ಶನಿವಾರ, 29 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup | AFG vs RSA: ಅಫ್ಗನ್‌-ದಕ್ಷಿಣ ಆಫ್ರಿಕಾ ಪೈಪೋಟಿ ಇಂದು

ಸೆಮಿಫೈನಲ್: ಯಾವುದೇ ತಂಡ ಗೆದ್ದರೂ ಇತಿಹಾಸ
Published 27 ಜೂನ್ 2024, 0:30 IST
Last Updated 27 ಜೂನ್ 2024, 0:30 IST
ಅಕ್ಷರ ಗಾತ್ರ

ತರೂಬಾ (ಟ್ರಿನಿಡಾಡ್‌): ನಿರೀಕ್ಷೆ ಮೀರಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಅಫ್ಗಾನಿಸ್ತಾನ ತಂಡವು, ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಗುರುವಾರ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಆದರೆ, ಬ್ರಯಾನ್ ಲಾರಾ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆಯುವ ಈ ಬಹುನಿರೀಕ್ಷಿತ ಮುಖಾಮುಖಿಯಲ್ಲಿ ಯಾರೂ ಗೆದ್ದರೂ ಇತಿಹಾಸ ನಿರ್ಮಾಣವಾಗಲಿದೆ.

ಐತಿಹಾಸಿಕ ಸಾಧನೆಯತ್ತ ಸಾಗಲು ಅಫ್ಗಾನಿಸ್ತಾನ ತಂಡಕ್ಕೆ ಇದು ಅವಕಾಶವಾದರೆ, ಚೋಕರ್ಸ್ ಹಣೆಪಟ್ಟಿ ಕಳಚಿ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ತಲುಪಲು ದಕ್ಷಿಣ ಆಫ್ರಿಕಾಕ್ಕೆ ದಾರಿಯಾಗಿದೆ. ಹೀಗಾಗಿ ಈ ಹಣಾಹಣಿ ಕುತೂಹಲಕ್ಕೆ ಕಾರಣವಾಗಿದೆ.

ದಕ್ಷಿಣ ಆಫ್ರಿಕಾದ ಅಜೇಯ ಓಟದೊಡನೆ ಸೆಮಿಫೈನಲ್‌ಗೆ ದಾಪುಗಾಲಿಟ್ಟಿದೆ. ಆದರೆ ಅಫ್ಗಾನಿಸ್ತಾನ ತಂಡದ ‘ಯಶೋಗಾಥೆ’ಗೆ ಈ ವಿಶ್ವಕಪ್‌ ವೇದಿಕೆಯಾಗಿದೆ.

ಯುದ್ಧ, ಆಂತರಿಕ ದಂಗೆಯಿಂದ ಜರ್ಝರಿತವಾಗಿರುವ ದೇಶದ ಕ್ರಿಕೆಟ್‌ ತಂಡ ಈ ವಿಶ್ವಕಪ್‌ನಲ್ಲಿ ತೋರಿರುವ ಆಟ ಚೇತೊಹಾರಿಯಾಗಿದೆ. ಲೀಗ್‌ ಹಂತದಲ್ಲಿ ನ್ಯೂಜಿಲೆಂಡ್ ತಂಡವನ್ನು ಸುಲಭವಾಗಿ ಮಣಿಸಿದ್ದ ರಶೀದ್ ಖಾನ್ ಬಳಗ, ನಂತರ ಸೂಪರ್ ಎಂಟರ ಹಂತದ ನಿರ್ಣಾಯಕ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡಕ್ಕೇ ದಂಗುಬಡಿಸಿತು. ಆಸ್ಟ್ರೇಲಿಯಾ ಈ ಹಿಂದೆಂದೂ ಅಫ್ಗನ್ ತಂಡಕ್ಕೆ ಮಣಿದಿರಲಿಲ್ಲ.

ತಂಡ ಒಬ್ಬರನ್ನೇ ಅವಲಂಬಿಸಿಲ್ಲ. ಸ್ಪಿನ್ನರ್‌ ರಶೀದ್‌ ಖಾನ್, ವೇಗದ ಬೌಲರ್‌ಗಳಾದ ಫಜಲ್‌ಹಕ್ ಫರೂಕಿ, ನವೀನ್‌ ಉಲ್‌ ಹಕ್ ಅವರು ವಿಕೆಟ್‌ ಪಡೆಯುವ ಬೌಲರ್‌ಗಳಾಗಿದ್ದಾರೆ. ಗುಲ್ಬದ್ದೀನ್ ನೈಬ್, ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ರೂವಾರಿಯಾಗಿದ್ದರು. ಮೊಹಮ್ಮದ್ ನಬಿ ಅವರನ್ನೂ ಕಡೆಗಣಿಸುವಂತಿಲ್ಲ.

ಆರಂಭ ಆಟಗಾರ ರಹಮಾನುಲ್ಲಾ ಗುರ್ಬಾಝ್ 281 ರನ್ ಗಳಿಸಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಫರೂಕಿ 16 ವಿಕೆಟ್‌ಗಳೊಡನೆ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇದು ಈ ತಂಡ ಸುಲಭವಾಗಿ ಬಗ್ಗದ ತಂಡ ಎಂಬುದನ್ನು ಸೂಚಿಸುವಂತಿದೆ.

ಆದರೆ ಮೊದಲ ಬಾರಿ ವಿಶ್ವಕಪ್ ಸೆಮಿಫೈನಲ್ ಆಡುತ್ತಿರುವ ಈ ತಂಡ, ಪ್ರಬಲ ದಕ್ಷಿಣ ಆಫ್ರಿಕಾ ವಿರುದ್ಧ ಆಡುವಾಗ ಮೈಮರೆಯುವಂತಿಲ್ಲ.

ಈ ಹಿಂದೆ ವಿಶ್ವದರ್ಜೆಯ ಆಟಗಾರರನ್ನು ಹೊಂದಿದ್ದರೂ, ದಕ್ಷಿಣ ಆಫ್ರಿಕಾ ತಂಡ ಟಿ20 ಅಥವಾ ಏಕದಿನ ವಿಶ್ವಕಪ್‌ಗಳಲ್ಲಿ ಎಂದೂ ಪ್ರಶಸ್ತಿ ಸುತ್ತಿಗೆ ತಲುಪಿಲ್ಲ. ಆ ಹಣೆಪಟ್ಟಿಯನ್ನು ಕಳಚಲು ಈಗ ಒಳ್ಳೆಯ ಅವಕಾಶವಿದೆ.

ಈ ಬಾರಿ ಕೆಲವು ರೋಚಕ ಪಂದ್ಯಗಳನ್ನೂ ಗೆಲ್ಲುವ ಮೂಲಕ ಏಡನ್‌ ಮರ್ಕರಂ ಬಳಗ ಸಕಾರಾತ್ಮಕ ಸಂಕೇತಗಳನ್ನು ರವಾನಿಸಿದೆ. ನೇಪಾಳ ವಿರುದ್ಧ ಒಂದು ರನ್, ಬಾಂಗ್ಲಾದೇಶ ವಿರುದ್ಧ ನಾಲ್ಕು ರನ್ ಮತ್ತು ವೆಸ್ಟ್‌ ಇಂಡೀಸ್ ವಿರುದ್ಧ ಮೂರು ವಿಕೆಟ್‌ ಜಯ ಇಲ್ಲಿ ಉಲ್ಲೇಖನೀಯ.

ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಕಾಣಬೇಕಾಗಿದೆ. ಈಗ ಅಗ್ರ 10 ಆಟಗಾರರಲ್ಲಿ ಆ ತಂಡದಿಂದ ಕ್ವಿಂಟನ್ ಡಿಕಾಕ್ (7 ಪಂದ್ಯಗಳಿಂದ 199 ರನ್) ಮಾತ್ರ ಸ್ಥಾನ ಪಡೆದಿದ್ದಾರೆ.

ತಂಡಗಳು:

ಬಾಂಗ್ಲಾದೇಶ: ರಶೀದ್ ಖಾನ್‌ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಅಜ್ಮತ್‌ಉಲ್ಲಾ ಒಮರ್‌ಝೈ, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ಇಶಾಖ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರಿಮ್ ಜನತ್, ನಂಗ್ಯಾಲ್ ಖರೋಟಿ, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್‌–ಉಲ್–ಹಕ್, ಫಜಲ್‌ಹಕ್‌ ಫರೂಖಿ.

ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ (ನಾಯಕ), ಒಟ್ಟನೆಲ್ ಬಾರ್ತ್‌ಮನ್, ಜೆರಾಲ್ಡ್ ಕೋಝಿ, ಕ್ವಿಂಟನ್ ಡಿಕಾಕ್‌, ರೀಜಾ ಹೆಂಡ್ರಿಕ್ಸ್‌, ಮಾರ್ಕೊ ಯಾನ್ಸನ್‌, ಹೆನ್ರಿಚ್‌ ಕ್ಲಾಸೆನ್‌, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆ್ಯನ್ರಿಚ್‌ ನಾಕಿಯಾ, ಕಗಿಸೊ ರಬಾಡ, ತಬ್ರೇಜ್ ಸಂಶಿ, ಟ್ರಿಸ್ಟನ್ ಸ್ಟಬ್ಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT