ಅಕ್ಷಿನಿಮೀಲನ ಮಾಡದ ನಕ್ಷತ್ರದ ಗಣ ಗಗನದಿ ಹಾರದಿದೆ...

ಇದು ದ.ರಾ.ಬೇಂದ್ರೆಯವರ ‘ಅನಂತ ಪ್ರಣಯ’ ಕವಿತೆಯಲ್ಲಿ ಬರುವ ಸಾಲುಗಳು. ‘ಉತ್ತರಧ್ರುವದಿಂದ ದಕ್ಷಿಣಧ್ರುವಕೂ ಚುಂಬಕ ಗಾಳಿಯು ಬೀಸುತಿದೆ’ ಎಂದು ಆರಂಭವಾಗುವ ಕವಿತೆಯಲ್ಲಿ ಬರುವ ಈ ಸಾಲುಗಳು ಗಗನದಲ್ಲಿರುವ ತಾರಾಸಮೂಹವು ಶೋಭಿಸುತ್ತಿರುವ ಹಾರದಂತೆ ಕಾಣುತ್ತದೆ ಎಂದು ಅವರು ಬರೆಯುತ್ತಾರೆ. ಪುಟ್ಟಣ್ಣ ಕಣಗಾಲ್ ಅವರು ಕೊಡಗಿನಲ್ಲಿ ಚಿತ್ರೀಕರಿಸಿದ ‘ಶರಪಂಜರ’ ಚಿತ್ರದಲ್ಲಿ ಈ ಕವಿತೆಯನ್ನು ತಂದು, ದೃಶ್ಯಕಾವ್ಯವನ್ನೇ ಸೃಜಿಸಿದರು. ಇದೀಗ ಖಗೋಳ ವೀಕ್ಷಕರೆಲ್ಲ ತಾರಾಲೋಕದ ವೀಕ್ಷಣೆಗೆ ರಾಜ್ಯದಲ್ಲೇ ಕೊಡಗು ಪ್ರಶಸ್ತ ಜಿಲ್ಲೆಯೆಂದು ಇಲ್ಲಿಗೆ ಧಾವಿಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಖಗೋಳ ವೀಕ್ಷಕರ ಗಮನವನ್ನು ಡಿಸೆಂಬರ್‌ನಿಂದ ಮಾರ್ಚ್ ತಿಂಗಳವರೆಗೆ ಕೊಡಗು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮದ್ಯದ ಪಾರ್ಟಿಗಳಿಗೆ ಖ್ಯಾತಿ ಪಡೆದಿರುವ ಜಿಲ್ಲೆ, ಇದೀಗ ‘ಸ್ಟಾರ್ ಪಾರ್ಟಿ’ಗಳಿಗೂ ಪ್ರಸಿದ್ಧವಾಗುತ್ತಿದೆ. ಖಗೋಳ ಆಸಕ್ತರು ಈ ನಾಲ್ಕು ತಿಂಗಳ ಕಾಲ ಕೊಡಗಿಗೆ ಬಂದು ಟೆಲಿಸ್ಕೋಪ್‌ಗಳಲ್ಲಿ ನಕ್ಷತ್ರಪುಂಜಗಳನ್ನು ವೀಕ್ಷಿಸುತ್ತಾರೆ.

ಬೆಂಗಳೂರು ಅಸ್ಟ್ರಾನಮಿಕಲ್ ಸೊಸೈಟಿ ಎಂಬ ಖಗೋಳಾಸಕ್ತರ ಸಂಘಟನೆ ‘ಸ್ಟಾರ್ ಪಾರ್ಟಿ’ಗಳನ್ನು ಆಯೋಜಿಸುತ್ತಿದೆ. ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಟೆಲಿಸ್ಕೋಪ್ ಮೂಲಕ ರಾತ್ರಿ ವೇಳೆ ಆಕಾಶಕಾಯಗಳನ್ನು ವೀಕ್ಷಿಸಿ, ಗುರುತಿಸಿ ಸಂಭ್ರಮಿಸುವ ಅವಕಾಶವನ್ನು ನೀಡುತ್ತಿದೆ.

ಈ ಸಂಘಟನೆಯಲ್ಲಿ ಸದ್ಯ 20ರಿಂದ 30 ಮಂದಿ ಸ್ವಯಂಸೇವಕರಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಸಕ್ರಿಯರಾಗಿದ್ದಾರೆ. 2020ರಲ್ಲಿ ಇಂತಹದ್ದೊಂದು ಪರಿಕಲ್ಪನೆಯನ್ನಿಟ್ಟುಕೊಂಡು ನಕ್ಷತ್ರ ವೀಕ್ಷಣೆಯನ್ನು ಶುರು ಮಾಡಿದ ಈ ಸಂಘಟನೆಯು, ಇದೀಗ ಸತತ ಐದನೇ ವರ್ಷವೂ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿದೆ. ಈ ಗುಂಪಿನ ಸದಸ್ಯರು ಖಗೋಳ ಕೌತುಕಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ದೂಳು, ಬೆಳಕು ಮತ್ತು ಇತರೆ ಮಾಲಿನ್ಯ ಕಡಿಮೆ ಇರುವ ಕೊಡಗು, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ನಕ್ಷತ್ರ ವೀಕ್ಷಣೆಗೆ ಹೇಳಿ ಮಾಡಿಸಿದ ಜಾಗ. ಅದರಲ್ಲೂ ಡಿಸೆಂಬರ್‌ನಿಂದ ಮಾರ್ಚ್ ಅಂತ್ಯದವರೆಗೂ ಸಾಮಾನ್ಯವಾಗಿ ಎಲ್ಲ ದಿನಗಳಲ್ಲೂ ಮೋಡಗಳಿಲ್ಲದ ಶುಭ್ರ ಆಕಾಶವನ್ನು ಕಾಣಬಹುದು. ಅದರಲ್ಲೂ ಅಮಾವಾಸ್ಯೆಯ ಆಸುಪಾಸಿನಲ್ಲಿ ಹೆಚ್ಚು ನಿಖರವಾಗಿ ಆಕಾಶಕಾಯಗಳನ್ನು ಗುರುತಿಸಬಹುದು. ಹಾಗಾಗಿ, ಹೆಚ್ಚಿನ ಖಗೋಳ ವೀಕ್ಷಕರು ಇಲ್ಲಿಗೆ ಬರುತ್ತಾರೆ.

‘ಕೊಡಗು ಸಮಭಾಜಕ ವೃತ್ತಕ್ಕೆ ಸಮೀಪದಲ್ಲಿರುವುದರಿಂದ ಇಲ್ಲಿ ನಿಂತು ನೋಡಿದರೆ ಉತ್ತರ ಗೋಳ ಮತ್ತು ದಕ್ಷಿಣ ಗೋಳ ಎರಡರ ಆಕಾಶ ಕಾಯಗಳನ್ನು ಒಟ್ಟಿಗೆ ವೀಕ್ಷಿಸುವ ಅವಕಾಶವೂ ಇದೆ. ಉತ್ತರ ಕರ್ನಾಟಕ ಭಾಗಗಳಲ್ಲಿ ಕೇವಲ ಉತ್ತರ ಗೋಳದ ಆಕಾಶ ಕಾಯಗಳಷ್ಟೇ ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ. ದಕ್ಷಿಣ ಗೋಳದ ಆಕಾಶ ಕಾಯಗಳು ಹೆಚ್ಚು ಸ್ಪಷ್ಟವಾಗಿ ಕಾಣುವುದಿಲ್ಲ’ ಎನ್ನುತ್ತಾರೆ ಬೆಂಗಳೂರು ಅಸ್ಟ್ರಾನಮಿಕಲ್ ಸೊಸೈಟಿಯ ವಿಶ್ವನಾಥ್.

ಆಸಕ್ತರು ಟೆಲಿಸ್ಕೋಪ್‌ಗಳನ್ನು ತಾವೇ ತರಬಹುದು. ಇಲ್ಲದೇ ಇದ್ದರೂ ಬೇರೆಯವರ ಟೆಲಿಸ್ಕೋಪ್‌ನಲ್ಲಿ ನಕ್ಷತ್ರ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ. ಒಂದು ದಿನಕ್ಕೆ ಊಟ ಮತ್ತು ತಂಗುವುದಕ್ಕೆ ₹ 1,300 ನಿಗದಿ ಪಡಿಸಲಾಗಿದೆ. ಸದ್ಯ, ಮಾರ್ಚ್ 8 ರಿಂದ 12ರವರೆಗೆ ಭಾಗಮಂಡಲದಲ್ಲಿ ನಕ್ಷತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ‘ಇದು ಲಾಭಕ್ಕಾಗಿ ಮಾಡಿದ ಕಾರ್ಯಕ್ರಮ ಅಲ್ಲ. ಜನರಲ್ಲಿ ಬಾಹ್ಯಾಕಾಶ ಕುರಿತು ಕುತೂಹಲ ಮತ್ತು ಅರಿವು ಹೆಚ್ಚಿಸುವ ಮೂಲಕ ವೈಚಾರಿಕತೆ ಬೆಳೆಸುವುದು ನಮ್ಮ ಉದ್ದೇಶ’ ಎಂದು ಸೊಸೈಟಿ ಹೇಳುತ್ತದೆ.

ಇಲ್ಲಿ ನಮ್ಮ ಗೆಲಾಕ್ಸಿಯಾದ ಆಕಾಶಗಂಗೆ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಇದರಿಂದಾಚೆ ಇರುವ ಆಂಡ್ರೊಮಿಡಾ ಗೆಲಾಕ್ಸಿಯನ್ನೂ ಸ್ಪಷ್ಟವಾಗಿ ಟೆಲಿಸ್ಕೋಪ್‌ನಲ್ಲಿ ವೀಕ್ಷಿಸಬಹುದು. ಛಾಯಾಚಿತ್ರಗಳನ್ನೂ ತೆಗೆಯಬಹುದು. ನಾಸಾ ಮತ್ತು ಇಸ್ರೊ ತೆಗೆಯುವ ಗುಣಮಟ್ಟದಷ್ಟು ಚಿತ್ರ ತೆಗೆಯುವ ದುಬಾರಿ ಬೆಲೆಯ ಟೆಲಿಸ್ಕೋಪ್‌ಗಳನ್ನು ಕೆಲವರು ಇಲ್ಲಿಗೆ ತಂದು ವೀಕ್ಷಿಸುತ್ತಾರೆ. ಇದೊಂದು ಬಗೆಯ ಹಬ್ಬದಂತೆ ಸಂಘಟನೆಯ ಸದಸ್ಯರು ಸಂಭ್ರಮಿಸುತ್ತಾರೆ.

ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಉಲ್ಕಾಪಾತ ಹೆಚ್ಚು ಸಂಭವಿಸುತ್ತದೆ. ಈ ವೇಳೆ ಇಲ್ಲಿಗೆ ಬರುವ ಖಗೋಳ ವೀಕ್ಷಕರ ಟೆಲಿಸ್ಕೋಪ್ ಬಿಟ್ಟು ಬರಿಗಣ್ಣಿನಲ್ಲೇ ರಾತ್ರಿ ಇಡೀ ಆಗಸ ನೋಡುತ್ತಾ ಎಷ್ಟೆಷ್ಟು ಉಲ್ಲೆಗಳು ಉರಿದು ಹೋದವು ಎಂಬುದನ್ನು ಲೆಕ್ಕ ಹಾಕುತ್ತಾರೆ.

ಆಕಾಶ ವೀಕ್ಷಣೆಗಾಗಿಯೇ ಟೆಲಿಸ್ಕೋಪ್ ಖರೀದಿಸಿ ಬೆಂಗಳೂರು ಅಥವಾ ಬೇರೆ ನಗರಗಳಲ್ಲಿ ವೀಕ್ಷಿಸಿ ಗ್ರಹ, ತಾರೆಗಳು ಸ್ಪಷ್ಟವಾಗಿ ಕಾಣದೆ ನಿರಾಶರಾಗಿ ಟೆಲಿಸ್ಕೋಪ್ ಸರಿ ಇಲ್ಲ ಎಂದು ಮೂಲೆಗೆ ಎಸೆದವರೂ ಇದ್ದಾರೆ. ಆ ಟೆಲಿಸ್ಕೋಪ್‌ಗಳನ್ನು ಇಲ್ಲಿಗೆ ತಂದರೆ ಅದ್ಭುತವಾದ ತಾರೆಗಳ ಲೋಕವೇ ತೆರೆದುಕೊಳ್ಳುತ್ತದೆ.

ಬೆಂಗಳೂರಿನ ಆಗಸಕ್ಕೂ ಭಾಗಮಂಡಲದ ಆಗಸಕ್ಕೂ ಹೋಲಿಸಿದರೆ ಬೆಂಗಳೂರಿಗಿಂತ ಶೇಕಡ 90ರಷ್ಟು ಹೆಚ್ಚು ಸ್ಪಷ್ಟವಾಗಿ ಆಕಾಶಕಾಯಗಳನ್ನು ಭಾಗಮಂಡಲದಲ್ಲಿ ವೀಕ್ಷಿಸಬಹುದು ಎಂದು ವಿಶ್ವನಾಥ್ ವಿಶ್ವಾಸದಿಂದ ಹೇಳುತ್ತಾರೆ.

ಬೆಂಗಳೂರು ಅಸ್ಟ್ರಾನಮಿಕಲ್ ಸೊಸೈಟಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಯೋಜಿಸಿದ್ದ ‘ಸ್ಟಾರ್ ಪಾರ್ಟಿ’ಯಲ್ಲಿ 80, ಜನವರಿಯಲ್ಲಿ 70, ಫೆಬ್ರುವರಿಯಲ್ಲಿ 60 ಮಂದಿ ಭಾಗಹಿಸಿದ್ದರು. ಮಾರ್ಚ್ 8 ರಿಂದ 12 ರವರೆಗೆ ಆರಂಭವಾಗುವ ಖಗೋಳ ವೀಕ್ಷಣೆಗಾಗಿ ಈಗಾಗಲೇ 75 ಜನರು ನೋಂದಣಿ ಮಾಡಿದ್ದಾರೆ.

ಖಗೋಳ ವೀಕ್ಷಕರು ಕೊಡಗಿನಲ್ಲಿ ನಕ್ಷತ್ರ ವೀಕ್ಷಣೆ ಸುಲಭ ಸಾಧ್ಯ ಎಂಬುದನ್ನು ಮನಗಂಡು ಇಲ್ಲಿಗೆ ಬಂದು ತಮ್ಮದೇ ಟೆಲಿಸ್ಕೋಪ್‌ನಲ್ಲಿ ಆಕಾಶಕಾಯ ವೀಕ್ಷಿಸಿ ವಾಪಸ್ ತೆರಳುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಈ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದೆ. ಇತ್ತೀಚೆಗಷ್ಟೇ ಇಲ್ಲೊಂದು ತಾರಾಲಯ ಮತ್ತು ಪ‍್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯಲು ಸರ್ಕಾರ ಜಾಗ ಗುರುತಿಸಿ ಸಿದ್ಧತೆಗಳನ್ನು ಆರಂಭಿಸಿದೆ.

ಈಗಾಗಲೇ ಹಲವು ರೆಸಾರ್ಟ್‌ಗಳು ಸಹ ಇಂತಹ ಅವಕಾಶವನ್ನು ಪ್ರವಾಸಿಗರಿಗೆ ನೀಡುವ ಮೂಲಕ ಕೊಡಗಿನ ಪ್ರವಾಸೋದ್ಯಮಕ್ಕೆ ಗಗನದ ರಂಗನ್ನೂ ಚೆಲ್ಲಿದ್ದಾರೆ. ಕೆಲವೊಂದು ತೀರಾ ದುಬಾರಿಯೂ ಇದೆ. ಆದರೆ, ಕೊಡಗಿನ ಕೆಲವೇ ಕೆಲವು ಪ್ರದೇಶಗಳನ್ನಷ್ಟೇ ವೀಕ್ಷಿಸಿ ಕಾಲಕಳೆದು ಹೋಗುತ್ತಿದ್ದ ಪ್ರವಾಸಿಗರಿಗೆ ಖಗೋಳ ಪ್ರವಾಸೋದ್ಯಮ ಹೊಸದೊಂದು ಲೋಕವನ್ನೇ ತೋರಿಸುತ್ತಿದೆ. ಅಲ್ಲದೇ ವೈಚಾರಿಕತೆಯನ್ನೂ ಮೂಡಿಸುತ್ತಿದೆ.

ಮಾಹಿತಿಗೆ: https://bas.org.in/ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.