ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಯಲು ಇರುವ ಏಕೈಕ ಆಸರೆ ಎಂದರೆ ಅವರ ತರಗತಿಯ ಕೋಣೆ ಮಾತ್ರ. ಹೆಚ್ಚಿನ ವಿದ್ಯಾರ್ಥಿಗಳ ಪೋಷಕರು ಕೃಷಿ ಕಾರ್ಮಿಕರು, ಕೂಲಿಕಾರರು ಆಗಿರುವಂತಹ ಆರ್ಥಿಕ, ಸಾಮಾಜಿಕ ಹಿನ್ನೆಲೆ ಅವರದು.

ಓದುವಾಗ, ಬಿಡುವಿನ ವೇಳೆಯಲ್ಲಿ ಅಥವಾ ರಜೆಯಲ್ಲಿ ಸ್ವತಃ ದುಡಿಮೆಗೆ ಇಳಿಯುವುದರಿಂದ, ಕೃಷಿ ಕೆಲಸದ ಸಮಯದಲ್ಲಿ ತರಗತಿಗಳಿಗೆ ಗೈರುಹಾಜರಾಗಲೇ ಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಹಲವರದು.

ಇಂತಹ ವಿದ್ಯಾರ್ಥಿಗಳು ತಮ್ಮ ಪದವಿ ಪೂರ್ವ ವಿದ್ಯಾಭ್ಯಾಸದ ಹಂತದಲ್ಲಿ ಉಳಿದ ವಿಷಯಗಳಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಗಳಿಕೆಯ ಗುರಿ ಇಟ್ಟುಕೊಂಡರೂ ಇಂಗ್ಲಿಷ್ನಲ್ಲಿ ಮಾತ್ರ 35ರ ಮಿತಿಯನ್ನು ತಾವೇ ನಿರ್ಧರಿಸಿಕೊಂಡಿರುತ್ತಾರೆ. ಪ್ರಾಥಮಿಕ ಹಂತದಿಂದಲೂ ಇಂಗ್ಲಿಷ್ ಕಲಿಕೆಗೆ ಅವರಿಗೆ ಸರಿಯಾದ ಬುನಾದಿ ಸಿಕ್ಕಿರುವುದಿಲ್ಲ.

ಇಂಗ್ಲಿಷ್ ಅವರಿಗೆ ಕೇವಲ ಒಂದು ಪರೀಕ್ಷಾ ವಿಷಯ ಮಾತ್ರ. ಪೋಷಕರು ಕೂಡ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಕೆಯನ್ನು ಮಾತ್ರ ಬಯಸುತ್ತಾರೆ ವಿನಃ, ಇಂಗ್ಲಿಷ್ನಲ್ಲಿ ಸಂವಹನ ಸಾಮರ್ಥ್ಯ ಮೈಗೂಡಲಿ ಎಂದು ನಿರೀಕ್ಷಿಸುವುದಿಲ್ಲ. ಪಿ.ಯು.ಸಿ.ವರೆಗೆ ಸಾಮಾನ್ಯ ಎಂಟು ವರ್ಷ ಈ ವಿದ್ಯಾರ್ಥಿಗಳು ಇಂಗ್ಲಿಷ್ ಕಲಿತಿದ್ದರೂ ಸ್ವತಂತ್ರವಾಗಿ ತೀರಾ ಸರಳ ಅಭಿವ್ಯಕ್ತಿ ಕೂಡ ಅವರಿಗೆ ಸಾಧ್ಯವಾಗುವುದಿಲ್ಲ.

ಪಿ.ಯು.ಸಿ. ಮುಗಿಯುತ್ತಲೇ ವಿದ್ಯಾಭ್ಯಾಸ ಮುಂದುವರಿಸುವವರು ಹಲವರಾದರೆ, ಉದ್ಯೋಗದತ್ತ ಮುಖ ಮಾಡುವವರ ಸಂಖ್ಯೆಯೂ ಸಾಕಷ್ಟಿರುತ್ತದೆ. ಹಳೆಯ ವಿದ್ಯಾರ್ಥಿಗಳು ಪಿ.ಯು.ಸಿ. ನಂತರದ ಹಂತದಲ್ಲಿ ಇಂಗ್ಲಿಷ್ ಬಾರದೆ ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟಂತೆ ಆದ ತಮ್ಮ ಅನುಭವವನ್ನು ನನ್ನ ಬಳಿ ಹೇಳಿಕೊಳ್ಳುವಾಗ, ಇಂಗ್ಲಿಷ್ ಉಪನ್ಯಾಸಕಿಯಾಗಿ ನಾನೇನು ಮಾಡಬಹುದು ಎಂಬ ಜಿಜ್ಞಾಸೆ ಕಾಡುತ್ತಿತ್ತು.

ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಂವಹನ ಕೌಶಲಕ್ಕಾಗಿ ಏನನ್ನಾದರೂ ಮಾಡಲೇಬೇಕು ಎಂದು ಮೊದಮೊದಲು ಹಲವು ಪ್ರಯೋಗಗಳನ್ನು ಮಾಡಿದೆ.

ಸುಮ್ಮನೇ ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಪ್ರಶ್ನೋತ್ತರ ಬರೆಸುವುದು, ಇಂಗ್ಲಿಷ್ ಗಾದೆಗಳನ್ನು ಬರೆದು ಸ್ವಾರಸ್ಯಕರವಾಗಿ ಅರ್ಥ ವಿವರಿಸಿ, ಅವರನ್ನು ಪ್ರಶ್ನಿಸಿ ಸಾರಾಂಶ ಹೇಳಿಸುವುದು, ಹಾಜರಾತಿ ಕರೆಯುವಾಗ ಒಬ್ಬೊಬ್ಬರೂ ಎದ್ದು ನಿಂತು ನಾಲ್ಕಾರು ವಾಕ್ಯ ಹೇಳುವುದು, ವ್ಯಾಕರಣದ ಒಂದು ಚಿಕ್ಕ ಅಭ್ಯಾಸ ಘಟಕವನ್ನು ಪೂರ್ವ ತರಬೇತಿ ಕೊಟ್ಟು ಅವರಿಂದಲೇ ಮಾಡಿಸುವುದು ಇತ್ಯಾದಿ.

ಈ ಪ್ರಯೋಗಗಳಿಗೆ ವಿದ್ಯಾರ್ಥಿಗಳೇನೋ ಮನಃಪೂರ್ವಕವೇ ಒಳಗೊಂಡರಾದರೂ ನನಗೇ ನಿರೀಕ್ಷಿತ ಫಲಿತಾಂಶ ಸಿಕ್ಕಂತೆ ಎನಿಸಲಿಲ್ಲ. ಅವುಗಳಲ್ಲಿ ಹೆಚ್ಚಿನ ಪ್ರಮಾಣದ ಸಂತೃಪ್ತಿ ನೀಡಿದ ಪ್ರಯೋಗವೇ ನಾನು ರೂಪಿಸಿದ `ಇಂಗ್ಲಿಷ್ ಪ್ರೋಗ್ರಾಂ'.

ವಿದ್ಯಾರ್ಥಿಗಳು ಎಲ್ಲರೆದುರು ನಿರ್ಭೀತಿಯಿಂದ ಇಂಗ್ಲಿಷ್ನಲ್ಲಿ ಮಾತನಾಡಬೇಕು, ಕಲಿತು ಆಡಿದ ಮಾತುಗಳೇ ಆದರೂ ಇಂಗ್ಲಿಷ್ನ ಪದಗಳು, ವಾಕ್ಯರಚನಾ ಕ್ರಮವನ್ನು ಅಭ್ಯಸಿಸಿ, ಎಲ್ಲರೆದುರು ನಿರ್ಭಯವಾಗಿ ಉಚ್ಛರಿಸಿ ಅಭಿನಯಿಸುವಾಗ ಅವರಲ್ಲಿ ಭಾಷೆಯ ಬಗ್ಗೆ ಆತ್ಮೀಯತೆ ಮೂಡುತ್ತದೆ.

ನೀರಿಗಿಳಿಯದೇ ಈಜು ಕಲಿಯಲು ಹೇಗೆ ಸಾಧ್ಯವಿಲ್ಲವೋ ಹಾಗೇ, ಎಲ್ಲ ಜ್ಞಾನ ಮೂಲಗಳ ತಳಹದಿಯೂ ವೈಯಕ್ತಿಕ ಅನುಭವವೇ. ಆದ್ದರಿಂದ ಈ ಇಂಗ್ಲಿಷ್ ಪ್ರೋಗ್ರಾಂ ವಿದ್ಯಾರ್ಥಿಗಳಿಗಾಗಿ ತರಗತಿ ಕೋಣೆಯಲ್ಲೇ ಸೃಷ್ಟಿಸಲಾದ ಒಂದು ಕೃತಕ ಈಜುಕೊಳದಂತಿದ್ದು, ಇದರಲ್ಲಿನ ಭಾಗವಹಿಸುವಿಕೆ ಅವರಲ್ಲಿ ಸಂವಹನಕ್ಕೆ ಪ್ರೇರೇಪಿಸಬೇಕು ಎಂಬುದು ಕಾರ್ಯಕ್ರಮದ ಆಶಯವಾಗಿತ್ತು.

ಸುಮಾರು ಒಂದೂವರೆ ಗಂಟೆ ಕಾಲ ನೆರವೇರುತ್ತಿದ್ದ ಈ ಕಾರ್ಯಕ್ರಮದಲ್ಲಿ ಪ್ರಧಾನವಾಗಿ ಇರುತ್ತಿದ್ದುದು ಹಲವಾರು ಕಿರು ನಾಟಕಗಳು. ಸಿಗರೇಟು, ಗುಟ್ಕಾ ಸೇವನೆ, ದುಷ್ಟ ಸಹವಾಸ, ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮ, ರಸ್ತೆ ಮೇಲೆ ಉಗುಳುವುದು, ಕಸ ಚೆಲ್ಲುವುದು, ತರಕಾರಿ, ಹಣ್ಣಿನಂಗಡಿಗಳಲ್ಲಿ ವ್ಯಾಪಾರ, ಕೈತೋಟದ ಮಹತ್ವ, ಗ್ರಂಥಾಲಯದಲ್ಲಿ ಹೇಗಿರಬೇಕು, ಅಂಚೆ ಕಚೇರಿಯ ಆಗುಹೋಗು, ಹಾಸ್ಯ ಪ್ರಸಂಗಗಳಂತಹ ದಿನನಿತ್ಯದ ಸಾಮಾನ್ಯ ವಿಷಯಗಳ ಸ್ಕಿಟ್ ರೂಪಿಸುತ್ತಿದ್ದೆ. ರೂಪಕ ಅಭಿನಯದೊಂದಿಗೆ ಕಥೆಯನ್ನು ಪ್ರಸ್ತುತಪಡಿಸುವುದು, ಏಕಪಾತ್ರಾಭಿನಯ, ಗಾದೆಗಳು, ಸೂಕ್ತಿಗಳನ್ನು ಸಂಭಾಷಣೆಯಿಂದ ಪರಿಚಯಿಸುವುದು, ಟಂಗ್ ಟ್ವಿಸ್ಟಿಂಗ್ ಸಾಂಗ್ಸ್, ಗದ್ಯಪಾಠಗಳ ನಾಟಕಾಭಿನಯ ರೂಪಿಸಲಾಗುತ್ತಿತ್ತು.

ವೃಂದಗಾನದಲ್ಲಿ ಇಂಗ್ಲಿಷ್ ಹಾಡುಗಳನ್ನು ಹೇಳಿಸುವಾಗ ಪಾಶ್ಚಾತ್ಯ ರಾಗ ಸಂಯೋಜನೆ ಬಗ್ಗೆ ತಲೆಕೆಡಿಸಿಕೊಳ್ಳದೇ, ತಿಳಿದಂತೆ ರಾಗ ಅಳವಡಿಸಿ ಹಾಡಿಸುತ್ತಿದ್ದೆ. ನಡುನಡುವೆ ದೊಡ್ಡ ಅಕ್ಷರಗಳ ಚಾರ್ಟ್ಗಳು, ಚಿತ್ರಗಳನ್ನೂ ಬಳಸಲಾಗುತ್ತಿತ್ತು. ಸ್ವತಂತ್ರ ಅಭಿವ್ಯಕ್ತಿ ಬೇಡುವ ಇಂಗ್ಲಿಷ್ ರಸಪ್ರಶ್ನೆ ಕಾರ್ಯಕ್ರಮವನ್ನೂ ವಿದ್ಯಾರ್ಥಿಗಳು ಯಶಸ್ವಿಯಾಗಿ ನಡೆಸಿಕೊಟ್ಟಾಗ ಸಾರ್ಥಕ ಎನಿಸಿತ್ತು.

ಈ ಕಾರ್ಯಕ್ರಮಗಳಿಗೆ ವೇದಿಕೆ ರೂಪುಗೊಂಡುದು ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ. ಪ್ರಾಚಾರ್ಯ ಎಸ್.ಕುಮಾರಸ್ವಾಮಿ ಅವರಿಗೆ ಕಾರ್ಯಕ್ರಮದ ಪರಿಣಾಮದ ಸ್ಪಷ್ಟ ಅರಿವಿದ್ದುದರಿಂದ ಅವರ ಹಾರ್ದಿಕ ಪ್ರೋತ್ಸಾಹ ಇತ್ತು. ಉಪನ್ಯಾಸಕರೆಲ್ಲರೂ ಅಕ್ಕರಾಸ್ಥೆಯಿಂದ ಕಾರ್ಯಕ್ರಮ ವೀಕ್ಷಿಸುತ್ತಿದ್ದುದು, ಪ್ರಶಂಸಿಸುತ್ತಿದ್ದುದು ವಿದ್ಯಾರ್ಥಿಗಳಲ್ಲಿ ಆತ್ಮಾಭಿಮಾನ ತುಂಬುತ್ತಿತ್ತು. ಒಮ್ಮೆ ಕಾರ್ಯಕ್ರಮ ಪ್ರಾರಂಭವಾಯಿತೆಂದರೆ, ವೇದಿಕೆಯ ಪೂರ್ಣ ಸ್ವಾಮ್ಯ ವಿದ್ಯಾರ್ಥಿಗಳದೇ.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೇದಿಕೆಗೆ ಬಂದು ಎಲ್ಲರೆದುರು ನಿಂತು ಮಾತನಾಡಲು ಹಿಂಜರಿಯುವ ವಿದ್ಯಾರ್ಥಿಗಳು ಕೂಡ ಇಂಗ್ಲಿಷ್ ಪ್ರೋಗ್ರಾಂಗೆ ಸಂತೋಷದಿಂದ ಮೈಚಳಿ ಬಿಟ್ಟು ಭಾಗವಹಿಸತೊಡಗಿದರು. ಇದು ಕಾಲೇಜಿನಲ್ಲಿ ಎಲ್ಲರಿಗೂ ಸಂತೋಷದ, ಅಚ್ಚರಿಯ ವಿಷಯವಾಗಿತ್ತು. ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ವಿದ್ಯಾರ್ಥಿಗಳು ತಾವು ಇಂಗ್ಲಿಷ್ನಲ್ಲಿ ಭಾಷಣ ಮಾಡುತ್ತೇವೆ ಎಂದು ಮುಂದೆ ಬರುವಷ್ಟು ಈ ಕಾರ್ಯಕ್ರಮ ಸಂಚಲನವನ್ನು ಉಂಟುಮಾಡಿತ್ತು.

ಇಂಗ್ಲಿಷ್ ತಮಗೆ ಕಷ್ಟ ಎಂಬ ಹೃದಯದ ಮೇಲೆ ನೀರ್ಗಲ್ಲ ಹೆಬ್ಬಂಡೆಯಂತಿದ್ದ ಭಾವ ಸದ್ದಿಲ್ಲದೇ ಕರಗತೊಡಗಿತ್ತು. ಮನೆ ಪಾಠದ ಹಾವಳಿಯಿಲ್ಲದೆ 85ನ್ನೂ ದಾಟಿದ ಅಂಕ ಗಳಿಕೆ ಮಾತ್ರವಲ್ಲದೆ, ದ್ವಿತೀಯ ಪಿ.ಯು.ಸಿ. ಇಂಗ್ಲಿಷ್ ಫಲಿತಾಂಶ ಶೇಕಡಾ 95ರವರೆಗೂ ಏರಿತು. ಕನ್ನಡ ಮಾಧ್ಯಮದ ತಮಗೆ ಇಂಗ್ಲಿಷ್ ಕಬ್ಬಿಣದ ಕಡಲೆ ಎಂಬಂತಹ ಹತಾಶ ಮನೋಭಾವದ ಅಂಧಕಾರದಲ್ಲಿ ಹಚ್ಚಿಟ್ಟ ಕಿರು ಹಣತೆ ಈ `ಇಂಗ್ಲಿಷ್ ಪ್ರೋಗ್ರಾಂ' ಆಗಿತ್ತು.

ವಿದ್ಯೆ ಅನ್ನ ನೀಡದಿದ್ದಲ್ಲಿ ಅದಕ್ಕೆ ಕನ್ನಡ ಮಾಧ್ಯಮವನ್ನೇ ಆರೋಪಿಸುತ್ತಾ ಕನ್ನಡ ಶಾಲೆಗಳನ್ನು ಮುಚ್ಚುವ ಹಂತ ತಲುಪಿದ್ದೇವೆ. ಕನ್ನಡಾಭಿಮಾನದ ಭಾವನಾತ್ಮಕತೆಗೆ ಇಂಬು ಕೊಡುವುದು ಜೀವನದ ಅಗತ್ಯಗಳ ಪೂರೈಕೆ ಮಾತ್ರ. ಪ್ರಾಥಮಿಕ ಹಂತದಿಂದಲೇ ಅನೌಪಚಾರಿಕ ಇಂಗ್ಲಿಷ್ ಬೋಧನೆ ಈಗಾಗಲೇ ಪ್ರಾರಂಭವಾಗಿದೆ.

ಅದರ ಯಶಸ್ವಿ ಅನುಷ್ಠಾನ ಶಿಕ್ಷಕರು ನಾಡುನುಡಿಗಾಗಿ ಹೊರಬೇಕಾದ ಪ್ರೀತಿಯ ಹೊಣೆ. ಈ ಹೊಣೆ ಪದವಿ ಪೂರ್ವ ಹಂತದವರೆಗೂ ನಿರಂತರವಾಗಿ ಮುಂದುವರಿದಲ್ಲಿ ಇಂಗ್ಲಿಷ್ ಭಾಷಾ ಸಂವಹನ ಸಾಧ್ಯವಾಗುತ್ತದೆ. ಅದೂ ಕೂಡ ನುಡಿ ಸೇವೆಯ ಒಂದು ಭಾಗವೇ ಎಂಬುದರಲ್ಲಿ ಅನುಮಾನ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.