ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಕ್ರೊಸಾಫ್ಟ್‌ ದಿಢೀರ್‌ ಸ್ಥಗಿತ: ಐ.ಟಿ, ಬ್ಯಾಂಕ್‌, ಮಾಧ್ಯಮ ಸೇವೆಗೆ ತೊಂದರೆ

Published 19 ಜುಲೈ 2024, 9:32 IST
Last Updated 19 ಜುಲೈ 2024, 9:32 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಟೆಕ್‌ ಕಂಪನಿ ಮೈಕ್ರೊಸಾಫ್ಟ್‌ನ ವಿಂಡೋಸ್‌ನಲ್ಲಿ ಶುಕ್ರವಾರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು ಭಾರತ, ಅಮೆರಿಕ ಸೇರಿ ವಿಶ್ವದಾದ್ಯಂತ ಹಲವು ದೇಶಗಳಲ್ಲಿ ಲಕ್ಷಾಂತರ ಬಳಕೆದಾರರು ತೊಂದರೆಗೆ ಸಿಲುಕಿದ್ದಾರೆ.

ಜಾಗತಿಕ ಮಟ್ಟದಲ್ಲಿ ಸರ್ಕಾರಿ ಕಚೇರಿಗಳು, ಮಾಧ್ಯಮ ಸಂಸ್ಥೆಗಳು, ಬ್ಯಾಂಕ್‌ಗಳು ಹಾಗೂ ವ್ಯಾಪಾರ ವಹಿವಾಟಿನಲ್ಲಿ ವ್ಯತ್ಯಯವಾಗಿದೆ. ಅದರಲ್ಲೂ ವಿಮಾನಯಾನ ಮತ್ತು ಮಾಹಿತಿ ತಂತ್ರಜ್ಞಾನ ವಲಯದ ಸೇವೆಯು ಅಸ್ತವ್ಯಸ್ತ ಗೊಂಡಿದೆ. ಮೈಕ್ರೊಸಾಫ್ಟ್‌ನ 365 ಆ್ಯಪ್‌ಗಳ ಸೇವೆಯೂ ಸ್ಥಗಿತಗೊಂಡಿದೆ. 

ಬೆಳಿಗ್ಗೆ ಬಳಕೆದಾರರು ಕಂಪ್ಯೂಟರ್‌ ಹಾಗೂ ಲ್ಯಾಪ್‌ಟಾಪ್‌ ತೆರೆದಾಗ ನೀಲಿ ಬಣ್ಣದ  ಹಿಂಪರದೆಯಲ್ಲಿ ಎರರ್‌ ಸಂದೇಶ ಕಾಣಿಸಿಕೊಂಡಿದೆ. ವಿಂಡೋಸ್‌ನ ಈ ದೋಷದ ಬಗ್ಗೆ ‘ಬ್ಲೂ ಸ್ಕ್ರೀನ್‌ ಆಫ್ ಡೆತ್‌’ (ಬಿಎಸ್‌ಒಡಿ) ಎಂದು ಕರೆಯಲಾಗುತ್ತದೆ. ಇದರಿಂದ ಕಂಪ್ಯೂಟರ್‌ ಏಕಾಏಕಿ ಸ್ಥಗಿತ ಅಥವಾ ರಿಸ್ಟಾರ್ಟ್‌ಗೆ ಕಾರಣವಾಗಿದೆ. ಮೈಕ್ರೊಸಾಫ್ಟ್‌ನ ಕ್ಲೌಡ್‌ ಸೇವೆಯಲ್ಲಿನ ಸಮಸ್ಯೆಯಿಂದಾಗಿ ಈ ತೊಂದರೆ ಎದುರಾಗಿದೆ ಎಂದು ಹೇಳಲಾಗಿದೆ.  

ಭಾರತದ ಬ್ಯಾಂಕಿಂಗ್‌ಗೆ ಸಮಸ್ಯೆಯಿಲ್ಲ: ಜಾಗತಿಕ ಮಟ್ಟದಲ್ಲಿ ಬ್ಯಾಂಕ್‌ಗಳು ಮತ್ತು ಪೇಮೆಂಟ್‌ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಆದರೆ, ಭಾರತದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. 

‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸೇವೆಗೆ ಯಾವುದೇ ತೊಂದರೆಯಾಗಿಲ್ಲ. ಸುಸೂತ್ರವಾಗಿ ಕಾರ್ಯ ನಿರ್ವಹಿಸಲಾಗಿದೆ’ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್‌ ಖಾರಾ ಹೇಳಿದ್ದಾರೆ. 

‘ದೇಶದಲ್ಲಿ ಜನಪ್ರಿಯವಾಗಿರುವ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮೇಲೂ ಪರಿಣಾಮ ಬೀರಿಲ್ಲ’ ಎಂದು ರಾಷ್ಟ್ರೀಯ ಪಾವತಿ ನಿಗಮವು (ಎನ್‌ಪಿಸಿಐ) ಸಿಇಒ ದಿಲೀಪ್ ಅಸ್ಬೆ ತಿಳಿಸಿದ್ದಾರೆ.

ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಎಕ್ಸಿಸ್‌ ಬ್ಯಾಂಕ್‌ಗಳು  ಯಾವುದೇ ಸಮಸ್ಯೆಯಾಗಿಲ್ಲ ಎಂದು ಸ್ಪಷ್ಟಪಡಿಸಿವೆ. 

‘ದೇಶದ 10 ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳ ವಹಿವಾಟಿನಲ್ಲಿ ಸಣ್ಣ ಪ್ರಮಾಣದ ತೊಂದರೆಯಾಗಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ. 

ರಾಷ್ಟ್ರೀಯ ಷೇರು ವಿನಿಮಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ.

ಸಮಸ್ಯೆಗೆ ಕಾರಣ ಏನು?

ಕುತಂತ್ರಾಂಶ ಸೇರಿ ಇತರೆ ಸೈಬರ್‌ ದಾಳಿ ತಡೆಯಲು ಕ್ರೌಡ್​ಸ್ಟ್ರೈಕ್‌ ಕಂಪನಿಯು ಫಾಲ್ಕನ್‌ ಸೆನ್ಸಾರ್‌ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ವಿಂಡೋಸ್‌ನಲ್ಲಿ ಇದರ ಅಪ್‌ಡೇಟ್‌ ಮಾಡುವಾಗ ದೋಷ ಕಾಣಿಸಿಕೊಂಡಿದೆ. ಈ ಎರಡರ ನಡುವೆ ಹೊಂದಾಣಿಕೆಯಾಗಿಲ್ಲ. ಹಾಗಾಗಿ ಸೇವೆ ಸ್ಥಗಿತಗೊಂಡಿದೆ ಎಂದು ಹೇಳಲಾಗಿದೆ. ‘ಜಾಗತಿಕ ಮಟ್ಟದಲ್ಲಿ ಆಗಿರುವ ತೊಂದರೆ ಬಗ್ಗೆ ನಮಗೆ ಅರಿವಿದೆ. ಥರ್ಡ್‌ಪಾರ್ಟಿ ತಂತ್ರಾಂಶದ ಅಪ್‌ಡೇಟ್‌ನಿಂದಾಗಿ ವಿಂಡೋಸ್‌ನಲ್ಲಿ ದೋಷ ಕಾಣಿಸಿಕೊಂಡಿದೆ. ಸಮರೋಪಾದಿಯಲ್ಲಿ ಈ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಮೈಕ್ರೊಸಾಫ್ಟ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ. 

ವಿಮಾನ ಪ್ರಯಾಣಿಕರ ಪರದಾಟ

ಮುಂಬೈ: ದೇಶದ ದೆಹಲಿ ಮುಂಬೈ ಬೆಂಗಳೂರು ಮತ್ತು ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡಿದರು. ಬೆಳಿಗ್ಗೆ 10.40ಗಂಟೆಯಿಂದ ಇಂಡಿಗೊ ಸ್ಪೈಸ್‌ಜೆಟ್‌ ಆಕಾಶಾ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಯಾನ ಕಂಪನಿಗಳ ಸೇವೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ತಮಗಾಗಿರುವ ತೊಂದರೆ ಬಗ್ಗೆ ಹಲವು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡರು. ಸಮಯಕ್ಕೆ ಸರಿಯಾದ ಟಿಕೆಟ್‌ ಬುಕಿಂಗ್‌ ಚೆಕ್‌–ಇನ್‌ ಮತ್ತು ಬೋರ್ಡಿಂಗ್‌ ಪಾಸ್‌ ‍ಪಡೆಯಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂದಿತು. ವಿಮಾನಯಾನ ಕಂಪನಿಗಳ ಸಿಬ್ಬಂದಿ ಕೈಬರಹದ ಮೂಲಕ ಬೋರ್ಡಿಂಗ್‌ ಪಾಸ್‌ ವಿತರಿಸಿದರು.

‘ಭಾರತದಲ್ಲಿ ಶುಕ್ರವಾರ ವಿವಿಧ ಮಾರ್ಗಗಳಲ್ಲಿ 3652 ವಿಮಾನಗಳ ಹಾರಾಟ ನಿಗದಿಯಾಗಿತ್ತು. ಈ ಪೈಕಿ 56 ವಿಮಾನಗಳ ಸಂಚಾರ ರದ್ದಾಗಿದೆ’ ಎಂದು ವಿಮಾನಯಾನ ವಿಶ್ಲೇಷಣಾ ಕಂಪನಿ ಸಿರಿಯಮ್ ತಿಳಿಸಿದೆ. ‘ಪ್ರಯಾಣಿಕರಿಗೆ ಆಗಿರುವ ತೊಂದರೆ ತಪ್ಪಿಸಲು ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು (ಎಎಐ) ಕ್ರಮಕೈಗೊಂಡಿದೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್‌ ಮೋಹನ್‌ ನಾಯ್ಡು ತಿಳಿಸಿದ್ದಾರೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಸಮಸ್ಯೆ ಮೇಲೆ ನಿಗಾ ಇಟ್ಟಿದೆ.

ಕಂಪನಿ ಜತೆ ನಿರಂತರ ಸಂಪರ್ಕ

ಮೈಕ್ರೊಸಾಫ್ಟ್‌ ಕಂಪನಿ ಜೊತೆಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ನಿರಂತರವಾಗಿ ಸಂಪರ್ಕದಲ್ಲಿದೆ ಎಂದು ಕೇಂದ್ರ ಐ.ಟಿ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.  ‘ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ನೆಟ್‌ವರ್ಕ್‌ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮೈಕ್ರೊಸಾಫ್ಟ್‌ ಕಂಪನಿಯು ಸಮಸ್ಯೆಯನ್ನು ಪತ್ತೆ ಹಚ್ಚಿದ್ದು ಬಗೆಹರಿಸಲು ಮುಂದಾಗಿದೆ’ ಎಂದು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT