ಮಂಗಳವಾರ, 20 ಆಗಸ್ಟ್ 2024
×
ADVERTISEMENT
ಈ ಕ್ಷಣ :
ADVERTISEMENT

OnePlus Nord CE4 5ಜಿ ಸ್ಮಾರ್ಟ್‌ಫೋನ್: ₹20 ಸಾವಿರ ಬಜೆಟ್‌ನಲ್ಲಿ ಉತ್ತಮ ಆಯ್ಕೆ

Published 15 ಜುಲೈ 2024, 11:18 IST
Last Updated 15 ಜುಲೈ 2024, 11:18 IST
ಅಕ್ಷರ ಗಾತ್ರ

ಸ್ಮಾರ್ಟ್‌ ಫೋನ್‌ನಲ್ಲಿ ಗುಣಮಟ್ಟ ಹಾಗೂ ವಿನ್ಯಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಒನ್‌ಪ್ಲಸ್ ತನ್ನ ನಾರ್ಡ್ ಸರಣಿಯಲ್ಲಿ ಗ್ರಾಹಕರ ಅಗತ್ಯ ಹಾಗೂ ಜೇಬಿನ ಗಾತ್ರಕ್ಕೆ ತಕ್ಕಂತೆ ಹೊಸ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಬರುತ್ತಿದೆ.

ಕೆಲವೇ ತಿಂಗಳ ಹಿಂದೆ ನಾರ್ಡ್ ಸರಣಿಯ ಸಿಇ4 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಒನ್ ಪ್ಲಸ್, ಇದೀಗ ಇದೇ ಸರಣಿಯ ತುಸು ಅಗ್ಗದ ಲೈಟ್‌ ಮಾದರಿಯನ್ನು ಪರಿಚಯಿಸಿದೆ. ₹20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಖರೀದಿಸಲು ಬಯಸುವವರಿಗಾಗಿ ನಾರ್ಡ್‌ ಸರಣಿಯ ಸಿಇ4 ಲೈಟ್ 5ಜಿ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.

ಸಿಇ4 ಲೈಟ್ ತನ್ನ ಹಿಂದಿನ ಆವೃತ್ತಿ (ಸಿಇ3 ಲೈಟ್‌)ಗಿಂತ ಸುಧಾರಿತ ಆವೃತ್ತಿಯಾಗಿದೆ. ನೂತನ ಮಾದರಿಯಲ್ಲಿ ಅಮೊಲೆಡ್ ಡಿಸ್‌ಪ್ಲೇ, ಹೊಸ ಮಾದರಿಯ ಕ್ಯಾಮೆರಾ ಹಾಗೂ ಹೆಚ್ಚು ಕಾಲ ಫೋನ್ ಬಳಕೆಗೆ ಅನುಕೂಲವಾಗುವಂತ ಬ್ಯಾಟರಿ ಹೊಂದಿದೆ ಎನ್ನವುದೇ ವಿಶೇಷ.

ಸಿಇ4 ಲೈಟ್ ವಿನ್ಯಾಸ

ಲೈಟ್ ಮಾದರಿಯ ನೂತನ ನಾರ್ಡ್ ಸರಣಿಯದ್ದು ಪ್ಲಾಸ್ಟಿಕ್‌ ದೇಹವೇ ಆದರು, ಅದಕ್ಕೆ ಹೊದಿಸಿರುವ ಕವಚ ಅಲುಮಿನಿಯಂ ಲೋಹದ್ದು. ಹೀಗಾಗಿ ಹಿಡಿಯುವ ಅನುಭೂತಿ ವಿಭಿನ್ನವಾಗಿದೆ. ದುಂಡಗಿನ ಎಡ್ಜ್‌ ಬಯಸುವವರಿಗೆ ಇದರ ಚೌಕಾಕಾರದ ಅಂಚು ತುಸು ಕಷ್ಟವೆಂಬ ಅನುಭವ ನೀಡಬಹುದು. ಅಥವಾ ಆಯತಾಕಾರದ ಎಡ್ಜ್‌ ಫೋನ್‌ಗಳನ್ನು ನೀವು ಬಯಸುವುದಾದರೆ ಇದು ಇಷ್ಟವಾಗಲೂಬಹುದು.

ಗ್ರೇ ಮಾದರಿಯ ಫೋನ್ ಅನ್ನು ಇಲ್ಲಿ ಸಮೀಕ್ಷೆಗೆ ಬಳಸಲಾಯಿತು. ನೋಡಲು ಸಿಇ4ಗಿಂತ ಹೆಚ್ಚು ಆಕರ್ಷಕವಾಗಿದೆ. ಕ್ಯಾಮೆರಾ, ಫ್ಲಾಷ್ ಹೊಂದಿಸಿರುವ ಸ್ಥಳವೂ ಹಿತವೆನಿಸುತ್ತದೆ. ಫೋನ್‌ನ ಹಿಂಬದಿ ಗಾಜಿನಂತೆ ಇರುವುದರಿಂದ ಬೆರಳಚ್ಚು ಮೂಡಿಸುವ ಚಿತ್ತಾರವನ್ನು ಆಗಾಗ ಅಳಸುವ ಗೋಜು ಹೆಚ್ಚುವರಿ ಕೆಲಸ.

ಕ್ಯಾಮೆರಾಗೆ ಜಾಗ ಹೊಂದಿಸಿರುವುದು ಹೆಚ್ಚು ಆಪ್ತವೆನಿಸುತ್ತದೆ. ಒಂದು ಲೆನ್ಸ್‌ನ ಕೆಳಗೆ ಮತ್ತೊಂದನ್ನು ಲಂಬವಾಗಿ ಜೋಡಿಸಲಾಗಿದೆ. ಅದರ ಕೆಳಗೆ ಸೆನ್ಸರ್ ಹಾಗೂ ಫ್ಲಾಷ್ ಲೈಟ್ ಇದೆ. ಇದಕ್ಕಾಗಿಯೇ ತುಸು ಉಬ್ಬಿದ ಸ್ಥಳವನ್ನು ರಚಿಸಿರುವುದು ಫೋನ್‌ನ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ.

ಮುಂಭಾಗದಲ್ಲಿ ಇಡೀ ಜಾಗವನ್ನು ಪರದೆಯೇ ಆವರಿಸಿದೆ. ಅದೊಳಗೆ ಪಂಚ್ ಹೋಲ್‌ನಂತೆ ಸೆಲ್ಫಿ ಕ್ಯಾಮೆರಾ ಸೆನ್ಸರ್ ನೀಡಲಾಗಿದೆ. ಪವರ್ ಹಾಗೂ ಧ್ವನಿ ಏರಿಳಿಸುವ ಗುಂಡಿಳನ್ನು ಬಲಭಾಗದಲ್ಲಿ ನೀಡಲಾಗಿದೆ. ಅದರಂತೆಯೇ ಸಿಮ್‌ ಟ್ರೇ ಎಡಭಾಗದಲ್ಲಿದೆ. 3.5 ಮಿ.ಮೀ. ಹೆಡ್‌ಫೋನ್‌ ಜ್ಯಾಕ್‌, ಟೈಪ್‌–ಸಿ ಯುಎಸ್‌ಬಿ ಪೋರ್ಟ್ ಹಾಗೂ ಸ್ಪೀಕರ್ ಗ್ರಿಲ್‌ ಫೋನ್‌ನ ಕೆಳಭಾಗದಲ್ಲಿದೆ.

ಡಿಸ್‌ಪ್ಲೇ ವಿಭಾಗಕ್ಕೆ ಬಂದಲ್ಲಿ ಒನ್‌ಪ್ಲಸ್ ನಾರ್ಡ್ ಸಿಇ4 ಲೈಟ್‌ 5ಜಿ ಸ್ಮಾರ್ಟ್‌ಫೋನ್‌ನ ಪರದೆ ಹಿಂದಿನ ಮಾದರಿಗಿಂತ ಉತ್ತಮ ಎನಿಸುವಂತೆ ಅಭಿವೃದ್ಧಿಪಡಿಸಲಾಗಿದೆ. 6.67 ಇಂಚಿನ ಅಮೊಲೆಡ್‌ ಡಿಸ್‌ಪ್ಲೇ ಇದರದ್ದು. ಇದರ ರೆಸಲೂಷನ್‌ 1080X2400 ಪಿಕ್ಸೆಲ್‌ ಆಗಿದೆ. ಇದರ ಮೂಲಕ 394 ಪಿಪಿಐ ಪಿಕ್ಸೆಲ್‌ನ ಸಾಂಧ್ರತೆ ಹೊಂದಿದೆ. ಪರದೆ ರೆಫ್ರೆಶ್‌ ಆಗುವ ದರ 120 ಹರ್ಟ್ಜ್‌ನಷ್ಟಿದೆ. ಇದರಿಂದಾಗಿ ಸ್ಕ್ರಾಲಿಂಗ್‌ ಹಾಗೂ ರೆಸ್ಪಾನ್ಸ್‌ ಹೆಚ್ಚು ಹಿತವೆನಿಸುವಷ್ಟರ ಮಟ್ಟಿಗೆ ಸರಾಗವಾಗಿ ಸಾಗುತ್ತದೆ.

ಪರದೆಯು ಶೇ 100ರಷ್ಟು ಆರ್‌ಜಿಬಿ ಹಾಗೂ ಶೆ 100ರಷ್ಟು ಪಿ3 ಕಲರ್‌ಗೆ ಬೆಂಬಲಿಸುತ್ತದೆ. ಹೀಗಾಗಿ ಹೊರಗಿನ ಬೆಳಕಿನಲ್ಲಿ ಯಾವುದೇ ಬಣ್ಣ ಹಾದುಹೋದರೂ ಪರದೆ ಮೇಲಿನ 2,100 ನಿಟ್ಸ್‌ನ ಬೆಳಕಿನ ಪ್ರಕರತೆ ಫೋನ್ ಬಳಕೆದಾರರ ಅನುಭೂತಿಗೆ ಯಾವುದೇ ಭಂಗ ಬಾರದಂತೆ ನೋಡಿಕೊಳ್ಳುವಂತಿದೆ. ಬ್ಯಾಕ್‌ಲೈಟ್‌ನಲ್ಲಿ 480 ಹರ್ಟ್ಜ್‌ ಪಲ್ಸ್‌ನ ವಿಡ್ತ್‌ ಮಾಡ್ಯುಲೇಷನ್‌ ಹೊಂದಿದೆ. ಇಷ್ಟುಮಾತ್ರವಲ್ಲ, ಅಮೇಜಾನ್ ಪ್ರೈಂ ವಿಡಿಯೊ ಹಾಗೂ ನೆಟ್‌ಫ್ಲಿಕ್ಸ್‌ನ ಎಚ್‌ಡಿ ಪ್ಲೇಬ್ಯಾಕ್‌ ಮಾನ್ಯತೆಯನ್ನೂ ಇದು ಹೊಂದಿದೆ.

ಒನ್‌ಪ್ಲಸ್ ನಾರ್ಡ್ ಸಿಇ4 ಲೈಟ್ 5ಜಿ ಸ್ಮಾರ್ಟ್‌ಫೋನ್‌ನಲ್ಲಿ ಆಕ್ಸಿಜನ್‌ ಆಪರೇಟಿಂಗ್ ಸಿಸ್ಟಂನ 14.0 ಆವೃತ್ತಿ ಇದೆ. ಇದು ಆ್ಯಾಂಡ್ರಾಯ್ಡ್ 14 ಅನ್ನು ಆಧರಿಸಿ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್‌ಗಳು ಲಭ್ಯವಾಗುವ ಗ್ಯಾರಂಟಿಯನ್ನು ಒನ್‌ ಪ್ಲಸ್ ನೀಡಿದೆ.

ಪ್ರಾಸೆಸರ್‌ ಹಾಗೂ ಕಾರ್ಯಕ್ಷಮತೆ

ಒನ್‌ಪ್ಲಸ್ ನಾರ್ಡ್ ಸಿಇ4 ಲೈಟ್ 5ಜಿ ಸ್ಮಾರ್ಟ್‌ಫೋನ್‌ ಈ ಹಿಂದಿನ ಸಿಇ3 ಹೊಂದಿರುವ ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 695 ಎಸ್‌ಒಸಿ ಪ್ರಾಸೆಸಸರ್ ಅನ್ನೇ ಹೊಂದಿದೆ. ಹೀಗಾಗಿ ಫೋನ್‌ನ ಕಾರ್ಯಕ್ಷಮತೆಯ ವೇಗದಲ್ಲಿ ಯಾವುದೇ ಹೊಸ ಬದಲಾವಣೆ ಕಾಣಿಸದು. ಈ ಸ್ಮಾರ್ಟ್‌ಫೋನ್‌ 8ಜಿಬಿ ರ‍್ಯಾಮ್ ಹಾಗೂ 128 ಜಿಬಿ ರಾಮ್‌ನೊಂದಿಗೆ ಅಥವಾ 256 ಜಿಬಿ ರಾಮ್‌ನೊಂದಿಗೆ ಲಭ್ಯ.

ಈ ಹಿಂದಿನ ಆವೃತ್ತಿಯ ಫೋನ್‌ನಲ್ಲಿರುವ ಪ್ರೊಸೆಸರ್ ಅನ್ನೇ ಸಿಇ4 ಲೈಟ್ ಬಳಸುತ್ತಿದ್ದರೂ, ದೈನಂದಿನ ಕಾರ್ಯಾಚರಣೆಯಲ್ಲಿ ತೀವ್ರ ಅಡಚಣೆಯಾದಂತೆ ಅನಿಸದು. ಫೋನ್‌ನ ಬಳಕೆಯಲ್ಲಿ ಅದೇ ಮೃದುತ್ವ ಹಾಗೂ ದಿನನಿತ್ಯದ ಬಳಕೆಯಲ್ಲಿ ಮಂದಗತಿಯ ಕಾರ್ಯಾಚರಣೆ ಎಂದೆನಿಸದು. ಆ್ಯಡ್ರೆನೊ 619 ಜಿಪಿಯು ಎಂಬ ಗ್ರಾಫಿಕ್ಸ್‌ ಚಿಪ್‌ ಅಳವಡಿಸಲಾಗಿದ್ದು, ಇದು ಗ್ರಾಫಿಕ್ಸ್‌ನ ಅಗತ್ಯವನ್ನು ಪೂರೈಸುತ್ತದೆ. ಗೇಮ್‌ಗಳ ಬಳಕೆಯೂ ಮುದನೀಡುವಷ್ಟು ಆರಾಮವಾಗಿ ಆಡಬಹುದಾಗಿದೆ. ಕೆಲವೊಮ್ಮೆ ಹೆಚ್ಚು ಗ್ರಾಫಿಕ್ಸ್ ಇರುವ ಗೇಮ್‌ಗಳಲ್ಲಿ ಫ್ರೇಮ್‌ ರೇಟ್‌ ಕುಸಿಯುವ ಸಾಧ್ಯತೆಯೂ ಬಳಕೆಯಲ್ಲಿ ತಿಳಿದುಬಂದಿದೆ.

ಸಿನಿಮಾ ವೀಕ್ಷಣೆಯಲ್ಲಿ ಚಿತ್ರದ ಗುಣಮಟ್ಟ ಹಾಗೂ ಧ್ವನಿ ಎರಡೂ ಉತ್ತಮವಾಗಿದೆ. ಹೀಗಾಗಿ ಒಟಿಟಿ ಮೂಲಕ ಚಲನಚಿತ್ರ ಹಾಗೂ ವೆಬ್‌ಸರಣಿ ವೀಕ್ಷಿಸುವವರಿಗೂ ಇದು ಹಿತ ನೀಡಲಿದೆ.

ಇಷ್ಟವಾಗುವ ಕ್ಯಾಮೆರಾ ಗುಣಮಟ್ಟ

ಒನ್‌ಪ್ಲಸ್ ನಾರ್ಡ್‌ ಸಿಇ4 ಲೈಟ್ 5ಜಿ ಕ್ಯಾಮೆರಾದಲ್ಲಿ ಕೆಲವೊಂದು ಗಮನಾರ್ಹ ಬದಲಾವಣೆ ಕಂಡುಬಂದಿದೆ. 108 ಮೆಗಾ ಪಿಕ್ಸೆಲ್‌ನಿಂದ 50 ಮೆಗಾ ಪಿಕ್ಸೆಲ್‌ನ ಪ್ರೈಮರಿ ಸೆನ್ಸರ್‌ಗೆ ಬಂದಿರುವುದು ಹಿಂಬಡ್ತಿ ಎಂಬಂತೆ ಭಾಸವಾಗುತ್ತದೆ. ವಾಸ್ತವದಲ್ಲಿ ಸೋನಿ ಎಲ್‌ವೈಟಿ 600 ಹೊಸ ಸೆನ್ಸರ್‌ ಅನ್ನು ಇದು ಹೊಂದಿದೆ. ಇದು ಸುಧಾರಿತ ಕ್ಯಾಮೆರಾ ಆಗಿರುವುದರಿಂದ ಫೋಟೊ ಹೆಚ್ಚು ಸ್ಪಷ್ಟ ಹಾಗೂ ನಿಖರವಾಗಿದೆ. 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್‌ ಹೊಂದಿದ್ದು, ಪೋಟ್ರೇಟ್‌ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಕಾಣಿಸುವಷ್ಟರ ಮಟ್ಟಿಗೆ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ.

ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ನ ಕ್ಯಾಮೆರಾ ಇದ್ದು ಸೆಲ್ಫಿ ಗುಣಮಟ್ಟ ಉತ್ತಮವಾಗಿದೆ. ಆದರೆ ಅಲ್ಟ್ರಾವೈಡ್ ಲೆನ್ಸ್‌ ಇರಬೇಕಿತ್ತು ಎಂದೆನಿಸಿದರೆ ತಪ್ಪಾಗದು.

ಲಭ್ಯವಿರುವ ಕ್ಯಾಮೆರಾ ಮೂಲಕ ದಾಖಲಾಗುವ ಚಿತ್ರಗಳ ಗುಣಮಟ್ಟ, ಬಣ್ಣಗಳ ಹೊಂದಾಣಿಕೆ, ವೈಟ್ ಬ್ಯಾಲೆನ್ಸ್ ಉತ್ತಮವಾಗಿದೆ. ಹೆಚ್ಚು ಬೆಳಕನ್ನು ಒಳಕ್ಕೆ ತೆಗೆದುಕೊಳ್ಳುವಲ್ಲಿ ಹೊಸ ಮಾದರಿಯ ಸೆನ್ಸರ್‌ ಉತ್ತಮವಾಗಿದೆ. ಕೆಲವೊಮ್ಮೆ ಅತಿ ಎನಿಸಬಹುದು. ಇದರ ಹಿಂದಿನ ಆವೃತ್ತಿಗಿಂತ ಸಿಇ4 ಲೈಟ್ 5ಜಿ ಉತ್ತಮವಾಗಿದೆ. ಮಂದ ಬೆಳಕಿನಲ್ಲಿ ಚಲಿಸುವ ವಸ್ತುಗಳ ಚಿತ್ರ ತೆಗೆದರೆ ಗುಣಮಟ್ಟ ಅಷ್ಟಾಗಿ ಹಿಡಿಸದು. ಆದರೆ ಪೋಟ್ರೇಟ್ ಮೋಡ್‌ನಲ್ಲಿನ ಬಣ್ಣ ಹೊಂದಾಣಿಕೆ ಉತ್ತಮವಾಗಿದೆ. ಹೆಚ್ಚು ಎಡಿಟ್ ಮಾಡದ ಚಿತ್ರ ಹಿಡಿಸುತ್ತದೆ. ಮುಖದ ಅಂಚನ್ನು ಗ್ರಹಿಸುವಿಕೆಯೂ ಉತ್ತಮವಾಗಿದೆ. ಚಿತ್ರಗಳ ಎಡಿಟ್‌ ಮಾಡುವ ಕ್ರಿಯೆಯೂ ಉತ್ತಮವಾಗಿದೆ. 

ಪೋಟ್ರೇಟ್ ಮೋಡ್‌ನಲ್ಲಿ ತೆಗೆದ ಚಿತ್ರ

ಪೋಟ್ರೇಟ್ ಮೋಡ್‌ನಲ್ಲಿ ತೆಗೆದ ಚಿತ್ರ

5,500 ಎಂಎಎಚ್‌ ಬ್ಯಾಟರಿ

ಸಿಇ4 ಲೈಟ್ 5ಜಿ ಸ್ಮಾರ್ಟ್‌ಫೋನ್‌ನಲ್ಲಿ 5,500 ಎಂಎಎಚ್‌ ಬ್ಯಾಟರಿ ಅಳವಡಿಸಲಾಗಿದೆ. ಇದರಿಂದ ಹೆಚ್ಚು ಫೋನ್ ಬಳಕೆ ಮಾಡುವವರಿಗೆ ಇದು ಒಂದು ದಿನವಿಡೀ ಬಳಕೆಗೆ ಅನುಕೂಲವಾಗುವಂತಿದೆ. 80 ವಾಟ್‌ನ ವೇಗದ ಚಾರ್ಜರ್‌ ಇದರೊಂದಿಗೆ ಲಭ್ಯ. 0ಯಿಂದ ಶೇ 100ರಷ್ಟು ಬ್ಯಾಟರಿ ಚಾರ್ಜ್‌ಗೆ 40ರಿಂದ 50 ನಿಮಿಷ ಸಾಕು. ಬ್ಯಾಟರಿ ತುಸು ಬಿಸಿ ಎನಿಸಬಹುದು. 

ಸಿಇ4 ಲೈಟ್ 5ಜಿ ಸ್ಮಾರ್ಟ್‌ಫೋನ್‌ನ ಬೆಲೆ ₹19,999ಕ್ಕೆ ನಿಗದಿಪಡಿಸಲಾಗಿದೆ. ಅಂದರೆ ₹20 ಸಾವಿರ ಬೆಲೆಯ ಸ್ಮಾರ್ಟ್‌ಫೋನ್ ಬಯಸುವವರಿಗೆ ಇದು ಉತ್ತಮ ಆಯ್ಕೆ. ಕೆಲವು ವಿಭಾಗಗಳಲ್ಲಿ ಇದೇ ಬೆಲೆಯ ಮೊಟೊ ಫೋನ್‌ಗಳು ಉತ್ತಮ ಎಂದೆನಿಸಬಹುದು. ಆದರೆ ಒಟ್ಟಾರೆಯಾಗಿ ಅಮೊಲೆಡ್ ಡಿಸ್‌ಪ್ಲೇ, ಕ್ಯಾಮೆರಾದ ಗುಣಮಟ್ಟ, ಬ್ಯಾಟರಿ ಸಾಮರ್ಥ್ಯ ಆಯ್ಕೆಗೆ ಕಾರಣಗಳಾಗಿವೆ. ಇದರೊಂದಿಗೆ ಫೋನ್‌ನೊಂದಿಗೆ ಉತ್ತಮ ಸಿಲಿಕಾನ್‌ ಕವರ್‌ ಕೂಡಾ ನೀಡುತ್ತಿರುವುದು ಗ್ರಾಹಕರಿಗೆ ಬೋನಸ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT