ಬರಿಗಣ್ಣಿನ ವೀಕ್ಷಕರಿಗೆ ಸವಾಲುಗಳಾಗಿ ಉಳಿದುಕೊಂಡಿದ್ದರೂ ಸಾವಿರಾರು ವರ್ಷಗಳ ಹಿಂದೆ ಕಷ್ಟಪಟ್ಟು ಗ್ರಹಣದ ಲೆಕ್ಕ ಮಾಡಿ ತಲೆ ಎತ್ತಿ ನೋಡಿ ಕಂಡದ್ದನ್ನು ಪ್ರಾಮಾಣಿಕವಾಗಿ ದಾಖಲಿಸಿದ ಹಿರಿಯರ ಸಾಧನೆಯನ್ನು ಎತ್ತಿ ಹಿಡಿದ, ಶಾಸನಗಳ ಅಧ್ಯಯನದಲ್ಲಿ ಮಹತ್ವದ ಕೊಡುಗೆ ನೀಡಿದ ಈ ದೀಪ್ತಿಹ್ರಾಸ ಗ್ರಹಣದ ಮಜಕೂರಾದರೂ ಏನು?

ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಇಂಟರ್ನೆಟ್ ಇನ್ನೂ ಎಳವೆಯಲ್ಲಿದ್ದಾಗ ಒಂದಿಬ್ಬರು ಕ್ಯಾಲೆಂಡರ್ ಮುದ್ರಕರಿಗೆ ಒಂದು ಸಮಸ್ಯೆ ಎದುರಾಗಿತ್ತು. ಅವರಿಗೆ ಲಭ್ಯವಿದ್ದ ಪಂಚಾಂಗದ ಲೆಕ್ಕದ ಪ್ರಕಾರ ಕೆಲವು ತಾರೀಕುಗಳಿಗೆ ಚಂದ್ರಗ್ರಹಣ ಇಲ್ಲ ಎಂದಾಗುತ್ತಿತ್ತು. ಆದರೆ, ಯು.ಎಸ್. ನಾವಲ್ ಅಬ್ಸರ್ವೇಟರಿ ಅದನ್ನು ಗ್ರಹಣ ಎಂದು ಗುರುತಿಸುತ್ತಿತ್ತು. ಹೀಗಾಗಿ ಇದನ್ನು ಕ್ಯಾಲೆಂಡರ್ನಲ್ಲಿ ಸೂಚಿಸಬೇಕೇ ಬೇಡವೇ? -ಇದು ಅವರ ಸಮಸ್ಯೆ. ಇಂತಹ ಗ್ರಹಣದ ಲೆಕ್ಕವನ್ನು ಅವರು ನನ್ನೊಡನೆ ಚರ್ಚಿಸಲು ಬರುತ್ತಿದ್ದರು.

ಇದು ಚಂದ್ರಗ್ರಹಣದ ಸಮಸ್ಯೆ. ಈ ಬಾರಿ ಕ್ಯಾಲೆಂಡರ್ ಗಮನಿಸಿದ್ದೀರಾ? ಒಂದೂ ಚಂದ್ರಗ್ರಹಣವಿಲ್ಲ. ಅದು ಹೇಗೆ? ಸೂರ್ಯ ಮತ್ತು ಚಂದ್ರಗ್ರಹಣ ಜೋಡಿ ಜೋಡಿಯಾಗಿ ಬರಬೇಕಲ್ಲವೇ? ಅಥವಾ ನಮಗೆ ಯಾವುದೂ ಕಾಣದೆ ಬೇರೆ ದೇಶಗಳಿಗೆ ಕಾಣುತ್ತಿರಬಹುದೇ?

ಗ್ರಹಣದ ಲೆಕ್ಕ ಎಂದರೆ ಒಂದು ಸವಾಲು - ಹಿಂದೆಯೂ ಅಷ್ಟೆ; ಈಗಲೂ ಅಷ್ಟೆ.

ಇಂದಿನ ಇಂಟರ್ನೆಟ್ ಯುಗದಲ್ಲಿ ಈ ಸಮಸ್ಯೆಗಳಿಗೆ ಸುಲಭ ಪರಿಹಾರ ಸಿಗುತ್ತದೆ. ಆದರೆ, ಮೂಲಭೂತ ತತ್ವ ಅರ್ಥವಾದರೆ ಮಾತ್ರ. ಭೂಮಿಯಿಂದ ಕಂಡಂತೆ ಸೂರ್ಯ ಮತ್ತು ಚಂದ್ರ ಎರಡೂ ಭೂಮಿಯನ್ನು ಸುತ್ತುತ್ತವೆ ಎನ್ನಬಹುದು (ವಾಸ್ತವದಲ್ಲಿ ಭೂಮಿ ಸೂರ್ಯನನ್ನು ಸುತ್ತುತ್ತದೆ; ಆದರೆ ಗ್ರಹಣದ ಲೆಕ್ಕಕ್ಕೆ ಹೀಗೆ ಕಲ್ಪಿಸಿಕೊಂಡರೆ ಅಡ್ಡಿ ಇಲ್ಲ). ಪ್ರತಿ ಅಮಾವಾಸ್ಯೆಗೂ ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಹಾದುಹೋಗುತ್ತದೆ. ಪ್ರತಿ ಹುಣ್ಣಿಮೆಗೂ ಚಂದ್ರ ಮತ್ತು ಸೂರ್ಯರ ನಡುವೆ ಭೂಮಿ ಇರುತ್ತದೆ.

ಹಾಗಿದ್ದರೆ ಪ್ರತಿ ತಿಂಗಳೂ ಗ್ರಹಣಗಳೇಕೆ ಆಗುವುದಿಲ್ಲ? ಈ ಪ್ರಶ್ನೆಗೆ ಉತ್ತರ ಹುಡುಕಲು ಹಿಂದಿನವರು ಗ್ರಹಣಗಳ ನಿಯತಕಾಲಿಕತೆಯನ್ನೇ ಬಳಸಿಕೊಂಡರು. ಮೂರೂ ಕಾಯಗಳು ಒಂದೇ ನೇರಕ್ಕೆ ಬಂದಾಗ ಮಾತ್ರ ನೆರಳಿನ ಆಟ ಸಾಧ್ಯ. ಪ್ರತಿ ತಿಂಗಳೂ ಅವು ಒಂದೇ ನೇರಕ್ಕೆ ಬರಲಾರವು. ಏಕೆಂದರೆ, ಚಂದ್ರ ಮತ್ತು ಭೂಮಿಯ ಕಕ್ಷಾತಲಗಳು ಬೇರೆ ಬೇರೆ.

ನೆರಳಿನ ಚಿತ್ರಗಳನ್ನೂ ಬರೆದು ಗ್ರಹಣದ ಅರ್ಥವನ್ನು ಈಗ ಪ್ರಾಥಮಿಕ ಶಾಲೆಯಲ್ಲಿಯೇ ಕಲಿಸಿಕೊಡಲಾಗುತ್ತದೆ. ಭೂಮಿಯ ನೆರಳಿನಲ್ಲಿ ಎರಡು ಭಾಗಗಳಿವೆ ಒಂದು ದಟ್ಟವಾದ ಮಧ್ಯಭಾಗ. ಇದನ್ನು ಪೂರ್ಣಛಾಯಾಪ್ರದೇಶ ಎಂದು ಕರೆದಿದ್ದೇವೆ. ಇನ್ನೊಂದು ಅಷ್ಟೇನೂ ದಟ್ಟವಲ್ಲದ ನೆರಳಿನ ಭಾಗ; ಇಲ್ಲಿಗೆ ಸ್ವಲ್ಪ ಪ್ರಮಾಣದ ಸೂರ್ಯನ ಬೆಳಕು ತಲುಪುವುದು ಸಾಧ್ಯ. ಇದನ್ನು ಪಾರ್ಶ್ವ ಛಾಯಾಪ್ರದೇಶ ಎಂದು ಹೆಸರಿಸಿದ್ದೇವೆ. ಚಂದ್ರ, ಮೊದಲು ಪಾರ್ಶ್ವ ಛಾಯಾಪ್ರದೇಶವನ್ನು ದಾಟಿ, ಆಮೇಲೆ ಪೂರ್ಣ ಛಾಯಾಪ್ರದೇಶವನ್ನು ಪ್ರವೇಶಿಸುತ್ತದೆ. ಆಗ ನಮಗೆ ಅದರ ಒಂದು ಭಾಗದಲ್ಲಿ ಕಪ್ಪು ಹತ್ತಿದ ಹಾಗೆ ಕಂಡುಬರುತ್ತದೆ. ಇದನ್ನೇ ಗ್ರಹಣದ ಆರಂಭ ಎಂದು ಗುರುತಿಸುತ್ತೇವೆ. ಆದರೆ, ವಾಸ್ತವದಲ್ಲಿ ಪಾರ್ಶ್ವ ಛಾಯಾಪ್ರದೇಶವನ್ನು ಪ್ರವೇಶಿಸಿದಾಗಲೇ ಗ್ರಹಣದ ಆರಂಭ ಎಂದು ಖಗೋಳಜ್ಞರು ಗುರುತಿಸಿಕೊಳ್ಳುತ್ತಾರೆ. ಈ ಮಂಕಾದ ಪ್ರದೇಶ ಗೋಚರವಾಗುವುದು ಪೂರ್ಣತೆಯ ಹಂತವನ್ನು ಸಮೀಪಿಸಿದಾಗಲೇ. ಹುಣ್ಣಿಮೆ ಚಂದ್ರನ ಪ್ರಕಾಶ ಈ ಮಂದ ಬೆಳಕನ್ನು ಮುಚ್ಚಿ ಹಾಕಿಬಿಟ್ಟಿರುತ್ತದೆ. ಹಾಗಾದರೆ ಇದನ್ನು ಪತ್ತೆ ಮಾಡುವುದಾದರೂ ಹೇಗೆ?

ಹುಣ್ಣಿಮೆಯ ಚಂದ್ರನನ್ನು ನೋಡಿ ಗ್ರಹಣದ ಆರಂಭವನ್ನು ಪತ್ತೆ ಮಾಡುವುದು ಬಹಳ ಕಷ್ಟ. ಏಕೆಂದರೆ ಪಾರ್ಶ್ವ ಛಾಯಾಪ್ರದೇಶವನ್ನು ಚಂದ್ರ ಪ್ರವೇಶಿಸಿದಾಗ ಕಡಿಮೆಯಾಗುವ ಬೆಳಕಿನ ಪ್ರಮಾಣ ಬರಿಗಣ್ಣಿನ ಸಂವೇದನೆಗೆ ನಿಲುಕುವಂತಹುದಲ್ಲ (ಇಂದು ಫೋಟೊಗಳನ್ನು ತೆಗೆದು ನಿಧಾನವಾಗಿ ಹೋಲಿಸಿ ನಿರ್ಧರಿಸುವ ಅವಕಾಶವಿದೆ). ಈ ಕಷ್ಟದಿಂದಲೋ ಏನೋ ಹಿಂದಿನವರು ಪಾರ್ಶ್ವಛಾಯೆಯನ್ನು ಗಣನೆಗೆ ತಂದುಕೊಂಡಿರಲಿಲ್ಲ. ಅದನ್ನು ನಿರ್ಧರಿಸಲು ಪಠ್ಯಪುಸ್ತಕಗಳಲ್ಲಿ ಒಂದು ನಿಯಮವೂ ಇದೆ. ಚಂದ್ರನ ಗಾತ್ರದ ಹನ್ನೆರಡನೇ ಒಂದು ಭಾಗಕ್ಕಿಂತಲೂ ಕಡಿಮೆ ನೆರಳನ್ನು ಪ್ರವೇಶಿಸಿದರೆ ಅದನ್ನು ಗ್ರಹಣ ಎಂದು ಪರಿಗಣಿಸಬೇಕಾಗಿಲ್ಲ (ಸೂರ್ಯನಿಗಾದರೆ ಹದಿನಾರನೇ ಒಂದು ಭಾಗ).

ಪೂರ್ಣಗ್ರಹಣ ಅಂದರೆ ನೆರಳಿನ ದಟ್ಟಭಾಗವನ್ನು ಚಂದ್ರ ಹಾದುಹೋಗುವ ಕ್ರಿಯೆ. ಇದಕ್ಕೆ ಮುಂಚಿನದು ಪಾರ್ಶ್ವ ಛಾಯಾಪ್ರದೇಶದಲ್ಲಿ ಹಾದುಹೋಗುವುದನ್ನು ಖಂಡಗ್ರಹಣ ಅಥವಾ ಪಾರ್ಶ್ವಗ್ರಹಣ ಎಂದು ಕರೆಯಲಾಗಿದೆ. ಈಗೊಂದು ವಿಶೇಷ ಸಂದರ್ಭ ಸಾಧ್ಯವಿದೆ. ಚಂದ್ರ ನೆರಳಿನ ಮಧ್ಯದ ದಟ್ಟಭಾಗವನ್ನು ಪ್ರವೇಶಿಸದೆ ಪಾರ್ಶ್ವ ಛಾಯಾಪ್ರದೇಶವನ್ನು ಮಾತ್ರ ಹಾದುಹೋಗುವುದು. ಆಗ ಅದರ ಅನುಭವವೇ ನಮಗಾಗುವುದಿಲ್ಲ. ಇದು ‘ಹನ್ನೆರಡನೆಯ ಒಂದು ಭಾಗ’ ಎಂಬ ನಿಯಮದನ್ವಯ ಗ್ರಹಣ ಎನಿಸಿಕೊಳ್ಳುವುದಿಲ್ಲ. ಈ ಬಗೆಯ ‘ಗ್ರಹಣ’ವನ್ನು ಇಂಗ್ಲಿಷ್ನಲ್ಲಿ ಪೆನಂಬ್ರಲ್ ಎಂದು ವರ್ಗೀಕರಿಸುತ್ತಾರೆ.

ಸುಮಾರು 100 ವರ್ಷಗಳ ಹಿಂದೆ ಪ್ರಕಟವಾದ ಎಸ್. ನರಹರಯ್ಯ ಅವರ ಪುಸ್ತಕದಲ್ಲಿ ‘ಪೆನಂಬ್ರ’ ಎಂಬುದಕ್ಕೆ ಪೂರ್ಣವಚ್ಛಾಯೆ ಎಂದು ಕರೆದು, ‘ಪೆನಂಬ್ರಲ್’ ಎಂಬುದಕ್ಕೆ ದೀಪ್ತಿಹ್ರಾಸ ಎಂದು ಕರೆದಿದ್ದಾರೆ. ಅಂದರೆ ಬೆಳಕಿನ ಪ್ರಮಾಣ ಮಾತ್ರ ಕಡಿಮೆಯಾಗುವುದು ಎಂದು. ಖಂಡಚ್ಛಾಯೆ ಎಂಬುದರಿಂದ ಇದು ಭಿನ್ನ ಎಂದು ಹೀಗೆ ಬೇರೆ ಬೇರೆ ಪದಗಳನ್ನು ಟಂಕಿಸಿದ್ದಾರೆ.

ಪಾರ್ಶ್ವಗ್ರಹಣಕ್ಕೂ, ದೀಪ್ತಿಹ್ರಾಸಗ್ರಹಣಕ್ಕೂ ವ್ಯತ್ಯಾಸವೇನು? ಪಾರ್ಶ್ವಗ್ರಹಣದಲ್ಲಿ ಚಂದ್ರನ ಪಶ್ಚಿಮದ ಅಂಚು ಮೊದಲು ಮಂಕಾಗುತ್ತದೆ. ಬರುಬರುತ್ತಾ ಆ ಕತ್ತಲು ಅರ್ಧವನ್ನು ವ್ಯಾಪಿಸುತ್ತದೆ. ಆದರೆ ದೀಪ್ತಿಹ್ರಾಸದಲ್ಲಿ ಚಂದ್ರನ ಉತ್ತರ ಅಥವಾ ದಕ್ಷಿಣದ ಅಂಚು ಮಂಕಾಗಿ, ಪುನಃ ಬೆಳಗುತ್ತದೆ, ಅದು ಇತರ ಭಾಗಕ್ಕೆ ವ್ಯಾಪಿಸುವುದಿಲ್ಲ.

ಈ ವರ್ಷದ ನಾಲ್ಕೂ ಚಂದ್ರಗ್ರಹಣಗಳು ಇದೇ ದೀಪ್ತಿಹ್ರಾಸ ಎಂಬ ವರ್ಗಕ್ಕೆ ಸೇರುತ್ತವೆ. ಹಾಗಾಗಿ ಇವುಗಳಿಗೆ ಕ್ಯಾಲೆಂಡರ್ನಲ್ಲಿ ಪ್ರವೇಶವಿಲ್ಲ. ಅಂದರೆ ಇವು ನಮಗೆ ಗ್ರಹಣ ಎಂದು ಗೊತ್ತಾಗುವುದೇ ಇಲ್ಲ.

ಬರಿಗಣ್ಣಿನ ವೀಕ್ಷಣೆ ಸಾಧ್ಯವೇ?

ಈಗ್ಗೆ ಸುಮಾರು 20 ವರ್ಷಗಳ ಹಿಂದೆ ಉಡುಪಿಯಿಂದ ಹಿರಿಯರೊಬ್ಬರು ಫೋನ್ ಮಾಡಿದ್ದರು. ‘ನಿನ್ನೆ ಚಂದ್ರದ ದಕ್ಷಿಣ ಅಂಚು ಏಕೆ ಮಂಕಾಗಿತ್ತು?’ – ಇದು ಅವರ ಪ್ರಶ್ನೆ. ಅವರಿಗೆ ಪ್ರತಿ ಸಂಜೆಯೂ ಆಗಸವನ್ನು ವೀಕ್ಷಿಸುವುದು ಹವ್ಯಾಸ. ಆದ್ದರಿಂದ ಚಂದ್ರನ ಅಂಚು ಮಂಕಾಗಿದ್ದುದನ್ನು ಗುರುತಿಸಲು ಸಾಧ್ಯವಾಗಿತ್ತು. ಅವರ ಪ್ರಶ್ನೆಗೆ ಉತ್ತರಿಸಲು ನಾನು ದೀಪ್ತಿಹ್ರಾಸದ ಕುರಿತು ಪಠ್ಯಪುಸ್ತಕಗಳನ್ನು ಓದಿ ಜೀರ್ಣಿಸಿಕೊಂಡು ಅವರು ಪುನಃ ಕರೆ ಮಾಡಿದಾಗ ಅವರಿಗೆ ತೃಪ್ತಿಯಾಗುವ ಉತ್ತರ ಕೊಟ್ಟೆ.

ಅಂದರೆ ದೀಪ್ತಿಹ್ರಾಸ ಗ್ರಹಣಗಳನ್ನು ಕಂಡು ಹಿಡಿಯುವುದು ಸಾಧ್ಯ ಎಂದಾಯಿತು. ಹಾಗಿದ್ದರೆ ಹಿಂದೆ ಯಾರಾದರೂ ಇದನ್ನು ನೋಡಿರಬಹುದೇ?

ಯಾವುದೇ ಪಠ್ಯಗಳಲ್ಲಿ ಈ ಬಗ್ಗೆ ಪ್ರಸ್ತಾಪ ಇಲ್ಲ. ಆದರೆ, ಬರಿಗಣ್ಣಿನಿಂದ ನೋಡಲು ಸಾಧ್ಯವಾಗಿದ್ದಿರಬೇಕು. ಏಕೆಂದರೆ, ಚಂದ್ರನ ಬಿಂಬ ಹೇಗೆ ಕಾಣುತ್ತದೆ ಎಂಬುದನ್ನು ನಿರ್ಧರಿಸುವ ಇನ್ನೊಂದು ಮುಖ್ಯ ಅಂಶವಿದೆ. ಅದೇ ನಮ್ಮ ಭೂಮಿಯ ಕವಚ -ವಾತಾವರಣ. ಆದ್ದರಿಂದ ನೆರಳುಗಳನ್ನು ಪರಿಪೂರ್ಣ ವೃತ್ತಗಳನ್ನಾಗಿ ನಾವು ಚಿತ್ರದಲ್ಲಿ ಗುರುತಿಸಿ ಲೆಕ್ಕ ಮಾಡಿದ್ದರೂ ವಾಸ್ತವದಲ್ಲಿ ನಿಖರವಾದ ವೃತ್ತ ಕಾಣುವುದಿಲ್ಲ. ಭೂಮಿಯ ವಾತಾವರಣದ ಮೂಲಕ ಹಾದುಬರುವ ಬೆಳಕು ಈ ವೃತ್ತವನ್ನು ಮಬ್ಬುಗೊಳಿಸುತ್ತದೆ. ಬರಿಗಣ್ಣಿನಿಂದ ಚಂದ್ರಗ್ರಹಣವನ್ನು ನೋಡಿ ತನ್ಮೂಲಕ ಭೂಮಿಯ ನೆರಳಿನ ವ್ಯಾಸದ ಅಂದಾಜು ಮಾಡಿದ್ದು ದೊಡ್ಡ ಸಾಹಸ ಎನ್ನಬಹುದು. ಈ ಪ್ರಯತ್ನದ ಮೊದಲ ಸುಳಿವು ಸಿಗುವುದು ವರಾಹಮಿಹಿರನ ‘ಪಂಚಸಿದ್ಧಾಂತಿಕಾ’ ಗ್ರಂಥದಲ್ಲಿ:

ಆವರಣಂ ಮಹದ್ದಿನ್ದೋಃ ಕುಣ್ಠವಿಷಾಣಸ್ತೋರ್ಧಸಞ್ಜನ್ನಃ
ಸ್ವಲ್ಪಂ ರವೇರ್ಯತೋತಸ್ತೀಕ್ಷ್ಣವಿಷಾಣೋ ರವಿರ್ಭವತಿ

ಗ್ರಹಣದ ಸಮಯದಲ್ಲಿ ಸೂರ್ಯನ ಆಕಾರ ತೀವ್ರ ವಿಷಾಣ; ಚಂದ್ರನದು ಕುಂಠ ವಿಷಾಣ. ಅಂದರೆ ಎರಡು ಕೊಂಬುಗಳಂತೆ ಕಾಣುವ ಆಕಾರದಲ್ಲಿ ಸೂರ್ಯನದು ಚೂಪಾದ ಕೊಂಬುಗಳು. ಚಂದ್ರನದು ಮೊಂಡು ಕೊಂಬುಗಳು. ಇದಕ್ಕೆ ಕಾರಣ ಭೂಮಿಯ ನೆರಳು ಚಂದ್ರನ ವ್ಯಾಸಕ್ಕಿಂತ ಒಂದೂವರೆಯಷ್ಟು ದೊಡ್ಡದು ಎಂಬ ತರ್ಕದಿಂದಲೇ ಇದರ ವ್ಯಾಸವನ್ನು ಅಳತೆ ಮಾಡುವುದಲ್ಲದೆ ಅದಕ್ಕೊಂದು ರೇಖಾಗಣಿತದ ಸೂತ್ರವನ್ನೂ ಪಠ್ಯಗಳು ಕೊಡುತ್ತವೆ.

ಇಷ್ಟು ನಿಖರವಾಗಿ ಗ್ರಹಣಗಳ ವಿಷಯವನ್ನು ಬರೆದವರು ತಮ್ಮ ಲೆಕ್ಕಗಳ ತಪ್ಪುಒಪ್ಪುಗಳನ್ನು ಆಕಾಶದಲ್ಲಿ ಪರಿಶೀಲಿಸಿರಬೇಕಲ್ಲವೇ? ಇದನ್ನು ಚಿಂತಿಸುವಾಗ ಪಠ್ಯಗಳಲ್ಲದ ಬೇರೆ ಆಕರಗಳನ್ನು ಗಮನಿಸಬೇಕು. ಇಲ್ಲಿ ಶಿಲಾಶಾಸನಗಳು ನೆರವಾಗುತ್ತವೆ. ಗ್ರಹಣ ಎಂಬುದು ಪುಣ್ಯಕಾಲ -ಆಗ್ಗೆ ದಾನ ದತ್ತಿ ನೀಡುವುದು ಪುಣ್ಯದ ಕೆಲಸ ಎಂದು ಸುಮಾರು ಸಾವಿರದೈನೂರು ವರ್ಷಗಳ ಹಿಂದಿದ್ದ ಭಾವನೆ. ಆದ್ದರಿಂದ ಹೆಚ್ಚಿನ ಶಾಸನಗಳನ್ನು ಗ್ರಹಣದ ಸಂದರ್ಭದಲ್ಲಿಯೇ ಬರೆಯಿಸಿದ್ದಿದೆ.

ನೂರಿನ್ನೂರು ವರ್ಷಗಳ ಹಿಂದೆ ಈ ಶಾಸನಗಳನ್ನು ಅಧ್ಯಯನ ಮಾಡುವಾಗ ಅವುಗಳ ಕಾಲನಿರ್ಣಯದಲ್ಲಿ ಈ ಗ್ರಹಣಗಳ ಉಲ್ಲೇಖ ನೆರವಾಗಿದೆ. ಇದಕ್ಕಾಗಿ ಪಂಚಾಂಗಕರ್ತೃಗಳು ವಿಶೇಷವಾಗಿ ಲೆಕ್ಕವನ್ನು ಮಾಡಿ ಎಪಿಗ್ರಾಫಿಯಾಗಳಲ್ಲಿ ಅನುಬಂಧಗಳನ್ನಾಗಿ ಪ್ರಕಟಿಸಿದ್ದಾರೆ. ಈ ಲೆಕ್ಕದ ಪ್ರಕಾರ ಚಂದ್ರಗ್ರಹಣ ಎಂದು ನಿರ್ಣಯವಾಗದಿದ್ದರೆ ಅದು ತಪ್ಪು ಉಲ್ಲೇಖ ಎಂದು ಷರಾ ಬರೆದಿದ್ದಾರೆ. ಈ ವಿಧಾನದಿಂದ ಹಲವಾರು ಶಾಸನಗಳಲ್ಲಿ ಗ್ರಹಣದ ಉಲ್ಲೇಖ ತಪ್ಪಾಗಿದೆ ಎಂಬರ್ಥ ಬರುತ್ತದೆ. ಇಂತಹ ಸಂದರ್ಭಗಳನ್ನು ವಿಶೇಷವಾಗಿ ಅಧ್ಯಯನ ಮಾಡಿದಾಗ ಅನೇಕ ದೀಪ್ತಿಹ್ರಾಸದಂತಹ ವಿಷಯಗಳು ಬೆಳಕಿಗೆ ಬರುತ್ತವೆ. ಆಂಧ್ರಪ್ರದೇಶದ ವಸ್ತುಸಂಗ್ರಹಾಲಯದಲ್ಲಿರುವ ಅತ್ಯಂತ ಹಳೆಯದಾದ ತಾಮ್ರಶಾಸನವನ್ನೇ ನೋಡಿ. ಶಕ ಇತ್ಯಾದಿ ವಿವರಗಳು ಇರುವುದರಿಂದ ಸಾಮಾನ್ಯ (ಕ್ರಿಸ್ತ) ಶಕ 660ರ ವೈಶಾಖಮಾಸದ ಹುಣ್ಣಿಮೆ ಅಂದರೆ ಏಪ್ರಿಲ್ 30 ಎಂದು ತಿಳಿಯುತ್ತದೆ. ಅದರಲ್ಲಿ ಗ್ರಹಣದ ಪ್ರಸ್ತಾಪ ಇದೆ. ಆದರೆ, ಅಂದು ಗ್ರಹಣ ನಡೆಯಲಿಲ್ಲ ಎಂಬ ಷರಾ ಕೂಡ ಇದೆ. ಇದು ದೀಪ್ತಿಹ್ರಾಸ ಎಂದು ಇಂದಿನ ಕಂಪ್ಯೂಟರ್ ಲೆಕ್ಕದಿಂದ ತಿಳಿದುಕೊಳ್ಳಬಹುದು.

ಗ್ರಹಣಗಳಲ್ಲಿ ಶೇಕಡಾವಾರು ಎಷ್ಟು ಭಾಗ ಆವೃತವಾಗಿತ್ತು ಎಂದು ಸೂಚಿಸಲು ಪರಿಮಾಣ ಎಂಬುದೊಂದು ಅಳತೆ ಇದೆ. ಇದು ಹೆಚ್ಚು ಇದ್ದರೆ ಮಸಿ ಹತ್ತಿದ ಅಂಚು ಕಾಣುವುದು. ಕಡಿಮೆ ಇದ್ದರೆ ಬರಿಗಣ್ಣಿಗೆ ಕಾಣುವುದಿಲ್ಲ. ಕಾರಣ ಸ್ಪಷ್ಟ. ಭೂ ವಾತಾವರಣದ ಸಾಂದ್ರತೆ ನೆಲದ ಮಟ್ಟದಲ್ಲಿ ಹೆಚ್ಚು; ಮೇಲೆ ಏರಿದ ಹಾಗೆ ಕಡಿಮೆ. ಇದರ ಪ್ರಭಾವ ಭೂಮಿಯ ನೆರಳಿನಲ್ಲಿಯೂ ಕಾಣುವುದು.

ಸೂರ್ಯ ಮತ್ತು ಚಂದ್ರ ಗ್ರಹಣಗಳ ವಿದ್ಯಮಾನದಲ್ಲಿ ಇನ್ನೊಂದು ವೈಶಿಷ್ಟ್ಯ ಇದೆ. ಅವು ಯಾವಾಗಲೂ ಜೋಡಿಯಾಗಿಯೇ ಬರುತ್ತವೆ. ಇದಕ್ಕೂ ಗಣಿತದ ವ್ಯಾಖ್ಯೆ ಉಂಟು. ಸೂರ್ಯಗ್ರಹಣವಾದರೆ ಅದರ ಮುಂಚೆ ಅಥವಾ ನಂತರ ಅಥವಾ ಎರಡೂ ಸಂದರ್ಭದಲ್ಲಿ ಚಂದ್ರಗ್ರಹಣದ ಸಾಧ್ಯತೆ ಇರುತ್ತದೆ. ಪೂರ್ಣ ಸೂರ್ಯಗ್ರಹಣವಾದರೆ ಅದರ ಆಚೀಚಿನದು ಪೆನಂಬ್ರಲ್ ಅಂದರೆ ದೀಪ್ತಿ ಹ್ರಾಸವಾಗುವ ಸಾಧ್ಯತೆ ಇದೆ. ಈ ವರ್ಷದ ವಿಶೇಷ ಇದೇ -ಜನವರಿಯದು ದೀಪ್ತಿಹ್ರಾಸ. ಮುಂದೆ ಜೂನ್ನಲ್ಲಿ ಪೂರ್ಣ (ಕಂಕಣ) ಗ್ರಹಣ ಆಗುವುದಿದೆ. ಅದಕ್ಕೆ ಮುಂಚಿನ ಗ್ರಹಣ ಕೂಡ ದೀಪ್ತಿಹ್ರಾಸವೇ. ಮುಂದೆ ಡಿಸೆಂಬರ್ನಲ್ಲಿ ಕೂಡ ಪೂರ್ಣ ಸೂರ್ಯಗ್ರಹಣ; ಅದರ ಜೋಡಿಯಾಗಿ ದೀಪ್ತಿಹ್ರಾಸ ಉಂಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.