ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IND vs SL 1st ODI: ಭಾರತ-ಶ್ರೀಲಂಕಾ ಮೊದಲ ಏಕದಿನ ರೋಚಕ 'ಟೈ'

Published : 2 ಆಗಸ್ಟ್ 2024, 9:01 IST
Last Updated : 2 ಆಗಸ್ಟ್ 2024, 9:01 IST
ಫಾಲೋ ಮಾಡಿ
Comments

ಕೊಲಂಬೊ: ದುನಿತ್‌ ವೆಲ್ಲಾಳಗೆ ಅವರ ಅಮೋಘ ಆಲ್‌ರೌಂಡ್‌ (ಔಟಾಗದೇ 67 ಮತ್ತು 39ಕ್ಕೆ2) ಆಟದ ಹೊರತಾಗಿಯೂ ಶ್ರೀಲಂಕಾ ಮತ್ತು ಭಾರತ ತಂಡಗಳ ನಡುವಣ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯ ರೋಮಾಂಚಕ ಟೈನಲ್ಲಿ ಅಂತ್ಯಗೊಂಡಿತು.

ಟಾಸ್‌ ಗೆದ್ದು ಪಿಚ್‌ನ ಮೊದಲ ಉಪಯೋಗ ಪಡೆಯಲು ನಿರ್ಧರಿಸಿದ ಶ್ರೀಲಂಕಾ ತಂಡ ಆರಂಭ ಆಟಗಾರ ದುನಿತ್‌ ವೆಲ್ಲಾಳಗೆ ಮತ್ತು ಪಥುಮ್ ನಿಸಾಂಕ ಅವರ ಅರ್ಧ ಶತಕಗಳ ನೆರವಿನಿಂದ ನಿಗದಿತ 50 ಓವರುಗಳಲ್ಲಿ 8 ವಿಕೆಟ್‌ಗೆ 230 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತು. ಭಾರತ ಉತ್ತಮ ಆರಂಭ ಮಾಡಿದರೂ ನಂತರ ಕುಸಿದು 13 ಎಸೆತಗಳಿರುವಂತೆ 230 ರನ್‌ಗಳಿಗೆ ಆಲೌಟ್‌ ಆಯಿತು.

ನಾಯಕ ಹಾಗೂ ಆರಂಭ ಆಟಗಾರ ರೋಹಿತ್‌ ಶರ್ಮಾ (58, 47 ಎಸೆತ) ಅವರ ಅರ್ಧ ಶತಕ ಬಿಟ್ಟರೆ, ಉಳಿದವರಿಂದ ದೊಡ್ಡ ಕೊಡುಗೆ ಬರಲಿಲ್ಲ. ರೋಹಿತ್ ಆಟದಲ್ಲಿ ಏಳು ಬೌಂಡರಿ, ಮೂರು ಸಿಕ್ಸರ್‌ಗಳಿದ್ದವು. ಎಡಗೈ ಸ್ಪಿನ್ನರ್‌ ವೆಲ್ಲಾಳಗೆ 9 ಓವರ್‌ಗಳಲ್ಲಿ 39 ರನ್ನಿತ್ತು ರೋಹಿತ್‌ ಮತ್ತು ಶುಭಮನ್ ಗಿಲ್ ಅವರ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. 

ರೋಹಿತ್ ಮತ್ತು ಶುಭಮನ್ ಮೊದಲ ವಿಕೆಟ್‌ ಜೊತೆಯಾಟದಲ್ಲಿ 12.3 ಓವರುಗಳಲ್ಲಿ 75 ರನ್ ಸೇರಿಸಿ ಬಿರುಸಿನ ಆರಂಭ ನೀಡಿದ್ದರು. ನಂತರ ಶ್ರೇಯಸ್‌ ಅಯ್ಯರ್‌ (23), ಕೆೆ.ಎಲ್‌.ರಾಹುಲ್‌ (31) ಮತ್ತು ಅಕ್ಷರ್ ಪಟೇಲ್ (33) ಅವರು ಮಧ್ಯಮ ಕ್ರಮಾಂಕದಲ್ಲಿ ಒಂದಿಷ್ಟು ಪ್ರತಿರೋಧ ತೋರಿದರು. ಆದರೆ ಹಸರಂಗ (58ಕ್ಕೆ3) ಮತ್ತು ನಾಯಕ ಚರಿತ್ ಅಸಲಂಕ (30ಕ್ಕೆ3) ಅವರು ಭಾರತದ ಕುಸಿತಕ್ಕೆ ಕಾರಣರಾದರು.

ಮೊದಲು ಆಡಿದ ಆತಿಥೇಯರು ಒಂದು ಹಂತದಲ್ಲಿ 200 ದಾಟುವುದೂ ಅನುಮಾನವಾಗಿ ಕಂಡಿತ್ತು. ಉತ್ತಮ ಲಯದಲ್ಲಿರುವ ಆರಂಭ ಆಟಗಾರ ನಿಸಾಂಕ 75 ಎಸೆತಗಳಲ್ಲಿ 9 ಬೌಂಡರಿಗಳಿದ್ದ 56 ರನ್ ಗಳಿಸಿದರು.  ಅವರು 26ನೇ ಓವರ್‌ನಲ್ಲಿ ನಿರ್ಗಮಿಸಿದರು. ತಂಡ 35ನೇ ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 145 ರನ್ ಗಳಿಸಿದ್ದು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಈ ಹಂತದಲ್ಲಿ ಕೆಳಮಧ್ಯಮ ಕ್ರಮಾಂಕದ ಆಟಗಾರ ವೆಲ್ಲಾಳಗೆ ನೆರವಿಗೆ ನಿಂತರು. ಅವರು 65 ಎಸೆತಗಳಲ್ಲಿ ಅಜೇಯ 67 ರನ್ ಗಳಿಸಿದರು. ಇದರಲ್ಲಿ ಎರಡು ಸಿಕ್ಸರ್‌, ಏಳು ಬೌಂಡರಿಗಳಿದ್ದವು.

ವನಿಂದು ಹಸರಂಗ (24) ಮತ್ತು ಅಖಿಲ ಧನಂಜಯ (17) ಅವರ ಜೊತೆ ವೆಲ್ಲಾಳಗೆ ಉಪಯುಕ್ತ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರಿಂದ ಲಂಕಾ ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು.

ಭಾರತದ ಕಡೆ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್‌ 10 ಓವರುಗಳಲ್ಲಿ 33 ರನ್ನಿತ್ತು 2 ವಿಕೆಟ್‌ ಪಡೆದರೆ, ಇನ್ನೊಬ್ಬ ಸ್ಪಿನ್ನರ್ ಕುಲದೀಪ್ ಯಾದವ್ ಇಷ್ಟೇ ಓವರುಗಳಲ್ಲಿ 33 ರನ್ನಿಗೆ 1ವಿಕೆಟ್‌ ಪಡೆದರು.

ಸ್ಕೋರುಗಳು:

ಶ್ರಿಲಂಕಾ: 50 ಓವರುಗಳಲ್ಲಿ 8 ವಿಕೆಟ್‌ಗೆ 230 (ಪಥುಮ್ ನಿಸಾಂಕ 56, ಜನಿತ್ ಲಿಯಾನಗೆ 20, ದುನಿತ್‌ ವೆಲ್ಲಾಳಗೆ ಔಟಾಗದೇ 67, ವನಿಂದು ಹಸರಂಗ 24; ಮೊಹಮ್ಮದ್ ಸಿರಾಜ್‌ 36ಕ್ಕೆ1, ಅರ್ಷದೀಪ್‌ ಸಿಂಗ್ 47ಕ್ಕೆ2, ಅಕ್ಷರ್ ಪಟೇಲ್‌ 33ಕ್ಕೆ2, ಶಿವಂ ದುಬೆ 19ಕ್ಕೆ1, ಕುಲದೀಪ್ ಯಾದವ್‌ 33ಕ್ಕೆ1);

ಭಾರತ: 47.5 ಓವರುಗಳಲ್ಲಿ 230 (ರೋಹಿತ್ ಶರ್ಮಾ 58, ವಿರಾಟ್‌ ಕೊಹ್ಲಿ 24, ಶ್ರೇಯಸ್‌ ಅಯ್ಯರ್ 23, ಕೆ.ಎಲ್‌.ರಾಹುಲ್‌ 31, ಅಕ್ಷರ್ ಪಟೇಲ್‌ 33, ಶಿವಂ ದುಬೆ 25; ದುನಿತ್‌ ವೆಲ್ಲಾಳಗೆ 39ಕ್ಕೆ2, ಅಖಿಲ ಧನಂಜಯ 40ಕ್ಕೆ1, ವನಿಂದು ಹಸರಂಗ 58ಕ್ಕೆ3, ಚರಿತ ಅಸಲಂಕ 30ಕ್ಕೆ3). ಪಂದ್ಯದ ಆಟಗಾರ: ದುನಿತ್‌ ವೆಲ್ಲಾಳಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT