ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿಮಾನಿಯ ಮೇಲೆ ಹಲ್ಲೆ ಮಾಡಲು ಮುಂದಾದ ಪಾಕ್‌ ಬೌಲರ್ ರೌಫ್‌: ಹರಿದಾಡಿದ ವಿಡಿಯೊ

ಕುಟುಂಬದ ವಿಷಯಕ್ಕೆ ಬಂದರೆ ಸುಮ್ಮನಿರುವುದಿಲ್ಲ: ರೌಫ್ ಸ್ಪಷ್ಟನೆ
Published 18 ಜೂನ್ 2024, 13:50 IST
Last Updated 18 ಜೂನ್ 2024, 13:50 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿರುವ ಪಾಕಿಸ್ತಾನ ತಂಡದ ವೇಗದ ಬೌಲರ್ ಹ್ಯಾರಿಸ್‌ ರೌಫ್‌, ಕ್ರಿಕೆಟ್‌ ಅಭಿಮಾನಿಯೊಬ್ಬನಿಗೆ ಹಲ್ಲೆ ಮಾಡಲು ಹೋದ ವಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಟಿ20 ವಿಶ್ವಕಪ್‌ನಿಂದ ಹೊರಬಿದ್ದ ನಂತರ ಪಾಕಿಸ್ತಾನ ತಂಡದ ಕೆಲ ಆಟಗಾರರು ಅಮೆರಿಕದಲ್ಲಿ ಸಮಯ ಕಳೆಯುತ್ತಿದ್ದು, ರೌಫ್‌ ಕೂಡ ತಮ್ಮ ಕುಟುಂಬದೊಂದಿಗೆ ಫ್ಲೊರಿಡಾದಲ್ಲಿ ತಂಗಿದ್ದಾರೆ. ಪತ್ನಿಯೊಂದಿಗೆ ವಿಹಾರಕ್ಕೆ ಹೋದ ವೇಳೆ ಕ್ರಿಕೆಟ್‌ ಅಭಿಮಾನಿಯೊಬ್ಬ ರೌಫ್‌ ಉದ್ದೇಶಿಸಿ ಏನೊ ಮಾತನಾಡಿದ್ದು, ರೌಫ್‌ ಕೋಪ ನೆತ್ತಿಗೇರಿದೆ.

ತಕ್ಷಣ ಆ ವ್ಯಕ್ತಿಗೆ ಕಡೆಗೆ ನುಗ್ಗಿದ ರೌಫ್‌, ನೀನು ಭಾರತೀಯನಾ? ಎಂದು ಕೇಳಿದ್ದಾರೆ. ಇದಕ್ಕೆ ಆತ ‘ಅಲ್ಲ.. ನಾನು ಪಾಕಿಸ್ತಾನದವನು’ ಎಂದಿದ್ದಾನೆ. ರೌಫ್‌ ಮತ್ತು ಅಭಿಮಾನಿಯ ನಡುವೆ ಜಗಳವನ್ನು ತಡೆಯಲು ಹಲವರು ಪ್ರಯತ್ನಿಸುತ್ತಿರುವುದು ದೃಶ್ಯದಲ್ಲಿ ಕಾಣಬಹುದು.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತ ರೌಫ್, ತಮ್ಮ ವರ್ತನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುವ ಇಚ್ಛೆ ನನಗಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅದರ ಅಗತ್ಯವಿದೆ ಎನ್ನಿಸುತ್ತಿದೆ. ಒಬ್ಬ ಕ್ರಿಕೆಟಿಗನಾಗಿ ಜನರಿಂದ ಬರುವ ಎಲ್ಲ ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತಿದ್ದೇನೆ. ನಮ್ಮನ್ನು ಬೆಂಬಲಿಸಲು ಮತ್ತು ಟೀಕಿಸಲು ಅವರು ಅರ್ಹರು. ಆದರೆ ನನ್ನ ಪೋಷಕರು ಮತ್ತು ನನ್ನ ಕುಟುಂಬದ ವಿಷಯಕ್ಕೆ ಬಂದಾಗ, ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಲು ನಾನು ಹಿಂಜರಿಯುವುದಿಲ್ಲ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ವೃತ್ತಿ ಯಾವುದೇ ಆಗಲಿ ಒಬ್ಬ ವ್ಯಕ್ತಿ ಮತ್ತು ಆತನ ಕುಟುಂಬಕ್ಕೆ ಗೌರವ ನೀಡುವುದು ಬಹಳ ಮುಖ್ಯವಾಗಿದೆ’ ಎಂದು ರೌಫ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT