ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಕ್ರೋRNA ಆವಿಷ್ಕಾರ: ಅಮೆರಿಕದ ವಿಕ್ಟರ್, ಗ್ಯಾರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

Published : 7 ಅಕ್ಟೋಬರ್ 2024, 10:25 IST
Last Updated : 7 ಅಕ್ಟೋಬರ್ 2024, 10:25 IST
ಫಾಲೋ ಮಾಡಿ
Comments

ಸ್ಟಾಕ್‌ಹೋಮ್‌: ಕ್ಯಾನ್ಸರ್‌ಗೆ ಹೊಸ ವಿಧಾನದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಬಲ್ಲ ‘ಮೈಕ್ರೋಆರ್‌ಎನ್‌ಎ’ ಆವಿಷ್ಕಾರಕ್ಕಾಗಿ ಅಮೆರಿಕದ ವಿಕ್ಟರ್‌ ಆ್ಯಂಬ್ರೊಸ್ ಮತ್ತು ಗ್ಯಾರಿ ರುವ್ಕನ್‌ ಅವರಿಗೆ ಈ ಬಾರಿಯ ವೈದ್ಯಕೀಯ ಕ್ಷೇತ್ರದ ನೊಬೆಲ್‌ ಪುರಸ್ಕಾರ ಘೋಷಿಸಲಾಗಿದೆ.

‘ಇವರಿಬ್ಬರ ಹೊಸ ಆವಿಷ್ಕಾರವು ಜೀನ್‌ಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಹೊಸ ಸಿದ್ಧಾಂತವನ್ನು ಜಗತ್ತಿನ ಮುಂದಿಟ್ಟಿದೆ’ ಎಂದು ಆಯ್ಕೆ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಆ್ಯಂಬ್ರೋಸ್ ಅವರು ತಮಗೆ ನೊಬೆಲ್‌ ಪುರಸ್ಕಾರ ತಂದುಕೊಟ್ಟ ಸಂಶೋಧನೆಯನ್ನು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಿದ್ದಾರೆ. ಅವರು ಪ್ರಸ್ತುತ ಮೆಸಾಚುಸೆಟ್ಸ್‌ ಮೆಡಿಕಲ್‌ ಸ್ಕೂಲ್‌ನಲ್ಲಿ ನ್ಯಾಚುರಲ್‌ ಸೈನ್ಸ್‌ ವಿಷಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ರುವ್ಕನ್‌ ಅವರು ಮೆಸಾಚುಸೆಟ್ಸ್‌ ಜನರಲ್‌ ಹಾಸ್ಪಿಟಲ್‌ ಮತ್ತು ಜೆನೆಟಿಕ್ಸ್‌ ವಿಭಾಗದಲ್ಲಿ ತಾವು ಪ್ರಾಧ್ಯಾಪಕರಾಗಿರುವ ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ನಲ್ಲಿ ಸಂಶೋಧನೆ ಕೈಗೊಂಡಿದ್ದಾರೆ ಎಂದು ನೊಬೆಲ್‌ ಪ್ರಶಸ್ತಿ ಸಮಿತಿಯ ಕಾರ್ಯದರ್ಶಿ ಥಾಮಸ್‌ ಪರ್ಲ್‌ಮನ್‌ ಹೇಳಿದ್ದಾರೆ.

‘ಕೋಶಗಳ ಮಟ್ಟದಲ್ಲಿ ಜೀನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಿಯಂತ್ರಿಸಲು ಸಹಾಯ ಮಾಡುವ ಮೂಲಕ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಹೊಸ ವಿಧಾನದ ಚಿಕಿತ್ಸೆ ಕಂಡುಹಿಡಿಯುವ ಅವಕಾಶವನ್ನು ಮೈಕ್ರೋಆರ್‌ಎನ್‌ಎ, ವಿಜ್ಞಾನಿಗಳ ಮುಂದಿಟ್ಟಿದೆ’ ಎಂದು ಇಂಪೀರಿಯಲ್‌ ಕಾಲೇಜ್ ಲಂಡನ್‌ನ ಉಪನ್ಯಾಸಕಿ ಡಾ.ಕ್ಲೇರ್‌ ಫ್ಲೆಚರ್‌ ತಿಳಿಸಿದ್ದಾರೆ.

ವೈದ್ಯಕೀಯ ನೊಬೆಲ್‌ ವಿಜೇತರ ಹೆಸರು ಪ್ರಕಟಿಸುವುದರೊಂದಿಗೆ ಈ ವರ್ಷದ ನೊಬೆಲ್‌ ಪುರಸ್ಕಾರ ಘೋಷಣೆಗೆ ಚಾಲನೆ ಸಿಕ್ಕಂತಾಗಿದೆ. ಭೌತವಿಜ್ಞಾನ ಮತ್ತು ರಸಾಯವಿಜ್ಞಾನದ ಪ್ರಶಸ್ತಿ ವಿಜೇತರ ಹೆಸರನ್ನು ಕ್ರಮವಾಗಿ ಮಂಗಳವಾರ ಹಾಗೂ ಬುಧವಾರ ಪ್ರಕಟಿಸಲಾಗುತ್ತದೆ. ಸಾಹಿತ್ಯ ಕ್ಷೇತ್ರದ ಪುರಸ್ಕಾರವನ್ನು ಗುರುವಾರ ಹಾಗೂ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಲಾಗುತ್ತದೆ. 

ನೊಬೆಲ್‌ ಪ್ರಶಸ್ತಿಯು 10 ಲಕ್ಷ ಅಮೆರಿಕನ್ ಡಾಲರ್‌ (ಸುಮಾರು ₹8.39 ಕೋಟಿ) ನಗದು ಬಹುಮಾನ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT