ರಿಷಭ್ ಪಂತ್ ಸದ್ಯಕ್ಕೆ ಭಾರತದ ಪರವಾಗಿ ರೋಮಾಂಚನ ಹುಟ್ಟಿಸಿ, ನಿರೀಕ್ಷೆಯ ಗರಿಗೆದರಿಸಿರುವ ಹುಡುಗ. ಅವರೀಗ ಕಸರತ್ತು ಮಾಡುತ್ತಿರುವ ಬಗೆಯೂ ಸುದ್ದಿಗೆ ಪಕ್ಕಾಗಿದೆ. ಐದಾರು ತಿಂಗಳಿನಿಂದ ಅವರು ಹರಿಸಿದ ಬೆವರು ಕೊಟ್ಟಿರುವ ರನ್‌ಗಳ ಬೆಳೆ, ದಕ್ಕಿಸಿಕೊಟ್ಟಿರುವ ಗೆಲುವಿನ ಫಲ ಎರಡೂ ಎದುರಲ್ಲಿದೆ. ಫೋಕಸ್ ಲೈಟ್ ಕೆಳಗಿರುವ ಅವರ ಮೇಲೀಗ ನಿರೀಕ್ಷೆಯ ಭಾರ. ಮುಂದೆ...

ಟೆಸ್ಟ್ ಕ್ರಿಕೆಟ್‌ನಲ್ಲೂ ವಿಶ್ವ ಚಾಂಪಿಯನ್ ಆಗಬಹುದಾದ ಮಹತ್ವದ ಘಟ್ಟಕ್ಕೆ ಭಾರತ ತಂಡ ಬಂದು ನಿಂತಿರುವ ಈ ಹೊತ್ತಿನಲ್ಲಿ ಫೋಕಸ್ ಲೈಟ್ ರಿಷಭ್ ಪಂತ್ ಮೇಲೆ ಬಿದ್ದಿದೆ. ಹೀಗೆ ಪ್ರಭಾವಳಿಯಂತೆ ಕಾಣುವ ಬೆಳಕಿನಡಿಯಲ್ಲಿ ಜನಪ್ರಿಯತೆಯ ತಂಗಾಳಿಗೆ ಮೈಯೊಡ್ಡಿಕೊಂಡು ನಿಂತೂ ಮೈಮರೆಯದೆ ಆಡಿದ ಎಷ್ಟೋ ಹಿರಿತಲೆಗಳ ಉದಾಹರಣೆಗಳಿವೆ. ಸದ್ಯಕ್ಕೆ ತಮ್ಮ ವ್ಯಾಯಾಮದ ದಿನಚರಿಯ ಮೂಲಕ ಗಮನ ಸೆಳೆಯುತ್ತಿರುವ ರಿಷಭ್, ಗೊತ್ತೋ ಗೊತ್ತಿಲ್ಲದೆಯೋ ಒಂದು ಲಿಟ್ಮಸ್ ಟೆಸ್ಟ್‌ಗೆ ಒಳಗಾಗುವುದು ಅನಿವಾರ್ಯ.

ಕ್ರಿಕೆಟ್‌ನಲ್ಲೂ ಕಾಲದ ಆಟವೊಂದು ಇದ್ದೇ ಇರುತ್ತದೆ. ಇಂಗ್ಲೆಂಡ್‌ನ ಅಮೆಚ್ಯೂರ್ ಕ್ರಿಕೆಟಿಗ ಡಬ್ಲ್ಯು.ಜಿ. ಗ್ರೇಸ್ ಮೊಟ್ಟಮೊದಲು ಬ್ಯಾಕ್‌ಫುಟ್‌ನಲ್ಲೂ ಶಾಟ್ ಹೊಡೆಯಬಹುದು ಎಂದು ತೋರಿಸಿಕೊಟ್ಟಾಗ ಬೌಲರ್‌ಗಳು ಅವಾಕ್ಕಾಗಿದ್ದರು. ಭಾರತದವರೇ ಆದ ರಣಜಿ ಅಂದೊಮ್ಮೆ ಲೆಗ್ ಗ್ಲ್ಯಾನ್ಸ್ ಪ್ರಾತ್ಯಕ್ಷಿಕೆ ನೀಡಿದಾಗ ಅರಳಿದ್ದ ಕಣ್ಣುಗಳಿಗೂ ಲೆಕ್ಕವಿಲ್ಲ. ಆಸ್ಟ್ರೇಲಿಯಾದ ಶೇನ್ ವಾರ್ನ್ ಗೂಗ್ಲಿಗೆ ನಮ್ಮ ವಿವಿಎಸ್ ಲಕ್ಷ್ಮಣ್ ಇನ್‌ಸೈಡ್ ಔಟ್ ಬಂದು ಡ್ರೈವ್ ಮಾಡಿದ್ದನ್ನು ಕಂಡು ಖುದ್ದು ಆ ಬೌಲರ್ ಬೆವರಿದ್ದರಲ್ಲ. ದಕ್ಷಿಣ ಆಫ್ರಿಕಾದ ಅಲನ್ ಡೊನಾಲ್ಡ್ ಅವರಂಥ ಸುಂಟರಗಾಳಿ ಬೌಲರ್ ಎಸೆತವನ್ನು ರಾಹುಲ್ ದ್ರಾವಿಡ್ ದಿಢೀರನೆ ಪುಲ್ ಮಾಡಿದ್ದಾಗ ‘ಅಬ್ಬಾ’ ಎಂದು ಉದ್ಗಾರ ಹೊರಡಿಸಿದ್ದವರೂ ನಾವೇ. ಗುಂಡಪ್ಪ ವಿಶ್ವನಾಥ್ ತಮ್ಮ ಕಾಲದ ವೇಗಿ, ಬಾರ್ಬುಡಾದ ಆ್ಯಂಡಿ ರಾಬರ್ಟ್ಸ್‌ಗೆ ಸ್ಕ್ವೇರ್ ಕಟ್ ಮಾಡಿದ್ದಾಗ, ಪಾಕಿಸ್ತಾನದ ಇಮ್ರಾನ್ ಖಾನ್ ಬೌನ್ಸರ್‌ಗಳನ್ನೂ ಕುಳ್ಳಗಿನ ತಮ್ಮ ದೇಹ ಇಟ್ಟುಕೊಂಡೂ ಸುನಿಲ್ ಗಾವಸ್ಕರ್ ಅದ್ಭುತವಾಗಿ ಡಿಫೆನ್ಸ್ ಆಡಿದ್ದಾಗ ‘ವಾವ್’ ಎಂದಿದ್ದೆವು. ಅಬ್ದುಲ್ ಖಾದಿರ್ ಫ್ಲೈಟೆಡ್ ಎಸೆತಗಳ ‘ಬಿಸ್ಕತ್ತು’ಗಳಿಗೆ ಬಲಿಯಾಗುತ್ತಿದ್ದ ಮಿಕದಂಥ ಬ್ಯಾಟ್ಸ್‌ಮನ್‌ಗಳ ನಡುವೆ ಸಚಿನ್ ತೆಂಡೂಲ್ಕರ್ ಎಂಬ ಬಾಲಕ ಸಿಕ್ಸರ್‌ನ ಮಾಂಝಾ ಕೊಟ್ಟಿದ್ದನ್ನು ಮರೆಯಲಾರೆವು. ಇವೆಲ್ಲ ಹಾಗಿರಲಿ, 1980ರಲ್ಲಿ ಇಂಗ್ಲೆಂಡ್ ಎದುರು ಗೋಲ್ಡನ್ ಜ್ಯುಬಿಲಿ ಟೆಸ್ಟ್ ಪಂದ್ಯವೊಂದರ ಇನಿಂಗ್ಸ್‌ನಲ್ಲಿ ಊಟದ ವಿರಾಮಕ್ಕೆ ಸ್ವಲ್ಪ ಸಮಯವಿದ್ದಾಗ ಸುನಿಲ್ ಗಾವಸ್ಕರ್ ಸಿಕ್ಸರ್ ಹೊಡೆದು ತಮ್ಮವರನ್ನೂ ಚಕಿತಗೊಳಿಸಿದ್ದನ್ನು ಪದೇ ಪದೇ ಮೆಲುಕುಹಾಕುತ್ತಿರುತ್ತೇವೆ.

ಕ್ರಿಕೆಟ್ ವ್ಯಾಕರಣದ ಚೌಕಟ್ಟಿನಲ್ಲೇ ಆಡುತ್ತಿದ್ದ ಅನೇಕರು ಹೀಗೆ ಅಪರೂಪಕ್ಕೆ ಶಾಕ್ ಕೊಡುವಂಥ ವರಸೆಗಳನ್ನೂ ತೋರಿದ್ದಿದೆ. ಅದೇ ಕೆಲವರು ಶಾಕ್ ಕೊಡುವುದೇ ತಮ್ಮ ಜಾಯಮಾನ ಎನ್ನುವಂತೆ ಆಡುತ್ತಾರೆ. ಉದಾಹರಣೆಗೆ, ವೀರೇಂದ್ರ ಸೆಹ್ವಾಗ್. ಸಕ್ಲೇನ್ ಮುಷ್ತಾಕ್ ಸ್ಪಿನ್ ಅನುಭವ, ಶೋಯೆಬ್ ಅಖ್ತರ್ ಪರಮ ವೇಗ ಎರಡರ ಬಾಂಬುಗಳು ಎರಗಬಹುದೆಂಬ ಯಾವ ಅಳುಕೂ ಇಲ್ಲದೆ ಪಾಕಿಸ್ತಾನದ ಮುಲ್ತಾನ್ ಟೆಸ್ಟ್‌ನಲ್ಲಿ ಅವರು ತ್ರಿಶತಕ ಗಳಿಸಿದ ಆಟದ ವೇಗ, ಮುದ ಸವಿದವರೇ ಬಲ್ಲರು. ಒಂದು ತುದಿಯಲ್ಲಿ ಸಚಿನ್ ತೆಂಡೂಲ್ಕರ್ ತಾಳ್ಮೆಯಿಂದ ಆಡುವಂತೆ ಬ್ರೇಕ್ ಹಾಕುತ್ತಿದ್ದರೂ, ಆ ವಾಕ್ಯವನ್ನು ಆಗೀಗ ಪರಿಪಾಲನೆ ಮಾಡದೆಯೂ ತಮ್ಮ ಗುರಿಯನ್ನು ಮುಟ್ಟಲು ಸಾಧ್ಯ ಎನ್ನುವಂತೆ ಸೆಹ್ವಾಗ್ ಆ ಇನಿಂಗ್ಸ್‌ನಲ್ಲಿ ಆಡಿದರು. 300 ರನ್ ದಾಟಿದ್ದು ಸಿಕ್ಸರ್ ಹೊಡೆಯುವ ಮೂಲಕ. ಅದನ್ನು ಕಂಡ ಸಚಿನ್ ಕೂಡ ಪುಳಕಗೊಳ್ಳದೇ ಇರಲಾದೀತೆ?

ರಿಷಭ್ ಪಂತ್ ರಿವರ್ಸ್ ಸ್ವೀಪ್ ಅನ್ನು ಅನ್ವೇಷಣೆ ಮಾಡಲಿಲ್ಲ. ಇದೇ ವರ್ಷದ ಆ ದಿನ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಆಡುವಾಗ ಜೇಮ್ಸ್ ಆ್ಯಂಡರ್‌ಸನ್ ಸ್ವಿಂಗ್ ವೈವಿಧ್ಯವನ್ನು ಅಳೆದೂ ತೂಗಿ ಆಡಿದಂತೆಯೂ ಕಾಣಲಿಲ್ಲ. ಚೆಂಡಿನ ಗತಿ ಹಾಗೂ ಪುಟಿತವನ್ನು ಅಂದಾಜಿಸಿ, ಬಲಗೈ ಬ್ಯಾಟ್ಸ್‌ಮನ್ ತರಹದ ಪೊಸಿಷನ್‌ಗೆ ಬಂದರಷ್ಟೆ. ಚೆಂಡು ಬ್ಯಾಟಿಗೆ ಸಂಪರ್ಕ ಸಾಧಿಸದೇ ಹೋದಲ್ಲಿ ಇಂತಹ ಹೊಡೆತಕ್ಕೆ ಕೈಹಾಕುವುದು ದೊಡ್ಡ ರಿಸ್ಕ್. ಬೌಲ್ಡ್ ಆಗಬಹುದು. ದೇಹದ ಯಾವುದಾದರೂ ಭಾಗಕ್ಕೆ ಅಪ್ಪಳಿಸಬಹುದು. ಆದರೆ, ರಿಷಭ್ ಆತ್ಮವಿಶ್ವಾಸ ಎಷ್ಟರಮಟ್ಟಿಗೆ ಇತ್ತೆಂದರೆ ಖುದ್ದು ಆಂಡರ್‌ಸನ್ ತಮ್ಮ ತುಟಿಗಳೆರಡನ್ನೂ ಹೊಲೆದಂತೆ ಮಾಡಿ, ಅವುಗಳ ಸಂದಿನಿಂದ ‘ಯಪ್ಪಾ’ ಎನ್ನುವ ಭಾವ ಬೆರೆತ ಉಸಿರನ್ನು ಹೊರಹಾಕಿದರು. ಕ್ಷೇತ್ರರಕ್ಷಕರಲ್ಲಿ ಕಣ್ಣರಳಿಸದೇ ಇದ್ದವರು ಕಾಣಲಿಲ್ಲ. ಸ್ಟ್ರೈಕ್ ಬೌಲರ್‌ಗೆ ರಿವರ್ಸ್ ಸ್ವೀಪ್ ಎನ್ನುವುದು ಸೂರ್ಯನಿಗೇ ಟಾರ್ಚು ಎಂಬ ನುಡಿಗಟ್ಟಿಗೆ ಸಮ.

ರಿಷಭ್ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಲು ಭಾರತ ಹಿರಿಯರ ತಂಡ ಸೇರಿಕೊಂಡು ನಾಲ್ಕು ವರ್ಷಗಳಾಗಿವೆ. ಟೆಸ್ಟ್ ಕ್ರಿಕೆಟ್ ಆಡಲಾರಂಭಿಸಿ ಮೂರು ವಸಂತಗಳು ಸರಿದಿವೆ. 2018ರ ಸೆಪ್ಟೆಂಬರ್ 7ರಂದು ಓವಲ್‌ನಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 114 ರನ್ ಗಳಿಸಿದಾಗ ಅವರು ಒಂದು ಮೈಲಿಗಲ್ಲನ್ನು ನೆಟ್ಟರು. 2002ರಲ್ಲಿ ಅಜಯ್ ರಾತ್ರಾ 20 ವರ್ಷ 150 ದಿನಗಳ ಪ್ರಾಯದಲ್ಲಿ ಶತಕವೊಂದನ್ನು ದಾಖಲಿಸಿದ್ದರು. ಅವರ ನಂತರ ಅಂಥದೊಂದು ಸಾಧನೆ ಮಾಡಿದ ದೇಶದ ಎರಡನೇ ಕಿರಿಯ ವಿಕೆಟ್ ಕೀಪರ್ ಎಂಬ ಸಾಧನೆ ಅದು. ಆ ದಿನಕ್ಕೆ ಸರಿಯಾಗಿ ರಿಷಭ್ ವಯಸ್ಸು 20 ವರ್ಷ 342 ದಿನಗಳು. ಈ ವರ್ಷ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ ಅವರು ಗಳಿಸಿದ 101ಕ್ಕೆ ಆ 114ಕ್ಕಿಂತ ಹೆಚ್ಚಿನ ಮಹತ್ವ ಸಂದಿತು. ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ ಮೂರೂ ದೇಶಗಳ ನೆಲದಲ್ಲಿ ಆಸ್ಟ್ರೇಲಿಯಾದ ಆ್ಯಂಡಂ ಗಿಲ್‌ಕ್ರಿಸ್ಟ್ ಅವರನ್ನು ಹೊರತುಪಡಿಸಿದರೆ ಬೇರೆ ಯಾವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೂಡ ಶತಕ ದಾಖಲಿಸಿರಲ್ಲ ಎನ್ನುವ ಶ್ರೇಯ ಅದು. ಅದನ್ನು ಈಡೇರಿಸಿದ ಕುಳ್ಳ ಹುಡುಗನ ಮೇಲೀಗ ಫೋಕಸ್ ಲೈಟ್ ಬಿದ್ದಿರುವುದು ಸಹಜವೇ.

2020ರಲ್ಲಿ ರಿಷಭ್ ಪಂತ್ ಆಡಿದ್ದು ಟೆಸ್ಟ್ ಪಂದ್ಯಗಳ ಐದೇ ಇನಿಂಗ್ಸ್‌ಗಳಲ್ಲಿ. ಅವುಗಳಲ್ಲಿ ರನ್ ಗಳಿಕೆಯ ಸರಾಸರಿ ಕೇವಲ 17.8. ಬರೀ 89 ರನ್‌ಗಳನ್ನಷ್ಟೇ ಹೆಕ್ಕಲು ಸಾಧ್ಯವಾಗಿತ್ತು. 2018ರಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಅವರ ಸರಾಸರಿ 38 ಇತ್ತು. 2019ರಲ್ಲಿ 72ರ ಸರಾಸರಿಯಲ್ಲಿ ಸ್ಕೋರ್ ಮಾಡಿದ್ದನ್ನು ನೋಡಿದರೆ ಅವರ ಬೆಳವಣಿಗೆಯ ಗ್ರಾಫ್ ಅಂದಾಜಿಗೆ ಸಿಗುತ್ತದೆ. 2021 ಅವರನ್ನು ಮಾಗುತ್ತಿರುವ ಆಟಗಾರನನ್ನಾಗಿ ತೋರಿಸಿದ ವರ್ಷ. ನಾಲ್ಕು ಅರ್ಧಶತಕ, ಒಂದು ಶತಕ ದಾಖಲಿಸಿದ ಈ ವರ್ಷ ಇದುವರೆಗೆ ಅವರ ರನ್ ಗಳಿಕೆಯ ಸರಾಸರಿ 64.37 ಇದೆ. 2019ರಲ್ಲಿ ಅತಿ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದ್ದ ರಿಷಭ್ ಅವರ ಮೇಲೆ ಆಗ ಈಗಿನಷ್ಟು ಫೋಕಸ್ ಲೈಟ್ ಬಿದ್ದಿರಲಿಲ್ಲ. ಅವರ ವಿಕೆಟ್ ಕೀಪಿಂಗ್ ಕುರಿತು ಪ್ರಶ್ನೆಗಳಿದ್ದವು. ಈಗ ಮಹೇಂದ್ರ ಸಿಂಗ್ ಧೋನಿ ಹೆಲಿಕಾಪ್ಟರ್ ಶಾಟ್‌ಗೆ, ಸಂಯಮ ಬೆರೆಸಿದ ದಾಳಿಕೋರತನಕ್ಕೆ ಪರ್ಯಾಯ ಯಾವುದೆನ್ನುವುದಕ್ಕೆ ಉತ್ತರರೂಪದಲ್ಲಿ ರಿಷಭ್ ಒದಗಿಬಂದಿದ್ದಾರೆ.

2018–19ರಲ್ಲಿ ಬಾರ್ಡರ್ ಗಾವಸ್ಕರ್ ಟ್ರೋಫಿ ಪಂದ್ಯಗಳಲ್ಲಿ 20 ಬ್ಯಾಟ್ಸ್‌ಮನ್‌ಗಳು ಔಟಾಗಲು ರಿಷಭ್ ವಿಕೆಟ್ ಕೀಪಿಂಗ್ ಕಾರಣವಾಗಿತ್ತು. ಎಲ್ಲವೂ ಕ್ಯಾಚ್‌ಗಳು. ಅದಕ್ಕೂ ಮೊದಲು ಸರಣಿಯೊಂದರಲ್ಲಿ ಭಾರತದ ಬೇರೆ ಯಾವ ವಿಕೆಟ್ ಕೀಪರ್ ಕೂಡ 20 ಕ್ಯಾಚ್‌ಗಳನ್ನು ಹಿಡಿದಿರಲಿಲ್ಲ. ಸದ್ಯಕ್ಕೆ ಟೆಸ್ಟ್ ಪಂದ್ಯಗಳಲ್ಲಿ ರಿಷಭ್ ರನ್ ಗಳಿಕೆಯ ಸರಾಸರಿ 45.26. ಒಂದು ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ವಿಶ್ವದ 57 ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳ ರನ್ ಗಳಿಕೆ ಸರಾಸರಿಯ ಪಟ್ಟಿ ಬರೆದರೆ, ಅದರಲ್ಲಿ ಇವರು ನಾಲ್ಕನೆಯ ಸ್ಥಾನದಲ್ಲಿ ನಿಲ್ಲುತ್ತಾರೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (57.41 ಸರಾಸರಿಯಲ್ಲಿ 2067 ರನ್), ಆ್ಯಂಡಿ ಫ್ಲವರ್ (53.70 ಸರಾಸರಿಯಲ್ಲಿ 4404 ರನ್), ಆ್ಯಡಂ ಗಿಲ್‌ಕ್ರಿಸ್ಟ್ (47.60 ಸರಾಸರಿಯಲ್ಲಿ 5570) ಮಾತ್ರ ರನ್ ಗಳಿಕೆಯ ಸರಾಸರಿಯಲ್ಲಿ ಈ ಘಟ್ಟದಲ್ಲಿ ರಿಷಭ್ ಅವರಿಗಿಂತ ಪಟ್ಟಿಯಲ್ಲಿ ಮೇಲಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 1000 ರನ್‌ಗಳ ಗಡಿ ದಾಟಿದ ಮೇಲೆ ಭಾರತದ ಪರ ಅತಿ ವೇಗವಾಗಿ ಈ ಗುರಿ ಮುಟ್ಟಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನೂ ಅವರು ತಮ್ಮ ಹೆಸರಿಗೆ ಬರೆದುಕೊಂಡರು. ಅಷ್ಟೇ ಅಲ್ಲ, 2019ರಲ್ಲಿ ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ನೆಟ್ಟಿದ್ದು ಇನ್ನೊಂದು ಮೈಲುಗಲ್ಲನ್ನು. ಟೆಸ್ಟ್ ಕ್ರಿಕೆಟ್‌ನಲ್ಲಿ 50 ಬ್ಯಾಟ್ಸ್‌ಮನ್‌ಗಳು ಔಟಾಗಲು ಅತಿ ಕಡಿಮೆ ಪಂದ್ಯಗಳನ್ನು ತೆಗೆದುಕೊಂಡ ವಿಕೆಟ್ ಕೀಪರ್ ಎಂಬ ಗೌರವವೂ ಅವರದ್ದಾಯಿತು.

ಅಂಕಿಅಂಶಗಳು ಕೌಶಲಕ್ಕೆ ಸದಾ ಕನ್ನಡಿ ಹಿಡಿಯಬೇಕು ಎಂದೇನೂ ಇಲ್ಲ. ಆದರೆ, ರಿಷಭ್ ವಿಕೆಟ್ ಕೀಪಿಂಗ್ ತಡಕಾಟದ ಬಗೆಗೆ ಇದ್ದ ಟೀಕೆಗಳು ಪೂರ್ತಿ ಒಪ್ಪುವಂಥವಲ್ಲ ಎನ್ನುವುದಕ್ಕೂ ಇವು ಪುಷ್ಟಿ ಕೊಡುತ್ತವೆ. ಭಾರತದಲ್ಲಿ ವಿಪರೀತ ಚೆಂಡು ತಿರುಗುವ ಪಿಚ್‌ಗಳಲ್ಲಿ ಕೀಪಿಂಗ್ ಮಾಡುವುದು ಎಷ್ಟು ಕಷ್ಟವೋ ಇಂಗ್ಲೆಂಡ್‌ನ ಪುಟಿಯುವ ಪಿಚ್‌ಗಳಲ್ಲಿ ವಿಕೆಟ್ ಹಿಂದೆ ನಿಂತು ಆಟಕ್ಕೆ ನ್ಯಾಯ ಒದಗಿಸುವುದೂ ಅಷ್ಟೇ ಕಷ್ಟ.

‘ರಿಷಭ್ ಐದಾರು ತಿಂಗಳುಗಳಿಂದ ದೇಹದ ತೂಕ ತಗ್ಗಿಸಿಕೊಳ್ಳಲು ಹಾಗೂ ಆಟದ ಕೌಶಲ ವರ್ಧಿಸಿಕೊಳ್ಳಲು ಶ್ರಮ ಹಾಕುತ್ತಿದ್ದಾರೆ. ಅದು ಸತ್ಫಲ ಕೊಡುತ್ತಿದೆ’ ಎಂದು ತಂಡದ ಕೋಚ್ ರವಿಶಾಸ್ತ್ರಿ ಶಹಬ್ಬಾಸ್‌ಗಿರಿ ಕೊಟ್ಟಿದ್ದಿನ್ನೂ ಹಸಿರಾಗಿದೆ. ಆ ಆತ್ಮವಿಶ್ವಾಸದ ಬನಿಯಲ್ಲಿ ಭಾರತದ ಈ ಫೋಕಸ್ ಲೈಟ್ ಹುಡುಗ ನಿರೀಕ್ಷೆಯ ಭಾರದ ಪರೀಕ್ಷೆಯನ್ನು ಹೇಗೆ ಎದುರಿಸುವರು ಎನ್ನುವುದನ್ನು ಇನ್ನು ನೋಡೋಣ. ಎದುರಲ್ಲಿ ನ್ಯೂಜಿಲೆಂಡ್ ತಂಡದ ವೇಗಿಗಳು ಕೆಂಪು ಚೆಂಡನ್ನು ಉಜ್ಜುತ್ತಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.