’ಇನ್ನೇನು ಮುಗೀತು. ನಾಲ್ಕು ವಿಕೆಟ್ ಹೋದವು. ಹೋದ ಪಂದ್ಯದಲ್ಲಿಯೂ ಹಿಂಗೇ ಆಗಿತ್ತು. ಮ್ಯಾಚೂ ಹೋಯ್ತು..ಸರಣಿನೂ ಮುಗೀತು. ಇಂಗ್ಲೆಂಡ್‌ನವರು ಅಷ್ಟು ಸುಲಭಕ್ಕೆ ಬಿಟ್ಟುಕೊಡ್ತಾರಾ..ವಿರಾಟ್ ಆಡಬೇಕಿತ್ತು.. ರೋಹಿತ್, ಶಿಖರ್ ಒಳ್ಳೆ ಓಪನಿಂಗ್ ಕೊಡಬೇಕಿತ್ತು..‘

ಭಾನುವಾರ ರಾತ್ರಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ 259 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತ 72 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಾಂಗ ಇಂತಹ ಮಾತುಗಳನ್ನು ಹಲವರು ಆಡಿರಬಹುದು. ಇನ್ನೂ ಕೆಲವರು ಟಿ.ವಿ. ಚಾನೆಲ್ ಬದಲಿಸಿ ಬೇರೆ ಕಾರ್ಯಕ್ರಮ ನೋಡಿರಬಹುದು. ಮತ್ತಷ್ಟು ಜನ ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗಳಲ್ಲಿ ವಿರಾಟ್ ವೈಫಲ್ಯದ ಕುರಿತ ’ವಿಶ್ಲೇಷಣೆ‘ಗಳಲ್ಲಿ ಮುಳುಗಿರಬಹುದು. ಆದರೆ, ನಿಜವಾಗಿಯೂ ಪಂದ್ಯ ಆರಂಭವಾಗಿದ್ದು ಇದೇ ಹಂತದಲ್ಲಿ. ಏಕೆಂದರೆ, ಅಲ್ಲಿ ಕ್ರೀಸ್‌ನಲ್ಲಿದ್ದದ್ದು ರಿಷಭ್ ಪಂತ್!

ಬ್ಯಾಟಿಂಗ್ ದಾಖಲೆಗಳಲ್ಲಿ ಹಿಟ್‌ಮ್ಯಾನ್, ಗಬ್ಬರ್, ರನ್ ಮಷಿನ್ ಮತ್ತು ಸ್ಕೈ ಎನಿಸಿಕೊಂಡವರೆಲ್ಲರೂ ಪೆವಿಲಿಯನ್‌ನಲ್ಲಿ ನೀರು ಕುಡಿಯುತ್ತ ಕುಳಿತಾಗ ಹುಡುಗಾಟದ ಹುಡುಗ ಏನು ಮಾಡಿಯಾನು ಎಂಬ ಉಡಾಫೆಗಳನ್ನೇಲ್ಲ ಬೌಂಡರಿಯಾಚೆಗಟ್ಟಿದರು ರಿಷಭ್. ಅವರೊಂದಿಗೆ ಹಾರ್ದಿಕ್ ಪಾಂಡ್ಯ ಜೊತೆ ಕೊಟ್ಟರು. ರಿಷಭ್ ಇಂತಹ ಅಚ್ಚರಿಯ ಇನಿಂಗ್ಸ್‌ಗಳನ್ನು ಆಡಿದ್ದು ಇದೇ ಮೊದಲಲ್ಲ. ಅದೂ ವಿದೇಶಿ ಅಂಗಳಗಳಲ್ಲಿ ಅವರಿಂದ ಇಂತಹ ಆಟಗಳನ್ನು ಜಗತ್ತು ನೋಡಿದೆ. ಆದರೂ ಅವರ ಮೇಲೆ ಪೂರ್ಣ ಭರವಸೆ ಇಲ್ಲದಂತಹ ಸನ್ನಿವೇಶ. ’ಅವರಿಗಿನ್ನೂ 23 ವರ್ಷ. ಮನಸ್ಸು ಪರಿಪಕ್ವಗೊಂಡಿಲ್ಲ, ಕೆಲವೊಮ್ಮೆ ಬಾಲೀಶವಾಗಿ ಆಡುತ್ತಾರೆ. ವಿಕೆಟ್‌ಕೀಪಿಂಗ್‌ನಲ್ಲಿ ಕ್ಯಾಚ್ ಬಿಡುತ್ತಾರೆ. ಸ್ಟಂಪಿಂಗ್ ಮಿಸ್ ಮಾಡ್ತಾರೆ. ಕೆಲವು ಪಂದ್ಯಗಳಲ್ಲಿ ಅನಗತ್ಯ ಹೊಡೆತಗಳನ್ನು ಆಡಲು ಹೋಗಿ ವಿಕೆಟ್ ಚೆಲ್ಲುತ್ತಾರೆ‘ ಎಂಬೆಲ್ಲ ಆರೋಪಗಳಿವೆ.

ಆದರೆ, ಅವರು ಓಲ್ಡ್ ಟ್ರಾಫರ್ಡ್‌ನಲ್ಲಿ ಮಾಡಿದ ಬ್ಯಾಟಿಂಗ ಜವಾಬ್ದಾರಿಯುತ ನಡವಳಿಕೆಯ ಪ್ರತೀಕವಾಗಿತ್ತು ಎನ್ನಲಡ್ಡಿಯಿಲ್ಲ. ದೆಹಲಿಯ ಎಡಗೈ ಬ್ಯಾಟರ್ ತಮ್ಮ ಆಕ್ರಮಣಶೈಲಿಯನ್ನು ಬದಿಗಿಟ್ಟು ಮೊದಲ 20 ಎಸೆತಗಳಲ್ಲಿ 50ರ ಸರಾಸರಿಯಲ್ಲಿ ರನ್ ಗಳಿಸಿದರು. ಇನ್ನೊಂದೆಡೆ ಅಬ್ಬರಿಸಲು ಆರಂಭಿಸಿದ್ದ ಹಾರ್ದಿಕ್ ಅವರಿಗೆ ಹೆಚ್ಚು ಅವಕಾಶ ಬಿಟ್ಟುಕೊಟ್ಟರು. ಬೌಲಿಂಗ್‌ನಲ್ಲಿ ನಾಲ್ಕು ವಿಕೆಟ್ ಗಳಿಸಿ ಇಂಗ್ಲೆಂಡ್‌ಗೆ ಪೆಟ್ಟುಕೊಟ್ಟಿದ್ದ ಹಾರ್ದಿಕ್ ಬ್ಯಾಟಿಂಗ್‌ನಲ್ಲಿಯೂ ಮಿಂಚಿದರು. ಇದರಿಂದಾಗಿ ಇಂಗ್ಲೆಂಡ್ ಬೌಲರ್‌ಗಳ ಹುಮ್ಮಸ್ಸಿಗೆ ಪೆಟ್ಟುಬಿತ್ತು. ಇದನ್ನು ಚೆನ್ನಾಗಿ ಅರಿತಿದ್ದ ರಿಷಭ್ ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳದೇ ಇನಿಂಗ್ಸ್ ಕಟ್ಟಿದರು. ಇವರಿಬ್ಬರ ಜೊತೆಯಾಟದಲ್ಲಿ ಸೇರಿದ 133 ರನ್‌ಗಳಲ್ಲಿ ಹಾರ್ದಿಕ್ ಪಾಲು 71 ರನ್‌ಗಳು. ಈ ಜೊತೆಯಾಟದಲ್ಲಿ ಇವರಿಬ್ಬರೂ ಆಡಿದ್ದು 115 ಎಸೆತಗಳನ್ನು.

30ನೇ ಓವರ್‌ನಲ್ಲಿ ಭಾರತದ ಸ್ಕೋರ್ 152 ಆಗಿತ್ತು. ಆಗಿನ್ನೂ ರಿಷಭ್ 57 ಎಸೆತಗಳಲ್ಲಿ 45 ರನ್ ಗಳಿಸಿದ್ದರು. ಈ ಹಂತದಲ್ಲಿ ಇಬ್ಬರೂ ತಮ್ಮ ಆಟದ ವೇಗವನ್ನು ಹೆಚ್ಚಿಸಿಕೊಂಡರು. ಅದರಿಂದಾಗಿ ನಂತರ ಐದು ಓವರ್‌ಗಳಲ್ಲಿ 52 ರನ್‌ಗಳು ಹರಿದಬಂದವು. ಬಿರುಸಿನ ಆಟದಲ್ಲಿ ಹಾರ್ದಿಕ್ ವಿಕೆಟ್ ಪತನವಾಯಿತು. ಆಗ ಒಂಚೂರು ಆತಂಕ ಮೂಡಿದ್ದು ಸಹಜ. ಗೆಲುವಿಗೆ ಅಗತ್ಯವಿದ್ದ 55 ರನ್ ಗಳಿಸಲು 15 ಓವರ್‌ಗಳು ಬಾಕಿಯಿದ್ದವು. ಆದರೂ ವಿಕೆಟ್‌ಗಳು ಹೆಚ್ಚು ಇರದ ಕಾರಣ. ರಿಷಭ್ ತಮ್ಮ ನೈಜ ಆಟಕ್ಕೆ ಮರಳಿದರು.

ಇನ್ನೊಂದೆಡೆ ರವೀಂದ್ರ ಜಡೇಜ, ಸಮಚಿತ್ತದ ಆಟವಾಡುತ್ತ. ರಿಷಭ್‌ಗೇ ಹೆಚ್ಚು ಸ್ಟ್ರೈಕ್ ಬಿಟ್ಟುಕೊಟ್ಟರು. ಈ ಜೊಡಿಯನ್ನು ಹೆಡೆಮುರಿ ಕಟ್ಟಿದರೆ ಗೆಲ್ಲುವ ಸಾಧ್ಯತೆಗಳು ಹೆಚ್ಚು ಎಂಬುದನ್ನು ಮನಗಂಡಿದ್ದ ಇಂಗ್ಲೆಂಡ್ ನಾಯಕ ಜೊಸ್ ಬಟ್ಲರ್ ಫೀಲ್ಡಿಂಗ್ ಮತ್ತು ಬೌಲಿಂಗ್ ಬದಲಾವಣೆಗಳಲ್ಲಿ ಹೆಚ್ಚು ಪ್ರಯೋಗ ಆರಂಭಿಸಿದ್ದರು. ಪಂತ್‌ಗೆ ಮಾತ್ರ ಇದಾವುದೂ ಲೆಕ್ಕವಿರಲಿಲ್ಲ. ತಂಡವನ್ನು ಸರಣಿ ಗೆಲುವಿನತ್ತ ಮುನ್ನಡೆಸುವುದೊಂದೇ ಗುರಿಯಾಗಿತ್ತು.

ತಾವೆದುರಿಸಿದ 106ನೇ ಎಸೆತದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದ ಪಂತ್, ನಂತರ ಪಟಪಟನೆ ಆಟ ಮುಗಿಸಿಬಿಟ್ಟರು. ಡೇವಿಡ್ ವಿಲಿ ಹಾಕಿದ್ದ 42 ಓವರ್‌ನಲ್ಲಿ ಸತತ ಐದು ಬೌಂಡರಿ ಚಚ್ಚಿದರು. ಕೊನೆ ಎಸೆತದಲ್ಲಿ ಒಂದು ರನ್ ಹೊಡೆದು, ನಂತರದ ಓವರ್‌ನಲ್ಲಿ ಮತ್ತೊಂದು ಬೌಂಡರಿಯನ್ನು ರಿವರ್ಸ್ ಸ್ವೀಪ್ ಮೂಲಕ ಗಳಿಸಿದ ಪಂತ್, ಡ್ರೆಸ್ಸಿಂಗ್ ರೂಮನಲ್ಲಿ ನಗೆ ಬೀರುತ್ತ ಹೆಬ್ಬೆರಳು ಎತ್ತಿ ತೋರಿದರು. ಅವರ ಮುಖದಲ್ಲಿ ಸಂತೃಪ್ತಿಯ ಕಳೆ ಇತ್ತು. ಹುಚ್ಚಾಪಟ್ಟೆ ಕುಣಿದು, ಕುಪ್ಪಳಿಸಿ ಸಂಭ್ರಮಿಸದ ಪಂತ್ ತಮ್ಮ ಗುರು ಮಹೇಂದ್ರಸಿಂಗ್ ಧೋನಿಯನ್ನು ನೆನಪಿಸಿದ್ದು ಸುಳ್ಳಲ್ಲ. ಈ ಪಂದ್ಯದಲ್ಲಿ ಪಂತ್ ಸ್ಟ್ರೇಟ್ ಶಾಟ್, ಫ್ಲಿಕ್ ಮತ್ತು ಸ್ವೀಪ್‌ಗಳನ್ನು ಪ್ರಯೋಗಿಸಿದ ರೀತಿ ಚಿತ್ತಾಪಹಾರಿಯಾಗಿತ್ತು. ಇದು ಅವರ ಬ್ಯಾಟಿಂಗ್ ಮಾಗುತ್ತಿರುವುದರ ಲಕ್ಷಣವೂ ಆಗಿತ್ತು.

2019ರಲ್ಲಿ ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಬಿರುಗಾಳಿ ವೇಗದ ಬೌಲರ್‌ಗಳಿಗೆ ಎದೆಗೊಟ್ಟು ರಿಷಭ್ ಗಳಿಸಿದ ಅಜೇಯ 159 ರನ್‌ಗಳ ಆಟದಿಂದಾಗಿ ಭಾರತ ಸೋಲು ತಪ್ಪಿಸಿಕೊಂಡಿತ್ತು. 2021ರಲ್ಲಿ ಅದೇ ಸಿಡ್ನಿಯ ಟೆಸ್ಟ್‌ನಲ್ಲಿ ರಿಷಭ್ ಗಳಿಸಿದ್ದ 97 ರನ್ ಮತ್ತು ಅದೇ ಸರಣಿಯಲ್ಲಿ ಬ್ರಿಸ್ಬೆನ್‌ನಲ್ಲಿ ಹೊಡೆದಿದ್ದ ಅಜೇಯ 89 ರನ್‌ಗಳನ್ನು ಮರೆಯಲಾದಿತೇ?

2018ರಲ್ಲಿ ಇದೇ ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ಓವಲ್‌ನಲ್ಲಿ ಗಳಿಸಿದ್ದ ಶತಕ, ಇತ್ತೀಚೆಗೆ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ದಾಖಲಿಸಿದ್ದ ಶತಕ ರಿಷಭ್ ದಿಟ್ಟೆದೆಯ ನಿದರ್ಶನಗಳು. ’ಎಲ್ಲ ಮುಗೀತು‘ ಎಂದು ಒಪ್ಪಿಕೊಳ್ಳದ ಛಾತಿಯ ಹುಡುಗ ರಿಷಭ್. ಬಾಲ್ಯದಲ್ಲಿ ಕ್ರಿಕೆಟ್ ಕಲಿಯಲು ಉತ್ತರಾಖಂಡದಿಂದ ಬಂದು ದೆಹಲಿಯ ಗಲ್ಲಿಗಳನ್ನು ತಡಕಾಡಿದ ಅನುಭವ, ಗುರುದ್ವಾರದಲ್ಲಿ ಊಟ ಮಾಡಿ, ಅಲ್ಲಿಯೇ ಮಲಗೆದ್ದು ಕ್ರಿಕೆಟ್ ಸಾಧನೆಯ ಹಾದಿಗಳನ್ನು ಹುಡುಕಿದ ಅನುಭವ ಅವರನ್ನು ಗಟ್ಟಿಗೊಳಿಸಿದೆ. ಪಿತೃವಿಯೋಗದ ಮರುದಿನವೇ ಐಪಿಎಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮನಗೆದ್ದ ಹುಡುಗ, 20ರ ಹರೆಯದಲ್ಲಿಯೇ ದೆಹಲಿ ತಂಡದ ನಾಯಕನಾಗಿ ಗಮನ ಸೆಳೆದದ್ದು ಕಮ್ಮಿಯೇನಲ್ಲ. ಕೊರತೆಗಳೇನೇ ಇರಲಿ; ಟೀಕೆಗಳು ಬಂದರೂ ಮುಗುಳ್ನುಗುತ್ತ ತಂಡವನ್ನು ಸೋಲಿನ ಗೆಲುವಿನೆಡೆಗೆ ಕೊಂಡೊಯ್ಯುವ ಗುಣವೇ ಅವರನ್ನು ಮುಂದೊಂದು ದಿನ ’ದಿಗ್ಗಜ‘ನನ್ನಾಗಿ ರೂಪಿಸಿದರೆ ಅಚ್ಚರಿಯಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.