ತುಳುನಾಡಿನಲ್ಲಿ ಈಗ ಕಂಬಳದ ಋತು. ಅಲೆ ಬುಡಿಯೆರ್ (ಅಗೋ ಬಿಟ್ಟರು) ಎಂಬ ಘೋಷವಾಕ್ಯ ಜೋರಾಗಿ ಕೇಳಿಬರುತ್ತಿರುವ ಈ ಹೊತ್ತಿನಲ್ಲಿ ಕಂಬಳದ ನೈಜ ‘ಸೆಲೆಬ್ರಿಟಿ’ಗಳ ಲೋಕದಲ್ಲಿ ಒಂದು ಸುತ್ತು...

ಹಸಿರ ಸಿರಿಯ ಮಧ್ಯದಲ್ಲಿ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಗುತ್ತು ಮನೆ (ವಾಡೆ) ಮಾದರಿಯ ಸುಂದರ ಕಟ್ಟಡ. ಶುಭ್ರ ನೀರಿನಿಂದ ಕಂಗೊಳಿಸುವ ದೊಡ್ಡ ಈಜುಗೊಳ. ಪಕ್ಕದಲ್ಲೇ ವಾಕಿಂಗ್ ಟ್ರ್ಯಾಕ್ (ಕರೆ – ಕಂಬಳ ಮಾದರಿ ಟ್ರ್ಯಾಕ್). ಅಲ್ಲಿರುವ ‘ಸೆಲಿಬ್ರಿಟಿ’ಗಳಿಗೆ ಸೇವಕರಿಂದ ಅಚ್ಚುಕಟ್ಟಿನ ಮತ್ತು ಶ್ರದ್ಧೆಯ ಸೇವೆ. ಊಟಕ್ಕೆ ಪೌಷ್ಟಿಕ ಆಹಾರದ ಜೊತೆ ಋತುಮಾನಕ್ಕೆ ತಕ್ಕಂತೆ ಹಣ್ಣು–ಹಂಪಲು ಸಮಾರಾಧನೆ ಬೇರೆ. ಬೆಳಿಗ್ಗೆ–ಸಂಜೆ ‘ವ್ಯಾಯಾಮ’. ಅಷ್ಟೇ ಅಲ್ಲ ಮಾರ್ರೆ, ನಿತ್ಯವೂ ಎಣ್ಣೆಯ ಮಸಾಜ್ ಸಹ ಉಂಟು.

ತುಳುನಾಡಿನಲ್ಲಿ ಈಗ ಕಂಬಳ ಸಂಭ್ರಮ. ಕಂಬಳದ ಕೋಣಗಳೇ ಇಲ್ಲಿಯ ‘ಸೆಲಿಬ್ರಿಟಿ’ಗಳು; ಕೋಣ ಓಡಿಸುವವರಿಗೋ ‘ಜಾಕಿ’ಗಳ ಪಟ್ಟ. ಕಂಬಳಕ್ಕಾಗಿ ಕೋಣ ಸಾಕುವುದು ಮಾಲೀಕರಿಗೆ ಪ್ರತಿಷ್ಠೆಯ ವಿಷಯ; ಶ್ರೀಮಂತಿಕೆಯ ಸಂಕೇತವೂ ಹೌದು. ಆ ಕೋಣಗಳು ಕಂಬಳದಲ್ಲಿ ಪದಕ ಗೆದ್ದುಕೊಟ್ಟಂತೆಲ್ಲ ಅವರ ಕೀರ್ತಿಯ ಕಿರೀಟಕ್ಕೆ ಗರಿಗಳು ಸೇರುತ್ತ ಹೋಗುತ್ತವೆ.

ಕೋಣ ಸಾಕುವ ಮಾಲೀಕರಿಗೆ ಕೆಲಸಗಾರರು ‘ಧಣಿ’ ಎಂದೇ ಕರೆಯುತ್ತಾರೆ. ಕೋಣ ಸಾಕಲು ಜಾತಿ–ಧರ್ಮದ ಸೋಂಕಿಲ್ಲ. ಆದರೂ, ಇವರಲ್ಲಿ ಗುತ್ತು ಮನೆತನದವರೇ ಹೆಚ್ಚು.

ಈ ಕೋಣಗಳ ಮೇಲೆ ಮಾಲೀಕರಿಗೋ ತಮ್ಮ ಮಕ್ಕಳಿಗಿಂತ ಹೆಚ್ಚು ಪ್ರೀತಿ. ಒಂದೊಮ್ಮೆ ಮಕ್ಕಳು–ಮನೆಯವರಿಗೆ ಏನಾದರೂ ಕೊರತೆ ಮಾಡಬಹುದು. ಆದರೆ, ತಾವು ಸಾಕುವ ಕೋಣಗಳಿಗೆ ಯಾವುದೂ ಕಡಿಮೆಯಾಗದಂತೆ ಕಾಳಜಿ ವಹಿಸುತ್ತಾರೆ. ಒಂದು ಜೋಡಿ ಕೋಣಗಳ ನಿರ್ವಹಣೆಗೆ ವರ್ಷಕ್ಕೆ ಅಂದಾಜು ₹15 ಲಕ್ಷದವರೆಗೆ ಖರ್ಚಾಗುತ್ತದೆ ಎನ್ನುವುದು ಕೆಲ ಕೋಣಗಳ ಮಾಲೀಕರು ಹೆಮ್ಮೆಯಿಂದ ಹೇಳುವ ಮಾತು.

ಉತ್ತರ ಕರ್ನಾಟಕ ಭಾಗದ ಮನೆಗಳಲ್ಲಿ ಪೈಲ್ವಾನರನ್ನು ಬೆಳೆಸುವಂತೆ ಕರಾವಳಿ ಭಾಗದಲ್ಲಿ ಕಂಬಳದ ಕೋಣಗಳನ್ನು ಸಲಹುತ್ತಾರೆ. ಉಡುಪಿ, ದಕ್ಷಿಣ ಕನ್ನಡ, ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳದ ಸ್ಪರ್ಧೆಗಾಗಿಯೇ ಕೋಣಗಳನ್ನು ಸಾಕುವ 250ಕ್ಕೂ ಹೆಚ್ಚು ಮನೆತನಗಳು ಇವೆ. ಇನ್ನು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಸರುಗದ್ದೆಯಲ್ಲಿ ಓಡಿಸುವ ಸಾಂಪ್ರದಾಯಿಕ ಕಂಬಳಗಳೂ ನಡೆಯುತ್ತವೆ. ಇಂತಹ ಸಾಂಪ್ರದಾಯಿಕ ಕಂಬಳಗಳಲ್ಲಿ ಪಾಲ್ಗೊಳ್ಳುವ 500ಕ್ಕೂ ಹೆಚ್ಚು ಜೋಡಿ ಕೋಣಗಳು ಈ ಭಾಗದಲ್ಲಿವೆ. ಈ ಜಿಲ್ಲೆಗಳಲ್ಲಿ ಒಟ್ಟಾರೆ 1500ಕ್ಕೂ ಹೆಚ್ಚು ಕೋಣಗಳನ್ನು ಸಾಕಲಾಗುತ್ತದೆ ಎಂಬುದು ಅಂದಾಜು.

ಕೋಣ ಸಾಕುವ ಪ್ರಮುಖ ಮನೆತನಗಳು ತಮ್ಮದೇ ಆದ ಲಾಂಛನ ಹೊಂದಿವೆ. ಉದಾಹರಣೆಗೆ ಉಡುಪಿ ಜಿಲ್ಲೆ ಮಣಿಪಾಲ ಬಳಿಯ ತಮ್ಮ ತೋಟದಲ್ಲಿ ಕೋಣ ಸಾಕಿರುವ ನಂದಳಿಕೆ ಶ್ರೀಕಾಂತ ಭಟ್ ಅವರ ಲಾಂಛನ ‘ಮಹಾಲಿಂಗೇಶ್ವರ ನಂದಳಿಕೆ’ ಎಂದಿದೆ. ಬೆಳ್ಳಿಯಿಂದ ತಯಾರಿಸಿದ ಲಾಂಛನವನ್ನು ಕೋಣಗಳಿಗೆ ಕಟ್ಟುವ ಹಣೆಪಟ್ಟಿಯಲ್ಲಿ ಅಳವಡಿಸಲಾಗಿರುತ್ತದೆ. ಸ್ಪರ್ಧೆಯ ವೇಳೆ ಕೋಣಗಳನ್ನು ಸಿಂಗಾರ ಮಾಡುವಾಗ ಇದನ್ನು ತೊಡಿಸಲಾಗುತ್ತದೆ. ಸ್ಪರ್ಧೆ ವೇಳೆ ಕೋಣಗಳಿಗೆ ಕಟ್ಟುವ ಮರದ ನೊಗಕ್ಕೆ ತಾಮ್ರ ಮತ್ತು ಬೆಳ್ಳಿಯ ಲೇಪನ ಮಾಡಲಾಗಿರುತ್ತದೆ. ಬೆಳ್ಳಿಯ ಹೊದಿಕೆ (ಲೇಪನ) ಇರುವ ಒಂದು ನೊಗದ ಮೌಲ್ಯ ₹50 ಸಾವಿರಕ್ಕೂ ಅಧಿಕ! ರಾಜಗಾಂಭೀರ್ಯದ ದ್ಯೋತಕವಾಗಿ ಸ್ಪರ್ಧೆ ವೇಳೆ ಬೆತ್ತಗಳನ್ನು ಹಿಡಿದುಕೊಳ್ಳಲಾಗುತ್ತದೆ. ಕೋಣಗಳ ಮಾಲೀಕರು ಬೆಳ್ಳಿಯ ಹಿಡಿಕೆಯುಳ್ಳ ಬೆತ್ತ ಹಿಡಿದುಕೊಂಡಿರುತ್ತಾರೆ.

ಇನ್ನು ಕೋಣಗಳನ್ನು ಕಂಬಳ ಸ್ಪರ್ಧೆ ನಡೆಯುವ ಸ್ಥಳಕ್ಕೆ ಕರೆದೊಯ್ಯುವ ನೋಟ ಮದುವೆಯ ದಿಬ್ಬಣ ಹೊರಟಂತೆ ಭಾಸವಾಗುತ್ತದೆ; ಅಷ್ಟೊಂದು ಸಡಗರ ಅಲ್ಲಿ ಮನೆ ಮಾಡಿರುತ್ತದೆ. ಸಂಪ್ರದಾಯಬದ್ಧ ಪೂಜಾವಿಧಿ ವಿಧಾನಗಳೂ ನೆರವೇರುತ್ತವೆ. ಒಂದು ತಂಡದೊಂದಿಗೆ 50ರಿಂದ 200 ವರೆಗೂ ಜನ ಹೊರಡುತ್ತಾರೆ. ಕೋಣಗಳ ಸೇವಕರು ಅಷ್ಟೇ ಅಲ್ಲ, ಆ ಕೋಣಗಳ ಅಭಿಮಾನಿಗಳೂ ಜೊತೆಗಿರುತ್ತಾರೆ. ಕಂಬಳ ಸ್ಪರ್ಧೆ ರಾತ್ರಿ–ಹಗಲು ನಡೆಯುವುದರಿಂದ ಆ ಸ್ಥಳದಲ್ಲಿ ಮಾಲೀಕರು ಪ್ರತ್ಯೇಕವಾಗಿ ಟೆಂಟ್ ಹಾಕಿರುತ್ತಾರೆ. ಇಬ್ಬರು ಅಡುಗೆಯವರು ಟೀ, ಕಾಫಿ, ಉಪಾಹಾರ ಸಿದ್ಧಪಡಿಸುತ್ತಾರೆ, ನಿರಂತರ ದಾಸೋಹ ಸೇವೆ ಇರುತ್ತದೆ. ಪದಕ ಗೆದ್ದರೆ ಅಲ್ಲಿ ‘ಸಂಭ್ರಮಾಚರಣೆ’ಯೂ ಇರುತ್ತದೆ. ಇದಕ್ಕಾಗಿಯೇ ಒಂದು ಕಂಬಳ ಸ್ಪರ್ಧೆಗೆ ₹2 ಲಕ್ಷದ ವರೆಗೆ ಖರ್ಚು ಮಾಡುವ ಮಾಲೀಕರೂ ಇದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವರ್ಷಕ್ಕೆ ಸರಾಸರಿ 20 ಕಂಬಳ ನಡೆಯುತ್ತವೆ. ಕಂಬಳ ಸಂಘಟಿಸುವುದೂ ಪ್ರತಿಷ್ಠೆ ಮತ್ತು ಹೆಮ್ಮೆಯ ಸಂಕೇತ. ಒಂದು ಕಂಬಳ ಸ್ಪರ್ಧೆಗಾಗಿ ಕನಿಷ್ಠ ಎಂದರೂ ₹20 ಲಕ್ಷದವರೆಗೆ ವೆಚ್ಚವಾಗುತ್ತದೆ. ಊರವರು, ಸಮಿತಿಗಳು ಇದನ್ನು ಸಂಘಟಿಸುತ್ತಿದ್ದು, ಇದಕ್ಕೆ ದೇಣಿಗೆ ನೀಡಿ ಪ್ರೋತ್ಸಾಹಿಸುವವರೂ ಸಾಕಷ್ಟು ಜನ ಇದ್ದಾರೆ. ಕಂಬಳ ಸ್ಪರ್ಧೆಯಲ್ಲಿ ಕೋಣಗಳನ್ನು ಓಡಿಸಲು ನೋಂದಣಿ ಮಾಡಿಸಬೇಕು ಎಂದೇನಿಲ್ಲ. ಆಯಾ ವಿಭಾಗಕ್ಕೆ ತಕ್ಕಂತೆ, ಷರತ್ತುಗಳನ್ನು ಪಾಲಿಸಿ ಯಾರು ಬೇಕಾದರೂ ತಮ್ಮ ಕೋಣಗಳನ್ನು ಓಡಿಸಬಹುದು. ಕಂಬಳ ಟ್ರ್ಯಾಕ್ಗಳು ಸಾಮಾನ್ಯವಾಗಿ 120ರಿಂದ 145 ಮೀಟರ್ ಉದ್ದ ಇರುತ್ತವೆ.

ಪಾಂಡು, ತಾಟೆ, ಚೆನ್ನ, ಬೊಲ್ಲ, ಕಾಟಿ, ಮೋಡೆ ಮುಂತಾದ ಹೆಸರಿನ ಖ್ಯಾತನಾಮ ಕೋಣಗಳೂ ಇವೆ. ಅವುಗಳಿಗೆ ದೊಡ್ಡ ಅಭಿಮಾನಿ ಬಳಗವೂ ಇದೆ. ಅವು ಸ್ಪರ್ಧೆಗೆ ಇಳಿದರೆ ನೋಡಲು ಅವರೆಲ್ಲ ಮುಗಿಬೀಳುತ್ತಾರೆ.

‘ಚೆನ್ನ’ ಕೋಣದ ಹೆಸರಲ್ಲಿ ಅಂಚೆ ಇಲಾಖೆಯು ಅಂಚೆಚೀಟಿ ಹೊರ ತಂದಿದ್ದರೆ, ಇರುವೈಲು ತಂಡದ ಕೋಣ ‘ತಾಟೆ’ಯ ಅಭಿಮಾನಿ ಜಯಂತ್ ಅಂಚನ್ ಅವರು ಶಂಭೂರು ಗ್ರಾಮದಲ್ಲಿರುವ ತಮ್ಮ ಹೋಟೆಲ್ಗೆ ‘ಇರುವೈಲ್ ತಾಟೆ’ ಎಂದು ಕೋಣದ ಹೆಸರಿಟ್ಟು ಪ್ರೀತಿ ತೋರಿದ್ದಾರೆ.

ಕಂಬಳದ ಋತುವಿನ ಸಮಯದಲ್ಲಿ ಅಂದರೆ ನವೆಂಬರ್ನಿಂದ ಮಾರ್ಚ್ವರೆಗೆ ಕೋಣಗಳನ್ನು ಸಾಕುವ ಸ್ಥಳಕ್ಕೆ ಮನೆಯವರು ಹಾಗೂ ಕೆಲಸಗಾರನ್ನು ಹೊರತುಪಡಿಸಿದರೆ ಉಳಿದವರಿಗೆ ಪ್ರವೇಶ ಇಲ್ಲ ಎಂಬ ನಿಯಮವನ್ನು ಬಹುತೇಕ ಕೋಣಗಳ ಮಾಲೀಕರು ಪಾಲಿಸಿಕೊಂಡು ಬರುತ್ತಿದ್ದಾರೆ. ದೃಷ್ಟಿ ತಾಗಬಾರದು, ಮಾಟ–ಮಂತ್ರ ಮಾಡಿಸಬಾರದು ಅಥವಾ ಬಂದವರು ಏನಾದರೂ ತಿನ್ನಿಸಿದರೆ ಸ್ಪರ್ಧೆಯ ವೇಳೆ ಅವುಗಳ ಆರೋಗ್ಯ ಹದಗೆಡಬಾರದು ಎಂಬ ವಿಶೇಷ ಕಾಳಜಿಯೇ ಇದಕ್ಕೆ ಕಾರಣವಂತೆ.

ಕೋಣ ಉಂಡರೆ...
‘ಮಳೆ ಬಂದರೆ ಕೇಡಲ್ಲ; ಮಗ ಉಂಡರೆ ಕೇಡಲ್ಲ’ ಎಂಬ ನಾಣ್ಣುಡಿಗೆ ಇಲ್ಲಿ ‘...ಕೋಣ ಉಂಡರೆ ಕೇಡಲ್ಲ’ ಎಂಬುದನ್ನೂ ಸೇರಿಸಬಹುದೇನೋ!

ಕೋಣಗಳ ಆರೈಕೆ; ಆಹಾರದ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುತ್ತದೆ. ಒಣಗಿದ ಹುಲ್ಲು ಹಾಗೂ ಪೌಷ್ಟಿಕಾಂಶ ಹೇರಳವಾಗಿರುವ ಹುರುಳಿ ಧಾನ್ಯ ನಿತ್ಯದ ಆಹಾರದಲ್ಲಿ ಇರಲೇಬೇಕು. ನಸುಕಿನಲ್ಲಿ ಒಣಗಿದ ಭತ್ತದ ಹುಲ್ಲು (ಬೈಹುಲ್ಲು) ನೀಡಲಾಗುತ್ತದೆ. ಬೆಳಿಗ್ಗೆ 8ರಿಂದ 10ರವರೆಗೆ ಹಾಗೂ ಸಂಜೆಯ ಹೊತ್ತಿನಲ್ಲಿ ಅವುಗಳನ್ನು ಕೊಟ್ಟಿಗೆಯಿಂದ ಹೊರಗೆ ಎಳೆಬಿಸಿಲಿಗೆ ಕಟ್ಟಲಾಗುತ್ತದೆ. 10 ಗಂಟೆ ವೇಳೆಗೆ ಹುರುಳಿ (ಮೊಳಕೆ ಬಂದಿದ್ದು ಅಥವಾ ಬೇಯಿಸಿ ರುಬ್ಬಿದ್ದು) ನೀಡಲಾಗುತ್ತದೆ. ಋತುಮಾನಕ್ಕೆ ತಕ್ಕಂತೆ ಕಲ್ಲಂಗಡಿ, ಗಜ್ಜರಿ, ಕುಂಬಳಕಾಯಿ, ವಿವಿಧ ಬಗೆಯ ಹಣ್ಣುಗಳನ್ನು ತಿನ್ನಿಸಲಾಗುತ್ತದೆ. ಭೂರಿ ಭೋಜನ ಸವಿದು ಧಡೂತಿ ದೇಹ ಬೆಳೆಯಬಾರದು ಎಂಬ ಕಾರಣಕ್ಕೆ ದೈಹಿಕ ಕಸರತ್ತು ಮಾಡಿಸಲಾಗುತ್ತದೆ. ಚರ್ಮದ ಕಾಂತಿ ಹೆಚ್ಚಿಸಲು ನಿತ್ಯವೂ ಪೊನ್ನೆ (ಹೊನ್ನೆ)ಎಣ್ಣೆಗೆ ತೆಂಗಿನ ಎಣ್ಣೆ ಬೆರೆಸಿ ಮಸಾಜ್ ಮಾಡಲಾಗುತ್ತದೆ. ಪಶುವೈದ್ಯರಿಂದ ಆರೋಗ್ಯ ತಪಾಸಣೆ, ಮೇಲ್ವಿಚಾರಣೆಯೂ ನಿಯಮಿತವಾಗಿ ನಡೆಯುತ್ತದೆ. ಕೊಟ್ಟಿಗೆಯಲ್ಲಿ ಫ್ಯಾನ್, ಕೂಲರ್ ಅಳವಡಿಸಲಾಗುತ್ತದೆ.

ಕಂಬಳಕ್ಕೆ ಸರಿ ಹೊಂದುತ್ತದೆಯೇ ಎಂದು ಎಲ್ಲ ಆಯಾಮಗಳಲ್ಲಿಯೂ ಪರಿಶೀಲನೆ ನಡೆಸಿಯೇ ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದಿಂದ ಹೆಚ್ಚಿನವರು ಕರುಗಳನ್ನು ಖರೀದಿಸುತ್ತಾರೆ. ಪ್ರಕೃತಿ ಸಹಜ ಪ್ರಕ್ರಿಯೆಯಲ್ಲಿ ಹುಟ್ಟಿದ (ಕೃತಕ ಗರ್ಭಧಾರಣೆಯಿಂದ ಜನಿಸಿದ ಕರು ಖರೀದಿಸುವುದಿಲ್ಲ) ಕರುವನ್ನು ಅದರ ಮೈಬಣ್ಣ, ಮೈಕಟ್ಟು, ಚುರುಕುತನ, ಕಾಲು ಮತ್ತು ತಲೆಯ ಗಾತ್ರ, ಚೂಪಾದ ಬಾಲ... ಇಂತಹ ಅಂಶಗಳನ್ನು ನೋಡಿ ಖರೀದಿಸುತ್ತಾರೆ. ಕೆಲ ಮಾಲೀಕರು ಕಂಬಳದ ಸ್ಪರ್ಧೆಗೆ ಬರುವ ‘ಕಿರಿಯ ವಿಭಾಗದ’ ಕೋಣಗಳನ್ನು ಓಡುವ ಶೈಲಿ, ಮೈಕಟ್ಟು ನೋಡಿ ₹10 ಲಕ್ಷದಿಂದ ₹15 ಲಕ್ಷ ಕೊಟ್ಟು ಖರೀದಿಸುತ್ತಾರೆ. ಇಂತಹ ಕೋಣಗಳು 20 ವರ್ಷದವರೆಗೂ ಓಡುತ್ತವೆ.

‘ಕೊಂಬು, ಮೈಕಟ್ಟು ನೋಡಿ, ರಾಕೆಟ್ ಮೋಡ, ನಂದಳಿಕೆ ಕುಟ್ಟಿ, ನಂದಳಿಕೆ ಕಂಜಿ, ಪಾಂಡು ಹೀಗೆ ವಿಭಿನ್ನ ಹೆಸರುಗಳನ್ನು ನಾಮಕರಣ ಮಾಡಿದ್ದೇವೆ. ಇತರರೂ ಹೀಗೇ ಅನುಸರಿಸುತ್ತಾರೆ’ ಎನ್ನುತ್ತಾರೆ ಮಣಿಪಾಲದಲ್ಲಿಯ ಕೋಣ ಸಾಕಾಣಿಕೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ನಿತಿನ್.

ಕಂಬಳಕ್ಕಾಗಿಯೇ ಸಾಕುವುದರಿಂದ ಅವುಗಳನ್ನು ಸ್ಪರ್ಧೆಗೆ ಅಣಿಗೊಳಿಸುವ ಕೆಲಸ ವರ್ಷಪೂರ್ತಿ ನಡೆದೇ ಇರುತ್ತದೆ. ಮಾಲೀಕರು ಇದಕ್ಕಾಗಿಯೇ ತಮ್ಮ ಗದ್ದೆಯಲ್ಲಿ ಕೆಸರಿನ ಟ್ರ್ಯಾಕ್ (ಕರೆ) ನಿರ್ಮಿಸಿಕೊಂಡಿರುತ್ತಾರೆ. ಅವುಗಳನ್ನು ನಿತ್ಯವೂ ಅಲ್ಲಿ ಓಡಿಸಿ ತರಬೇತಿ ನೀಡುತ್ತಾರೆ. ಇನ್ನು ಕೆಲ ಮಾಲೀಕರು ತಮ್ಮ ಜಮೀನಿನಲ್ಲಿಯೇ ದೊಡ್ಡ ದೊಡ್ಡ ಈಜುಗೊಳ ನಿರ್ಮಿಸುತ್ತಾರೆ. ಅಲ್ಲಿ ಕೆಲಗಂಟೆ ಈಜಾಡಲು ಬಿಡುತ್ತಾರೆ. ಇದರಿಂದ ಅವುಗಳಿಗೆ ದೈಹಿಕ ಕಸರತ್ತು ಮಾಡಿಸಲಾಗುತ್ತದೆ. ಹಲ್ಲುಗಳ ಆಧಾರದ ಮೇಲೆ ಕಿರಿಯ–ಹಿರಿಯ ವಿಭಾಗದ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ.

ಹಗ್ಗ ಕಿರಿಯ– ಹಗ್ಗ ಹಿರಿಯ, ನೇಗಿಲು ಕಿರಿಯ–ನೇಗಿಲು ಹಿರಿಯ, ಅಡ್ಡ ಹಲಗೆ, ಕನೆ ಹಲಗೆ.. ಹೀಗೆ 6 ವಿಭಾಗಳ ಸ್ಪರ್ಧೆಗಳು ಕಂಬಳದಲ್ಲಿ ಇರುತ್ತವೆ. ಮರದ ಸಣ್ಣ ನೇಗಿಲನ್ನು ಕೋಣದ ನೊಗಕ್ಕೆ ಕಟ್ಟಿ ಓಡುವುದು ನೇಗಿಲು ಸ್ಪರ್ಧೆಯಾದರೆ, ಎರಡೂ ಕೋಣಗಳ ಕೊಂಬಿಗೆ ಸ್ಟೀಲ್ ರಾಡ್ ಕಟ್ಟಿ ಒಂದೇ ವೇಗದಲ್ಲಿ ಕೋಣ ಓಡಿಸುವುದು ಹಗ್ಗ ಸ್ಪರ್ಧೆಯ ಬಗೆ. ಹಲಗೆ ಕಟ್ಟಿ ನೀರು ಎತ್ತರಕ್ಕೆ ಚಿಮ್ಮಿಸುವುದು ಕನೆಹಲಗೆ ಸ್ಪರ್ಧೆಯ ಬಗೆ. ಹಾಯಿಸಿದ ನೀರು ಕಾಣಲೆಂದೇ 6.5 ಕೋಲು (ಮೀ) ಮತ್ತು 7.5 ಕೋಲು ಎತ್ತರದಲ್ಲಿ ಬಳಿ ಬಟ್ಟೆಯನ್ನು ಕಟ್ಟಲಾಗುತ್ತದೆ. ಅಡ್ಡ ಹಲಗೆ ವಿಭಾಗದಲ್ಲಿ ಹಲಗೆ ಕಟ್ಟಿ ವೇಗದ ಓಟದ ಸ್ಪರ್ಧೆ ನಡೆಸಲಾಗುತ್ತದೆ.

ಇದು ಕೋಣದ ಮೆನು
ಕಂಬಳದ ಋತುವಿನಲ್ಲಿ ನವೆಂಬರ್ನಿಂದ ಮಾರ್ಚ್ವರೆಗೆ: ನಿತ್ಯ ಒಣಹುಲ್ಲು. ಒಂದು ಕೋಣಕ್ಕೆ ನಿತ್ಯ ಸರಾಸರಿ 5 ಕೆ.ಜಿ. ಹುರುಳಿ ಕಾಳು. ಹಣ್ಣು, ತರಕಾರಿ.

ಮಾರ್ಚ್ ತಿಂಗಳಲ್ಲಿ ಒಣಹುಲ್ಲು, ಹುರುಳಿ ಜೊತೆಗೆ ದೇಹ ತಂಪಾಗಿಸಲು ಕುಂಬಳಕಾಯಿ, ಬಿಟ್ರೂಟ್, ಗಜ್ಜರಿ.

ಮಳೆಗಾಲದಲ್ಲಿ: ಹಸಿ ಹುಲ್ಲು (ಎಷ್ಟು ಬೇಕೋ ಅಷ್ಟು ತಿನ್ನಬಹುದು). ಹುರುಳಿಯನ್ನು ರುಬ್ಬಿ ಹಿಟ್ಟಿನ ರೂಪದಲ್ಲಿ ಕೊಡಲಾಗುತ್ತದೆ. ಮೊಳಕೆ ಕಾಳುಗಳನ್ನು ಕೊಡಲಾಗುತ್ತದೆ.

ಬೇಸಿಗೆಯಲ್ಲಿ ದೇಹ ತಂಪಾಗಿಸಲು ಹುರುಳಿ ಹಿಟ್ಟಿನಲ್ಲಿ 180 ಮಿಲಿ ಲೀಟರ್ ಒಳ್ಳೆಣ್ಣೆ ಮಿಶ್ರಣ ಮಾಡಿ ವಾರದಲ್ಲಿ ಎರಡು ಬಾರಿ ಕೊಡಲಾಗುತ್ತದೆ.

ವರ್ಷವಿಡೀ ನೈಸರ್ಗಿಕ ಆಹಾರ ಮಾತ್ರ ಕೊಡಲಾಗುತ್ತಿದ್ದು, ಯಾವುದೇ ಬಗೆಯ ಸಿದ್ಧ ಪಶು ಆಹಾರ ನೀಡುವುದಿಲ್ಲ. ಪ್ರೋಟಿನ್ ಹೆಸರಲ್ಲಿ ಯಾವುದೇ ಪೇಯವನ್ನು ಕುಡಿಸುವುದಿಲ್ಲ.

ಕೋಣಗಳ ಫಿಟ್ನೆಸ್ ಮಂತ್ರ
ಎಳೆಬಿಸಿಲು ಕಾಯಿಸುವುದು, ಈಜು, ಎಣ್ಣೆಯಲ್ಲಿ ಮಸಾಜ್ ಇವು ನಿತ್ಯ ಇರಲೇಬೇಕು. ಕಂಬಳ ಋತು ಮೂರು ತಿಂಗಳು ಇರುವಂತೆ ಫಿಟ್ನೆಸ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಈ ಅವಧಿಯಲ್ಲಿ ಬಿಸಿನೀರ ಸ್ನಾನ ಹೆಚ್ಚುವರಿ ಸೇರ್ಪಡೆ. ಆಗಸ್ಟ್ನಿಂದ ಅಕ್ಟೋಬರ್ವರೆಗೆ ನಿತ್ಯ ಎರಡು ಗಂಟೆ ನೇಗಿಲಿನ ಮೂಲಕ ಭೂಮಿ ಉಳುಮೆ ಮಾಡಿಸಲಾಗುತ್ತದೆ. ಕಂಬಳದ ವೇಳೆ ವಾರಕ್ಕೆ ಮೂರು ದಿನ ಹೀಗೆ ನೇಗಿಲಿನಿಂದ ಉಳುಮೆ ಕಡ್ಡಾಯ. ಗದ್ದೆಯಲ್ಲಿ ಉಳುಮೆಯ ಕೆಲಸ ಮುಗಿದ ನಂತರ ಸ್ನಾನ ಮಾಡಿಸಿ, ಕೊಟ್ಟಿಗೆಯಲ್ಲಿ ಕಟ್ಟಲಾಗುತ್ತದೆ. ಕಂಬಳ ಸ್ಪರ್ಧೆ ಹತ್ತಿರವಾಗುತ್ತಿದ್ದಂತೆ ಕುದಿ ಕಂಬಳದಲ್ಲಿ ಓಡಿಸಿ, ಸ್ಪರ್ಧೆಗೆ ಅಣಿಗೊಳಿಸಲಾಗುತ್ತದೆ. ಎರಡು ಮೂರು ವಾರ ಕುದಿ ಕಂಬಳದಲ್ಲಿ ಜೋಡಿಯಲ್ಲಿಯ ಕೋಣಗಳನ್ನು ಅದಲು ಬದಲು ಮಾಡಿ ಓಟದ ವೇಗ, ಒಟ್ಟಾಗಿ ಸಾಗುವ ರೀತಿ ಮತ್ತಿತರ ಅಂಶ ಗಮನಿಸುತ್ತೇವೆ ಎನ್ನುತ್ತಾರೆ ಕೋಣ ಸಾಕಾಣಿಕೆಯ ಕೆಲಸ ಮಾಡುವ ಸಾಯಿರಾಮ ರೈ.

ನಿತ್ಯ ಬೆಳಿಗ್ಗೆ ಸುಮಾರು 6ರಿಂದ ಆರಂಭವಾಗುವ ಕೋಣಗಳ ದಿನಚರಿ ಬಹುತೇಕ ಸಂಜೆ 6ರ ಹೊತ್ತಿಗೆ ಮುಗಿಯುತ್ತದೆ.

ಓಟಗಾರರಿಗೆ ಬಲು ಬೇಡಿಕೆ
ಕಂಬಳ ಸ್ಪರ್ಧೆಯಲ್ಲಿ ಕೋಣಗಳಷ್ಟೇ ಮಹತ್ವ ಅವುಗಳನ್ನು ಓಡಿಸುವವರಿಗೆ. ಈಗ ಅವರಿಗೆ ‘ಜಾಕಿ’ ಎಂದು ಪ್ರೀತಿಯಿಂದ ಕರೆಯಲಾಗುತ್ತಿದೆ. ಕಂಬಳದ ಕೋಣಗಳ ಮಾಲೀಕರು ಅವರನ್ನು ಗುರುತಿಸಿ, ಒಂದು ಋತುವಿನ ಕಂಬಳಕ್ಕೆ ಇಂತಿಷ್ಟು ಎಂದು ಸಂಭಾವನೆ ನಿಗದಿ ಮಾಡುತ್ತಾರೆ. ಶ್ರೀನಿವಾಸ ಗೌಡ, ನಿಶಾಂತ್ ಶೆಟ್ಟಿ, ಗುರುಚರಣ ಪಟ್ಟೆ, ವಂದಿತ್ ಶೆಟ್ಟಿ ಅವರಂತಹ ಖ್ಯಾತನಾಮ ಓಟಗಾರರಿಗೆ ಸಂಭಾವನೆ ಹೆಚ್ಚು. ಸಾಮಾನ್ಯವಾಗಿ ₹3 ಲಕ್ಷದಿಂದ ಆರಂಭವಾಗುವ ಈ ಸಂಭಾವನೆ ₹10 ಲಕ್ಷದ ವರೆಗೂ ಇರುತ್ತದೆಯಂತೆ. ಆದರೆ, ಯಾರೂ ಇದನ್ನು ಅಧಿಕೃತವಾಗಿ ಹೇಳುವುದಿಲ್ಲ. ಇನ್ನು ಸ್ಪರ್ಧೆಗಳಲ್ಲಿ ಪದಕ ಗೆದ್ದುಕೊಟ್ಟರೆ ಪ್ರತಿ ಸ್ಪರ್ಧೆಗೆ ₹10 ಸಾವಿರದಿಂದ ₹15 ಸಾವಿರ ಬಹುಮಾನವನ್ನೂ ಮಾಲೀಕರು ಕೊಡುತ್ತಾರೆ.

ಕಂಬಳ ಸ್ಪರ್ಧೆ ಹಾಗೂ ಕೋಣಗಳ ಲಾಲನೆ, ಪಾಲನೆ ಹಾಗೂ ಉಪಕರಣಗಳ ತಯಾರಿಗಾಗಿ ಪ್ರೊ.ಗುಣಪಾಲ ಕಡಂಬ ಹಾಗೂ ಇತರೆ 10 ಜನ ಸಮಾನ ಮನಸ್ಕರು ಸೇರಿ ‘ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ’ಯನ್ನು 2011ರಲ್ಲಿ ಆರಂಭಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಉಡುಪಿಯ ಮೀಯಾರಿನಲ್ಲಿ ತರಬೇತಿ ನೀಡಲಾಗುತ್ತದೆ.

‘ಕಂಬಳ ಓಟಗಾರರಿಗೆ ಇಲ್ಲಿ ವೈಜ್ಞಾನಿಕ ತರಬೇತಿ ನೀಡುತ್ತೇವೆ. 18ರಿಂದ 23 ವಯೋಮಾನದ, ದೈಹಿಕ–ಮಾನಸಿಕ ಸಾಮರ್ಥ್ಯ ಹೊಂದಿರುವ ಅರ್ಹರನ್ನು ಆಯ್ಕೆ ಮಾಡುತ್ತೇವೆ. ಆರಂಭದಲ್ಲಿ ಬಂದವರಿಗೆಲ್ಲರಿಗೂ ತರಬೇತಿ ನೀಡಿದೆವು. ಅವರಲ್ಲಿ ಅರ್ಧದಷ್ಟು ಜನ ದುಡಿಯಲು ವಿದೇಶಗಳಿಗೆ ಹೋಗಿದ್ದಾರೆ. ಆದಾದ ನಂತರ ನಾವು ಆಯ್ಕೆ ಪ್ರಕ್ರಿಯೆಯನ್ನು ಬಿಗಿಗೊಳಿಸಿದ್ದು, ಒಂದು ತಂಡದಲ್ಲಿ 25 ಜನರಿಗೆ ಮಾತ್ರ ಅವಕಾಶ ಕಲ್ಪಿಸುತ್ತಿದ್ದೇವೆ. ವೈದ್ಯಕೀಯ ಸೇರಿ 16 ತರಹದ ಪರೀಕ್ಷೆಗಳನ್ನು ನಡೆಸುತ್ತೇವೆ. ಎರಡು ವಾರದ ವಸತಿಯುತ ತರಬೇತಿ ಸಂಪೂರ್ಣ ಉಚಿತವಾಗಿದ್ದು, ಎರಡು ಜೊತೆ ಬಟ್ಟೆಗಳನ್ನೂ ಉಚಿತವಾಗಿ ಕೊಡುತ್ತೇವೆ. ಕೆಲ ಕಂಬಳ ಮಾಲೀಕರು, ಕಂಬಳ ಪ್ರೇಮಿಗಳು ದೇಣಿಗೆ ನೀಡಿದರೆ, ಉಳಿದ ವೆಚ್ಚವನ್ನು ನಮ್ಮ ಅಕಾಡೆಮಿಯಲ್ಲಿರುವವರೇ ಭರಿಸುತ್ತೇವೆ‘ ಎಂಬುದು ಪ್ರೊ. ಕಡಂಬ ಅವರ ವಿವರಣೆ.

‘ಎರಡು ವಾರಗಳಲ್ಲಿ ಇವರಿಗೆ ಪರಿಪೂರ್ಣ ತರಬೇತಿ ನೀಡುತ್ತೇವೆ. ಮುಖ್ಯವಾಗಿ ಯೋಗ, ಪೌಷ್ಟಿಕ ಆಹಾರ ಸೇವನೆ, ದೈಹಿಕ ಕ್ಷಮತೆ ಕಾಪಾಡಿಕೊಳ್ಳುವ ಬಗೆಯನ್ನು ಪ್ರಾಯೋಗಿಕವಾಗಿ ಹೇಳಿಕೊಡುತ್ತೇವೆ. ಈವರೆಗೆ ನಾವು 150 ಜನರಿಗೆ ತರಬೇತಿ ನೀಡಿದ್ದು, ಅವರಲ್ಲಿ ಅಂದಾಜು 90 ಜನರು ಕಂಬಳ ಕೋಣ ಓಡಿಸುವ ಕಾಯಕದಲ್ಲಿ ತೊಡಗಿದ್ದಾರೆ’ ಎನ್ನುತ್ತಾರೆ ಅವರು.

ಕೋಣ ಓಡಿಸುವವರಲ್ಲಿ ಕಾರ್ಮಿಕರೇ ಹೆಚ್ಚು. ಕೆಸರಿನಲ್ಲಿ ಕೆಲಸ ಮಾಡಿ ಅನುಭವ ಇರುವ, ದೈಹಿಕ ಕ್ಷಮತೆ ಕಾಯ್ದುಕೊಳ್ಳುವ, ಓಟದಲ್ಲಿ ಚುರುಕಾಗಿರುವವರು ಹೆಚ್ಚು ಸಾಧನೆ ಮಾಡುತ್ತಾರೆ. ಕೆಲಸ ಜೊತೆಗೆ ಇವರು ಸಾಮಾನ್ಯವಾಗಿ ನಿತ್ಯವೂ ಪೌಷ್ಟಿಕ ಆಹಾರ ಸೇವನೆ, ದೈಹಿಕ ಕಸರತ್ತು ಮಾಡುವುದು, ಅಡಿಕೆ ಮರ–ತೆಂಗಿನ ಮರ ಹತ್ತಿ ಇಳಿಯುವ ಮತ್ತಿತರ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ.

ಕಂಬಳ ಋತು ಆರಂಭವಾಗುವ ಮುನ್ನವೇ ಮಾಲೀಕರು ಇಂತಹ ಕೋಣಗಳ ಓಟಗಾರರನ್ನು ಸಂಪರ್ಕಿಸಿ, ಅವರೊಟ್ಟಿಗೆ ಒಂದು ವರ್ಷದ ಒಪ್ಪಂದ ಮಾಡಿಕೊಂಡಿರುತ್ತಾರೆ. ಮುಂದಿನ ವರ್ಷ ಅದು ಮುಂದುವರೆಯಬಹುದು ಇಲ್ಲವೇ ಅವರು ಬೇರೆ ಮಾಲೀಕರ ಜೊತೆಗೆ ಹೋಗಬಹುದು. ಇವರಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಒಪ್ಪಂದದ ನಂತರ ಇವರು ಆಗಾಗ ತಮ್ಮ ಮಾಲೀಕರ ಕೋಣಗಳ ಬಳಿಗೆ ಬಂದು ಹೋಗುತ್ತಿರುತ್ತಾರೆ. ಅವುಗಳೊಂದಿಗೆ ತಾಲೀಮು ನಡೆಸುತ್ತಾರೆ.

ವೇಗದ ಓಟದಲ್ಲಿ ವಿಶ್ವಚಾಂಪಿಯನ್ ಆಗಿರುವ ಉಸೇನ್ ಬೋಲ್ಟ್ ಅವರಿಗಿಂತ ವೇಗವಾಗಿ ಓಡಿ ಕೀರ್ತಿ ಗಿಟ್ಟಿಸಿರುವ ಕಂಬಳ ಓಟಗಾರ ಶ್ರೀನಿವಾಸ್ ಗೌಡ ಅವರು ಆಭರಣ ಜ್ಯುವೆಲರ್ಸ್ನ ರೂಪದರ್ಶಿಯೂ ಆಗಿದ್ದಾರೆ. ಕೋಣ ಓಡಿಸುವವರಿಗೆ ಈಗ ಕೀರ್ತಿ, ಹಣ ಎರಡೂ ಹರಿದು ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.