ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಬುಲ್ಸ್‌ಗೆ ಪ್ರದೀಪ್‌ ನರ್ವಾಲ್ ವಾಪಸ್‌; ತಂಡಕ್ಕೆ ಆನೆಬಲ; ಕೋಚ್ ರಣಧೀರ್

18ರಿಂದ ಪ್ರೊ ಕಬಡ್ಡಿ
Published : 7 ಅಕ್ಟೋಬರ್ 2024, 23:30 IST
Last Updated : 7 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಹೊಸ ನಾಯಕತ್ವ, ಹೊಸ ತಂತ್ರಗಾರಿಕೆ ಮತ್ತು ಹೊಸ ಹುಮ್ಮಸ್ಸಿನೊಂದಿಗೆ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಗೆ ಸಜ್ಜಾಗಿದೆ. ಅನುಭವಿಗಳು ಮತ್ತು ನವಪ್ರತಿಭೆಗಳನ್ನು ಒಳಗೊಂಡ ತಂಡವು ಈ ಬಾರಿ ಮೋಡಿ ಮಾಡಲಿದೆ...’ ಇದು ತಂಡದ ಕೋಚ್‌ ರಣಧೀರ್ ಸಿಂಗ್ ಅವರ ವಿಶ್ವಾಸದ ನುಡಿ.

ಪ್ರೊ ಕಬಡ್ಡಿ ಟೂರ್ನಿಗೆ ಇದೇ 18ರಂದು ಚಾಲನೆ ದೊರೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಬುಲ್ಸ್‌ ಮತ್ತು ತೆಲುಗು ಟೈಟನ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿ ಬೆಂಗಳೂರು ತಂಡವನ್ನು ಅನುಭವಿ ಪ್ರದೀಪ್‌ ನರ್ವಾಲ್‌ ಮುನ್ನಡೆಸಲಿದ್ದಾರೆ. ಎರಡನೇ ಆವೃತ್ತಿಯಲ್ಲಿ ಬುಲ್ಸ್‌ ತಂಡದ ಮೂಲಕ ಪ್ರೊ ಕಬಡ್ಡಿಗೆ ಪದಾರ್ಪಣೆ ಮಾಡಿದ್ದ 27 ವರ್ಷ ವಯಸ್ಸಿನ ನರ್ವಾಲ್‌, ಪಟ್ನಾ ಪೈರೇಟ್‌ ತಂಡದಿಂದ ಮತ್ತೆ ವಾಪಸಾಗಿದ್ದಾರೆ. ಅವರ ನಾಯಕತ್ವದಲ್ಲಿ ಆರು ವರ್ಷಗಳ ಬಳಿಕ ತಂಡವು ಮತ್ತೆ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಈ ಮಧ್ಯೆ ತಂಡದ ಯೋಜನೆ ಮತ್ತು ಕಾರ್ಯತಂತ್ರದ ಕುರಿತು ರಣಧೀರ್‌ ‘ಪ್ರಜಾವಾಣಿ’ ಜೊತೆ ಮಾತನಾಡಿದರು.

‘ಕಳೆದ ಆವೃತ್ತಿಯಲ್ಲಿ ಬೆಂಗಳೂರು ತಂಡವು ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆ ಫಲಿತಾಂಶದಿಂದ ನಾವು ಹತಾಶರಾಗಿಲ್ಲ. ಪಂದ್ಯಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲಿನಿಂದಲೂ ಕಲಿಯುವುದು ಸಾಕಷ್ಟಿದೆ. ಕಳೆದ ಬಾರಿ ನಾವು ಎಲ್ಲಿ ಎಡವಿದ್ದೇವೆ, ನಮ್ಮ ನ್ಯೂನತೆಗಳೇನು ಎಂಬುದನ್ನು ಅರಿತುಕೊಂಡು, ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಈ ಬಾರಿಯ ಆವೃತ್ತಿಯಲ್ಲಿ ಅದರ ಪ್ರತಿಫಲ ಕಾಣಬಹುದು’ ಎಂದರು.

10 ಆವೃತ್ತಿಗಳಲ್ಲಿ ಬುಲ್ಸ್‌ ತಂಡವು ಆರು ಬಾರಿ ಪ್ಲೇ ಆಫ್‌ ಹಂತ ತಲುಪಿದೆ. 2018ರಲ್ಲಿ ಚಾಂಪಿಯನ್‌ ಆಗಿದೆ. ಇದು ಸಾಮಾನ್ಯ ಸಾಧನೆಯಲ್ಲ. ಟೂರ್ನಿಯಲ್ಲಿರುವ 12 ತಂಡಗಳೂ ಒಂದಕ್ಕಿಂತ ಒಂದು ಬಲಿಷ್ಠವಾಗಿದೆ. ಪ್ರತಿ ತಂಡವೂ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದೆ. ಬದಲಾವಣೆಗೆ ತಕ್ಕಂತೆ ತಂಡವನ್ನು ಸಿದ್ಧಗೊಳಿಸುವುದು ಇಂದಿನ ಸವಾಲು. ಈ ನಿಟ್ಟಿನಲ್ಲಿ ಬುಲ್ಸ್‌ ತಂಡವನ್ನು ಎಲ್ಲಾ ವಿಭಾಗಗಳನ್ನೂ ಬಲಿಷ್ಠಗೊಳಿಸಲಾಗಿದೆ’ ಎಂದು ಹೇಳಿದರು.

ರೈಡರ್‌ ನರ್ವಾಲ್‌ ನಾನೇ ಗುರುತಿಸಿದ್ದ ಪ್ರತಿಭೆ. 17 ವರ್ಷ ಪ್ರಾಯದಲ್ಲಿ ಅವರನ್ನು ಬೆಂಗಳೂರು ಬುಲ್ಸ್‌ ಮೂಲಕ ಪರಿಚಯಿಸಿದ್ದೆ. ಬಳಿಕ ಅವರು ಪಟ್ನಾ ತಂಡದ ಮೂಲಕ ಹೊಸ ಅಲೆಯನ್ನು ಸೃಷ್ಟಿಸಿದರು. 170 ಪಂದ್ಯಗಳಲ್ಲಿ 1690 ಪಾಯಿಂಟ್ಸ್‌ ಗಳಿಸಿರುವ ಅವರು, ಪ್ರೊ ಕಬಡ್ಡಿ ಇತಿಹಾಸದಲ್ಲೇ 1500 ಪಾಯಿಂಟ್ಸ್‌ ಗಳಿಸಿದ ಏಕೈಕ ಆಟಗಾರನಾಗಿದ್ದಾರೆ. ಅವರು ವಾಪಸಾಗಿರುವುದು ನಮಗೆ ಆನೆ ಬಲ ಬಂದಂತಾಗಿದೆ. ಅವರ ಅನುಭವ, ತಂತ್ರಗಾರಿಕೆ ಮತ್ತು ಸಾಮರ್ಥ್ಯವನ್ನು ತಂಡವು ಸಮರ್ಥವಾಗಿ ಬಳಸಿಕೊಳ್ಳಲಿದೆ. ಅವರ ನಾಯಕತ್ವದಲ್ಲಿ ತಂಡ ಹೊಸ ಇತಿಹಾಸ ನಿರ್ಮಿಸುವ ಭರವಸೆಯಿದೆ ಎಂದು ಅಭಿಪ್ರಾಯಪಟ್ಟರು.

ಉದ್ಘಾಟನಾ ಪಂದ್ಯದಲ್ಲಿ ನನ್ನ ಇಬ್ಬರು ಶಿಷ್ಯಂದಿರಾದ ಪ್ರದೀಪ್‌ ಮತ್ತು ಪವನ್‌ ಸೆಹ್ರಾವತ್‌ (ಟೈಟನ್ಸ್‌) ಮುಖಾಮುಖಿಯಾಗುತ್ತಿದ್ದಾರೆ. ಈ ಪಂದ್ಯದ ಬಗ್ಗೆ ಎಲ್ಲರಿಗಿಂತ ಹೆಚ್ಚಿನ ಕುತೂಹಲ ನನಗಿದೆ. ಇಬ್ಬರೂ ಕೂಡಾ ಅದ್ಭುತ ರೈಡರ್‌ಗಳು. ಪಂದ್ಯದ ಚಿತ್ರಣವನ್ನೇ ಬದಲಾಯಿಸುವ ತಾಕತ್ತು ಅವರಿಗಿದೆ. ಕಳೆದ ಕೆಲ ಆವೃತ್ತಿಗಳಲ್ಲಿ ಪ್ರದೀಪ್‌ ಅವರಿಂದ ನಿರೀಕ್ಷಿತ ಆಟ ಹೊರಬಂದಿಲ್ಲ. ಆದರೆ, ಈ ಬಾರಿ ಮತ್ತೆ ಲಯ ಕಂಡುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT