ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇನಿಂಗ್ಸ್ ಹಾಗೂ 154 ರನ್ ಜಯ; ಕಿವೀಸ್ ವಿರುದ್ಧ ಲಂಕಾ ಕ್ಲೀನ್ ಸ್ವೀಪ್ ಸಾಧನೆ

Published : 29 ಸೆಪ್ಟೆಂಬರ್ 2024, 10:13 IST
Last Updated : 29 ಸೆಪ್ಟೆಂಬರ್ 2024, 10:13 IST
ಫಾಲೋ ಮಾಡಿ
Comments

ಗಾಲೆ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಇನಿಂಗ್ಸ್ ಹಾಗೂ 154 ರನ್ ಅಂತರದ ಭರ್ಜರಿ ಜಯ ಗಳಿಸಿದೆ.

ಆ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ 63 ರನ್ ಅಂತರದ ಜಯ ಗಳಿಸಿತ್ತು.

ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ ಐದು ವಿಕೆಟ್ ನಷ್ಟಕ್ಕೆ 602 ರನ್‌‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

ಬಳಿಕ ಪ್ರಭಾತ್ ಜಯಸೂರ್ಯ (42ಕ್ಕೆ6) ಹಾಗೂ ನಿಶಾನ್ ಪೀರಿಸ್‌ (33ಕ್ಕೆ 3) ಸ್ಪಿನ್ ದಾಳಿಗೆ ಕುಸಿದಿದ್ದ ನ್ಯೂಜಿಲೆಂಡ್ ಕೇವಲ 88 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ 514 ರನ್‌ಗಳ ಬೃಹತ್ ಮುನ್ನಡೆ ಗಳಿಸಿತ್ತು.

ಫಾಲೋ ಆನ್‌ಗೆ ಗುರಿಯಾದ ಕಿವೀಸ್ ದಾಂಡಿಗರು ದ್ವಿತೀಯ ಇನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡಿದರೂ ಸೋಲನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಚೊಚ್ಚಲ ಪಂದ್ಯದಲ್ಲೇ ಆರು ವಿಕೆಟ್ ಸಾಧನೆ ಮಾಡಿರುವ ಆಫ್ ಸ್ಪಿನ್ನರ್‌ ನಿಶಾನ್ ಪೀರಿಸ್‌ (170ಕ್ಕೆ6) ದಾಳಿಗೆ ಕುಸಿದ ನ್ಯೂಜಿಲೆಂಡ್ 360 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಪ್ರಭಾತ್ ಜಯಸೂರ್ಯ ಸಹ ಮೂರು ವಿಕೆಟ್ ಗಳಿಸಿ ಮಿಂಚಿದರು.

ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ 78, ಟಾಮ್ ಬ್ಲಂಡೆಲ್ 60, ಮಿಚೆಲ್ ಸ್ಯಾಂಟ್ನರ್ 67, ಡೆವೊನ್ ಕಾನ್ವೆ 61 ಹಾಗೂ ಕೇನ್ ವಿಲಿಯಮ್ಸನ್ 46 ರನ್ ಗಳಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಅಜೇಯ 182 ರನ್ ಗಳಿಸಿದ ಲಂಕಾದ ಕಮಿಂದು ಮೆಂಡಿಸ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ದಿನೇಶ್‌ ಚಾಂದಿಮಾಲ್‌ (116) ಹಾಗೂ ಕುಸಾಲ್ ಮೆಂಡಿಸ್ (106*) ಸಹ ಶತಕಗಳ ಸಾಧನೆ ಮಾಡಿದ್ದರು.

ಈ ಗೆಲುವಿನೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಶ್ರೀಲಂಕಾ ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದೆ.

ಮೂರನೇ ಸ್ಥಾನವನ್ನು ಲಂಕಾ (55.55%) ಕಾಯ್ದುಕೊಂಡಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ಏಳನೇ (37.50%) ಸ್ಥಾನಕ್ಕೆ ಕುಸಿದಿದೆ.

ಡಬ್ಲ್ಯುಟಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ (71.67%) ಹಾಗೂ ಆಸ್ಟ್ರೇಲಿಯಾ (62.50%) ಅಗ್ರ ಎರಡು ಸ್ಥಾನಗಳನ್ನು ಹಂಚಿಕೊಂಡಿದೆ. ಮೊದಲೆರಡು ಸ್ಥಾನಗಳನ್ನು ಪಡೆದ ತಂಡಗಳು ಮುಂದಿನ ವರ್ಷ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT