ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಟೆಸ್ಟ್‌: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ರನ್‌ ಹೊಳೆ

ಶಫಾಲಿ ವೇಗದ ದ್ವಿಶತಕ, ಮಂದಾನ ಶತಕ
Published 28 ಜೂನ್ 2024, 15:08 IST
Last Updated 28 ಜೂನ್ 2024, 15:08 IST
ಅಕ್ಷರ ಗಾತ್ರ

ಚೆನ್ನೈ: ಯುವ ಆಟಗಾರ್ತಿ ಶಫಾಲಿ ವರ್ಮಾ ದಾಖಲೆ ವೇಗದ ದ್ವಿಶತಕ ಬಾರಿಸಿ ಮಿಂಚಿದರು. ಪ್ರವಾಸಿ ದಕ್ಷಿಣ ಆಫ್ರಿಕ ತಂಡದ ವಿರುದ್ಧ ಶುಕ್ರವಾರ ಚೆಪಾಕ್ ಕ್ರೀಡಾಂಗಣದಲ್ಲಿ ಆರಂಭವಾದ ಏಕೈಕ ಮಹಿಳಾ ಟೆಸ್ಟ್‌ ಪಂದ್ಯದಲ್ಲಿ ಭಾರತ ರನ್‌ ಮಳೆಯನ್ನೇ ಸುರಿಸಿತು. ದಿನದಾಟದ ಅಂತ್ಯಕ್ಕೆ ಆತಿಥೇಯರು 4 ವಿಕೆಟ್‌ಗೆ 525 ರನ್‌ಗಳ ಬೃಹತ್ ಮೊತ್ತ ಪೇರಿಸಿದರು.

ಈ ರನ್‌ ಸುಗ್ಗಿಯಲ್ಲಿ ಹಲವು ದಾಖಲೆಗಳನ್ನು ಸ್ಥಾಪನೆಯಾದವು. ಇದು ಟೆಸ್ಟ್ ಪಂದ್ಯವೊಂದರಲ್ಲಿ ಒಂದೇ ದಿನ ದಾಖಲಾದ ಅತಿ ಹೆಚ್ಚಿನ ಮೊತ್ತ. ಶಪಾಲಿ ವರ್ಮಾ ಕೇವಲ 194 ಎಸೆತಗಳಲ್ಲಿ 204 ರನ್ ಹೊಡೆದರು. ಶಫಾಲಿ, ಸ್ಮೃತಿ ಮಂದಾನ (149, 161ಎ) ಜೊತೆ ಮೊದಲ ವಿಕೆಟ್‌ಗೆ 292 ರನ್ ಸೇರಿಸಿ ಭಾರಿ ಮೊತ್ತಕ್ಕೆ ಸುಭದ್ರ ಅಡಿಪಾಯ ಹಾಕಿಕೊಟ್ಟರು. ಪ್ರವಾಸಿ ತಂಡದ ಆಟಗಾರ್ತಿಯರು ಚೆಂಡಿನ ಹಿಂದೆ ಓಡಿ ಓಡಿ ಸುಸ್ತಾದರು.

20 ವರ್ಷದ ಶಫಾಲಿ ವೇಗದ ದ್ವಿಶತಕಕ್ಕೆ ದಾಖಲೆ ಬರೆದರು. ಈ ಹಿಂದಿನ ದಾಖಲೆ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್‌ಲ್ಯಾಂಡ್‌ ಹೆಸರಿನಲ್ಲಿತ್ತು. ಕಳೆದ ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಅವರು 248 ಎಸೆತಗಳಲ್ಲಿ ದ್ವಿಶತಕ ಹೊಡೆದಿದ್ದರು. ಮಹಿಳಾ ಕ್ರಿಕೆಟ್‌ನ ತಾರೆಗಳಲ್ಲೊಬ್ಬರಾದ ಮಿತಾಲಿ ರಾಜ್ ನಂತರ ಟೆಸ್ಟ್‌ನಲ್ಲಿ ದ್ವಿಶತಕ ಹೊಡೆದ ಭಾರತದ ಎರಡನೇ ಆಟಗಾರ್ತಿಯರೆಂಬ ಶ್ರೇಯವೂ ಶಫಾಲಿ ಅವರದಾಯಿತು. ಇಂಗ್ಲೆಂಡ್ ವಿರುದ್ಧ ಟಾಂಟನ್‌ನಲ್ಲಿ ‘ಡ್ರಾ’ ಆಗಿದ್ದ ಎರಡನೇ ಟೆಸ್ಟ್‌ನಲ್ಲಿ ಮಿತಾಲಿ ದ್ವಿಶತಕಕ್ಕೆ 407 ಎಸೆತಗಳನ್ನು ತೆಗೆದುಕೊಂಡಿದ್ದರು.

ಟೆಸ್ಟ್‌ನಲ್ಲಿ ಒಂದೇ ದಿನ ಅತಿ ಹೆಚ್ಚು ರನ್‌ ಗಳಿಸಿದ್ದ 89 ವರ್ಷಗಳ ಹಳೆಯ ದಾಖಲೆಯೂ ಈ ರನ್ ಮಳೆಯಲ್ಲಿ ಕೊಚ್ಚಿಹೋಯಿತು. ಇಂಗ್ಲೆಂಡ್‌ ವನಿತೆಯರು 1935ರಲ್ಲಿ ನ್ಯೂಜಿಲೆಂಡ್ ಎದುರು ಕ್ರೈಸ್ಟ್‌ಚರ್ಚ್‌ನ ಲ್ಯಾಂಕೆಸ್ಟರ್ ಪಾರ್ಕ್‌ನಲ್ಲಿ 4 ವಿಕೆಟ್‌ಗೆ 431 ರನ್ ಪೇರಿಸಿದ್ದು (ಅದೇ ದಿನ ಬೆಳಿಗ್ಗೆ ನ್ಯೂಜಿಲೆಂಡ್‌ 44ಕ್ಕೆ ಆಲೌಟ್‌ ಆಗಿದ್ದು ಸೇರಿದರೆ ಒಂದೇ ದಿನ 475 ರನ್) ಹಿಂದಿನ ದಾಖಲೆಯಾಗಿತ್ತು.

ಶಫಾಲಿ ಚಾರಿತ್ರಿಕ ದ್ವಿಶತಕ ಪೂರೈಸಿದ ಕೆಲವೇ ನಿಮಿಷಗಳ ನಂತರ ರನೌಟ್‌ ಆದರು. ಕೇವಲ ಐದನೇ ಟೆಸ್ಟ್‌ ಆಡುತ್ತಿರುವ ಅವರು 197 ಎಸೆತಗಳನ್ನೆದುರಿಸಿ  23 ಬೌಂಡರಿಗಳ ಜೊತೆಗೆ ಎಂಟು ಸಿಕ್ಸರ್‌ಗಳನ್ನು ಹೊಡೆದಟ್ಟಿದರು. ಟೆಸ್ಟ್‌ನಲ್ಲಿ ಅವರ ಹಿಂದಿನ ಗರಿಷ್ಠ ಗಳಿಕೆ 96.

ದಿನದಾಟ ನಿಸ್ಸಂದೇಹವಾಗಿ ಶಫಾಲಿ ಮತ್ತು ಸ್ಮೃತಿ ಅವರಿಗೆ ಸೇರಿತ್ತು. ಭಾರತ ಬ್ಯಾಟಿಂಗ್ ಆಯ್ದುಕೊಂಡ ನಂತರ ಶಫಾಲಿ ಮತ್ತು ಸ್ಮೃತಿ ಲಂಚ್‌ ವೇಳೆಗೆ ವಿಕೆಟ್‌ ನಷ್ಟವಿಲ್ಲದೆ 130 ರನ್ ಸೇರಿಸಿದ್ದರು. ಇವರಿಬ್ಬರ ಅಬ್ಬರದಲ್ಲಿ ಬೌಲರ್‌ಗಳಿಗೆ ಏನೂ ತೋಚದಾಯಿತು. ಹೆಚ್ಚುಕಮ್ಮಿ ಒಂದೇ ಓವರ್ ಅಂತರದಲ್ಲಿ ಇಬ್ಬರೂ ಶತಕ ಪೂರೈಸಿದರು.

292 ರನ್ ಸೇರಿಸಿದ ಬಳಿಕ ಉಪನಾಯಕಿ ಮಂದಾನ (4x27, 6x1), ಡೆಲ್ಮಿ ಟಕ್ಕರ್ ಎಸೆತದಲ್ಲಿ ಔಟ್‌ ಆದರು. ಇದು ಭಾರತದ ಪರ ಯಾವುದೇ ವಿಕೆಟ್‌ಗೆ ಅತಿ ಹೆಚ್ಚಿನ ಜೊತೆಯಾಟ. ಸ್ಮೃತಿ ಅವರ ಈ ಹಿಂದಿನ ಗರಿಷ್ಠ ವೈಯಕ್ತಿಕ ಗಳಿಕೆ 127 ಆಗಿತ್ತು.

ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲಿ ಯಾವುದೇ ವಿಕೆಟ್‌ಗೆ ಇದು ಎರಡನೇ ಅತಿ ದೊಡ್ಡ ಜೊತೆಯಾಟ ಎನಿಸಿತು. ಆಸ್ಟ್ರೇಲಿಯಾದ ಎಲ್‌.ಎ.ರೀಲರ್ ಮತ್ತು ಡಿ.ಎ.ಆ್ಯನೆಟ್ಸ್‌ ಅವರು 1987ರಲ್ಲಿ ಇಂಗ್ಲೆಂಡ್‌ ವಿರುದ್ಧ ವೆದರ್ಬಿಯಲ್ಲಿ ಮೂರನೇ ವಿಕೆಟ್‌ಗೆ 309 ರನ್ ಸೇರಿಸಿದ್ದು ವಿಶ್ವದಾಖಲೆ ಆಗಿದೆ. ಮೊದಲ ವಿಕೆಟ್‌ಗೆ ಈ ಹಿಂದೆ ಅತಿ ಹೆಚ್ಚಿನ ಜೊತೆಯಾಟ ದಾಖಲಾಗಿದ್ದು ಪಾಕಿಸ್ತಾನ ಸಜ್ಜಿದಾ ಶಾ ಮತ್ತು ಕಿರಣ್ ಬಲೂಚ್‌ ನಡುವೆ. ವೆಸ್ಟ್‌ ಇಂಡೀಸ್ ವಿರುದ್ಧ 2004ರ ಟೆಸ್ಟ್‌ನಲ್ಲಿ 241 ರನ್ ಸೇರಿಸಿದ್ದರು.

ಶುಭಾ ಸತೀಶ್ (15) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಶಫಾಲಿ, ಜೆಮಿಮಾ ರಾಡ್ರಿಗಸ್ (55) ಜೊತೆ ಮೂರನೇ ವಿಕೆಟ್‌ಗೆ 86 ರನ್ ಸೇರಿಸಿದರು. ಚಹ ವಿರಾಮದ ನಂತರ ಅವರು ಟಕರ್ ಬೌಲಿಂಗ್‌ನಲ್ಲಿ ಬೆನ್ನುಬೆನ್ನಿಗೆ ಎರಡು ಸಿಕ್ಸರ್ ಮತ್ತು ಒಂದು ರನ್ ಗಳಿಸಿ ದ್ವಿಶತಕ ಪೂರೈಸಿದರು. ಜೆಮಿಮಾ ಜೊತೆ ಗೊಂದಲದಿಂದ ರನೌಟರ್‌ ಆದರು.

ಜೆಮಿಮಾ ಟೆಸ್ಟ್‌ನಲ್ಲಿ ಮೂರನೇ ಅರ್ಧ ಶತಕ ಗಳಿಸಿ ಟಕರ್‌ಗೆ ವಿಕೆಟ್‌ ನೀಡಿದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ (ಔಟಾಗದೇ 42) ಮತ್ತು ರಿಚಾ ಘೋಷ್‌ (ಔಟಾಗದೇ 43) ಅವರ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಗೋಳು ಹೊಯ್ದುಕೊಂಡರು.

ಸ್ಕೋರುಗಳು: ಭಾರತ ಮಹಿಳಾ ತಂಡ: 98 ಓವರುಗಳಲ್ಲಿ 4 ವಿಕೆಟ್‌ಗೆ 525 (ಶಫಾಲಿ ವರ್ಮಾ 205, ಸ್ಮೃತಿ ಮಂದಾನ 149, ಶುಭಾ ಎಸ್‌. 15, ಜೆಮಿಮಾ ರಾಡ್ರಿಗಸ್‌ 55, ಹರ್ಮನ್‌ಪ್ರೀತ್ ಕೌರ್‌ ಔಟಾಗದೇ 42, ರಿಚಾ ಘೋಷ್‌ ಔಟಾಗದೇ 43;  ನೇಡಿನ್ ಡಿ ಕ್ಲಾರ್ಕ್‌ 62ಕ್ಕೆ1, ಡೆಲ್ಮಿ ಟಕ್ಕರ್ 141ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT