ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚೆಸ್‌: ಮೋದಿ ಭೇಟಿಗಾಗಿ ಬಾಕು ಟೂರ್ನಿಯಿಂದ ಹಿಂದೆಸರಿದ ವಿದಿತ್‌

ಹಾಲಿ ಚಾಂಪಿಯನ್ ಆಗಿದ್ದ ಭಾರತದ ಆಟಗಾರ
Published : 25 ಸೆಪ್ಟೆಂಬರ್ 2024, 14:00 IST
Last Updated : 25 ಸೆಪ್ಟೆಂಬರ್ 2024, 14:00 IST
ಫಾಲೋ ಮಾಡಿ
Comments

ನವದೆಹಲಿ (ಪಿಟಿಐ): ಚೆಸ್‌ ಒಲಿಂಪಿಯಾಡ್‌ನಲ್ಲಿ ಮೊದಲ ಬಾರಿ ಚಿನ್ನ ಗೆದ್ದ ತಂಡದಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದ್ದ ವಿದಿತ್ ಗುಜರಾತಿ, ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಭೇಟಿಯ ಉದ್ದೇಶದಿಂದ, ಅಜರ್‌ಬೈಜಾನ್‌ನ ಬಾಕುವಿನಲ್ಲಿ ಬುಧವಾರ ಆರಂಭವಾದ 10ನೇ ವುಗರ್‌ ಗಶಿಮೋವ್ ಮೆಮೋರಿಯಲ್ ಚೆಸ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರು ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿದ್ದಾರೆ.

ಗುಜರಾತಿ ಅವರು ಹೋದ ವರ್ಷದ ಈ ಟೂರ್ನಿಯಲ್ಲಿ ಅರ್ಜುನ್ ಇರಿಗೇಶಿ ಅವರನ್ನು ಹಿಂದೆ ಹಾಕಿ ಪ್ರಶಸ್ತಿ ಗೆದ್ದಿದ್ದರು.

ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ ಓಪನ್ ವಿಭಾಗದ ತಂಡದಲ್ಲಿ ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ಅರ್ಜುನ್ ಇರಿಗೇಶಿ ಜೊತೆ ವಿದಿತ್ ಕೂಡ ಆಡಿದ್ದರು.

‘ಟೂರ್ನಿಯಲ್ಲಿ ಆಡಲು ನಾನು ಬಾಕು ತಲುಪಿದ್ದೆ. ಆದರೆ ಭಾರತ ಚೆಸ್‌ ತಂಡವನ್ನು ಗೌರವಾನ್ವಿತ ಪ್ರಧಾನಿಯವರು ಸನ್ಮಾನಿಸಲಿದ್ದಾರೆ ಎಂದು ತಿಳಿಯಿತು. ಅದರ ಭಾಗವಾಗಲು ಬಯಸಿದ್ದೇನೆ. ಅಲ್ಪಾವಧಿಯಲ್ಲೆ ಅವರು ನಮಗಾಗಿ ಸಮಯ ಮಾಡಿಕೊಂಡಿದ್ದು ಖುಷಿ ತಂದಿದೆ’ ಎಂದು 29 ವರ್ಷ ವಯಸ್ಸಿನ ವಿದಿತ್‌ ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ಬುಧವಾರ ಆರಂಭವಾದ ಗಶಿಮೋವ್ ಟೂರ್ನಿ 30ರವರೆಗೆ ನಡೆಯಲಿದ್ದು, ವಿದಿತ್ ಸ್ಥಾನದಲ್ಲಿ ಭಾರತದ ಇನ್ನೊಬ್ಬ ಆಟಗಾರ ಅರವಿಂದ್ ಚಿದಂಬರಂ ಆಡಲಿದ್ದಾರೆ.

‘ನಾನು ಸರ್ಖಾನ್ ಗಶಿಮೋವ್ (ಸಂಘಟಕ) ಅವರನ್ನು ಸಂಪರ್ಕಿಸಿದ್ದೆ. ಅವರು ನನ್ನ ಭಾವನೆ ಅರ್ಥಮಾಡಿಕೊಂಡರು. ಅವರಿಗೆ ತುಂಬು ಧನ್ಯವಾದಗಳು. ಈ ಪ್ರತಿಷ್ಠಿತ ಟೂರ್ನಿಯಲ್ಲಿ ದೇಶದ ಪ್ರಮುಖ ಆಟಗಾರರ ಜೊತೆ ಆಡಲಿರುವ ಅರವಿಂದ್‌ಗೆ ಶುಭ ಹಾರೈಸುತ್ತೇನೆ’ ಎಂದು ಗುಜರಾತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT