ಹಿಂದೆಂದೂ ಕಂಡಿರದ ಅಲೌಕಿಕ ದೃಶ್ಯಗಳನ್ನು ಸೆರೆ ಹಿಡಿಯಲೆಂದೇ ‘ಜೇಮ್ಸ್’ ವೆಬ್ ದೂರದರ್ಶಕ ಆರು ತಿಂಗಳ ಹಿಂದೆ ಬಾಹ್ಯಾಕಾಶದ ಕಕ್ಷೆಗೇರಿತ್ತು. ಈಗ ಅದು ಕಳಿಸಿರುವ ಚಿತ್ರಗಳು 450 ಕೋಟಿ ವರ್ಷಗಳ ಹಿಂದಿನ ವಿಶ್ವದ ದೃಶ್ಯಗಳು. ಇನ್ನೂ 15–20 ವರ್ಷ ಅಲ್ಲಿಯೇ ನಿಂತು ಬ್ರಹ್ಮಾಂಡದ ಬೇರೆ ಬೇರೆ ಮಗ್ಗಲಿನ ಚಿತ್ರಗಳನ್ನು ಸೆರೆ ಹಿಡಿದು ಕಳಿಸಲಿದೆ ‘ಜೇಮ್ಸ್’. ಅಲ್ಲಿ ಅದೇನೇನು ನಿಗೂಢಗಳ ಸಂತೆ ಇದೆಯೊ, ಅದೆಷ್ಟು ಹೊಸ ಜಗತ್ತುಗಳು ತೆರೆದುಕೊಳ್ಳಲಿವೆಯೊ?! ಈ ಕುರಿತು ಲೇಖಕನಾಗೇಶ್ ಹೆಗಡೆ ಲೇಖನ

ಈ ಚಿತ್ರಗಳನ್ನು ಮತ್ತೊಮ್ಮೆ ನೋಡಿ. ಬ್ರಹ್ಮಾಂಡದ ಬಾಲ್ಯದ ದೃಶ್ಯಗಳು ಇವು. ಇಲ್ಲಿ ಪಳಪಳ ನಕ್ಷತ್ರಗಳಿವೆ. ಗೆಲಾಕ್ಸಿಗಳಿವೆ. ನೀಹಾರಿಕೆಗಳಿವೆ. ಪರಸ್ಪರ ಆಲಿಂಗನಕ್ಕೆ ಹೊರಟ ಮಿಡಿತಾರೆಗಳಿವೆ. ಒಂದನ್ನೊಂದು ನುಂಗಲು ಹವಣಿಸುವ ಗೆಲಾಕ್ಸಿಗಳಿವೆ. ಫೂತ್ಕರಿಸುವ ಜ್ವಾಲಾಮೇಘಗಳಿವೆ. ತಾರಾಪಟ್ಟಕ್ಕೆ ಪೈಪೋಟಿಗಿಳಿದ ಪುಡಿನಕ್ಷತ್ರಗಳಿವೆ. ಹೊಸ ನಕ್ಷತ್ರಗಳ ಉದಯಕ್ಕೆ ಬೀಜಾಂಕುರ ಮಾಡುತ್ತಿರುವ ಪ್ರಸೂತಿಮಂಡಲಗಳಿವೆ. ಮುದಿ ನಕ್ಷತ್ರಗಳನ್ನು ಸ್ವಾಹಾ ಮಾಡುವ ಗುರುತ್ವ ಯಜ್ಞಕುಂಡಗಳಿವೆ.

ಕವಿ ಕೆಎಸ್‌ನರ ಜೋಗುಳ ಹಾಡನ್ನು ನೆನಪಿಸುವ ‘ತಾರೆಗಳ ಜರತಾರಿ ಅಂಗಿ’ಗಳ ಅಂಗಡಿಗಳೇ ಇವೆ. ಬ್ರಹ್ಮಾಂಡದ ಬಾಲ್ಯದ ದೃಶ್ಯಜೋಗುಳ ಇದು! ಇವೆಲ್ಲ ಇದೇ ಮೊದಲ ಬಾರಿಗೆ ಮೊನ್ನೆ ಜುಲೈ 11ರಂದು ಬಾಹ್ಯಾಕಾಶದಲ್ಲಿರುವ ಜೇಮ್ಸ್ ವೆಬ್ ದೂರದರ್ಶಕದ ಮೂಲಕ ಕಂಡಿದ್ದು.

ಅಂದು ‘ನಾಸಾ’ ಬಾಹ್ಯಾಕಾಶ ಸಂಸ್ಥೆ ಈ ಚಿತ್ರಗಳ ಅನಾವರಣ ಮಾಡುತ್ತಿದ್ದಂತೆ ಇಡೀ ಜಗತ್ತೇ ನಿಬ್ಬೆರಗಾಯಿತು. ಖಗೋಲವಿಜ್ಞಾನಿಗಳು ಮೂಕವಿಸ್ಮಿತರಾದರು. ಹವ್ಯಾಸಿ ಖಗೋಲವೀಕ್ಷಕರಲ್ಲಿ ಅನೇಕರು ಗದ್ಗದಿತರಾದರು. ಜೇಮ್ಸ್ ವೆಬ್ ದೂರದರ್ಶಕದ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ತೊಡಗಿದ್ದ 20 ಸಾವಿರ ಸಿಬ್ಬಂದಿ ಕೇಕೆ ಹಾಕಿ ಕುಪ್ಪಳಿಸಿದರು. ಇವೆಲ್ಲವನ್ನೂ ಊಹಿಸಿ ಹಿಂದೆಲ್ಲ ಕಂಪ್ಯೂಟರ್ ಗ್ರಾಫಿಕ್ ಚಿತ್ರ ಬರೆಯುತ್ತಿದ್ದ ಕಲಾವಿದರೂ ಅಬ್ಬಾ ಎಂದರು. ಗೂಗಲ್ ಕೂಡ ತನ್ನ ಎಂದಿನ ಡೂಡ್ಲ್ ಬದಲು ಬ್ರಹ್ಮಾಂಡದ ಬಾಗಿಲನ್ನೇ ಬಿಡಿಸಿಟ್ಟು ಶತಕೋಟಿ ಜನರಿಗೆ ಅಚ್ಚರಿಯ ಐಕಾನನ್ನು ತೆರೆದಿಟ್ಟಿತು. ನ್ಯೂಯಾರ್ಕಿನ ಟೈಮ್ಸ್ ಚೌಕದ ಬೃಹತ್ ಪರದೆಯ ಮೇಲೆ ಈ ಚಿತ್ರಗಳು ವಿಜೃಂಭಿಸಿದವು.

ಈಪರಿಯ ಜಾಗತಿಕ ಸಂಭ್ರಮಕ್ಕೆ ಕಾರಣವಿಷ್ಟೆ: ಹಿಂದೆಂದೂ ಕಂಡಿರದ ಅಲೌಕಿಕ ದೃಶ್ಯಗಳನ್ನು ಸೆರೆ ಹಿಡಿಯಲೆಂದೇ ಜೇಮ್ಸ್ ವೆಬ್ ದೂರದರ್ಶಕ ಕಳೆದ ಕ್ರಿಸ್ಮಸ್ ದಿನದಂದು ಬಾಹ್ಯಾಕಾಶಕ್ಕೆ ಏರಿತ್ತು. ಅದರ ನಿರ್ಮಾಣದ ಕಥನವೇ ಅಪ್ರತಿಮವಾದುದು. ಮೂವತ್ತು ವರ್ಷಗಳ ಪರಿಶ್ರಮದಲ್ಲಿ ಅಮೆರಿಕ, ಕೆನಡಾ ಮತ್ತು ಐರೋಪ್ಯ ಸಂಘ ಒಟ್ಟಾಗಿ ಹತ್ತು ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು ಅದು. ಆರು ತಿಂಗಳ ಹಿಂದೆ ಕಕ್ಷೆಗೇರಿ ಭೂಮಿಯ ಆಚೆ 15 ಲಕ್ಷ ಕಿಲೊಮೀಟರ್ ದೂರದಲ್ಲಿ, ಭೂಮಿಯ ಮತ್ತು ಸೂರ್ಯನ ಗುರುತ್ವ ಸೆಳೆತಗಳ ಸಮಬಿಂದುವಿನಲ್ಲಿ ಅದು ಸ್ಥಾಪಿತವಾಗಿದೆ. ಸೂರ್ಯನ ಬಿಸಿಕಿರಣಗಳು ತಾಗದಂತೆ ತನ್ನದೇ ನೆರಳುಕವಚವನ್ನು ನಿರ್ಮಿಸಿಕೊಂಡು ಅದು ನಮಗೆ ಬೇಕೆಂದತ್ತ ತನ್ನ ಮುಖವನ್ನು ತಿರುಗಿಸಿ ನಮಗೆ ಬೇಕೆಂದಷ್ಟು ಅವಧಿಯ ವಿಶ್ವಚರಿತೆಯನ್ನು ತೋರಿಸುತ್ತದೆ.

ಅದು ರವಾನಿಸುವ ಮೊದಲ ಚಿತ್ರಮಾಲಿಕೆಯನ್ನು ನೋಡಲು ಜಗತ್ತೇ ಕಾತರವಾಗಿತ್ತು. ನಾಸಾ ಕೂಡ ಆ ಚಿತ್ರಗಳನ್ನು ಅದ್ದೂರಿಯಾಗಿ ಅಮೆರಿಕದ ಶ್ವೇತಭವನದಲ್ಲೇ ಅಧ್ಯಕ್ಷ ಜೋ ಬೈಡೆನ್ ಕೈಯಿಂದಲೇ ಬಿಡುಗಡೆ ಮಾಡಿಸಿತು.

ಈಗ ಲಭಿಸಿದ ಈ ಚಿತ್ರಗಳು 450 ಕೋಟಿ ವರ್ಷಗಳ ಹಿಂದಿನ ವಿಶ್ವದ ದೃಶ್ಯಗಳು. ಬ್ರಹ್ಮಾಂಡದ ದಕ್ಷಿಣಭಾಗದ ಆಳ ಆಳ ಆಳದಲ್ಲಿ ವೋಲಾನ್ಸ್ ನಕ್ಷತ್ರಪುಂಜದ ದಿಕ್ಕಿನಲ್ಲಿ ಸಿಕ್ಕವು. ಅಲ್ಲಿಂದ ಹೊರಟ ಬೆಳಕಿನ ಅವಗೆಂಪು ಕಿರಣಗಳು ಸೆಕೆಂಡ್‌ಗೆ ಮೂರು ಲಕ್ಷ ಕಿ.ಮೀ. ವೇಗದಲ್ಲಿ ಧಾವಿಸುತ್ತ 930 ಕೋಟಿ ವರ್ಷಗಳ ನಂತರ ನಮಗೆ ತಲುಪಿವೆ.

ಅಂದರೆ, ನಾವಿಂದು ಜೇಮ್ಸ್ ವೆಬ್ ಟೆಲಿಸ್ಕೋಪ್ ಎಂಬ ಕಾಲಯಂತ್ರದಲ್ಲಿ ಕೂತು ಭೂತಕಾಲಕ್ಕಿಳಿದು ಅಷ್ಟು ಕೋಟಿ ವರ್ಷಗಳ ಹಿಂದಿನ ಚರಿತ್ರೆಯನ್ನು ಕಣ್ಣಾರೆ ನೋಡುತ್ತಿದ್ದೇವೆ. ಐನ್‌ಸ್ಟೀನ್ ಮಹಾಶಯ ನೂರು ವರ್ಷಗಳ ಹಿಂದೆಯೇ ಊಹಿಸಿದ್ದ ಗುರುತ್ವ ಮಸೂರದಿಂದಾಗಿ ತೀರ ಆಳದಲ್ಲಿ ತೀರ ಸೂಕ್ಷ್ಮವಾಗಿ ಕಾಣಬೇಕಿದ್ದ ಗೆಲಾಕ್ಸಿಗಳೂ ಈಗ ಎದೆಯುಬ್ಬಿಸಿ ತಮ್ಮ ಇರವನ್ನು ತೋರಿಸುತ್ತಿವೆ.

ಈಗಿನ ವಿಶ್ವಕ್ಕೆ 1380ಕೋಟಿ ವರ್ಷ ವಯಸ್ಸಾಗಿದೆ. ಅದು ಕೇವಲ 13.8 ವರ್ಷದ ಮಗು ಎಂದುಕೊಂಡರೆ ಈಗ ನಾವಿಲ್ಲಿ ಕಾಣುತ್ತಿರುವುದು ಆ ಮಗು ತನ್ನ ನಾಲ್ಕೂವರೆ ವರ್ಷದಾಗಿದ್ದಾಗಿನ ಆಲ್ಬಮ್ ಚಿತ್ರ. ಅದೂ ಇಡೀ ಚಿತ್ರವಲ್ಲ. ಒಂದು ಮರಳು ಕಣವನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಕಂಡಷ್ಟೇ ವಿವರ ಈಗಿನದು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಎರಡು ಬೆರಳುಗಳ ಮಧ್ಯೆ ಒಂದು ಮರಳುಕಣವನ್ನು ಹಿಡಿದು, ಕೈಯನ್ನು ನೀಳಮಾಡಿ ಆಕಾಶದತ್ತ ಹಿಡಿದಾಗ, ಆ ಮರಳಿನ ಹಿಂಭಾಗದಲ್ಲಿ ಎಷ್ಟು ಆಕಾಶ ಇರುತ್ತೋ ಅಷ್ಟೇ ಆಕಾಶದ ಆಳ ಚಿತ್ರ ಇದು. ಅನಂತಾನಂತ ವಿಸ್ತಾರದ ವಿಶ್ವದ ಒಂದು ಅನಂತಾಲ್ಪ ತುಣುಕು. ಜೇಮ್ಸ್ ವೆಬ್ ದೂರದರ್ಶಕ ಈ ದೃಶ್ಯಗಳನ್ನು ಐದೂವರೆ ದಿನಗಳಲ್ಲಿ ಸೆರೆ ಹಿಡಿದಿದೆ. ಇನ್ನೂ ಕನಿಷ್ಠ 15-20 ವರ್ಷಗಳ ಕಾಲ ಇದೇ ದೂರದರ್ಶಕ ಅಲ್ಲೇ ನಿಂತು ಬ್ರಹ್ಮಾಂಡದ ಬೇರೆ ಬೇರೆ ಮಗ್ಗುಲಿನ, ಬೇರೆ ಬೇರೆ ಕಾಲಘಟ್ಟದ ಚಿತ್ರಗಳನ್ನು ಕಳಿಸುತ್ತಿರುತ್ತದೆ.

ಅಲ್ಲಿ ಅದೇನೇನು ನಿಗೂಢಗಳ ಸಂತೆ ಇದೆಯೊ! ಅದೆಷ್ಟು ಹೊಸ ಜಗತ್ತುಗಳು ತೆರೆದುಕೊಳ್ಳಲಿವೆಯೊ? ಆರಂಭದಲ್ಲಿ ಬಿಗ್‌ಬ್ಯಾಂಗ್ ಹೇಗಾಯಿತು? ಆ ಕ್ಷಣಕ್ಕೆ ಮುಂಚೆ ಕಾಲವೂ ಇರಲಿಲ್ಲ, ಜಾಗವೂ ಇರಲಿಲ್ಲ ಎನ್ನುತ್ತಾರಲ್ಲ? ಅದು ಸೃಷ್ಟಿಯಾಗಲು ಏನು ಕಾರಣ? ಬಿಗ್‌ಬ್ಯಾಂಗ್ ನಂತರ ಬ್ರಹ್ಮಾಂಡ ಸತತವಾಗಿ ವಿಸ್ತರಿಸುತ್ತಲೇ ಇದೆಯಂತೆ. ಬಲೂನ್ ಮೇಲೆ ಕೂತ ಇರುವೆಗಳು ಬಲೂನ್ ಹಿಗ್ಗುತ್ತ ಹೋದಂತೆಲ್ಲ ನಿಂತಲ್ಲೇ ದೂರ ದೂರ ಸರಿಯುವ ಹಾಗೆ ನಮ್ಮ ಸುತ್ತಲ ನಕ್ಷತ್ರ ಗೆಲಾಕ್ಸಿಗಳೂ ನಮ್ಮಿಂದ ದೂರ ಸಾಗುತ್ತಿವೆ ಎನ್ನುತ್ತಾರೆ. ಯಾವ ಬೃಹತ್ ಶಕ್ತಿ ಅವನ್ನೆಲ್ಲ ಹಾಗೆ ದೂರ ತಳ್ಳುತ್ತಿದೆ? ನಮಗದು ಗೊತ್ತಿಲ್ಲ.

ಇಡೀ ವಿಶ್ವವನ್ನು ಆವರಿಸಿರುವ ನಿಗೂಢ ಕಪ್ಪುವಸ್ತು (ಡಾರ್ಕ್ ಮ್ಯಾಟರ್) ಏನು? ಅದರಲ್ಲಿ ಅಷ್ಟೊಂದು ಶಕ್ತಿ ಹೇಗೆ ಸಂಚಯವಾಗಿದೆ? ಅದು ಗೊತ್ತಿಲ್ಲ. ಇದೇ ವಿಶ್ವದಂಥದ್ದೇ ಇನ್ನೂ ಅಸಂಖ್ಯ ವಿಶ್ವಗಳಿವೆಯೆ? ಈ ವಿಶ್ವದಲ್ಲಿ ದ್ರವ್ಯಗಳಿರುವ ಹಾಗೆ ಇದಕ್ಕೆ ತದ್ವಿರುದ್ಧವಾದ ಪ್ರತಿದ್ರವ್ಯಗಳ ಬೇರೊಂದು ವಿಶ್ವ ಇದ್ದೀತೆ? ಗೊತ್ತಿಲ್ಲ. ಆ ವಿಶ್ವದಲ್ಲಿ ನಮ್ಮದೇ ಪ್ರತಿಪೃಥ್ವಿ, ಪ್ರತಿಭಾರತ, ಪ್ರತಿಜೋಗ, ಪ್ರತಿಪ್ರಜಾವಾಣಿ ಇದ್ದೀತೆ? ಏನೊ ಎಂತೊ? ನಾವು ಈ ವಿಶ್ವದಿಂದ ಆ ವಿಶ್ವಕ್ಕೆ ಕ್ವಾಂಟಮ್ ಬಿಂಬದ ಮೂಲಕ ಅಥವಾ ಅಗೋಚರ ಎಳೆಗಳ ಮೂಲಕ ಕ್ಷಣಾರ್ಧದಲ್ಲಿ ಹೋಗಲು ಸಾಧ್ಯವೆ? ಎಲ್ಲಾ ನಿಗೂಢ.

ಅದು ಹಾಗಿರಲಿ, ಜೇಮ್ಸ್ ವೆಬ್ ದೂರದರ್ಶಕ ಇನ್ನೇನು, ಆಚಿನ ಲೋಕದಲ್ಲಿ ಪೃಥ್ವಿಯನ್ನೇ ಹೋಲುವ ಇನ್ನಷ್ಟು ಲೋಕಗಳನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸಲಿದೆಯಂತೆ. ಇನ್ನಷ್ಟು ಜೀವಲೋಕಗಳು ಇರಬಹುದೆ? ನಮ್ಮಷ್ಟೇ ತಾಂತ್ರಿಕ ನಾಗರಿಕತೆ ಇರುವ, ಅಥವಾ ನಮ್ಮನ್ನೇ ಮೊದ್ದು ಕ್ರಿಮಿಗಳೆಂದು ಪರಿಗಣಿಸುವಷ್ಟು ಅಗಾಧ ಪಾಂಡಿತ್ಯವುಳ್ಳ ಜೀವಿಗಳ ಲೋಕ ಇದೆಯೆ? ಅಂಥ ಲೋಕಗಳಿದ್ದರೆ ಅದಕ್ಕಿಂತ ಸಂಭ್ರಮದ ಸಂಗತಿ ಬೇರೊಂದಿಲ್ಲ. ಅಥವಾ ಅಂಥ ಯಾವ ಜೀವಲೋಕವೂ ಇಲ್ಲವೆಂದಾದರೆ (ನಾವೇ ಏಕೈಕವೆಂದಾದರೆ) ಅದಕ್ಕಿಂತ ಹೆಮ್ಮೆಯ ಸಂಗತಿಯೂ ಬೇರೊಂದಿಲ್ಲ. ಹಾಗಿರಲು ಸಾಧ್ಯವೆ?

ಈಗ ನಮ್ಮದೇ ಕೊಂಚ ಅಂತರಾಳಕ್ಕಿಳಿಯೋಣ.

ಈ ದೃಶ್ಯಗಳು ಸಹಜವಾಗಿಯೇ ಅಷ್ಟೊಂದು ಜನರಿಗೆ ರೋಚಕವೆನಿಸಲು ಕಾರಣ ಏನು ಗೊತ್ತೆ? ನಾವೆಲ್ಲರೂ ಈ ಬ್ರಹ್ಮಾಂಡದ ಸಹಭಾಗಿಗಳೇ ಆಗಿದ್ದೇವೆ. ನಮ್ಮ ಕಣಕಣಗಳಲ್ಲೂ ತಾರೆಗಳಲ್ಲಿರುವ ಮೂಲವಸ್ತುಗಳೇ -ಅಂದರೆ ಹೈಡ್ರೊಜನ್, ಕಾರ್ಬನ್, ಆಕ್ಸಿಜನ್, ನೈಟ್ರೊಜನ್ ಎಲ್ಲ ಇವೆ. ಅವು ನೀರು, ಗಾಳಿ, ಮಣ್ಣು, ಆಹಾರಕಣಗಳ ರೂಪದಲ್ಲಿ ನಮ್ಮೊಳಗೆ ಬಂದು ಕಣರೂಪದಲ್ಲಿ ಕ್ಷಣಕಾಲ ಇದ್ದು, ಕಾಸ್ಮಿಕ್ ಕುಣಿತ ನಡೆಸಿ, ನಮ್ಮನ್ನೆಲ್ಲ ಕುಣಿಸಿ ಮತ್ತೆ ಬ್ರಹ್ಮಾಂಡಲ್ಲಿ ಲೀನವಾಗುತ್ತವೆ. ಆ ವಿಶಾಲ ವಿಶ್ವದ ವಿದ್ಯುತ್ ಕಾಂತೀಯ ತರಂಗಗಳೇ ನಮ್ಮ ಮಿದುಳಿನಲ್ಲೂ ಅನುರಣನಗೊಂಡು ನಮ್ಮಲ್ಲಿ ಪುಳಕಗಳನ್ನೆಬ್ಬಿಸುತ್ತವೆ.

ಎಂಥ ಅಚ್ಚರಿ ನೋಡಿ... ಆದರೆ ಆ ಬೆಳಕು ನಮ್ಮನಿಮ್ಮೊಳಗೆ ಇಳಿದೀತೆ? ಈ ಅನಂತ ತಾರಾಮಂಡಲ
ದಲ್ಲಿ ತೀರಾಸಾಧಾರಣ ನಕ್ಷತ್ರವೊಂದರ ಸುತ್ತ ಏಕಾಂಗಿಯಾಗಿ ಸುತ್ತುತ್ತಿರುವ ಈ ಸಾಧಾರಣ ಗ್ರಹ ಇಡೀ ವಿಶ್ವದಲ್ಲೇ ಅಪ್ರತಿಮ. ಏಕೆಂದರೆ ಇದರಲ್ಲಿ ಜೀವ ಇದೆ.

ಇಲ್ಲಿ ಜೀವಿಗಳು ವಿಕಾಸವಾಗಿ ಅದರ ಮಿದುಳಿನ ಮೂಲಕ ಬ್ರಹ್ಮಾಂಡ ತನ್ನನ್ನೇ ನೋಡುತ್ತಿದೆ. ಆದರೂ ಇಲ್ಲಿ ಪ್ರಜ್ಞಾವಂತ ಮಿದುಳುಗಳ ಸಂಖ್ಯೆಯೂ ಅನಂತಾಲ್ಪವೇ ತಾನೆ? ಈ ಜೀವಂತ ಗ್ರಹದ ಅದೆಷ್ಟೊ ಕೋಟಿಕೋಟಿಕೋಟಿ ಜೀವಿಗಳಲ್ಲಿ ಮನುಷ್ಯ ಪ್ರಭೇದದ 740 ಕೋಟಿ ಜನರಲ್ಲಿ ಕೇವಲ ಕೆಲವೇ ಸಾವಿರ ಜನರ ಮಿದುಳಿನ ನರಕೋಶಗಳನ್ನು ಮಿನುಗಿಸಿ ಬ್ರಹ್ಮಾಂಡ ತನ್ನನ್ನು ತಾನು ನೋಡಿಕೊಳ್ಳುತ್ತಿದೆ. ಇನ್ನುಳಿದ ನಾವೆಲ್ಲ ನಮ್ಮದೇ ಷಡ್ವೈರಿಗಳ ಸಿಂಬೆ ಸುತ್ತಿಕೊಂಡು ಇದೇ ಲೋಕಲ್ ಜಗಳ, ರಂಜನೆ, ವಂಚನೆ, ಮಾಲಿನ್ಯ, ಆಟಂಬಾಂಬು, ರಾಜಕೀಯ ಮೇಲಾಟದ ಬ್ರೇಕಿಂಗ್ ನ್ಯೂಸ್‌ಗಳ ಮಧ್ಯೆ ಮುಳುಗೇಳುತ್ತಿದ್ದೇವೆ. ಅನಂತ ಪ್ರತಿಭೆಗಳ ಗಣಿಯಾಗಬಹುದಾಗಿದ್ದ ಅನಂತಾಲ್ಪರು ನಾವು.

ನೋಡಬೇಕು, ನಭೋರಂಗದ ಈ ಬಹಿರ್ಮುಖೀ ನೃತ್ಯನೋಟಗಳು ನಮ್ಮ ಕುಣಿತವನ್ನು ಕ್ಷಣಕಾಲವಾದರೂ ನಿಲ್ಲಿಸಿ ನಮ್ಮನ್ನು ಅಂತರ್ಮುಖಿ ಮಾಡುತ್ತವೊ ಎಂದು.

ತೆರೆದ ಬಾಹ್ಯಾಕಾಶದ ಜ್ಞಾನ ಕವಾಟ

ಮನುಷ್ಯನ ಮಿದುಳಿಗೆ ಇದು ವಿಶ್ವದ ಹೊಸ ದರ್ಶನ ಅಲ್ಲವೇ ಅಲ್ಲ. ಸಹಸ್ರಾರು ವರ್ಷಗಳಿಂದ ಆ ಆಚಿನ ಬ್ರಹ್ಮಾಂಡ ನಮ್ಮನ್ನು ತನ್ನೆಡೆ ಸೆಳೆಯುತ್ತಲೇ ಇತ್ತು. ವೇದಕಾಲದ ಚಿಂತಕರಿಂದ ಹಿಡಿದು ಆರ್ಯಭಟನವರೆಗೆ, ಗೆಲಿಲಿಯೊನಿಂದ ಹಿಡಿದು ನ್ಯೂಟನ್- ಐನ್‌ಸ್ಟೀನ್‌ವರೆಗೆ, ಸುಬ್ರಹ್ಮಣ್ಯ ಚಂದ್ರಶೇಖರರಿಂದ ಹಿಡಿದು ಸ್ಟೀಫನ್ ಹಾಕಿಂಗ್‌ವರೆಗೆ ನಮ್ಮ ಕೆಲವರ ವಿಶೇಷ ಮಿದುಳುಗಳಲ್ಲಿ ನಕ್ಷತ್ರಲೋಕ ತನ್ನ ರಹಸ್ಯಗಳ ಪರದೆಯನ್ನುಮೆಲ್ಲಮೆಲ್ಲಗೆ ಸರಿಸಿ ತೋರಿಸುತ್ತಲೇ ಇತ್ತು. ಅವರ ಮಿದುಳುಗಳಲ್ಲಿ ರೂಪುಗೊಳ್ಳುತ್ತಿದ್ದ ವಿಚಾರ ತರಂಗಗಳೇ ಗಣಿತ ಲೆಕ್ಕಾಚಾರಗಳಾಗಿ, ಎಂಜಿನಿಯರಿಂಗ್ ಸಲಕರಣೆಗಳಾಗಿ, ರಾಕೆಟ್‌ಗಳಾಗಿ, ಕಕ್ಷೆಯಲ್ಲಿ ತೇಲಬಲ್ಲ ದೂರದರ್ಶಕಗಳಾಗಿ ನಮಗಿಂದು ಬಾಹ್ಯಾಕಾಶದ ಕವಾಟವನ್ನು ತೆರೆದಿವೆ.

ಮನುಷ್ಯನ ಒಳಮಿದುಳಿಗೆ ಗೋಚರಿಸಿದ ಬೆಳಕೇ ನಮಗಿಂದು ನಕ್ಷತ್ರಗಳನ್ನು, ನೀಹಾರಿಕೆಗಳನ್ನು ಪ್ರತ್ಯಕ್ಷ ತೋರಿಸುತ್ತಿದೆ. ಸರ್ನ್ ಸುರಂಗದಲ್ಲಿ ಪರಮಾಣುವಿನ ಆಳಕ್ಕೂ ಇಳಿದು, ಮೂಲಕಣಗಳನ್ನೂ ಸಿಡಿಸಿ, ಕ್ವಾಂಟಮ್ ಲೋಕವನ್ನು ತೋರಿಸಿದ ಹಾಗೆ. ಈಗ ಕಂಡಿದ್ದು ಕೇವಲ ಒಂದು ಮರಳು ಕಣದಷ್ಟು ಅಷ್ಟೆ. ಅದೂ ಅದೆಷ್ಟು ರಮ್ಯ, ಅದೆಷ್ಟು ಅಗಮ್ಯ!

ಜೇಮ್ಸ್ ಟೆಲಿಸ್ಕೋಪ್ ಸೆರೆಹಿಡಿದ ಅಮೋಘ ಆಕಾಶಕಾಯಗಳ ಚಿತ್ರ ಬಿಡುಗಡೆ ಮಾಡಿದ ನಾಸಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.