕು. ಇದನ್ನು ಮಾಡಿದರೆ ಅವರು ಇತಿಹಾಸದಲ್ಲಿ ಸ್ಥಾನ ಪಡೆಯಬಹುದು. ಇಲ್ಲದಿದ್ದರೆ ಮುಂದಿನ ತಲೆಮಾರಿನ ಜನಗಳಿಂದ ಶಾಪಕ್ಕೆ ಒಳಗಾಗುವದು ನಿಶ್ಚಯ.

(ಲೇಖಕ: ಹಿರಿಯ ಪತ್ರಕರ್ತ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.